ಬೆಂಗಳೂರಿನ ಆರ್. ಸಿ. ಕಾಲೇಜಿನಲ್ಲಿ ಆ.8ಕ್ಕೆ ಉದ್ಯೋಗ ಮೇಳ
ಬೆಂಗಳೂರು, ಆಗಸ್ಟ್ 07; ಬೆಂಗಳೂರು ನಗರದ ಆರ್. ಸಿ. ಕಾಲೇಜ್, ರೇಸ್ ಕೋರ್ಸ್ ರಸ್ತೆ ಇಲ್ಲಿ ಆಗಸ್ಟ್ 8ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ವಿವಿಧ ಕಂಪನಿಗಳು ಭಾಗವಹಿಸಲಿದ್ದು, ಹಲವು ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ.
ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ, ಕೆ. ಜಿ. ರಸ್ತೆ ಹಾಗೂ ಆರ್. ಸಿ. ಕಾಲೇಜ್ ಬೆಂಗಳೂರು ಇವರು ಜಂಟಿಯಾಗಿ ಉದ್ಯೋಗ ಮೇಳ ಆಯೋಜನೆ ಮಾಡಿದ್ದಾರೆ. ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ.

ಈ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿ/ ಸಂಸ್ಥೆಗಳು ಭಾಗವಹಿಸಲಿದ್ದು, ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪದವಿ (ಇಂಜಿನಿಯರಿಂಗ್ ಹೊರತು ಪಡಿಸಿ) ವಿದ್ಯಾರ್ಹತೆ ಹೊಂದಿರುವ 35 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ಉದ್ಯೋಗಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಆಸಕ್ತರು ಹೆಚ್ಚಿನ ವಿವರಗಳಿಗೆ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ, 2ನೇ ಮಹಡಿ, ಏಷ್ಯಾಟಿಕ್ ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು- 560009 ಅಥವಾ 8310960536, 080-22374582 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಉದ್ಯೋಗ ಮೇಳ ಆರ್. ಸಿ. ಕಾಲೇಜ್, ರೇಸ್ ಕೋರ್ಸ್ ರಸ್ತೆ ಬೆಳಗ್ಗೆ 10.30ರಿಂದ ಆರಂಭವಾಗಲಿದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಲು ಕರೆ ನೀಡಲಾಗಿದೆ.
ಕಛೇರಿ ಸ್ಥಳಾಂತರದ ಮಾಹಿತಿ; ಬೆಂಗಳೂರಿನ ಕೆ. ಜಿ. ರಸ್ತೆಯ ಏಷ್ಯಾಟಿಕ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ವಿಶೇಷ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ.
ಕಛೇರಿಯ ಹೊಸ ವಿಳಾಸ ಸಿ,ಓ,ಇ ಕಟ್ಟಡ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ತುಮಕೂರು ರಸ್ತೆ, ಬೆಂಗಳೂರು. ರಾಜ್ಯ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ವಿಶೇಷ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ದಾವಣಗೆರೆಯಲ್ಲಿ ನೇರ ಸಂದರ್ಶನ; ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಆಗಸ್ಟ್ 8ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ (ಕೊಠಡಿ ಸಂಖ್ಯೆ-51)ರಲ್ಲಿ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.
ಹಲವು ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಎಸ್. ಎಸ್. ಎಲ್. ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ಕನಿಷ್ಠ 6 ಸೆಟ್ ಬಯೋಡಾಟಾ ಮತ್ತು ಆಧಾರ್ ಕಾರ್ಡ್‍ನೊಂದಿಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆ 6361550016, 08192-259446.











Click it and Unblock the Notifications