ಕೊಪ್ಪಳ; ಗಂಗಾವತಿಯಲ್ಲಿ ಅಕ್ಟೋಬರ್ 17ಕ್ಕೆ ಉದ್ಯೋಗ ಮೇಳ
ಕೊಪ್ಪಳ, ಅಕ್ಟೋಬರ್ 15; ಕೊಪ್ಪಳ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಅಕ್ಟೋಬರ್ 17ರಂದು ಗಂಗಾವತಿಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. 18 ರಿಂದ 28 ವರ್ಷದವರೆಗಿನ ಅರ್ಹ ವಿದ್ಯಾರ್ಹತೆ ಹೊಂದಿದ ಯುವಕ ಮತ್ತು ಯುವತಿಯರು ಪಾಲ್ಗೊಳ್ಳಬಹುದಾಗಿದೆ.
ಗಂಗಾವತಿ ಸರ್ಕಾರಿ ಇಂಜನಿಯರ್ ಕಾಲೇಜಿನಲ್ಲಿ ಬೆಳಗ್ಗೆ 10.30 ರಿಂದ 2 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ ಉಚಿತ ಪ್ರವೇಶವಿರುತ್ತದೆ. ಪಿಯುಸಿ/ ತತ್ಸಮಾನ, ಐಟಿಐ, ಯಾವುದೇ ಪದವಿ, ಡಿಪ್ಲೊಮಾ, ಸಿವಿಲ್, ಮೆಕ್ಯಾನಿಕಲ್, ಬಿಇ ಸಿವಿಲ್, ಮೆಕ್ಯಾನಿಕಲ್ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಈ ಉದ್ಯೋಗ ಮೇಳದಲ್ಲಿ ನೆಕ್ಸ್ಸ್ ಇಂಡಿಯಾ ಮೈಸೂರು, ಸ್ವಮಾನ್ ಫೈನಾನ್ಸ್ ಗಂಗಾವತಿ, ಅಡ್ಯಾಕೊ ಕೋಲಾರ ಇವರು ಭಾಗವಹಿಸಲಿದ್ದಾರೆ. ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಉದ್ಯೋಗ ಮೇಳದಲ್ಲಿ 18 ರಿಂದ 28 ವರ್ಷದವರೆಗಿನ ಅರ್ಹ ವಿದ್ಯಾರ್ಹತೆ ಹೊಂದಿದ ಯುವಕ ಮತ್ತು ಯುವತಿಯರು, ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡಿನ ಪ್ರತಿ, ಬಯೋಡಾಟಾ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 8105693234.
ದಾವಣಗೆರೆಯಲ್ಲಿ ಉದ್ಯೋಗ ಮೇಳ; ದಾವಣಗೆರೆ ಜಿಲ್ಲೆಯ ನಿರುದ್ಯೋಗ ಯುವಕ, ಯುವತಿಯರು ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲವಾಗಿಸಲು ಅಕ್ಟೋಬರ್ 16ರಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ. ವಿ. ಹೇಳಿದ್ದಾರೆ.
ಜಿಲ್ಲೆಯಲ್ಲಿನ ಗ್ರಾಮಾಂತರ ಪ್ರದೇಶದ ಯುವ ಜನಾಂಗಕ್ಕೆ ಉದ್ಯೋಗಾವಕಾಶ ಕಲ್ಪಿಸಿಕೊಡಲು ಮತ್ತು ಉದ್ಯೋಗಕ್ಕಾಗಿ ವೇದಿಕೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಉದ್ಯೋಗ ಮೇಳವನ್ನು ಆಯೋಜಿಸಲು ಜಿಲ್ಲಾಡಳಿತ ಗುರಿ ಹೊಂದಿದೆ ಎಂದು ಹೇಳಿದರು.
ಅಕ್ಟೋಬರ್ 16ರಂದು ನಡೆಯುವ ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ ಯಿಂದ ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‍ಗಳಲ್ಲಿ ಉತ್ತೀರ್ಣರಾದವರು ಭಾಗವಹಿಸಬಹುದಾಗಿದೆ. 150ಕ್ಕಿಂತಲೂ ಹೆಚ್ಚಿನ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಐಟಿ, ಆಟೋಮೊಬೈಲ್, ಖಾಸಗಿ ಬ್ಯಾಂಕಿಂಗ್, ಟೆಕ್ಸ್‌ಟೈಲ್, ಫೈನಾನ್ಸ್, ಆರೋಗ್ಯ ಮತ್ತು ಫಾರ್ಮಸಿ, ಜ್ಯೂವಲ್ಲರಿ, ವಿಮಾ ಕಂಪನಿ, ಫರ್ಟಿಲೈಸರ್ ಕ್ಷೇತ್ರದಲ್ಲಿನ ವಿವಿಧ ಉದ್ಯೋಗದಾತರು ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30ರ ಉದ್ಯೋಗ ಮೇಳ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರ ಹಾಗೂ ಮೂಲ ದಾಖಲಾತಿಗಳೊಂದಿಗೆ ಭಾಗವಹಿಸಬೇಕು. ಕಂಪನಿಯವರು ಪರಿಶೀಲನೆ ಮತ್ತು ನೇರ ಸಂದರ್ಶನ ನಡೆಸಿ ಸ್ಥಳದಲ್ಲಿಯೇ ನೇಮಕಾತಿ ಆದೇಶವನ್ನು ನೀಡುವರು.











Click it and Unblock the Notifications