ಧಾರವಾಡದಲ್ಲಿ ಪ್ರಾದೇಶಿಕ ಅಂತಾರಾಷ್ಟ್ರೀಯ ವಲಸೆ ಕೇಂದ್ರ ಸ್ಥಾಪನೆ

ಧಾರವಾಡ, ಜನವರಿ 08; ಧಾರವಾಡ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯ ಅಂಗವಾಗಿ ಪ್ರಾದೇಶಿಕ ಅಂತಾರಾಷ್ಟ್ರೀಯ ವಲಸೆ ಕೇಂದ್ರವನ್ನು ಧಾರವಾಡದಲ್ಲಿ ಆರಂಭಿಸಲಾಗಿದೆ.

ವಿದೇಶದಲ್ಲಿ ಉದ್ಯೋಗ ಮಾಡುವುದು ಇಂದಿನ ಯುವಜನತೆಯ ಕನಸಾಗಿದೆ. ಆದರೆ ಹಲವು ಬಾರಿ ವಿದೇಶದಲ್ಲಿ ಉದ್ಯೋಗ ಬಯಸಿ ಹೋದವರು ತೊಂದರೆಗೆ ಉಂಟಾಗುವುದು ಎಲ್ಲರಿಗೂ ತಿಳಿದ ವಿಷಯ.

ಇಂತಹ ತೊಂದರೆಗಳನ್ನು ನಿವಾರಿಸಿ ಸಾಮಾನ್ಯ ಜನರಿಗೆ ವಿದೇಶದಲ್ಲಿ ಸುರಕ್ಷಿತವಾದ ಉದ್ಯೋಗವನ್ನು ಪಡೆಯಲು ಸಹಕಾರಿಯಾಗಲು ಸರ್ಕಾರ ನೂತನವಾಗಿ ಅಂತಾರಾಷ್ಟ್ರೀಯ ವಲಸೆ ಕೇಂದ್ರಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸುತ್ತಿದೆ.

KSDC Set Up International Migration Centre At Dharwad

ಧಾರವಾಡ ಜಿಲ್ಲೆಯ ಯುವಜನತೆ ವಿದೇಶದಲ್ಲಿ ಉದ್ಯೋಗ ಬಯಸಿದಲ್ಲಿ ಸರ್ಕಾರದ ಸುವ್ಯವಸ್ಥೆಯಲ್ಲಿ, ಕಾನೂನುಬದ್ಧ ಮತ್ತು ಮಾನವೀಯ ವಲಸೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಕೇಂದ್ರ ಮಧ್ಯವರ್ತಿಗಳ ಹಾವಳಿಯಿಂದ ಅವರನ್ನು ಕಾಪಾಡವುದು. ಇದು ಕೇಂದ್ರ ಸ್ಥಾಪನೆಯ ಪ್ರಮುಖ ಉದ್ದೇಶವೂ ಆಗಿದೆ.

ಈ ಕೇಂದ್ರಗಳ ಮೂಲಕ ಕರ್ನಾಟಕದ ಯುವಜನತೆಗೆ ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಕರ್ನಾಟಕವನ್ನು ಜಾಗತಿಕ ಮಾರುಕಟ್ಟೆಯಲ್ಲಿ ನುರಿತ ತರಬೇತಿ ಪಡೆದ ಹಾಗೂ ಪ್ರಮಾಣೀಕೃತ ಕಾರ್ಮಿಕರ ಕೇಂದ್ರವಾಗಿಸುವ ಗುರಿಯನ್ನು ಹೊಂದಲಾಗಿದೆ.

ಮಾಹಿತಿ ನೀಡಲಾಗುತ್ತದೆ' ವಿದೇಶದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದರೆ, ಅದಕ್ಕೆತಕ್ಕಂತೆ ಕೆಲವು ಪೂರ್ವತಯಾರಿಯ ಅಗತ್ಯವಿರುತ್ತದೆ. ಪ್ರಮುಖವಾಗಿ ವಿದ್ಯಾಭ್ಯಾಸ ಮತ್ತು ಕೆಲಸದ ಅನುಭವದ ಆಧಾರದ ಮೇಲೆ ದೊರೆಯುವಂತಹ ಅವಕಾಶಗಳ ಮಾಹಿತಿಯನ್ನು ತಿಳಿಯಬೇಕು.

KSDC Set Up International Migration Centre At Dharwad

ವಿದೇಶದಲ್ಲಿ ಕನಿಷ್ಠ ಎರಡು ವರ್ಷಗಳಕಾಲ ಕೆಲಸಕ್ಕೆ ಹೋಗಲು ನಮ್ಮನ್ನು ನಾವು ಸಿದ್ಧಗೊಳಿಸುವುದು, ನಮ್ಮ ಕುಟುಂಬದ ಬೆಂಬಲವನ್ನು ಪಡೆಯುವುದು, ನಾವು ಹೋಗಬಯಸುವ ದೇಶಗಳ ಸಾಮಾಜಿಕ ಜೀವನ ಪದ್ಧತಿಗಳ ಬಗ್ಗೆ ಹಾಗೂ ಅಲ್ಲಿಯ ಸಂಸ್ಕೃತಿಯ ಬಗ್ಗೆ ತಿಳಿಯುವುದು ಮತ್ತು ಸಿಗಬಹುದಾದ ಉದ್ಯೋಗದಲ್ಲಿ ಸಿಗುವಂತಹ ಸಂಬಳದ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯವಾಗಿದೆ.

ಈ ಎಲ್ಲ ತಯಾರಿಗಳಲ್ಲಿ ಕೇಂದ್ರದ ಸಿಬ್ಬಂದಿಗಳು ಸಹಾಯ ನೀಡುವರು. ಅಷ್ಟೇ ಅಲ್ಲದೇ ಉದ್ಯೋಗ ಪಡೆಯಲು ಬೇಕಾಗುವ ಪ್ರಮುಖ ದಾಖಲಾತಿಗಳಾದ ಪಾಸ್‌ಪೋರ್ಟ್ ಮಾಡಿಸುವುದು, ಬ್ಯಾಂಕ್ ಖಾತೆಯನ್ನು ತೆರೆಯುವುದು, ಕೆಲಸದ ಅನುಭವದ ಮತ್ತು ವಿದ್ಯಾರ್ಹತೆಯ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿಕೊಳ್ಳುವ ಬಗ್ಗೆ ಮಾಹಿತಿ ಒದಗಿಸುವ ಕಾರ್ಯವನ್ನು ಕೇಂದ್ರ ಮಾಡಲಿದೆ.

ವಿದೇಶಿ ಉದ್ಯೋಗದಾತರ ಜೊತೆ ಸಂಭಾಷಿಸುವಾಗ ನಡೆದುಕೊಳ್ಳಬೇಕಾದ ರೀತಿ, ಇತರೆ ದೇಶಗಳಲ್ಲಿ ಇರುವ ಸಾಮಾಜಿಕ ಜೀವನ, ಅಲ್ಲಿಯ ಕಾನೂನು ವ್ಯವಸ್ಥೆ, ಜೀವನ ಉತ್ತಮಗೊಳಿಸಲು ಉಳಿತಾಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವಲ್ಲಿ ಕೇಂದ್ರದಲ್ಲಿ ಜಿಲ್ಲಾ ಆಪ್ತಸಮಾಲೋಚಕರಿಂದ ಮಾಹಿತಿಯನ್ನು ಒದಗಿಸಲಾಗುವುದು.

ವಿದೇಶದಲ್ಲಿ ಕೆಲಸ ಮಾಡುತ್ತಿರುವಾಗ ಸಂಬಳ, ಕೆಲಸದ ಸಮಯ, ಆರೋಗ್ಯ, ಕೆಲಸದ ಹೆಚ್ಚಿನ ಹೊರೆ, ಸುರಕ್ಷತೆ, ಉದ್ಯೋಗದಾತರ ಜೊತೆ ಆದಂತಹ ಒಪ್ಪಂದದ ಪಾಲನೆಯಾಗದಿರುವುದು, ಇಂತಹ ಇನ್ನೂ ಅನೇಕ ಸಂದರ್ಭಗಳಲ್ಲಿ ಕೆಲಸದಲ್ಲಿ ಏನಾದರೂ ತೊಂದರೆಗಳಾದರೆ ನೇರವಾಗಿ ಆ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಹಾಯಕ್ಕಾಗಿ ಸಂಪರ್ಕಿಸಬಹುದಾಗಿದೆ.

ಅತೀ ಮುಖ್ಯವಾಗಿ ಮಹಿಳಾ ವಲಸಿಗರಿಗಾಗಿ ಸರ್ಕಾರದಿಂದ ವಿಶೇಷ ಕಾಳಜಿಯನ್ನು ವಹಿಸಲಾಗಿದ್ದು, ಮನೆಗೆಲಸ ಮಾಡಲು ವಿದೇಶಕ್ಕೆ ಹೋಗಬಯಸುವ ಮಹಿಳೆಯರಿಗೆ ವಿಶೇಷವಾಗಿ ಉಚಿತವಾಗಿ ಆಪ್ತ ಸಮಾಲೋಚನೆ ಮಾಡಲಾಗುವುದು.

ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮವು ವಿದೇಶದಲ್ಲಿ ಕೆಲಸ ಮಾಡಲು ಇಚ್ಛಿಸುವ ಮಹಿಳೆಯರನ್ನು ನೇಮಕ ಮಾಡಲು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮಾನ್ಯತೆ ಪಡೆದ ಏಕೈಕ ಸಂಸ್ಥೆಯಾಗಿದೆ.

ವಲಸಿಗರು ಉದ್ಯೋಗ ಪಡೆದನಂತರ ಭಾರತದಿಂದ ಹೊರಡುವ ಮುಂಚಿತವಾಗಿ ಅವರಿಗೆ ನಿರ್ಗಮನ ಪೂರ್ವ ಹೊಸ ಪರಿಸರ ಮತ್ತು ಪರಿಸ್ಥಿತಿ ಪರಿಚಯಿಸುವ ತರಬೇತಿಯನ್ನು ಕೇಂದ್ರ ಸರ್ಕಾರದಿಂದ ಗುರುತಿಸಲಾದ ತರಬೇತಿ ಕೇಂದ್ರಗಳಲ್ಲಿ ನೀಡಲಾಗುವುದು.

ತರಬೇತಿಯಲ್ಲಿ ವಿದೇಶಿ ಸಂಸ್ಕೃತಿ, ಅಲ್ಲಿನ ನಡೆ-ನುಡಿ, ಕಾನೂನು ವ್ಯವಸ್ಥೆ, ಭಾಷೆ, ಮೃದು ಕೌಶಲ್ಯಗಳು ಹಾಗೂ ನಿರ್ದಿಷ್ಟವಾದ ದೇಶಗಳಿಗೆ ಹೋಗಲು ಬೇಕಾದ ಇನ್ನಿತರ ವಿಷಯಗಳ ಬಗ್ಗೆ ತಿಳಿಸಲಾಗುವುದು.
ಅದರ ಜೊತಗೆ ಹಲವು ವರ್ಷಗಳ ಕಾಲ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕುಟುಂಬಗಳಿಗೂ ಸಹ ಈ ಕೇಂದ್ರಗಳು ನೆರವಾಗಲಿವೆ. ಅದೇ ರೀತಿ ಕೆಲಸ ನಿರ್ವಹಿಸಿ ಮರಳಿ ಬಂದ ಕಾರ್ಮಿಕರಿಗೆ ತಮ್ಮ ಊರುಗಳಲ್ಲಿ ಸಾಮಾಜಿಕ ಜೀವನವನ್ನು ನೆಲೆಗೊಳಿಸುವಲ್ಲಿ ಸೇವೆಯನ್ನು ಒದಗಿಸುವಲ್ಲಿ ಕೇಂದ್ರವು ನೆರವಾಗಲಿದೆ.

ಅಂತಾರಾಷ್ಟ್ರೀಯ ವಲಸೆ ಕೇಂದ್ರ ಕರ್ನಾಟಕ ಬೆಂಗಳೂರನ್ನು ರಾಜ್ಯ ಕಛೇರಿಯಾಗಿಸಿಕೊಂಡು, ನಾಲ್ಕು ವಲಯವಾರು ಕಛೇರಿಗಳು ಹಾಗೂ ಎಂಟು ಮಾಹಿತಿ ಕೇಂದ್ರಗಳ ಮೂಲಕ ಭಾರತ ಸರ್ಕಾರದ ಸಹಯೋಗದಲ್ಲಿ ವಿದೇಶಿ ಉದ್ಯೋಗದಾತರ ಆಯ್ಕೆಯಲ್ಲಿ ವಿಶೇಷ ಎಚ್ಚರ ವಹಿಸಲು ಭಾರತೀಯ ಧೂತವಾಸಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ.

ಧಾರವಾಡ ಪ್ರಾದೇಶಿಕ ಕಛೇರಿಯಾಗಿದ್ದು, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ವ್ಯಾಪ್ತಿಯನ್ನು ಹೊಂದಿರುತ್ತದೆ.

ಆಸಕ್ತರು ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, 1ನೇ ಮಹಡಿ, ರಾಯಾಪೂರ, ಧಾರವಾಡ, ಕಛೇರಿಗೆ ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು 0836-2972388, 9945927305, 9113505020

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+