
ಕನ್ನಡದ ಕೋಟ್ಯಾಧಿಪತಿ ವಿರುದ್ದ ತಿರುಗಿಬಿದ್ದ ಗುಂಡ
ಗುಂಡ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹೇಗಾದರೂ ಭಾಗವಹಿಸಿ ಪುನೀತ್ ರಾಜಕುಮಾರ್ ಜೊತೆ ಆಡಲೇ ಬೇಕೆಂದು ಜಿದ್ದಿಗೆ ಬಿದ್ದು ಒಂದು ನೂರು ಮೆಸೇಜ್ ಮಾಡಿದ. ಅವನ ಅದೃಷ್ಟ ಖುಲಾಯಿಸಿತು, ಗುಂಡ ಕಾರ್ಯಕ್ರಮಕ್ಕೆ ಸಿಲೆಕ್ಟ್ ಆದ. ಚೆನ್ನೈಗೆ ಬರಲು ಕರೆಕೂಡ ಬಂತು.
ಖುಷಿಗೆ ಪಾರವೇ ಇಲ್ಲದ ಗುಂಡ ಐರಾವತ ಬಸ್ ಏರಿ ಜಯಕ್ಕನ ಊರಿಗೆ ಹೊರಟ. ಪಂಚೆ, ಶರ್ಟ್, ಹಣೆಯಲ್ಲಿ ಕುಂಕುಮ ಇಟ್ಟುಕೊಂಡು ಅಪ್ಪಟ ದೇಸೀ ಸೊಗಡಿನಲ್ಲಿ ಹತ್ತು ಜನರಲ್ಲಿ ಒಬ್ಬನಾಗಿ ಆಯ್ಕೆ ಕೂಡಾ ಆದ. ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆಗೆ ಥಟ್ ಅಂತ ಎಲ್ಲರಿಗಿಂತ ಮೊದಲಿಗನಾಗಿ ಉತ್ತರ ಹೇಳಿದ ಗುಂಡ ಹಾಟ್ ಸೀಟ್ ನಲ್ಲಿ ವಿರಾಜಮಾನನಾದ.
ಒಂದಿಷ್ಟೂ ಅಂಜದೆ ಪುನೀತ್ ಕೇಳಿದ ಪ್ರಶ್ನೆಗೆ ಲೀಲಾಜಾಲವಾಗಿ ಉತ್ತರಿಸಿದ ಗುಂಡ 14 ಪ್ರಶ್ನೆಗಳಿಗೆ ಉತ್ತರಿಸಿ ಆಗಲೇ ಅಂಬದು (50) ಲಕ್ಷ ಗೆದ್ದಿದ್ದ. ಈಗಿರುವುದು ಕೊನೆಯ ಪ್ರಶ್ನೆ, ಅದಕ್ಕೆ ಮುನ್ನ ಪುನೀತ್ ಗುಂಡನನ್ನು ಮಾತಿಗೆ ಎಳೆಯುತ್ತಾರೆ.
ಪುನೀತ್: ಈ ಹಣ ನಿಮಗೆ ಎಷ್ಟು ಮುಖ್ಯ?
ಗುಂಡ: ಬಹಳ ಮುಖ್ಯ..
ಪುನೀತ್: ಈ ಹಣವನ್ನು ನೀವು ಯಾವ ರೀತಿ ಉಪಯೋಗಿಸಿಕೊಳ್ಳುತ್ತೀರಿ.
ಗುಂಡ: ಮಠಕ್ಕೆ ಅನುದಾನ ನೀಡಬೇಕೆಂದು ಇದ್ದೇನೆ..
ಪುನೀತ್: ಯಾವ ಮಠಕ್ಕೆ?
ಗುಂಡ: ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಇದನ್ನು ಬಹಿರಂಗ ಪಡಿಸುತ್ತೇನೆ.
ನಿಮ್ಮ ಕಟ್ಟ ಕಡೆಯ ಪ್ರಶ್ನೆ, ಕೊನೆಯ ಪ್ರಶ್ನೆ, 15ನೇ ಪ್ರಶ್ನೆ, ಒಂದು ಕೋಟಿ ರೂಪಾಯಿ ಮೊತ್ತದ ಪ್ರಶ್ನೆ ಇಲ್ಲಿದೆ:
"ನೋಕಿಯಾ ಮೊಬೈಲ್ ಆನ್ ಮಾಡಿದಾಗ ಒಂದು ಹುಡುಗ, ಒಂದು ಹುಡುಗಿ ಕೈ ಕೈ ಹಿಡಿಯುತ್ತಾರಲ್ಲಾ ಅದು ಯಾರು? ಅವರ ಹೆಸರೇನು ?
ಒಂದು ಕೋಟಿ ರೂಪಾಯಿಯ ಈ ಪ್ರಶ್ನೆ ಕೇಳಿ ಗುಂಡ ತಬ್ಬಿಬ್ಬಾದ. ಉತ್ತರವಿಲ್ಲದೆ ಬೆಪ್ಪು ತಕ್ಕಡಿಯಂತಾದ ಅಲ್ಲದೆ ಕಾರ್ಯಕ್ರಮದ ನಿಯಮದಲ್ಲಿ ಬದಲಾವಣೆ ಮಾಡಲಾಗಿತ್ತು, ಕೊನೆಯ ಪ್ರಶ್ನೆಗೆ ನಾಲ್ಕು ಆಪ್ಶನ್ ನೀಡದೆ ಹಾಗೆ ಉತ್ತರಿಸಬೇಕಿತ್ತು. ಇದನ್ನು ಅರಿಯದ ಗುಂಡ ಸ್ಟುಡಿಯೋದಲ್ಲೇ ಧರಣಿ ಕೂತ. ಯಾರೂ ಎಷ್ಟೇ ಮನವಿ ಮಾಡಿದರೂ ಗುಂಡ ಅಲ್ಲಿಂದ ಜಪ್ಪಯ್ಯ ಅನ್ನಲಿಲ್ಲ.
ಕೊನೆಗೆ ಬೇರೆ ವಿಧಿಯಿಲ್ಲದೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಮುಂದಿನ ಚಿತ್ರದಲ್ಲಿ ಗುಂಡನಿಗೆ ಪ್ರಮುಖ ಪಾತ್ರ ಕೊಡುತ್ತೇನೆ ಎಂದು ಭರವಸೆ ನೀಡಿದ ಮೇಲೆ ಗುಂಡ ಗೆದ್ದ 50 ಲಕ್ಷ ರೂಪಾಯಿಯನ್ನು ಅಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ ಹೊರಟ.
(ಇದು ನಮ್ಮ ಜೋಕ್ಸ್ ಸೆಕ್ಷನ್ ಗೆ ಬರೆದ ಲೇಖನ. ಹಾಗೆ ಸುಮ್ಮನೆ ತಮಾಷೆಗೆ ಓದಿ)