KPSC: ಆ.27ರಂದು ಪೂರ್ವಭಾವಿ ಪರೀಕ್ಷೆ, ವಿಶೇಷ ಸಾರ್ವತ್ರಿಕ ರಜೆ ಘೋಷಣೆ
ಬೆಂಗಳೂರು, ಆಗಸ್ಟ್ 24: ಕೆಪಿಎಸ್‌ಸಿ ಆಗಸ್ಟ್ 27ರ ಮಂಗಳವಾರ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಿದೆ. ಸುಮಾರು 2,10,910 ಅಭ್ಯರ್ಥಿಗಳು ಈ ಪರೀಕ್ಷೆ ಬರೆಯಬೇಕಿದ್ದು, ಈಗಾಗಲೇ ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ. ಈ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಲಾಗುತ್ತಿದ್ದು, ಶನಿವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯೂ ನಡೆಯುತ್ತಿದೆ.
ಮತ್ತೊಂದು ಕಡೆ ಪರೀಕ್ಷೆ ನಡೆಯುವ ಆಗಸ್ಟ್ 27ರ ಮಂಗಳವಾರ 564 ಪರೀಕ್ಷಾ ಉಪ ಕೇಂದ್ರಗಳಿಗೆ ಅನ್ವಯವಾಗುವಂತೆ ಒಂದು ದಿನದ ವಿಶೇಷ/ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ಸದರಿ ದಿನಾಂಕವನ್ನು ಸಾರ್ವತ್ರಿಕ ರಜೆಯನ್ನಾಗಿ Negotiable Instrument Act 1881ರ ಅಡಿಯಲ್ಲಿ ಘೋಷಿಸಲಾಗಿದೆ. ಈ ಕುರಿತು ಆದೇಶವೂ ಪ್ರಕಟವಾಗಿದೆ.

ಈ ಬಗ್ಗೆ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎಲಿಷ ಆಂಡ್ರ್ಯೂಸ್, ಸರ್ಕಾರದ ಉಪ ಕಾರ್ಯದರ್ಶಿ, ಸಿಆಸು ಇಲಾಖೆ (ರಾಜ್ಯ ಶಿಷ್ಟಾಚಾರ) ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರಿ ನೌಕರರು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.
ಅಧಿಸೂಚನೆ ವಿವರ: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ 27/08/2024ರ ಮಂಗಳವಾರದಂದು ನಡೆಸಲು ಕರ್ನಾಟಕ ಲೋಕಸೇವಾ ಆಯೋಗವು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಸದರಿ ಪರೀಕ್ಷೆಗೆ ಅನುವಾಗುವ 214 ಸರ್ಕಾರಿ, 189 ಅನುದಾನಿತ ಮತ್ತು 161 ಶಾಸಗಿ ಶಾಲಾ-ಕಾಲೇಜುಗಳು ಸೇರಿದಂತೆ, ಒಟ್ಟಾರೆ 564 ಪರೀಕ್ಷಾ ಉಪ ಕೇಂದ್ರಗಳಿಗೆ, ಅನ್ವಯಿಸಿದಂತೆ ಒಂದು ದಿನದ ವಿಶೇಷ/ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದೆ.
ಮುಂದುವರೆದು, ಮೇಲೆ ತಿಳಿಸಿರುವ ಪರೀಕ್ಷಾ ಉಪ ಕೇಂದ್ರಗಳಲ್ಲಿ ದಿನಾಂಕ 27/08/2024ರಂದು ಯಾವುದೇ ಶೈಕ್ಷಣಿಕ ಪರೀಕ್ಷೆಗಳು ಹಾಗೂ ಇನ್ನಿತರೆ ಪೂರ್ವನಿರ್ಧರಿತ ಕಾರ್ಯಕ್ರಮಗಳು ನಿಗದಿಯಾಗಿದ್ದಲ್ಲಿ, ಸೂಕ್ತ ಕ್ರಮಕೈಗೊಂಡು ಪ್ರಸಕ್ತ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಅಡಚಣೆಯಾಗದಿರುವುದನ್ನು ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು/ ಆಡಳಿತ ಮಂಡಳಿಯು ಖಾತರಿ ಪಡಿಸುವುದು.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಪದವಿಪೂರ್ವ ಇಲಾಖೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವಂತಹ ಶೈಕ್ಷಣಿಕ ಸಂಸ್ಥೆಗಳಿಗೆ ಈ ಆದೇಶವನ್ನು ಅನುಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡುವುದು. ಮುಂದುವರೆದು, ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸದರಿ ಪರೀಕ್ಷೆಯನ್ನು ಯಾವುದೇ ಅಡಚಣೆ ಉಂಟಾಗದಂತೆ ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುವುದು ಎಂದು ಸೂಚಿಸಿದೆ.
ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ, ಶಾಲಾ ಕಾಲೇಜುಗಳ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸೇವಾ ನಿರತ ಅಭ್ಯರ್ಥಿಗಳು, ಅವರುಗಳ ಪರೀಕ್ಷಾ ಪ್ರವೇಶ ಪತ್ರವನ್ನು ರಜಾ ಮಂಜೂರು ಮಾಡುವ ಸಂಬಂಧಿತ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಒದಗಿಸುವ ಷರತ್ತಿಗೊಳಪಟ್ಟು ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ನೀಡಲು ಆದೇಶಿಸಿದೆ.
ಕೆಪಿಎಸ್‌ಸಿ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆ ನೇಮಕಾತಿ ಪೂರ್ವಭಾವಿ ಪರೀಕ್ಷೆಗೆ ತಯಾರಿ ಪೂರ್ಣಗೊಳಿಸಿದೆ. ಕೆಪಿಎಸ್‌ಸಿ ವೆಬ್‌ಸೈಟ್ ಮೂಲಕ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ವಿವಿಧ ಜಿಲ್ಲೆಗಳಲ್ಲಿ ಪರೀಕ್ಷೆ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ. ಬೆಳಗ್ಗೆ 10 ರಿಂದ 12 ಗಂಟೆಯ ತನಕ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2ರ ಪರೀಕ್ಷೆಗಳು ನಿಗದಿಯಾಗಿದೆ.
ಪೂರ್ವಭಾವಿ ಪರೀಕ್ಷೆ ಮೊದಲು ಆಗಸ್ಟ್ 25ರ ಭಾನುವಾರ ನಿಗದಿಯಾಗಿತ್ತು. ಆದರೆ ಅಂದು ಐಪಿಬಿಎಸ್ ಪರೀಕ್ಷೆಗಳು ಇರುವ ಕಾರಣ ಪರೀಕ್ಷಾ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಆಗಸ್ಟ್ 27ಕ್ಕೆ ಬದಲಾವಣೆ ಮಾಡಲಾಗಿತ್ತು. ಈಗ ಮತ್ತೆ ಪರೀಕ್ಷೆಯನ್ನು ಮುಂದೂಡಬೇಕು ಎಂದು ಮತ್ತೆ ಒತ್ತಾಯಿಸಲಾಗುತ್ತಿದೆ.












Click it and Unblock the Notifications