ಕೆಎಸ್ಆರ್‌ಟಿಸಿ ಅಧಿಕಾರಿ, ನೌಕರರಿಗೆ ಸರ್ಕಾರದಿಂದ ಸಿಹಿಸುದ್ದಿ
ಬೆಂಗಳೂರು, ಸೆಪ್ಟೆಂಬರ್ 16; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಆಡಳಿತ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 1ರಂದು, ತಾಂತ್ರಿಕ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 4ರಂದು ಮತ್ತು ಚಾಲನಾ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 6ರಂದು ವೇತನ ಪಾವತಿ ಮಾಡಲಾಗುತ್ತಿದೆ. ಅದೇ ರೀತಿ ನೌಕರರ ವೇತನವನ್ನು ಸಾಮಾನ್ಯವಾಗಿ 7ನೇ ರಂದು ಪಾವತಿ ಮಾಡಲು 1957 ಮತ್ತು 1962 ರ ಕೈಗಾರಿಕ ಒಪ್ಪಂದದ್ದಲ್ಲಿ ಉಲ್ಲೇಖಿಸಲಾಗಿದೆ ಹಾಗೂ ವೇತನ ಪಾವತಿ ಕುರಿತು ಅನುಸರಿಸುವ ಕ್ರಮಗಳ ಕುರಿತು ಸೂಚನೆಗಳನ್ನು ಕೊಡಲಾಗಿದೆ.
ಪ್ರಸ್ತುತ ಕರಾರಸಾ ನಿಗಮದಲ್ಲಿ ಕೇಂದ್ರ ಕಛೇರಿ/ ವಿಭಾಗೀಯ ಕಛೇರಿ/ ತರಬೇತಿ ಕೇಂದ್ರದ ಅಧಿಕಾರಿ/ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 1ರಂದು, ಘಟಕ/ ವಿಭಾಗೀಯ ಕಾರ್ಯಾಗಾರದ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 7ರಂದು ವೇತನವನ್ನು ಪಾವತಿಸಲಾಗುತ್ತಿದೆ. ವೇತನ ಪಾವತಿಯಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ/ ನೌಕರರ ವೇತನವನ್ನು ಪ್ರತಿ ತಿಂಗಳ 1ರಂದು ಪಾವತಿಸಲು ತೀರ್ಮಾನಿಸಿದೆ. ಅದರನ್ವಯ ಈ ಕೆಳಗಿನಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕೇಂದ್ರ ಕಛೇರಿ/ ವಿಭಾಗೀಯ ಕಛೇರಿ/ ತರಬೇತಿ ಕೇಂದ್ರ/ ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಸಂಬಂಧಪಟ್ಟ ಶಾಖೆಯ ಮುಖ್ಯಸ್ಥರು ಹಾಜರಾತಿಯನ್ನು ನಿರ್ವಹಣೆ ಮಾಡಬೇಕು. ಘಟಕಗಳಲ್ಲಿ ಆಡಳಿತ/ ತಾಂತ್ರಿಕ ಸಿಬ್ಬಂದಿಗಳ ಹಾಜರಾತಿಯನ್ನು ಸಿಬ್ಬಂದಿ ಮೇಲ್ವಿಚಾರಕರು ನಿರ್ವಹಿಸಬೇಕು. ಚಾಲನಾ ಸಿಬ್ಬಂದಿಗಳ ಹಾಜರಾತಿ ಹಾಗೂ ಸಮಯ ಪಟ್ಟಿ ನಿರ್ವಹಣೆಯನ್ನು ಸಂಚಾರ ಮೇಲ್ವಿಚಾರಕರು ನಿರ್ವಹಿಸಬೇಕು. ಎಲ್ಲಾ ಅಧಿಕಾರಿ/ ನೌಕರರ ಹಾಜರಾತಿಯನ್ನು ಆಡಳಿತ ನಿಯಂತ್ರಣ ಹೊಂದಿರುವ ಅಧಿಕಾರಿಗಳು ದೃಢೀಕರಿಸಿ ಲೆಕ್ಕಪತ್ರ ಶಾಖೆಗೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಎಲ್ಲಾ ಇಲಾಖಾ ಮುಖ್ಯಸ್ಥರು/ ವಿಭಾಗೀಯ ನಿಯಂತ್ರಣಾಧಿಕಾರಿಗಳು/ ಶಾಖಾ ಮುಖ್ಯಸ್ಥರು/ ಘಟಕ ವ್ಯವಸ್ಥಾಪಕರು/ ಅಧೀಕ್ಷಕರು/ ಮೇಲ್ವಿಚಾರಕರು ನಿರ್ದೆಶನಗಳನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಬ್ಬಂದಿಗಳ ಗಮನಕ್ಕೆ ತರಬೇಕು ಮತ್ತು ಎಲ್ಲಾ ಹಂತಗಳಲ್ಲಿ ಪರಿಪೂರ್ಣವಾಗಿ ಜಾರಿಗೆ ತರಬೇಕು. ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಹಾಜರಾತಿಯ ಪರಿಗಣನೆ ಹೇಗೆ?
ವೇತನ ಪಟ್ಟಿಗಳನ್ನು ತಯಾರಿಸಲು ಕಾಲಾವಕಾಶ ನೀಡಬೇಕಾಗಿದ್ದು, ಪ್ರತಿ ತಿಂಗಳ 20ರ ತನಕ ವಾಸ್ತವಿಕ ಹಾಜರಾತಿಯನ್ನು ಪರಿಗಣಿಸಿ, 21ರಂದು ತಿಂಗಳಾಂತ್ಯದವರೆಗಿನ ಅವಧಿಯನ್ನು ಊಹಾತ್ಮಕ ಹಾಜರಾತಿ (Assumed attendance) ಎಂದು ಅರ್ಹ ಸಿಬ್ಬಂದಿಗಳಿಗೆ ಅನೂಕೂಲವಾಗುವಂತೆ ಸಕಾರಾತ್ಮಕವಾಗಿ ಪರಿಗಣಿಸಬೇಕು.
ಈ ರೀತಿ ಪರಿಗಣಿಸಿದ ಊಹಾತ್ಮಕ ಹಾಜರಾತಿ ಅವಧಿಯ ಗೈರುಹಾಜರಿಯ ಕುರಿತು ಆಯಾ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಲೆಕ್ಕಪತ್ರ ಶಾಖೆ/ ಇಲಾಖೆಗೆ ಸಲ್ಲಿಸಬೇಕು. ವೇತನ, ವೇತನ ಭತ್ಯೆ, ಇತರೆ ಭತ್ಯೆಗಳ ಪಾವತಿಯಲ್ಲಿನ ವ್ಯತ್ಯಾಸಗಳ ಕುರಿತು ಸೂಕ್ತ ದಾಖಲೆಗಳೊಂದಿಗೆ ಪರಿಶೀಲಿಸಿ ಮುಂದಿನ ತಿಂಗಳಿನಲ್ಲಿ ಸರಿದೂಗಿಸಿಕೊಳ್ಳಲು/ ಹೆಚ್ಚುವರಿಯಾಗಿ ಪಾವತಿಸಿರುವ ಮೊತ್ತವನ್ನು ಕಡಿತಗೊಳಿಸಲು ಲೆಕ್ಕಪತ್ರ ಇಲಾಖೆಯು ಕ್ರಮ ಕೈಗೊಳ್ಳುವುದು. ಅಂತಿಮಗೊಂಡ ಹಾಜರಾತಿ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ವಿವರಣಾ ಪಟ್ಟಿಗಳನ್ನು ಹಾಗೂ ವೇತನ ಭತ್ಯೆ, ಹೆಚ್ಚುವರಿ ಭತ್ಯೆಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಪ್ರತಿ ತಿಂಗಳ 25ನೇ ತಾರೀಖಿನೊಳಗಾಗಿ ತಪ್ಪದೇ ಲೆಕ್ಕಪತ್ರ ಶಾಖೆ/ಇಲಾಖೆಗೆ ಸಲ್ಲಿಸುವುದು.

ರಜೆಗಳ ಮಾಹಿತಿಗಳು
OMS ತಂತ್ರಾಂಶದಲ್ಲಿ ಚಾಲನಾ ಹಾಗೂ ತಾಂತ್ರಿಕ ಸಿಬ್ಬಂದಿಗಳ ರಜೆ ಮಂಜೂರು ಮಾಡಲು ಅವಕಾಶ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಿಬ್ಬಂದಿಗಳು ವೈಯಕ್ತಿಕವಾಗಿ ಮೇಲಾಧಿಕಾರಿಗಳಿಗೆ ಸಲ್ಲಿಸುವ ರಜಾ ಅರ್ಜಿಗಳನ್ನು ಹಾಗೂ ಆಡಳಿತ ಸಿಬ್ಬಂದಿಗಳ ರಜಾ ಅರ್ಜಿಗಳನ್ನು ವಿಭಾಗೀಯ ಕಛೇರಿಗೆ ಕಳುಹಿಸುವುದು. ಸದರಿ ಅರ್ಜಿಗಳನ್ನು ಪರಿಶೀಲಿಸಿ ರಜೆ ಮಂಜೂರಾತಿ ಆದೇಶಗಳನ್ನು ಆಯಾ ತಿಂಗಳ 23ರೊಳಗೆ ವಿಭಾಗೀಯ ಆಡಳಿತಾಧಿಕಾರಿ/ ಸ.ಆಡಳಿತಾಧಿಕಾರಿಗಳು ಹೊರಡಿಸಬೇಕು.
ಉಳಿದಂತೆ, ಕೇಂದ್ರ ಕಛೇರಿ/ ವಿಭಾಗೀಯ ಕಛೇರಿ/ ತರಬೇತಿ ಕೇಂದ್ರ/ ಪ್ರಾದೇಶಿಕ ಕಾರ್ಯಾಗಾರಗಳಲ್ಲಿನ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳ ರಜೆ ಮಂಜೂರಾತಿ ಆದೇಶಗಳನ್ನು ಆಯಾ ತಿಂಗಳ 23ರೊಳಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳು ಹೊರಡಿಸುವುದು ಎಂದು ತಿಳಿಸಲಾಗಿದೆ.
ಮಾಸಿಕ ವೇತನ ಪಾವತಿಯ ಕುರಿತು ಪ್ರಕ್ರಿಯೆಯನ್ನು ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳುವುದು ಲೆಕ್ಕಪತ್ರ ಇಲಾಖೆಯ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ.

ಲೆಕ್ಕಪತ್ರ ಇಲಾಖೆಗೆ ಕಳಿಸಲು ಕ್ರಮಗಳು
ಎಲ್ಲಾ ಹಂತಗಳನ್ನು ಪೂರೈಸಿದ ನಂತರ ಆಯಾ ದಿನಾಂಕಗಳಂದು ಸ್ವೀಕರಿಸಿದ ಹಾಜರಾತಿಗಳ ಆಧಾರದ ಮೇಲೆ ವೇತನ ಪಟ್ಟಿಗಳನ್ನು ತಯಾರಿಸುವ ವಿಷಯ ನಿರ್ವಾಹಕರು ಸರಿಯಾಗಿ ನಿಗದಿಪಡಿಸಿದ ದಿನಾಂಕದೊಳಗೆ ತಯಾರಿಸುವುದು. ಈ ರೀತಿ ತಯಾರಿಸಿದ ವೇತನಪಟ್ಟಿಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಪರಿಪೂರ್ಣವಾಗಿ ಘಟಕಗಳ ಲೆಕ್ಕಪತ್ರ ಮೇಲ್ವಿಚಾಕರು ಲೆಕ್ಕಪರಿಶೋಧನೆ ಮಾಡುವುದು ಹಾಗೂ ವಿಭಾಗೀಯ ಕಛೇರಿಗೆ ಆಯಾ ತಿಂಗಳ 25ರೊಳಗೆ ಸಲ್ಲಿಸಬೇಕು.
ವಿಭಾಗೀಯ ಕಛೇರಿಯಲ್ಲಿ ಸ್ವೀಕರಿಸಿದ ಹಾಜರಾತಿ ಹಾಗೂ ಪೂರಕ ವಿವರಣಾಪಟ್ಟಿಗಳನ್ನು ದೃಢೀಕರಿಸಿಕೊಂಡು ತಮ್ಮ ಹಂತಗಳಲ್ಲಿ ವೇತನ ಪಟ್ಟಿಗಳನ್ನು ಪರಿಶೀಲಿಸಿ ಲೆಕ್ಕಪರಿಶೋಧನೆ ಮಾಡಿ, ವೇತವನ್ನು ನಿಗದಿಪಡಿಸಿದ ದಿನಾಂಕದಂದು ಬಿಡುಗಡೆ ಮಾಡಲು ಲೆಕ್ಕಪತ್ರ ಶಾಖೆ/ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಹಾಜರಾತಿಯ ನಿರ್ವಹಣೆ ಹೇಗೆ?
ಘಟಕಗಳಲ್ಲಿ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಘಟಕ ವ್ಯವಸ್ಥಾಪಕರ ಆಡಳಿತ ನಿಯಂತ್ರಣದಲ್ಲಿರುತ್ತಾರೆ. ಆಡಳಿತ/ ತಾಂತ್ರಿಕ ಸಿಬ್ಬಂದಿಗಳ ಹಾಜರಾತಿ ಮತ್ತು ಪೂರಕ ವಿವರಣಾ ಪಟ್ಟಿಗಳನ್ನು ಸಂಬಂಧಪಟ್ಟ ವಿಷಯ ನಿರ್ವಾಹಕರು ನಿರ್ವಹಿಸಬೇಕು. ಈ ರೀತಿ ನಿರ್ವಹಿಸಿರುವ ಹಾಜರಾತಿ ಮತ್ತು ಪೂರಕ ವಿವರಣಾ ಪಟ್ಟಿಗಳನ್ನು ಮೂಲ ಹಾಜರಾತಿಯೊಂದಿಗೆ ಸಿಬ್ಬಂದಿ ಮೇಲ್ವಿಚಾರಕರು ಪರಿಶೀಲಿಸುವುದು ಮತ್ತು ಘಟಕ ವ್ಯವಸ್ಥಾಪಕರು ದೃಢೀಕರಿಸಬೇಕು.
ಚಾಲನಾ ಸಿಬ್ಬಂದಿಗಳ ಹಾಜರಾತಿಯನ್ನು ಸಂಚಾರ ಮೇಲ್ವಿಚಾರಕರು ನಿರ್ವಹಿಸಬೇಕು. ಈ ರೀತಿ ನಿರ್ವಹಿಸಿರುವ ಹಾಜರಾತಿ ಮತ್ತು ಪೂರಕ ವಿವರಣಾ ಪಟ್ಟಿಗಳನ್ನು ಮೂಲ ಹಾಜರಾತಿಯೊಂದಿಗೆ ಲೆಕ್ಕಪತ್ರ ಮೇಲ್ವಿಚಾರಕರು ಪರಿಶೀಲಿಸುವುದು ಮತ್ತು ಘಟಕ ವ್ಯವಸ್ಥಾಪಕರು ದೃಢೀಕರಿಸುವುದು.
ಕೇಂದ್ರ ಕಛೇರಿ/ ವಿಭಾಗೀಯ ಕಛೇರಿ/ ತರಬೇತಿ ಕೇಂದ್ರ/ ವಿಭಾಗೀಯ ಕಾರ್ಯಾಗಾರಗಳಲ್ಲಿ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಆಯಾ ಇಲಾಖಾ/ ಶಾಖಾ ಮುಖ್ಯಸ್ಥರುಗಳ ಅಡಳಿತ ನಿಯಂತ್ರಣದಲ್ಲಿರುತ್ತಾರೆ. ಈ ಎಲ್ಲಾ ಕಛೇರಿಗಳ ಅಧಿಕಾರಿ/ ಸಿಬ್ಬಂದಿಗಳ ಹಾಜರಾತಿ ಮತ್ತು ಪೂರಕ ವಿವರಣಾ ಪಟ್ಟಿಗಳನ್ನು ವಿಷಯ ನಿರ್ವಾಹಕರು ಸಿದ್ದಪಡಿಸಬೇಕು. ಸಂಬಂಧಪಟ್ಟ ಅಧಿಕಾರಿ/ ಶಾಖಾ ಮುಖ್ಯಸ್ಥರು ಪರಿಶೀಲಿಸಿ ದೃಢೀಕರಿಸಬೇಕು. ನಿಗದಿಪಡಿಸಿದ ದಿನಾಂಕದೊಳಗೆ ಹಾಜರಾತಿ ಹಾಗೂ ಪೂರಕ ಪಟ್ಟಿಗಳನ್ನು ಸಲ್ಲಿಸುವುದು ಇಲಾಖಾ/ ಶಾಖಾ ಮುಖ್ಯಸ್ಥರ ಜವಾಬ್ದಾರಿ.

ಲೆಕ್ಕಪತ್ರ ಇಲಾಖೆಗೆ ಕಳಿಸಬೇಕು
ಚಾಲನಾ ಸಿಬ್ಬಂದಿಗಳ ಸಮಯ ಪಟ್ಟಿಯನ್ನು ಸಂಚಾರ ಮೇಲ್ವಿಚಾರಕರು ನಿರ್ವಹಿಸಬೇಕು. ಚಾಲನಾ ಸಿಬ್ಬಂದಿಗಳ ಸಮಯ ಪಟ್ಟಿಯನ್ನು
ಹಾಗೂ ಇತರೆ ಭತ್ಯೆಗಳ ಕುರಿತು ಸಂಚಾರ ಮೇಲ್ವಿಚಾರಕರು ತಯಾರಿಸಿದ ಪಟ್ಟಿಗಳನ್ನು ಲೆಕ್ಕಪತ್ರ ಮೇಲ್ವಿಚಾರಕರು ಲೆಕ್ಕಪರಿಶೋಧನೆ ಮಾಡಬೇಕು ಹಾಗೂ ಘಟಕ ವ್ಯವಸ್ಥಾಪಕರು ಪರಿಶೀಲಿಸಿ ದೃಢೀಕರಿಸಿ ವಿಭಾಗೀಯ ಕಛೇರಿಗಳಿಗೆ ಆಯಾ ತಿಂಗಳ 23ರೊಳಗೆ ವಿಭಾಗೀಯ ಕಛೇರಿಯ ಸಂಚಾರ ಶಾಖೆಗೆ ಸಲ್ಲಿಸಬೇಕು.
ವಿಭಾಗೀಯ ಕಛೇರಿಯ ಸಂಚಾರ ಶಾಖೆಯಲ್ಲಿ ಚಾಲನಾ ಸಿಬ್ಬಂದಿಗಳ ಸಮಯ ಪಟ್ಟಿಯನ್ನು ಹಾಗೂ ಇತರೆ ಭತ್ಯೆಗಳ ಕುರಿತು ನಿಯಮಾನುಸಾರ ಪರಿಶೀಲಿಸಿ ವಿಭಾಗೀಯ ಸಂಚಲನಾಧಿಕಾರಿಗಳು ದೃಢೀಕರಿಸಿ. ಸೂಕ್ತ ಪ್ರಾಧಿಕಾರಿಯವರ ಅನುಮೋದನೆಯೊಂದಿಗೆ ಲೆಕ್ಕಪತ್ರ ಶಾಖೆ/ ಇಲಾಖೆಗೆ ಸಲ್ಲಿಸಬೇಕು.












Click it and Unblock the Notifications