Job Fair: ನಿರುದ್ಯೋಗಿಗಳಿಗೆ ಶುಭ ಸುದ್ದಿ, ಎಸ್‌ಡಿಎಂ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ
ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ (ರಿ) ಆಶ್ರಯದಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನಲ್ಲಿ 'ಎಸ್.ಡಿ.ಎಂ ಉದ್ಯೋಗಂ - 2026' ಬೃಹತ್ ಉದ್ಯೋಗ ಮೇಳಕ್ಕೆ ಸೋಮವಾರ (ಏ.6) ಅರಂಭವಾಗಿದೆ. ಎರಡು ದಿನಗಳ ಈ ಮೇಳಕ್ಕೆ ಇಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ.ಎಸ್ ಅವರು ಚಾಲನೆ ನೀಡಿದರು. ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಪ್ರವೇಶ ಇರಲಿದ್ದು, ಯಾವುದೇ ಶುಲ್ಕ ಇಲ್ಲ ಎಂದು ತಿಳಿಸಲಾಗಿದೆ.
ಮೇಳ ಉದ್ಘಾಟಿಸಿದ ಡಾ. ಸತೀಶ್ಚಂದ್ರ.ಎಸ್ ಅವರು, ಶೈಕ್ಷಣಿಕ ಕ್ಷೇತ್ರದ ಎಲ್ಲಾ ವಲಯಗಳಲ್ಲಿನ ಬಹುದೊಡ್ಡ ಸವಾಲು ಎಂದರೆ ಉದ್ಯೋಗದ ಅವಕಾಶಗಳು. ಅನೇಕ ಉದ್ಯೋಗಾಕಾಂಕ್ಷಿಗಳು ಸಮರ್ಥರಾಗಿದ್ದರೂ ನುರಿತ ಅವಕಾಶಗಳಿಂದ ವಂಚಿತಾರಾಗಿರುತ್ತಾರೆ. ಇದಕ್ಕೆ ಕಾರಣ ಹಲವು ಆಯಾಮಗಳಲ್ಲಿ ಗುರುತಿಸಬವುದು ಆದರೆ ಪ್ರಮುಖ ಕಾರಣವೆಂದರೆ ಉದ್ಯೋಗ ದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಅಂತರ. ಇದಕ್ಕೆ ಪರಿಹಾರೋಪಾಯ ಮಾರ್ಗವಾಗಿ ಉಜಿರೆಯಂತಹ ಗ್ರಾಮೀಣ ಪ್ರದೇಶಕ್ಕೆ ದೇಶದ 100 ಅಧಿಕ ಸಂಸ್ಥೆಗಳನ್ನು ಕರೆಸಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

'ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ಇದೊಂದು ಮಹತ್ವಾಕಾಂಕ್ಷೆಯ ಮತ್ತು ಹೆಮ್ಮೆಯ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಸಾವಿರಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸದುಪಯೋಗ ಆಗಲಿದೆ. ಉದ್ಯೋಗ ರಂಗದಲ್ಲಿ ಹೊಸ ಅವಕಾಶಗಳನ್ನು ಕಲ್ಪಿಸಿಕೊಡಲಿದೆ. ಉದ್ಯೋಗ ಮೇಳಕ್ಕೆ ಆಗಮಿಸಿದ ರಾಜ್ಯದ ಎಲ್ಲಾ ಪ್ರತಿಷ್ಠಿತ ಕಂಪನಿ ಮತ್ತು ಸಂಸ್ಥೆಗಳಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವತಿಯಿಂದ ಧನ್ಯವಾದ ಅರ್ಪಿಸಿದರು.
ಉದ್ಯೋಗಾಕಾಂಕ್ಷಿಗಳಿಗೆ ಶುಭ ಹಾರೈಕೆ
ಸದರಿ ಮೇಳವು ವಿಶೇಷವಾಗಿ ಇದು ಎಸ್.ಡಿ.ಎಂ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಈ ಭಾಗದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸಂದರ್ಶನಕ್ಕಾಗಿ ಅನುವು ಮಾಡಿಕೊಡುತ್ತದೆ. ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ಆಶಯದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ರೀತಿಯ ಅವಕಾಶ ಮತ್ತು ಸವಲತ್ತುಗಳಿಂದ ವಂಚಿತರಾಗಬಾರದು ಎಂಬ ಸದಾಶಯದಂತೆ ಇದನ್ನು ಆಯೋಜಿಸಲಾಗಿದೆ. ಮೇಳವು ಬೃಹತ್ ಸಂಖ್ಯೆಯ ಗ್ರಾಮೀಣ ಭಾಗಗಳ ವಿದ್ಯಾರ್ಥಿ ಸಮೂಹಕ್ಕೆ ಅವಕಾಶ ಮತ್ತು ಹೊಸ ಅನುಭವವನ್ನು ನೀಡಲಿದೆ ಎಂದು ಅವರು ಶುಭ ಹಾರೈಸಿದರು.
ಉದ್ಯೋಗ ಕ್ಷೇತ್ರಗಳಲ್ಲಿ ಬಹುಬೇಗ ಬದಲಾವಣೆ?
ಅಗ್ರಿಲೀಫ್ ಸಂಸ್ಥೆಯ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅವಿನಾಶ್ ರಾವೋ ಮಾತನಾಡಿ, ಹಿಂದೆ ಒಂದು ಪೀಳಿಗೆಗೊಮ್ಮೆ ಬದಲಾವಣೆ ಕಾಣುತ್ತಿದ್ದ ಬಹುತೇಕ ಕ್ಷೇತ್ರಗಳು ಇಂದು ಆಧುನಿಕ ಬೆಳವಣಿಗೆಯಿಂದಾಗಿ ಬಹುಬೇಗ ಬದಲಾವಣೆ ಆಗುತ್ತಿವೆ. ಈ ಬದಲಾವಣೆಗೆ ವಿದ್ಯಾರ್ಥಿ ಸಮೂಹ ಒಗ್ಗಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯಂತ (ಎಐ) ತಂತ್ರಜ್ಞಾನ ಇಂದು ಎಲ್ಲೆಡೆ ಆವರಿಸಿದೆ. ಈ ನಡುವೆ ಯುವಕರು ಕೌಶಲ್ಯವಂತರಾಗಿ ಸುಸ್ಥಿರ ಸಾಧನೆಯತ್ತ ಸಾಗಬೇಕು ಎಂದು ವಿವರಿಸಿದರು.
ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಕ್ಷೇತ್ರದಲ್ಲಾಗುತಿರುವ ಬದಲಾವಣೆ ಮತ್ತು ಆ ಕುರಿತಾದ ಸಮಗ್ರ ಜ್ಜಾನದ ಅರಿವಿರಬೇಕು. ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಶಿಕ್ಷಣ ಸಂಸ್ಥೆಗಳಿಗೆ ತಂದೆ ತಾಯಿಯಂತೆ ಒಂದು ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಅನುವು ಮಾಡಿ ಕೊಡುವ ಜವಾಬ್ದಾರಿ ಇರುತ್ತದೆ. ಇಂತಹ ಮಹತ್ವದ ಕಾರ್ಯವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುವ ಮೂಲಕ ಮಾಡುತ್ತಿದೆ ಎಂದು ಸಂಸ್ಥೆ ಕಾರ್ಯ ಶ್ಲಾಘಿಸಿದರು.












Click it and Unblock the Notifications