Holidays: ಉದ್ಯೋಗಿಗಳಿಗೆ ಬಿಗ್ ಗುಡ್ ನ್ಯೂಸ್; 4 ದಿನ ಕೆಲಸ, 3 ದಿನ ರಜೆ
Holidays: ಇನ್ಫೋಸಿಸ್ ಎನ್.ಆರ್.ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದರು. ಬಳಿಕ L&T ಕಂಪನಿ ಅಧ್ಯಕ್ಷರಾದ ಎಸ್.ಎನ್.ಸುಬ್ರಹ್ಮಣ್ಯನ್ ಕೂಡ ಭಾನುವಾರವೂ ರಜೆ ಇಲ್ಲದಂತೆ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದು, ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಈ ಮಧ್ಯೆಯೇ ಇದೀಗ ವಾರದಲ್ಲಿ 4 ದಿನ ಕೆಲಸ & 3 ದಿನ ರಜೆ ನಿಯಮ ಎನ್ನುವುದಕ್ಕೆ ಒಪ್ಪಿಗೆ ಸಿಕ್ಕಿದೆ.
ಉದ್ಯೋಗಿ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕಾಗುತ್ತದೆ. ಇದರಿಂದ ಜೀವನದ ಒತ್ತಡ ಕಡಿಮೆಯಾದಂತಾಗಲಿದೆ. ಜೊತೆಗೆ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಸಾಧ್ಯ ಆಗುತ್ತದೆ. ಆದ್ದರಿಂದ ಉದ್ಯೋಗಿಗಳ ಉತ್ತಮ ಜೀವನಕ್ಕಾಗಿ ವಾರದಲ್ಲಿ 4 ದಿನ ಮಾತ್ರ ಕೆಲಸ ಇರಬೇಕೆಂದು ಯುಕೆ ಕಂಪನಿಗಳು ನಿರ್ಧಾರಕ್ಕೆ ಬಂದಿವೆ. ಆದ್ದರಿಂದ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ ಎನ್ನುವ ಒಪ್ಪಂದಕ್ಕೆ ಬರೋಬ್ಬರಿ 200 ಕಂಪನಿಗಳು ಸಹಿ ಹಾಕಿವೆ ಎಂದು ತಿಳಿದುಬಂದಿದೆ.

ಇನ್ಮುಂದೆ 200 ಯುಕೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರಕ್ಕೆ 3 ದಿನ ರಜೆ ನೀಡುತ್ತವೆ. 3 ದಿನ ರಜೆ ನೀಡಿದ ಮಾತ್ರಕ್ಕೆ ವೇತನದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ಕಂಪನಿಗಳು ತಿಳಿಸಿವೆ. ಈ 200 ಕಂಪನಿಗಳಲ್ಲಿ ಒಟ್ಟು 5,000ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಾರಕ್ಕೆ 5 ದಿನ ಕೆಲಸ ಹಳೆಯ ಪದ್ದತಿಯಾಗಿದ್ದು, ಒಬ್ಬ ಉದ್ಯೋಗಿಗೆ ವಾರದಲ್ಲಿ 3 ದಿನ ರಜೆ ಸಿಕ್ಕರೆ ಅವರಿಗೆ ಯಾವುದೇ ಮಾನಸಿಕ ಒತ್ತಡ ಇರುವುದಿಲ್ಲ. ಬದಲಿಗೆ ಉದ್ಯೋಗಿಗಳು ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇದರಿಂದ ಉತ್ಪಾದನೆ ಸಹ ಹೆಚ್ಚಾದಂತಾಗಲಿದೆ ಎನ್ನುವುದು ಕಂಪನಿಗಳ ವಾದ ಆಗಿದೆ.
ಮತ್ತೆ 70 ಗಂಟೆ ಬಗ್ಗೆ ಮಾತನಾಡಿದ್ದ ನಾರಾಯಣಮೂರ್ತಿ: ಇನ್ಫೋಸಿನ್ ಎನ್‌ಆರ್ ನಾರಾಯಣಮೂರ್ತಿ ಅವರು ಈಗಾಗಲೇ ಹಲವು ಬಾರಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅಂತಾ ಹೇಳುವ ಮೂಲಕ ಐಟಿ ಉದ್ಯೋಗಿಗಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸುವ ಮೂಲಕ ತಮ್ಮ 70 ಗಂಟೆ ಕೆಲಸದ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ನಾರಾಯಣಮೂರ್ತಿ ಅವರು ಯುಬಿ ಸಿಟಿಯಲ್ಲಿರುವ ಕಿಂಗ್‌ಫಿಶರ್ ಟವರ್‌ನಲ್ಲಿ 50 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಖರೀದಿಸಿ ಸುದ್ದಿಯಾಗಿದ್ದರು. ಇದರ ಬೆನ್ನೆಲ್ಲೇ ಮತ್ತೆ 70 ಗಂಟೆ ಕೆಲಸ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಕೋಲ್ಕತಾಗೆ ಭೇಟಿ ನೀಡಿದ ಅವರು ಕೋಲ್ಕತ್ತಾ ನಗರ ದೇಶದಲ್ಲೇ ಅತ್ಯಂತ ಸುಸಂಸ್ಕೃತ ನಗರ ಎಂದು ಹೇಳಿದ್ದಾರೆ.
ಇದೇ ವೇಳೆ ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವ ಬಗ್ಗೆ ಮತ್ತೆ ಹೇಳಿಕೆ ನೀಡಿರುವ ನಾರಾಯಣ ಮೂರ್ತಿ ಅವರು, ಯುವಕರು ಶ್ರಮಿಸಬೇಕು, ಭಾರತವನ್ನು ನಂಬರ್ 1 ಮಾಡುವುದರೆಡೆಗೆ ಕೆಲಸ ಮಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.
"ಇನ್ಫೋಸಿಸ್‌ನಲ್ಲಿ, ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುತ್ತೇವೆ ಎಂದು ಹೇಳಿದ್ದೇನೆ. ಒಮ್ಮೆ ನಾವು ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡರೆ, ನಾವು ಭಾರತೀಯರು ಬಹಳಷ್ಟು ಕೆಲಸ ಮಾಡಬೇಕಾಗಿದೆ," ಎಂದು ಹೇಳಿದ್ದಾರೆ.
"800 ಮಿಲಿಯನ್ ಭಾರತೀಯರು ಉಚಿತ ಪಡಿತರ ಪಡೆಯುವುದರಿಂದ ನಾವು ಉನ್ನತ ಮಟ್ಟದ ಆಕಾಂಕ್ಷೆಗಳನ್ನು ಹೊಂದಬೇಕಾಗುತ್ತದೆ. ಉಚಿತ ಪಡಿತರ ಪಡೆಯುವ 800 ಮಿಲಿಯನ್ ಭಾರತೀಯರು ಇನ್ನೂ ಬಡತನದಲ್ಲಿ ಇದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಯಾರು ಕಷ್ಟಪಡುತ್ತಾರೆ?," ಎಂದು ನಾರಾಯಣ ಮೂರ್ತಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಶ್ನೆ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿ ಆರ್‌ಪಿಎಸ್‌ಜಿ ಗ್ರೂಪ್ ಅಧ್ಯಕ್ಷ ಸಂಜೀವ್ ಗೋಯೆಂಕಾ ಅವರೊಂದಿಗೆ ಸಂವಾದ ನಡೆಸುತ್ತಿದ್ದರು. ತಮ್ಮನ್ನು ಉದ್ಯಮಿ ಆಗಲು ಪ್ರೇರೇಪಿಸಿದ ಅನುಭವಗಳನ್ನು ನೆನಪಿಸಿಕೊಂಡ ನಾರಾಯಣ ಮೂರ್ತಿ, ಜವಾಹರಲಾಲ್ ನೆಹರು ಪ್ರಧಾನಿ ಆಗಿದ್ದಾಗ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನು ವಾಸ್ತವಿಕವಾಗಿ ರೂಪಿಸಿದಾಗ ನಾನು ಒಂದು ಹಂತದಲ್ಲಿ ಎಡಪಂಥೀಯರಾಗಿದ್ದೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.












Click it and Unblock the Notifications