ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ; ಕೌನ್ಸಿಲಿಂಗ್ ದಿನಾಂಕ ಪ್ರಕಟ
ಬೆಂಗಳೂರು, ಅಕ್ಟೋಬರ್ 19: ಕರ್ನಾಟಕ ಸರ್ಕಾರ 2022ರ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ನೇಮಕಾತಿಗೆ ಮತ್ತೆ ಚಾಲನೆ ನೀಡಿದೆ. ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಪ್ರಕ್ರಿಯೆಯ ಪ್ರಕಟಣೆ ಹೊರಡಿಸಿದ್ದು, ಅಭ್ಯರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಆಯುಕ್ತರು ಶಿಕ್ಷಣ ಇಲಾಖೆ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಈ ಆದೇಶ 2022ರ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ನೇಮಕಾತಿ ಕೌನ್ಸಿಲಿಂಗ್ ಪ್ರಕ್ರಿಯೆಯ ಪ್ರಕಟಣೆ ಎಂಬ ವಿಷಯ ಒಳಗೊಂಡಿದೆ.

ಕೌನ್ಸಿಲಿಂಗ್ ದಿನಾಂಕ ಪ್ರಕಟ; ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ನೇಮಕಾತಿ-2022ರ ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ 12/10/2023ರ ವಿಭಾಗೀಯ ಪೀಠದ ತೀರ್ಪಿನಂತೆ ದಿನಾಂಕ 08/03/2023 ರಂದು ಪ್ರಕಟಿತ 1:1 ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸಿಲಿಂಗ್‌ಗೆ ಅರ್ಹ ಅಭ್ಯರ್ಥಿಗಳ ವಿವರಗಳನ್ನು ದಿನಾಂಕ 19/10/2023 ರಂದು ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್ https://schooleducation.karnataka.gov.in ನಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ.
ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಕ್ರಮವಾಗಿ ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ, ಜೀವವಿಜ್ಞಾನ ಮತ್ತು ಆಂಗ್ಲ ಭಾಷಾ ಹುದ್ದೆಗಳಿಗೆ ಸ್ಥಳನಿಯುಕ್ತಿ ಕೌನ್ಸಿಲಿಂಗ್ ಅನ್ನು ದಿನಾಂಕ 21/10/2023 ರಿಂದ ಬೆಳಗ್ಗೆ 10.30ಗಂಟೆಯಿಂದ ರಾಜ್ಯದ (371ಜೆ ಗೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಕರಣಗಳು ಬಾಕಿ ಇರುವ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳನ್ನು ಹೊರತುಪಡಿಸಿ ಮತ್ತು ಬಿ.ಬಿ.ಎಂ.ಪಿ ವ್ಯಾಪ್ತಿಯ 8 ಹುದ್ದೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳನ್ನು ಹೊರತುಪಡಿಸಿ) ಜಿಲ್ಲೆಗಳಲ್ಲಿನ ಆಯಾ ಜಿಲ್ಲಾ ನೇಮಕಾತಿ ಪ್ರಾಧಿಕಾರಿಯವರಾದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರ ಕಛೇರಿಯಲ್ಲಿ ನಡೆಸಲಾಗುತ್ತದೆ.
ಆದ್ದರಿಂದ ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್‌ನಲ್ಲಿರುವಂತೆ ಎಲ್ಲಾ ಅಗತ್ಯ ವಿವರಗಳನ್ನು ಪಡೆದುಕೊಂಡು ಸಕಾಲದಲ್ಲಿ ಕೌನ್ಸಿಲಿಂಗ್ ಸ್ಥಳದಲ್ಲಿ ಭಾವಚಿತ್ರವಿರುವ ಗುರುತಿನ ಚೀಟಿ ಮತ್ತು ನೇಮಕಾತಿಗೆ ಸಂಬಂಧಪಟ್ಟಂತೆ ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಾಗುವುದು. ಹೆಚ್ಚಿನ ವಿವರಗಳಿಗೆ ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದೆ.
ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಹೈಕೋರ್ಟ್ ವಿಭಾಗೀಯ ಪೀಠ ಮಾರ್ಚ್ 8ರಂದು ಪ್ರಕಟಿಸಿರುವ 1:1ರ ಅನುಪಾತದ ಮುಖ್ಯ ಆಯ್ಕೆಪಟ್ಟಿಯಲ್ಲಿರುವಂತೆ ನೇಮಕ ಮಾಡುವಂತೆ ಆದೇಶ ನೀಡಿತ್ತು.
ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಶಿಕ್ಷಣ ಇಲಾಖೆ 15 ಸಾವಿರ ಪದವೀಧರ ಶಿಕ್ಷಕರ ನೇಮಕ್ಕೆ ಅಧಿಸೂಚನೆ ಹೊರಡಿಸಿ, ಮೇ 2022ರಲ್ಲಿ ಪರೀಕ್ಷೆಗಳನ್ನು ನಡೆಸಿತ್ತು. ನವೆಂಬರ್ 18ರಂದು ಆಯ್ಕೆಪಟ್ಟಿ ಪ್ರಕಟಿಸಿತ್ತು.
ಈ ಪಟ್ಟಿ ಆಧಾರದ ಮೇಲೆ ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶದಂತೆ ಮಾರ್ಚ್ 9ರಂದು 2ನೇ ಬಾರಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಇದರಲ್ಲಿ 13,352 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.












Click it and Unblock the Notifications