ಹೊಸೂರು ಘಟಕ ವಿಸ್ತರಣೆ: ಟಾಟಾ ಎಲೆಕ್ಟ್ರಾನಿಕ್ಸ್‌ನಿಂದ 30 ಸಾವಿರ ನೇಮಕಾತಿ
ಬೆಂಗಳೂರು, ಸೆಪ್ಟೆಂಬರ್ 30: ತಮಿಳುನಾಡು ರಾಜ್ಯದ ಹೊಸೂರಿನಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಐ-ಫೋನ್ ಕೇಸ್ ತಯಾರಿಕಾ ಘಟಕವನ್ನು ಹೊಂದಿದೆ. ಭಾರತದಲ್ಲಿ ಆಪಲ್ ಐ-ಫೋನ್ ಕೇಸ್ ತಯಾರಿಕೆ ಮಾಡುವ ಹೊರಗುತ್ತಿಗೆಯನ್ನು ಟಾಟಾಗೆ ನೀಡಲಾಗಿದೆ. ಈ ಘಟಕದಲ್ಲಿ ಸದ್ಯ ಸುಮಾರು 20 ಸಾವಿರ ಉದ್ಯೋಗಿಗಳಿದ್ದಾರೆ. ಈ ಘಟಕವನ್ನು ನವೆಂಬರ್‌ನಿಂದ ವಿಸ್ತರಣೆ ಮಾಡಲು ಟಾಟಾ ಮುಂದಾಗಿದ್ದು, ಇದಕ್ಕಾಗಿ ಇನ್ನೂ ಸುಮಾರು 30 ಸಾವಿರ ಉದ್ಯೋಗಿಗಳ ನೇಮಕಾತಿಯನ್ನು ಮಾಡಿಕೊಳ್ಳಲಿದೆ.
ಟಾಟಾ ಎಲೆಕ್ಟ್ರಾನಿಕ್ಸ್ ಹೊಸೂರು ಐ-ಫೋನ್ ಕೇಸ್ ತಯಾರಿಕಾ ಘಟಕವನ್ನು 40 ಸಾವಿರ ಉದ್ಯೋಗಿಗಳು ಕೆಲಸ ಮಾಡುವಂತೆ ವಿಸ್ತರಣೆ ಮಾಡಲಿದೆ. ಭಾರತದಲ್ಲಿ ತಯಾರಿಕಾ ಘಟಕವನ್ನು ವಿಸ್ತರಣೆ ಮಾಡಲು ಟಾಟಾ ಮುಂದಾಗಿದ್ದು, ಮೊದಲ ಭಾಗವಾಗಿ ತಮಿಳುನಾಡು ರಾಜ್ಯದಲ್ಲಿನ ಘಟಕದ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡು ರಾಜ್ಯದಲ್ಲಿ ಮೂರು ಪ್ರಮುಖ ಘಟಕದ ಮೇಲೆ ಟಾಟಾ ಎಲೆಕ್ಟ್ರಾನಿಕ್ಸ್ ಹೂಡಿಕೆ ಮಾಡಿದೆ. ರಾಜ್ಯದಲ್ಲಿ ಸುಮಾರು 1,50,000 ಜನರಿಗೆ ನೇರ ಉದ್ಯೋಗವನ್ನು ನೀಡಿದೆ. ಆಪಲ್ ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಸೂಚನೆ ನೀಡಿದ್ದು, ಇದರ ಅಂಗವಾಗಿ ಹೊಸೂರು ಐ-ಫೋನ್ ಕೇಸ್ ತಯಾರಿಕಾ ಘಟಕವನ್ನು ವಿಸ್ತರಿಸಲಾಗುತ್ತಿದೆ.
ನವೆಂಬರ್‌ನಲ್ಲಿ ಚಾಲನೆ: ಹೊಸೂರು ಐ-ಫೋನ್ ಕೇಸ್ ತಯಾರಿಕಾ ಘಟಕ ನವೆಂಬರ್‌ನಲ್ಲಿ ವಿಸ್ತರಣೆಗೊಂಡು ಕಾರ್ಯಾರಂಭ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಹೊಸೂರಿನ ಘಟಕಕ್ಕೆ ಹೊಸದಾಗಿ 20 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕಾತಿ ಮಾಡಲಾಗುತ್ತದೆ ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಮತ್ತೊಂದು ಘಟಕ ನಿರ್ಮಾಣಕ್ಕೆ ಸಹ ನವೆಂಬರ್‌ನಲ್ಲಿ ಚಾಲನೆ ದೊರೆಯಲಿದೆ. ಒಟ್ಟು 9000 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಶಂಕು ಸ್ಥಾಪನೆಗಾಗಿ ಎನ್. ಚಂದ್ರಶೇಖರನ್ ಅವರು ಆಗಮಿಸುತ್ತಿದ್ದಾರೆ. ಟಾಟಾ ಎಲೆಕ್ಟ್ರಾನಿಕ್ಸ್, ಟಾಟಾ ಮೋಟಾರ್ಸ್ ಮತ್ತು ಟಾಟಾ ಪವರ್ ಮೂಲಕ ರಾಜ್ಯದಲ್ಲಿ ಟಾಟಾ ಹೂಡಿಕೆಯನ್ನು ಮಾಡುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ನಾವು ಹೊಸೂರು, ಕೃಷ್ಣಗಿರಿಯಲ್ಲಿ ಘಟಕ ಆರಂಭಿಸಿದ್ದೇವೆ. ಸುಮಾರು 20 ಸಾವಿರ ಉದ್ಯೋಗಿಗಳು ಅಲ್ಲಿದ್ದಾರೆ. ಅವರಲ್ಲಿ 15,000 ಮಹಿಳೆಯರು. ಇನ್ನೂ 40 ಸಾವಿರ ಜನರಿಗೆ ಉದ್ಯೋಗ ನೀಡುವಂತೆ ಘಟಕವನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದು ಟಾಟಾ ಎಲೆಕ್ಟ್ರಾನಿಕ್ಸ್ ಹೇಳಿದೆ.
ಹೊಸೂರು ಐ-ಫೋನ್ ಕೇಸ್ ತಯಾರಿಕಾ ಘಟಕ ವಿಸ್ತರಣೆ ಭಾಗವಾಗಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ಜೊತೆಗೆ ಕಾರ್ಮಿಕರಿಗಾಗಿ ಎರಡು ಹೊಸ ಡಾರ್ಮಿಟೆರಿಗಳನ್ನು ಸಹ ನಿರ್ಮಾಣ ಮಾಡಲಾಗುತ್ತದೆ ಎಂದು ಟಾಟಾ ತಿಳಿಸಿದೆ.
ಐ-ಫೋನ್ 7ರ ಪೈಕಿ ಒಂದನ್ನು ಈಗ ಭಾರತದಲ್ಲಿ ಆಪಲ್ ತಯಾರು ಮಾಡುತ್ತಿದೆ. ಅಲ್ಲದೇ ಚೀನಾಕ್ಕಿಂತ ಹೆಚ್ಚಿನ ಉತ್ಪಾದನೆಯನ್ನು ಭಾರತದಲ್ಲಿ ಮಾಡಲು ಆಪಲ್ ಮುಂದಾಗಿದ್ದು, ಅದಕ್ಕಾಗಿ ಈಗಿರುವ ಘಟಕಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಇದರಿಂದಾಗಿ ಹೊಸ ಉದ್ಯೋಗಳು ಸಹ ಸೃಷ್ಟಿಯಾಗಲಿವೆ.
ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ತಮಿಳುನಾಡು ಸರ್ಕಾರ ಘೋಷಣೆ ಮಾಡಿದೆ. ಅಲ್ಲದೇ ಬೆಂಗಳೂರು-ಹೊಸೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು, ಅಧ್ಯಯನ ನಡೆಯುತ್ತಿದೆ. ಇಂತಹ ಸಮಯದಲ್ಲಿಯೇ ಟಾಟಾ ಐ-ಫೋನ್ ಘಟಕದ ವಿಸ್ತರಣೆಗೆ ಮುಂದಾಗಿದೆ.












Click it and Unblock the Notifications