ಗೋರಿ ಮುಂದಿಂದಾನೇ ಪಾರ್ಲರಿಗೆ ಹೋಗಬೇಕಲ್ಲ!
ಪ್ರೀತಿಸಿ ಮದುವೆಯಾಗಿದ್ದ ಸುಬ್ಬು ಮತ್ತು ಸುಬ್ಬಿ ಇಬ್ಬರೂ ಆಗತಾನೆ ಮಡಿಕೇರಿಯಲ್ಲಿ ಮಧುಚಂದ್ರ ಮುಗಿಸಿಕೊಂಡು ಬಂದಿದ್ದರು. ಸುಬ್ಬ ಸುಬ್ಬಿಯರಿಬ್ಬರೂ ಒಂದು ದಿನ ಪಾರ್ಕಿನಲ್ಲಿ ತಬ್ಬಿಕೊಂಡು ಅಡ್ಡಾಡುತ್ತಿದ್ದರು. ತಾವಿಬ್ಬರೂ ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡಿಕೊಂಡಿದ್ದೇವಲ್ಲ ಎಂದು ಸುಬ್ಬುವಿಗೆ ಅನಿಸಲು ಆರಂಭಿಸಿತ್ತು.
ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಅಗಲಿರಲು ಸಾಧ್ಯವೇ ಇಲ್ಲ ಎಂದುಕೊಂಡ ಸುಬ್ಬು ಆಕೆಯನ್ನು ಗಟ್ಟಿಯಾಗಿಯೇ ಹಿಡಿದುಕೊಂಡು ನಡೆಯುತ್ತಿದ್ದ. ಆದರೆ, ಯಾವುದೋ ವಿಚಾರ ಹೊಳೆದು ಸುಬ್ಬು ತುಂಬಾ ಭಾವುಕನಾಗಿಬಿಟ್ಟ. ಇದ್ದಕ್ಕಿದ್ದಂತೆ ದುಃಖ ಉಮ್ಮಳಿಸಿ ಬಂದಿತು. ಗಾಬರಿಯಾದ ಮಡದಿ "ಯಾಕೆ, ಏನಾಯಿತು, ದುಃಖಿಸಲು ಕಾರಣವೇನು?" ಎಂದು ಕೇಳಿದಳು.
"ಅಂಥದ್ದೇನೂ ಆಗಿಲ್ಲ ಸುಬ್ಬಿ. ನೀನು ನನ್ನ ಎಷ್ಟೊಂದು ಹಚ್ಕೊಂಡ್ ಬಿಟ್ಟಿದ್ದೀಯಾ. ಒಂದ್ವೇಳೆ ನಾನೇನಾದರೂ ಗೊಟಕ್ ಅಂದರೆ, ನನ್ನ ಗೋರಿಗೆ ದಿನಾ ಭೇಟಿ ನೀಡ್ತಿಯಾ?" ಅಂತ ಸುಬ್ಬು ಕೇಳಿದ.
ಸುಬ್ಬಿ ನಿರ್ವಿಕಾರ ಭಾವನೆಯಿಂದ, ವೈಯಾರದಿಂದ, "ವೈ ನಾಟ್? ನಾನು ಬ್ಯೂಟಿ ಪಾರ್ಲರಿಗೆ ಹೋಗಬೇಕಿದ್ರೆ, ಈ ಸ್ಮಶಾನ ದಾಟಿಕೊಂಡೇ ಹೋಗಬೇಕಲ್ಲ! ದಿನಾ ರೋಸಿಟ್ಟು ಹೋಗ್ತೀನಿ, ಓಕೆ?"
***
ಇಬ್ಬರು ಸ್ನೇಹಿತರು ಪಾರ್ಕಿನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು. ಒಬ್ಬನಿಗೆ ಮುಖದ ಮೇಲೆ ಸಖತ್ ಏಟು ಬಿದ್ದಿತ್ತು. ಕಣ್ಣಿನ ಸುತ್ತಲೂ ಕಪ್ಪು ಕಪ್ಪಾಗಿತ್ತು. ಯಾರಿಗೂ ಗೊತ್ತಾಗಬಾರದೆಂದು ಕರ್ಚೀಫು ಹಿಡಿದುಕೊಂಡಿದ್ದ.
"ಯಾಕ್ಲಾ, ಕಣ್ಣಿಗೆ ಏನಾಯಿತು?" ಅಂತ ಸ್ನೇಹಿತ ಕೇಳಿದ.
"ನಿನ್ನೆ ರಾತ್ರಿ ಸಖತ್ ಒದೆ ಬಿತ್ತು ಕಣ್ಲಾ" ಅಂತ ಪೆಟ್ಟು ತಿಂದವ ಉತ್ತರಿಸಿದ.
"ಹೊಡ್ತಿದ್ದು ಯಾರು ಹೇಳೋ, ಒಂದು ಕೈ ನೋಡೇಬಿಡ್ತೀನಿ" ಅಂತ ಕುಳಿತ ಬೆಂಚಿನಿಂದ ಎದ್ದ ಸ್ನೇಹಿತ ಅಬ್ಬರಿಸಿದ.
ಅವನನ್ನು ಕೈಹಿಡಿದು ಕುಳ್ಳರಿಸಿ, "ಪಕ್ಕದ ಮನೆ ಸುಂದರಿ ಇದ್ದಾಳಲ್ಲ, ಅವಳ ಗಂಡ ಸರಿಯಾಗಿ ಬಾರಿಸಿದ" ಎಂದು ಆತ ಉತ್ತರಿಸಿದ.
"ಹಾಗೆ ಬಾರಿಸುವಂತೆ ನೀನೇನಪ್ಪ ಮಾಡ್ದೆ?" ಸ್ನೇಹಿತನ ಪ್ರಶ್ನೆ.
"ಇನ್ನಾರು ತಿಂಗಳು ಟೂರಿಗೆ ಹೋಗಿರ್ತೀನಿ ಅಂತ ಹೋದವ, ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಬಂದು ಬಿಟ್ಟ ಕಣ್ಲಾ" ಅಂತ ಮುಳುಮುಳು ಅಳಲು ಪ್ರಾರಂಭಿಸಿದ.











Click it and Unblock the Notifications