ಬದನೆಕಾಯಿ ಎಂಬ ದೇವಲೋಕದ ತರಕಾರಿ, ಮಂತ್ರಿ ಎಂಬ ಬುದ್ಧಿವಂತ

Posted By:
Subscribe to Oneindia Kannada

ಅದೊಂದು ರಾಜ್ಯ. ಅಲ್ಲಿನ ರಾಜ ದರ್ಬಾರಿಗೆ ಬಂದ. ಆತನ ಕೈಯಲ್ಲಿ ಬದನೆಕಾಯಿ ಇತ್ತು. ಅದೇಕೆ ತಂದಿದ್ದು ಅಂತ ಎಲ್ಲರಿಗೂ ಕುತೂಹಲ.

ಸಿಂಹಾಸನ ಮೇಲೆ ಕೂತ ರಾಜ ಗಂಭೀರವಾಗಿ ಮಾತನಾಡಲು ಆರಂಭಿಸುತ್ತಾನೆ.

"ಈ ಬದನೇಕಾಯಿ ದೇವಲೋಕದಿಂದ ಧರೆಗಿಳಿದ ತರಕಾರಿ. ಇದರ ಹಿರಿಮೆ-ಗರಿಮೆಗಳನ್ನು ಎಷ್ಟು ಹೇಳಿದರೂ ಕಡಿಮೆಯೇ. ಇಡೀ ರಾಜ್ಯದಲ್ಲಿ ಈ ಬಗ್ಗೆ ಶಾಸನಗಳನ್ನು ಬರೆಸಬೇಕು..." ಹೀಗೆ ಸಿಕ್ಕಾಪಟ್ಟೆ ಹೊಗಳಿ, ತನ್ನ ಮಂತ್ರಿಯ ಕಡೆಗೆ ನೋಡುತ್ತಾನೆ.

ಕಲರ್ ಕಲರ್ ಕಾಗೆ, ಇದು ಚುನಾವಣಾ ಪ್ರಚಾರದ ಬಗೆ..!

ಆಗ ಮಂತ್ರಿ, ಮಹಾಮಹಿಮರಾದ ಪ್ರಭುಗಳಿಗೆ ಅಲ್ಲದೆ ಇನ್ಯಾರಿಗೆ ಇಂಥ ವಿಚಾರ ಹೊಳೆಯಬೇಕು! ನಿಜ, ಬದನೆಕಾಯಿ ಬಗ್ಗೆ ಇಷ್ಟು ಕಾಲ ಯಾರಿಗೂ ಗೊತ್ತಾಗದ ರಹಸ್ಯ ಬಯಲು ಮಾಡಿದ ಪ್ರಭುಗಳನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ ಎಂದು ವಾಚಾಮಗೋಚರ ಹೊಗಳುತ್ತಾನೆ.

ಆ ದಿನದ ಸಭೆ ಮುಕ್ತಾಯವಾಗುತ್ತದೆ.

ಮರು ದಿನ ಮತ್ತೆ ರಾಜ ಸಭೆಗೆ ಬರುತ್ತಾನೆ. ಈ ದಿನವೂ ಆತನ ಕೈಯಲ್ಲಿ ಬದನೆಕಾಯಿ ಇರುತ್ತದೆ. ಯಥಾ ಪ್ರಕಾರ ಸಭೆ ಆರಂಭವಾಗುತ್ತದೆ. ಈ ಸಲ ರಾಜನು ಬದನೆಕಾಯಿಯನ್ನು ಬಯ್ಯಲು ಆರಂಬಿಸುತ್ತಾನೆ.

"ಈ ಬದನೆಕಾಯಿ ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ಉಷ್ಣವಾಗುತ್ತದೆ. ಉಳಿದ ತರಕಾರಿಯೊಂದಿಗೆ ಸೇರಿ ಅಡುಗೆ ಮಾಡಲು ಇದು ಯೋಗ್ಯವಲ್ಲ. ತತ್ ಕ್ಷಣದಿಂದಲೇ ಇದನ್ನು ನಮ್ಮ ರಾಜ್ಯದಲ್ಲಿ ನಿಷೇಧಿಸಬೇಕು" ಎಂದು ಮಂತ್ರಿ ಕಡೆಗೆ ನೋಡುತ್ತಾನೆ.

ಆಗ ಮಂತ್ರಿ, ಇಂಥ ಕೆಟ್ಟ ಬದನೆಕಾಯಿ ಎಂಬ ತರಕಾರಿಯನ್ನು ನೀವಲ್ಲದೆ ಇನ್ನ್ಯಾರೂ ಗುರುತಿಸಲು ಸಾಧ್ಯವಿಲ್ಲ ಮಹಾರಾಜ. ನಿಮ್ಮ ಅಪೂರ್ವ ಸಾಮರ್ಥ್ಯದಿಂದ ಈ ರಹಸ್ಯ ಬಯಲಾಗಿದೆ. ಇದಕ್ಕಾಗಿ ನಾವೆಲ್ಲ ಋಣಿಗಳಾಗಿರಬೇಕು ಎನ್ನುತ್ತಾನೆ.

ಈ ಬಾರಿ ರಾಜ ಸಿಟ್ಟಿನಿಂದ ಮುಖ ಕೆಂಪು ಮಾಡಿಕೊಳ್ಳುತ್ತಾನೆ. "ಏಯ್ ಮಂತ್ರಿ, ನಿನ್ನೆ ಬಂದು ಇದೇ ಬದನೆಕಾಯಿಯನ್ನು ಹೊಗಳಿದೆ, ಆಗ ನೀನೂ ನನ್ನ ಜತೆ ಗುಣಗಾನ ಮಾಡಿದೆ. ಇವತ್ತು ಬಯ್ದರೆ, ನನಗಿಂತ ಜೋರಾಗಿ ಅದನ್ನು ಹೀಗಳೆದು ಮಾತನಾಡುತ್ತೀಯಾ?" ಎನ್ನುತ್ತಾನೆ.

ಇಡೀ ಸಭೆ ಒಂದು ಕ್ಷಣ ಮೌನವಾಗಿ ಬಿಡುತ್ತದೆ.

ಆ ನಂತರ ಮಂತ್ರಿ ಮಾತು ಆರಂಭಿಸುತ್ತಾನೆ, ಮಹಾರಾಜ ನಾವು ವಂಶಪಾರಂಪರ್ಯವಾಗಿ ಈ ರಾಜ್ಯಕ್ಕೆ, ನಿಮ್ಮ ಹಿರಿಯರಿಗೆ ನಡೆದುಕೊಳ್ಳುತ್ತಿದ್ದೇವೆ. ಅದೇ ಕಾರಣಕ್ಕೆ ನಮಗೆ ಸಕಲ ಸವಲತ್ತು- ಅನುಕೂಲ ಲಭಿಸುತ್ತಿದೆ. ಇನ್ನು ತಿಂಗಳು- ತಿಂಗಳೂ ವೇತನ ಕೊಡುವವರು ನೀವೋ, ಆ ಬದನೆಕಾಯೋ? ಆ ಬದನೆಕಾಯಿ ಏನಾದರಾಗಲಿ, ವೇತನ ಕೊಡುವ ನೀವು ಸಿಟ್ಟಾಗಬಾರದು ಅಲ್ಲವಾ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How to handle with boss? Here is the humorous story which explains how to deal with top management or boss or superior.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ