ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮೇಷ್ಟ್ರು : ಮಕ್ಕಳೆ, ಕಾವೇರಿ ಯಾವ ಸಂಧಿ?

By Prasad
|
Google Oneindia Kannada News

ಕನ್ನಡ ಮೇಷ್ಟ್ರು : ಮಕ್ಕಳೆ, ಕಾವೇರಿ ಯಾವ ಸಂಧಿ?
ಮರಿಗೌಡ : ಕರ್ನಾಟಕಕ್ಕೆ ಲೋಪ ಸಂಧಿ, ತಮಿಳುನಾಡಿಗೆ ಆಗಮ ಸಂಧಿ, ಸುಪ್ರೀಂಕೋರ್ಟಿಗೆ ಆದೇಶ ಸಂಧಿ, ಸಾರ್!

ಮೊಬೈಲ್‌ನಿಂದ ಮೊಬೈಲಿಗೆ ಜಿಗಿದಾಡುತ್ತಿರುವ ಈ ಜೋಕನ್ನು ಜೋಕನ್ನಾಗಿಯಾದರೂ ಸ್ವೀಕರಿಸಿ, ಸಂಧಿ ಪಾಠವೆಂದಾದರೂ ಪರಿಗಣಿಸಿ, ಅಥವಾ ಇದರಲ್ಲೇನಿದೆ ತಮಾಷೆ ಎಂದು ಕಸದಬುಟ್ಟಿಗಾದರೂ ಹಾಕಿ. ಆದರೆ, ಖಂಡಿತ ನಿರ್ಲಕ್ಷಿಸಲಾರಿರಿ. ಇದನ್ನು ಬರೆದಿದ್ದು ಯಾವಾಗಲೋ, ಯಾರೋ ಏನೋ, ಆದರೆ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿಯಂತೆ ಹರಿದಾಡುತ್ತಿರುವ ಈ 'ಜೋಕ್'ನ ಸಂದರ್ಭ ಮಾತ್ರ ಪರ್ಫೆಕ್ಟಾಗಿದೆ.

ಎರಡೇ ಎರಡು ಲೈನುಗಳಲ್ಲಿ ಇಡೀ ಕಾವೇರಿ ನೀರು ಹಂಚಿಕೆ ವಿವಾದದ ಲಾಭ ನಷ್ಟಗಳನ್ನು ಬಣ್ಣಿಸಲಾಗಿದೆ. ಎರಡೇ ಸಾಲುಗಳು ಇಡೀ ಕಾವೇರಿ ಪ್ರಕರಣದ ಕಥೆಯನ್ನು, ವಸ್ತುಸ್ಥಿತಿಯನ್ನು ಹೇಳುತ್ತಿವೆ. ಹಾಗೆಯೆ, ಎಂದೋ ಮರೆತುಹೋಗಿದ್ದ ಕನ್ನಡ ಸಂಧಿಗಳನ್ನು ಈ ಜೋಕ್ ನೆನಪಿಗೆ ತಂದುಕೊಟ್ಟಿದೆ. ಇಂಥ ಸಂಧಿಗಳು ಇವೆಯೆಂದಾದರೂ ನಿಮಗೆ ಗೊತ್ತಿತ್ತಾ? ಸಂಸ್ಕೃತ ಸಂಧಿಗಳು ಎಷ್ಟಿವೆ, ಅವಾವುವು ಹೇಳಿ ನೋಡೋಣ?

ಅದೇನೇ ಇರಲಿ, ಕಾವೇರಿ ಕೊಳ್ಳದಲ್ಲಿ ಜೀವಜಲಕ್ಕಾಗಿ ಹೋರಾಟ ನಡೆಸಿರುವ, ಹಗಲೂ ರಾತ್ರಿ (ಸದ್ಯಕ್ಕೆ ಬಿಡುವು) ಗದ್ದಕ್ಕೆ ಮುಷ್ಟಿ ಇಟ್ಟುಕೊಂಡು, ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಾರೋ ಇಲ್ಲವೋ, ಸುಪ್ರೀಂ ಕೋರ್ಟ್ ಏನು ತೀರ್ಪು ನೀಡಲಿದೆ, ಕಾವೇರಿ ನೀರು ಪ್ರಾಧಿಕಾರ ಮತ್ತೇನು ಆದೇಶ ಹೊರಡಿಸಿದೆ ಎಂದು ಕಾಯುತ್ತಿರುವ ರೈತಾಪಿ ಜನರಿಗೆ ಈ ಸಂಧಿ ಬಗ್ಗೆ ಹೇಳಿ ನೋಡಿ, ಕರಕ್ಕನೆ ಸಿಡುಕಿಬಿಡುತ್ತಾರೆ.

ಫೇಸ್‌ಬುಕ್ಕಿನಲ್ಲಿಯೂ ಪೋಸ್ಟ್ ಮಾಡಲಾಗಿದ್ದ ಈ ಸಂಧಿ ಜೋಕಿಗೆ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಒಬ್ಬರು ಇದು ಓಲ್ಡ್ ಜೋಕ್ ಎಂದಿದ್ದರೆ, ಮತ್ತೊಬ್ಬರು ಸೂಪರ್ ಅಂದಿದ್ದಾರೆ, ಇನ್ನೊಬ್ಬರು, ಇದು ರಾಜಕಾರಣಿಗಳಿಗೆ 'ಅವಕಾಶ' ಸಂಧಿ ಎಂದು ತಮಾಷೆ ಮಾಡಿದ್ದರೆ, ಮಗದೊಬ್ಬರು, ಇದು ರಾಜಕಾರಣಿಗಳಿಗೆ 'ಸುವರ್ಣ'ದೀರ್ಘ ಸಂಧಿ, ಪ್ರಧಾನಿಗೆ ಯಣ್ ಸಂಧಿ ಎಂದು ಹೇಳಿ ಹಾಸ್ಯಪ್ರಜ್ಞೆಯನ್ನು ಮೆರೆದಿದ್ದಾರೆ.

ಮುಂದಿನ ದಿನಗಳಲ್ಲಿ ತಮಿಳುನಾಡಿಗೆ ಇದು ಲೋಪ ಸಂಧಿಯಾಗಲಿ, ಕರ್ನಾಟಕಕ್ಕೆ ಆಗಮ ಸಂಧಿಯಾಗಲಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಲಿ ಎಂದು ಹೇಳುತ್ತ, ಈ ಜೋಕ್‌ನ ಮಾಲಿಕರು ಯಾರಾದರೂ ಇದ್ದರೆ ದಯವಿಟ್ಟು ಈ ಜೋಕ್ ವೇದಿಕೆಯ ಮೇಲೆ ಬರಬೇಕಾಗಿ ವಿನಂತಿ.

English summary
Kannada SMS joke on Cauvery water dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X