ಹಾಸನ; ಕೆಲಸ ಖಾಲಿ ಇದೆ, ವೇತನ 15,196 ರೂ.ಗಳು
ಹಾಸನ, ಫೆಬ್ರವರಿ 26; ಜಿಲ್ಲಾ ಪಂಚಾಯಿತಿ ಹಾಸನ ಒಟ್ಟು 12 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಲು 22/3/2024 ಕೊನೆಯ ದಿನಾಂಕವಾಗಿದೆ.
ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ನೇಮಕಾತಿ ಕುರಿತು ಅಧಿಸೂಚನೆ ಪ್ರಕಟಿಸಲಾಗಿದೆ. ಹಾಸನ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ 12 ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು https://hassan.nic.in ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಅಗತ್ಯ, ದೃಢೀಕರಿಸಿದ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಕನಿಷ್ಠ ವೇತನ 15,196.72 ಹಾಗೂ ಕನಿಷ್ಠ ವೇತನ ಜೊತೆಗೆ ಕಾರ್ಮಿಕ ಇಲಾಖೆ ಕಾಲ ಕಾಲಕ್ಕೆ ನಿಗದಿಪಡಿಸುವ ವ್ಯತ್ಯಯವಾಗುವ ತುಟ್ಟಿಭತ್ಯೆಯನ್ನು ಪಾವತಿಸಲಾಗುತ್ತದೆ.
ವಿದ್ಯಾರ್ಹತೆ, ಇತರ ಮಾಹಿತಿ: ಹಾಸನ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ದುದ್ದ, ಆನೇಕೆರೆ, ವಡ್ಡರಹಳ್ಳಿ, ಆಲದಹಳ್ಳಿ, ಕಡುವಿನಹೊಸಹಳ್ಳಿ, ಕಬ್ಬಾಳು, ಗಾಡೇನಹಳ್ಳಿ, ತರಿಗಳಲೆ, ಹನ್ಯಾಳು, ಬಾಣಾವರ, ಜಾಗರವಳ್ಳಿ, ಮುರ್ಕುಲಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ನೇಮಕಾತಿ ನಡೆಯುತ್ತಿದೆ.
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿ ದ್ವಿತೀಯ ಪದವಿ ಪೂರ್ವ ಪರೀಕ್ಷೆ (ಪಿಯುಸಿ)ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು ಹಾಗೂ ಕನಿಷ್ಟ ಮೂರು ತಿಂಗಳ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.
ಒಂದು ವೇಳೆ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅಭ್ಯರ್ಥಿಯು ಗಳಿಸಿದ ಅಂಕಗಳನ್ನು ಆಧರಿಸಿ ಅಧಿಸೂಚಿಸಿದ ಖಾಲಿ ಹುದ್ದೆಗಳಿಗೆ ಮೀಸಲಾತಿ ಬಿಂದುವಿನಂತೆ ಆಯ್ಕೆಗೆ ಪರಿಗಣಿಸಲಾಗುವುದು.
ಈ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸುವ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರಬೇಕು. ವಿದ್ಯಾರ್ಹತೆಯ ದಾಖಲಾತಿಗಳ ನೈಜತೆ ಬಗ್ಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ದೃಢೀಕರಿಸಿಕೊಂಡು ನಂತರ ನೇಮಕಾತಿ ಆದೇಶ ನೀಡಲಾಗುವುದು.
ಒಂದು ವೇಳೆ ಇಬ್ಬರು ಅಥವಾ ಹಚ್ಚಿನ ಅಭ್ಯರ್ಥಿಗಳು ಸಮನವಾದ ಅಂಕಗಳನ್ನು ಮೆರಿಟ್ ಹೊಂದಿದ್ದು, ವಯಸ್ಸಿನ ಹಿರಿಯರಾದವರನ್ನು ಆಯ್ಕೆ ಮಾಡಲಾಗುವುದು. ಅದರಂತೆ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗುವುದು. ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತತ್ವಮಾನ ವಿದ್ಯಾರ್ಹತೆ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿರತಕ್ಕದು, ಪರಂತು ಸಂಬಂಧಪಟ್ಟ ಗ್ರಾಮ ಪಂಚಾಯತಿ ನಿವಾಸಿ ಲಭ್ಯತೆ ಇಲ್ಲದಿದ್ದಲ್ಲಿ ಆಯಾ ತಾಲ್ಲೂಕು ಪಂಚಾಯತಿಯ ವ್ಯಾಪ್ತಿಯಲ್ಲಿನ ಬೇರೆ ಗ್ರಾಮ ಪಂಚಾಯತಿ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ. ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವಾದ ತಹಸೀಲ್ದಾರ್ ಇವರಿಂದ ವಾಸಸ್ಥಳ ಪ್ರಮಾಣ ಪತ್ರ ಪಡೆದು ಸಲ್ಲಿಸತಕ್ಕದ್ದು.
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35 ವರ್ಷ. 2ಎ/ 2ಬಿ/ 3ಎ/3 ಬಿ 38 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 40 ವರ್ಷಗಳು. ವಿಧವೆ, ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 500 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 300 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 200 ರೂ., ವಿವಿಧ ವಿಕಲಚೇತನ/ ಅಂಗವಿಕಲ ಅಭ್ಯರ್ಥಿಗಳಿಗೆ ರೂ. 100 ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.












Click it and Unblock the Notifications