Karnataka Government Jobs; ಹೊರಗುತ್ತಿಗೆ ಮೀಸಲು, ಷರತ್ತುಗಳು
ಬೆಂಗಳೂರು, ಮೇ 29: ಕರ್ನಾಟಕ ಸರ್ಕಾರ ಸರ್ಕಾರದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಅಳವಡಿಸುವ ಕುರಿತು ಅಧಿಕೃತ ಆದೇಶವನ್ನು ಪ್ರಕಟಿಸಿದೆ. ಮೀಸಲಾತಿ ನಿಗದದಿ ಮಾಡಲು ಷರತ್ತುಗಳನ್ನು ಸಹ ಹಾಕಿದೆ.
ಈ ಕುರಿತು ರಾಜ್ಯಪತ್ರದ ಮೂಲಕ ರಂದೀಪ್ ಡಿ., ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ದಿನಾಂಕ 19/5/2022ರ ಸುತ್ತೋಲೆಯನ್ನು ಉಲ್ಲೇಖ ಮಾಡಿದ್ದಾರೆ.

ರಾಜ್ಯ ಸರ್ಕಾರದ ಕಛೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳುವುದು ಸರ್ಕಾರದ ಇತ್ತೀಚಿನ ಅಂಗೀಕೃತ ಕಾರ್ಯನೀತಿಯಾಗಿರುತ್ತದೆ. ದಿನಾಂಕ 21/12/2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಲು ನಿರ್ಣಯಿಸಲಾಗಿದೆ ಎಂದು ಹೇಳಿದ್ದಾರೆ.
ಆದುದರಿಂದ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುವ ಎಲ್ಲಾ ಹೊರಗುತ್ತಿಗೆ ನೇಮಕಾತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮವನ್ನು ಈ ಕೆಳಕಂಡ ಸೂಚನೆಗಳೊಂದಿಗೆ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
* ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ.
* ಪ್ರತಿ ವರ್ಷವು ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಕೆ.ಟಿ.ಪಿ.ಪಿ ಅಧಿನಿಯಮ 1999ರಂತೆ ಟೆಂಡರ್ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿಯಂತೆ ಸಿಬ್ಬಂದಿಗಳನ್ನು ಪಡೆಯಲು ಷರತ್ತುಗಳನ್ನು ನಮೂದಿಸುವುದು.
* ಹೊರಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿ ಪ್ರಮಾಣದಲ್ಲಿ ಕನಿಷ್ಠ ಶೇಕಡ 33ರಷ್ಟು ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳತಕ್ಕದ್ದು.
* ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಕಡ್ಡಾಯವಾಗಿ ಹೊರ ಸಂಪನ್ಮೂಲ ಏಜೆನ್ಸಿಯು ಅಂತಿಮಗೊಳಿಸಿದ ಸಿಬ್ಬಂದಿಗಳ ಪಟ್ಟಿ, ಮೀಸಲಾತಿಯಂತೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು. ಜಾತಿ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಹೊರ ಸಂಪನ್ಮೂಲ ಏಜೆನ್ಸಿಯು ಪಡೆದು ನಿರ್ವಹಿಸತಕ್ಕದ್ದು. ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಈ ಬಗ್ಗೆ ಪರಿಶೀಲಿಸಿ ಕಾರ್ಯಾದೇಶವನ್ನು ನೀಡಲು ಕ್ರಮವಹಿಸುವುದು. (ಸಿಂಧುತ್ವ ಪಮಾಣ ಪತ್ರದ ಅಗತ್ಯವಿರುವುದಿಲ್ಲ)
* ಒಂದು ವೇಳೆ ನೇಮಕಾತಿಗೊಂಡ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ/ ಅರ್ಧದಲ್ಲಿ ಬಿಟ್ಟಿದಲ್ಲಿ ಅಂತಹ ಖಾಲಿ ಉಳಿಯುವ ಸ್ಥಾನವನ್ನು ಭರ್ತಿ ಮಾಡಲು ಅದೇ ಪ್ರವರ್ಗದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅಭ್ಯರ್ಥಿಗಳನ್ನು ಒದಗಿಸುವ ಏಜೆನ್ಸಿಯು ಕ್ರಮ ಕೈಗೊಳ್ಳತಕ್ಕದ್ದು.
* ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸತಕ್ಕದ್ದು.
* ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 60 ವರ್ಷಗಳಾಗಿರತಕ್ಕದ್ದು.
* ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಅಳವಡಿಸುತ್ತಿರುವುದರಿಂದ ಯಾವುದೇ ಕಾರಣಕ್ಕಾಗಿ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಲು ಪರಿಗಣಿಸತಕ್ಕದ್ದಲ್ಲ.
ಈ ಮೇಲಿನ ಸೂಚನೆಗಳು ಸರ್ಕಾರದ ಎಲ್ಲಾ ಇಲಾಖೆಗಳು/ ಸ್ವಾಯತ್ತ ಸಂಸ್ಥೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾನಿಲಯಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications