KAS: ಕೆಎಎಸ್ ನೇಮಕಾತಿ, ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟ
ಬೆಂಗಳೂರು, ಮಾರ್ಚ್ 27: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿಯ ಮುಖ್ಯ ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿದೆ. ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮುಖ್ಯ ಪರೀಕ್ಷೆಯನ್ನು ಮಾರ್ಚ್ 28, 29 ಮತ್ತು ಏಪ್ರಿಲ್ 1, 2ರಂದು ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು, ಬಳಿಕ ಅದನ್ನು ಮುಂದೂಡಲಾಗಿತ್ತು.
ಗುರುವಾರ ಕೆಪಿಎಸ್‌ಸಿ ಕೆಎಎಸ್ ನೇಮಕಾತಿ ಮುಖ್ಯ ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿದೆ. ಅಭ್ಯರ್ಥಿಗಳ ಮಾಹಿತಿಗಾಗಿ ಮುಖ್ಯ ಪರೀಕ್ಷೆ ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.

ಮುಖ್ಯ ಪರೀಕ್ಷೆಯ ದಿನಾಂಕಗಳು: ಗುರುವಾರ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಮೂಲಕ ಮುಖ್ಯ ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಈ ಪ್ರಕಟಣೆಯು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ಅಧಿಸೂಚನೆಗಳನ್ನು ಕ್ರಮವಾಗಿ ದಿನಾಂಕ 26-02-2024 ಮತ್ತು ದಿನಾಂಕ13-02-2025ರಂದು ಹೊರಡಿಸಲಾಗಿರುತ್ತದೆ ಎಂದು ಹೇಳಿದೆ.
ದಿನಾಂಕ 13-02-2025ರ ಅಧಿಸೂಚನೆಯಲ್ಲಿ ಮುಖ್ಯ ಪರೀಕ್ಷೆಯನ್ನು ದಿನಾಂಕ 28-03-2025, 29-03-2025, 01-04-2025 ಮತ್ತು 02-04-2025ರಂದು ನಡೆಸಲು ನಿಗದಿಪಡಿಸಲಾಗಿತ್ತು. ಕಾರಣಾಂತರಗಳಿಂದ ಮುಖ್ಯ ಪರೀಕ್ಷೆಯನ್ನು ಮುಂದೂಡಿ, ಪ್ರಕಟಣೆ
ಹೊರಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಸ್ತುತ ಸದರಿ ಮುಖ್ಯ ಪರೀಕ್ಷೆಯನ್ನು ದಿನಾಂಕ 3-05-2025, 5-05-2025, 7-05-2025 ಮತ್ತು 9-05-2025ರಂದು ನಡೆಸಲು ಮರುನಿಗದಿಪಡಿಸಲಾಗಿರುತ್ತದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಗಳು ಹೇಳಿದ್ದಾರೆ.
ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ http://kpsc.kar.nic.in ಅಭ್ಯರ್ಥಿಗಳ ಮಾಹಿತಿಗಾಗಿ ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ವಿಚಾರದಲ್ಲಿ ಭಾರೀ ಸುದ್ದಿಯಲ್ಲಿದೆ. ಕೆಎಎಸ್ ನೇಮಕಾತಿಗಾಗಿ ಪೂರ್ವಭಾವಿ ಪರೀಕ್ಷೆಯನ್ನು 2024ರಲ್ಲಿ ಒಮ್ಮೆ ನಡೆಸಲಾಗಿತ್ತು. ಆದರೆ ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ದೋಷದ ಕಾರಣ ಪರೀಕ್ಷೆ ಸುದ್ದಿ ಮಾಡಿತ್ತು. ಮರು ಪರೀಕ್ಷೆಗೆ ಅಭ್ಯರ್ಥಿಗಳು ಆಗ್ರಹಿಸಿದ್ದರು. ಆದ್ದರಿಂದ ಡಿಸೆಂಬರ್‌ನಲ್ಲಿ ಮರು ಪರೀಕ್ಷೆ ನಡೆಸಲಾಗಿತ್ತು.
ಆದರೆ 2ನೇ ಬಾರಿಗೆ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿಯೂ ಕನ್ನಡ ದೋಷವಿದ್ದ ಕಾರಣ ಹಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದಾರೆ. ಮುಂದಿನ ಪ್ರಕ್ರಿಯೆಗೆ ತಡೆ ಇಲ್ಲದ ಕಾರಣ ಕೆಪಿಎಸ್‌ಸಿ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯನ್ನು ಮಾರ್ಚ್ 28, 29 ಮತ್ತು ಏಪ್ರಿಲ್ 1, 2ರಂದು ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು, ಬಳಿಕ ಅದನ್ನು ಮುಂದೂಡಲಾಗಿತ್ತು. ಈಗ ಮುಖ್ಯ ಪರೀಕ್ಷೆಗೆ ಮತ್ತೊಂದು ದಿನಾಂಕವನ್ನು ಘೋಷಣೆ ಮಾಡಿದೆ. ಅಭ್ಯರ್ಥಿಗಳು ಈಗ ಮುಖ್ಯ ಪರೀಕ್ಷೆ ತಯಾರಿಯನ್ನು ಕೈಗೊಳ್ಳಬಹುದು.
ಹಲವು ಅಭ್ಯರ್ಥಿಗಳು, ಕನ್ನಡ ಹೋರಾಟಗಾರರು, ಸಾಹಿತಿಗಳು ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ವಿಚಾರದಲ್ಲಿ ಕೆಪಿಎಸ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಎಸ್‌ಸಿಯಲ್ಲಿ ಸಂಪೂರ್ಣ ಬದಲಾವಣೆ ತರುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸಿದ್ದಾರೆ.












Click it and Unblock the Notifications