ಪದವೀಧರರ ಪ್ರಾಥಮಿಕ ಶಿಕ್ಷಕ ನೇಮಕಾತಿ; ಜೂ. 12ರಿಂದ ದಾಖಲೆ ಪರಿಶೀಲನೆ
ಬೆಂಗಳೂರು, ಜೂನ್ 07; ಪದವೀಧರರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ಜೂನ್ 12ರಿಂದ ನಡೆಯಲಿದೆ. ಶಿಕ್ಷಕರ ನೇಮಕಾತಿ ಬಗ್ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಈಗ ಕೋರ್ಟ್ ಅರ್ಜಿಯನ್ನು ಇತ್ಯರ್ಥಗೊಳಿಸಿದೆ. ಆದ್ದರಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. 2021-22ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿಗಳ) ನೇಮಕಾತಿಗಾಗಿ ಮಾರ್ಚ್ 3ರಂದು ಪ್ರಕಟವಾದ 1:1 ಅನುಪಾತದ ಮುಖ್ಯ ಪಟ್ಟಿ ಇಲಾಖೆ ವೆಬ್‍ಸೈಟ್‍ನಲ್ಲಿ ಪ್ರಕಟವಾಗಿದೆ.

ಪದವೀಧರ ಪ್ರಾಥಮಿಕ ಶಿಕ್ಷಕ ನೇಮಕಾತಿ-2022ಕ್ಕೆ ಸಂಬಂಧಿಸಿದಂತೆ ದಿನಾಂಕ 8/3/2023ರಂದು 1:1 ಅಂತಿಮ ಆಯ್ಕೆ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದಂತೆ ಸರ್ಕಾರದ ಸುತ್ತೋಲೆ ದಿನಾಂಕ 01/02/2023ರ ಅನ್ವಯಿಸುವ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳನ್ನು ಹೊರತುಪಡಿಸಿ ಈ ದಾಖಲೆ ಪರಿಶೀಲಗೆ ಸೂಚಿಸಲಾಗಿತ್ತು.
ಸದರಿ ಸುತ್ತೋಲೆಯು ಅನ್ವಯಿಸದ 26 ಜಿಲ್ಲೆಗಳಲ್ಲಿ 1:1 ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತ್ವ ಪರಿಶೀಲನೆ ಕಾರ್ಯಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಪ್ರಸ್ತುತ ಉಚ್ಚ ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥಗೊಳಿಸಿರುವುದರಿಂದ ಸರ್ಕಾರದ ಸುತ್ತೋಲೆಯಂತೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 7 ಜಿಲ್ಲೆಗಳು ಮತ್ತು ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲೆಗಳ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತ್ವ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಯಾವ-ಯಾವ ದಾಖಲೆಗಳು;
1. ವೈದ್ಯಕೀಯ ಪ್ರಮಾಣ ಪತ್ರ (Health and Fitness certificate)
2. ಪೊಲೀಸ್ ಪರಿಶೀಲನಾ ಪ್ರಮಾಣಪತ್ರ (Police verification certificate)
3. ಸಿಂಧುತ್ವ ಪ್ರಮಾಣ ಪತ್ರ
4. ಗ್ರಾಮೀಣ ಪ್ರಮಾಣ ಪತ್ರ
5. ಕನ್ನಡ ಮಾಧ್ಯಮ ಪ್ರಮಾಣ ಪತ್ರ
6. ಮಾಜಿ ಸೈನಿಕರ ಪ್ರಮಾಣ ಪತ್ರ
7. ಅಂಗವಿಕಲ ಪ್ರಮಾಣ ಪತ್ರ
8. ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ
9. ಸಂಬಂಧಿಸಿದ ಎಲ್ಲಾ ಮೂಲ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
10. ಸೇವಾನಿರತ ಶಿಕ್ಷಕರು ಸಲ್ಲಿಸಿರುವ ನಿರಾಪೇಕ್ಷಣ ಪ್ರಮಾಣ ಪತ್ರ
ಈ ಎಲ್ಲಾ ಪ್ರಮಾಣ ಪತ್ರಗಳ ನೈಜತ್ವವನ್ನು ಪರಿಶೀಲನೆಗೊಳಪಡಿಸುವ ಸಂಬಂಧ ಸಕ್ಷಮ ಪ್ರಾಧಿಕಾರಿಗಳಿಗೆ ಸಂಬಂಧಿಸಿದಂತೆ ಕಾಲಬದ್ಧ ಮಿತಿಯಲ್ಲಿ ಕ್ರಮ ವಹಿಸುವಂತ ಸೂಚನೆ ನೀಡಲಾಗಿದೆ.
ಪಟ್ಟಿ ರದ್ದುಗೊಳಿಸಿದ್ದ ಕೋರ್ಟ್; ಕರ್ನಾಟಕ ಹೈಕೋರ್ಟ್ ಸುಮಾರು 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕ ನೇಮಕಾತಿಗೆ ಶಿಕ್ಷಣ ಇಲಾಖೆ ಹೊರಡಿಸಿದ್ದ ತಾತ್ಕಾಲಿಕ ವೇಳಾಪಟ್ಟಿಯನ್ನು ರದ್ದುಗೊಳಿಸಿತ್ತು. ಅಭ್ಯರ್ಥಿಗಳ ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪರಿಗಣಿಸಿ ಹೊಸದಾಗಿ ಪಟ್ಟಿ ಪ್ರಕಟಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿತ್ತು.
ಸುಮಾರು 20ಕ್ಕೂ ಹೆಚ್ಚು ಅಭ್ಯರ್ಥಿಗಳು ತಂದೆಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನು ತಾತ್ಕಾಲಿಕ ಆಯ್ಕೆಪಟ್ಟಿಯಿಂದ ಕೈ ಬಿಟ್ಟ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ತಾತ್ಕಾಲಿಕ ಪಟ್ಟಿಯನ್ನು ರದ್ದುಗೊಳಿಸಿತ್ತು.












Click it and Unblock the Notifications