Job Cut: ಬೆಂಗಳೂರಲ್ಲಿ ಕೆಲಸ ಕಳೆದುಕೊಂಡ 50,000 ಐಟಿ ಉದ್ಯೋಗಿಗಳು
ಬೆಂಗಳೂರು, ಮಾರ್ಚ್ 18: ಕರ್ನಾಟಕ ಸರ್ಕಾರ 1997ರಲ್ಲಿ ತನ್ನ ಮೊದಲ ಐಟಿ ನೀತಿಯನ್ನು ರೂಪಿಸಿತು. ಐಟಿ ಇಲಾಖೆಯನ್ನು ಸಹ ಪ್ರಾರಂಭಿಸಿತು. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಐಟಿ ಕ್ಷೇತ್ರ ಊಹೆಗೂ ನಿಲುಕದಂತೆ ಬೆಳವಣಿಗೆ ಕಂಡಿದೆ. ದೊಡ್ಡ ದೊಡ್ಡ ಕಂಪನಿಗಳು ನಗರದಲ್ಲಿ ಕಛೇರಿಯನ್ನು ಹೊಂದಿವೆ. ನಗರದಲ್ಲಿ ಲಕ್ಷಾಂತರ ಐಟಿ ಉದ್ಯೋಗಿಗಳಿದ್ದಾರೆ. ಐಟಿ ಕ್ಷೇತ್ರವೂ ಉದ್ಯೋಗ ನಷ್ಟವನ್ನು ಅನುಭವಿಸುತ್ತಿದ್ದು, ವೆಚ್ಚ ಕಡಿತದ ನೆಪವೊಡ್ಡಿ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ.
ಕೃತಕ ಬುದ್ಧಿಮತ್ತೆ (ಎಐ) ಮತ್ತು ಐಟಿ ಕಂಪನಿಗಳ ವೆಚ್ಚ ಕಡಿತದ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. 2024ರಲ್ಲಿ ನಗರದಲ್ಲಿ 50,000 ಉದ್ಯೋಗಿಗಳು ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ. ಇನ್ನೂ ಎರಡು ಮೂರು ತಿಂಗಳು ಕೆಲವು ಕಂಪನಿಗಳು ಉದ್ಯೋಗ ಕಡಿತ ಮಾಡಲಿವೆ ಎಂದು ಹೇಳಿದೆ.

ಬೆಂಗಳೂರು ನಗರದ ಆರ್ಥಿಕ ಚಟುವಟಿಕೆಯಲ್ಲಿ ಐಟಿ ಉದ್ಯೋಗಿಗಳು, ಐಟಿ ವಲಯದ ಸುತ್ತಮತ್ತಲಿನ ವಿವಿಧ ವಾಣಿಜ್ಯ ವ್ಯವಹಾರವಿದೆ. ಆದ್ದರಿಂದ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡರೆ ನಗರದ ವಾಣಿಜ್ಯ ವ್ಯವಹಾರದ ಮೇಲೆ ಸಹ ಪ್ರಭಾವ ಉಂಟಾಗಲಿದೆ.
ಎಐ ತಂತ್ರಜ್ಞಾನದ ಕಡೆ ವಾಲುತ್ತಿರುವ ಹಲವು ಐಟಿ ಕಂಪನಿಗಳು ಮುಂದಿನ ಎರಡು ಮೂರು ತಿಂಗಳಿನಲ್ಲಿ ಮತ್ತೊಮ್ಮೆ ಉದ್ಯೋಗ ಕಡಿತ ಮಾಡಲಿವೆ ಎಂದು ವರದಿ ಅಂದಾಜಿಸಿದೆ. ಈಗಾಗಲೇ ಐಟಿ ವಲಯದಲ್ಲಿ ಹೊಸ ನೇಮಕಾತಿಗಳು ಬಹುತೇಕ ಸ್ಥಗಿತವಾಗಿದೆ. ಹೆಚ್ಚು ಸಂಬಳವಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ.
ಐಟಿ ಉದ್ಯಮ, ಜಾಬ್ ಕಟ್: 2024ರಲ್ಲಿ 50,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದರಿಂದಾಗಿ ನಗರದ ಹೊರ ವರ್ತುಲ ರಸ್ತೆ, ಐಟಿ ಕಂಪನಿಗಳ ಸುತ್ತಮುತ್ತಲಿನ ಪ್ರದೇಶದ ವಾಣಿಜ್ಯ ಚಟುವಟಿಕೆ ಮೇಲೆ ಪ್ರಭಾವ ಉಂಟಾಗಿದೆ ಎಂದು ವರದಿ ಹೇಳಿದೆ. ಪಿಜಿಗಳು, ಅಪಾರ್ಟ್‌ಮೆಂಟ್ ಬಾಡಿಗೆ ಸೇರಿದಂತೆ ವಿವಿಧ ಉದ್ಯಮದ ಮೇಲೆ ಈ ಕೆಲಸ ಕಡಿತ ಪ್ರಭಾವ ಬೀರಿದೆ.
ಐಟಿ ವಲಯದಲ್ಲಿ ಪ್ರಾಥಮಿಕ ಹಂತದ ಎಂಟ್ರಿ ಲೆವೆಲ್ ಪ್ರೋಗ್ರಾಮರ್ಸ್, ಸಾಫ್ಟ್‌ವೇರ್ ಟೆಸ್ಟರ್‌ಗಳು, ವಿವಿಧ ಕಾಲ್ ಸೆಂಟರ್‌ಗಳು ಎಐ ತಂತ್ರಜ್ಞಾನದ ಮೊರೆ ಹೋಗುತ್ತಿವೆ. ಆದ್ದರಿಂದ ವಿವಿಧ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿವೆ, ಮುಂದಿನ ದಿನಗಳಲ್ಲಿಯೂ ಮಾಡಲಿವೆ.
ಐಟಿ ಕಂಪನಿಗಳ ಉದ್ಯೋಗ ಕಡಿತದ ಘೋಷಣೆಗಳು ತಕ್ಷಣ ಪರಿಣಾಮ ಬೀರುವುದು ಬೆಂಗಳೂರು ನಗರದ ಪಿಜಿ, ಬಾಡಿಗೆ ಮಾರುಕಟ್ಟೆಯ ಮೇಲೆ. ಕಿರಿಯ ಐಟಿ ಉದ್ಯೋಗಿಗಳು ಸಾಮಾನ್ಯವಾಗಿ ಕೈಗೆಟುಕುವ ದರದ ಪಿಜಿ, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿದ್ದಾರೆ. ಇವರಲ್ಲಿ ನಮ್ಮ ರಾಜ್ಯದವರು, ಹೊರ ರಾಜ್ಯದಿಂದ ಬಂದವರು ಸಹ ಸೇರಿದ್ದಾರೆ. ಇವರು ಉದ್ಯೋಗ ಕಳೆದುಕೊಂಡರೆ ಬಾಡಿಗೆ ಮೇಲೆ ಪರಿಣಾಮ ಉಂಟಾಗಲಿದೆ.
ನಗರದಲ್ಲಿನ ಐಟಿ ವಲಯದ ಬೆಳವಣಿಗೆಯನ್ನು ನೋಡಿ ಬಾಡಿಗೆ ಕ್ಷೇತ್ರದ ಮೇಲೆ ಹೂಡಿಕೆ ಮಾಡಿದವರು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಪಿಜಿ, ಅಪಾರ್ಟ್‌ಮೆಂಟ್ ಮಾತ್ರವಲ್ಲ. ಕ್ಯಾಬ್‌ಗಳಿಗೂ ನಷ್ಟವಾಗುತ್ತದೆ. ಆಸ್ತಿ ಮೌಲ್ಯಗಳು ಕುಸಿಯುವುದು ಮಾತ್ರವಲ್ಲ ಹೊಸದಾಗಿ ಹೂಡಿಕೆ ಮಾಡುವವರು ಸಹ ಆಲೋಚಿಸಬೇಕಾಗುತ್ತದೆ.
ಐಟಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಸತಿ ಕ್ಷೇತ್ರದ ಮೇಲೆ ಪ್ರಭಾವ ಉಂಟಾಗಲಿದೆ. ಹೊರ ವರ್ತುಲ ರಸ್ತೆಯಲ್ಲಿ ಹೂಡಿಕೆ ಕಡಿಮೆಯಾಗಲಿದೆ. ಆಸ್ತಿಗಳ ಖರೀದಿಗೆ ಸಹ ತೊಂದರೆ ಉಂಟಾಗಲಿದೆ.












Click it and Unblock the Notifications