8 ಹೊಸ ಸಬ್ ರಿಜಿಸ್ಟಾರ್ ಆಫೀಸ್ ಆರಂಭ , ಎಲ್ಲೆಲ್ಲಿ ತಿಳಿಯಿರಿ
ಬೆಂಗಳೂರು, ಜನವರಿ 09; ಕರ್ನಾಟಕ ಸರ್ಕಾರ 8 ಸಬ್ ರಿಜಿಸ್ಟಾರ್ ಕಚೇರಿ ತೆರೆಯಲು ಒಪ್ಪಿಗೆ ನೀಡಿದೆ. ಹೊಸದಾಗಿ ರಚನೆಯಾದ 50 ತಾಲೂಕುಗಳ ಪೈಕಿ ಎಂಟು ತಾಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭವಾಗಲಿದೆ.
ಕಂದಾಯ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಒಟ್ಟು 8 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ 32 ಹುದ್ದೆಗಳನ್ನು ಸೃಜಿಸಲಾಗುತ್ತದೆ. ಇದರಿಂದಾಗಿ ಜನರಿಗೆ ಅನುಕೂಲವಾಗಲಿದೆ.
ಹೊಸದಾಗಿ ರಚನೆಯಾ 50 ತಾಲೂಕುಗಳ ಪೈಕಿ 34 ತಾಲೂಕುಗಳಲ್ಲಿ ಉಪ ನೋಂದಣಿ ಕಚೇರಿಗಳನ್ನು ಆರಂಭಿಸಲಾಗುತ್ತದೆ. ಈ ಪೈಕಿ ಮೊದಲ ಹಂತದಲ್ಲಿ 8 ತಾಲೂಕುಗಳಲ್ಲಿ ಕಚೇರಿ ತೆರೆಯಲಾಗುತ್ತದೆ.

ಹುದ್ದೆಗಳು; ಹೊಸದಾಗಿ ಆರಂಭವಾಗುವ ಪ್ರತಿ ಸಬ್ ರಿಜಿಸ್ಟಾರ್ ಕಚೇರಿಗೆ ತಲಾ ಒಬ್ಬ ಉಪ ನೋಂದಣಿ ಅಧಿಕಾರಿ, ಒಬ್ಬ ಪ್ರಥಮ ದರ್ಜೆ ಸಹಾಯಕ, ಒಬ್ಬ ಡೇಟಾ ಎಂಟ್ರಿ ಆಪರೇಟರ್ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಒಬ್ಬ 'ಡಿ' ದರ್ಜೆ ನೌಕರರ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ.
ಹೇಗೆ ನಡೆಯಲಿದೆ ನೇಮಕಾತಿ?; ಹೊಸದಾಗಿ ಪ್ರಾರಂಭವಾಗುವ ಪ್ರತಿ ಉಪ ನೋಂದಣಿ ಕಚೇರಿಗೆ ಸೃಜಿಸಲಾಗುವ ಹುದ್ದೆಗಳ ನೇಮಕಾತಿ ಹೇಗೆ ನಡೆಯಲಿದೆ? ಎಂದು ಸಹ ಆದೇಶದಲ್ಲಿ ತಿಳಿಸಲಾಗಿದೆ.
ಉಪ ನೋಂದಣಾಧಿಕಾರಿ 1 ಹುದ್ದೆಗೆ ಮತ್ತು ಪ್ರಥಮ ದರ್ಜೆ ಸಹಾಯಕ 1 ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇಮಕಾತಿ ನಡೆಯಲಿದೆ.
ಡಾಟಾ ಎಂಟ್ರಿ ಆಪರೇಟರ್ 1 ಹುದ್ದೆ, 'ಡಿ' ಗ್ರೂಪ್ ನೌಕರ 1 ಹುದ್ದೆಗೆ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಆದೇಶದಲ್ಲಿ ಏನಿದೆ?; 50 ತಾಲೂಕುಗಳ ಪೈಕಿ 34 ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಿ ಕಚೇರಿಗಳನ್ನು ಆರಂಭಿಸಲು ಪ್ರಸ್ತಾಪಿಸಲಾಗಿದ್ದು, ನಿಗದಿಪಡಿಸಿದ ಮಾನದಂಡಗಳನ್ನು ಪೂರೈಕೆಯಾಗಿರುವ ವಿವರಗಳೊಂದಿಗೆ ಕೆಲವು ಕಚೇರಿಗಳು ಪ್ರಸ್ತುತ ಇರುವ ಮಾನದಂಡಗಳನ್ನು ಪೂರೈಸದಿದ್ದರೂ ಸಹ ಹೊಸ ತಾಲೂಕು ರಚನೆಯಾಗಿರುವುದರಿಂದ ಹೊಸ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಕೋರಿರುತ್ತಾರೆ.
ಪ್ರತಿ ಉಪ ನೋಂದಣಿ ಕಚೇರಿಗೆ ಈ ಕೆಳಕಂಡ ಹುದ್ದೆಗಳನ್ನು ಮಂಜೂರು ಮಾಡುವಂತೆ ನೋಂದಣಿ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಈ ಆದೇಶ ಹೊರಡಿಸಿದೆ.

ಎಲ್ಲೆಲ್ಲಿ ಹೊಸ ಕಚೇರಿ?; ಕಂದಾಯ ಇಲಾಖೆ ಸದ್ಯದ ಆದೇಶದಲ್ಲಿ ಬೆಳಗಾವಿಯ ಕಾಗವಾಡ, ಕೊಪ್ಪಳದ ಕುಕನೂರು ಮತ್ತು ಕನಕಗಿರಿ, ರಾಯಚೂರಿನ ಸಿರಿವಾರ, ಉಡುಪಿಯ ಕಾಪು, ವಿಜಯಪುರದ ಬಬಲೇಶ್ವರ, ತಿಕೋಟ ಮತ್ತು ತಾಳಿಕೋಟೆ ತಾಲೂಕುಗಳಲ್ಲಿ ಹೊಸ ಕಚೇರಿ ತೆರೆಯಲು ಅನುಮತಿ ನೀಡಿದೆ.












Click it and Unblock the Notifications