Festive hiring: ಸಾಲು ಸಾಲು ಹಬ್ಬಗಳು- ದೇಶದಾದ್ಯಂತ ಸೃಷ್ಟಿಯಾಗಲಿವೆ 50,000 ತಾತ್ಕಾಲಿಕ ಉದ್ಯೋಗಗಳು, ವರದಿ, ವಿವರ
ಬೆಂಗಳೂರು, ಆಗಸ್ಟ್ 18: ಶ್ರಾವಣ ಮಾಸ ಆರಂಭವಾಗಿದೆ. ಇನ್ನು ಮುಂದೆ ಸಾಲು ಸಾಲು ಹಬ್ಬಗಳು ಬರಲಿವೆ. ಹಬ್ಬದ ಋತುವಿನಲ್ಲಿ ಗ್ರಾಹಕರ ಖರೀದಿ ಪ್ರಮಾಣ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿಲ್ಲರೆ ಅಂಗಡಿಗಳು, ಶಾಪಿಂಗ್ ಮಾಲ್‌ಗಳು ಹಾಗೂ ಶೋ ರೂಮ್‌ಗಳು ಸೇರಿದಂತೆ ಹಲವಾರು ಮಾರಾಟ ಮಳಿಗೆಗಳಲ್ಲಿ ತಾತ್ಕಾಲಿಕ ಉದ್ಯೋಗಗಳಿಗೆ ಭಾರೀ ಬೇಡಿಕೆ ಬರಲಿದೆ.
ಹಬ್ಬದ ಋತುವಿನಲ್ಲಿ ಗ್ರಾಹಕರಿಗಾಗಿ ಬೇಡಿಕೆಗಳನ್ನು ಪೂರೈಸಲು ಬಿಎಫ್‌ಎಸ್‌ಐ ವಲಯವು ವರ್ಷದ ದ್ವಿತೀಯಾರ್ಧದಲ್ಲಿ 50,000 ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಟೀಮ್‌ಲೀಸ್ ( ಮಾನವಶಕ್ತಿ ಸೇವಾ ಸಂಸ್ಥೆ ) ವರದಿ ತಿಳಿಸಿದೆ. ಕಳೆದ ವರ್ಷದ ಇದೇ ಸಂದರ್ಭಕ್ಕೆ ಹೋಲಿಸಿದರೆ ಉದ್ಯೋಗಾವಕಾಶಗಳಲ್ಲಿ ಶೇ 15 ರಷ್ಟು ಹೆಚ್ಚಳವಾಗಿದೆ.

ತಾತ್ಕಾಲಿಕ ಕಾರ್ಮಿಕರ ಬೇಡಿಕೆಯು ಶ್ರೇಣಿ-1 ನಗರಗಳಲ್ಲಿ ಮಾತ್ರವಲ್ಲದೆ, ಕೊಚ್ಚಿ, ವೈಜಾಗ್, ಮಧುರೈ, ಲಕ್ನೋ ಮುಂತಾದ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿಯೂ ಹೆಚ್ಚಾಗಿದೆ. ಕಳೆದ ಎರಡು- ಮೂರು ವರ್ಷಗಳಲ್ಲಿ, ಕೋಲ್ಕತ್ತ, ಪುಣೆಯಂತಹ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೆಚ್ಚಿದೆ. ಅಹಮದಾಬಾದ್‌ನಂತಹ ಮೆಟ್ರೊ ನಗರದಲ್ಲಿ ಟೆಲಿ-ಆಪರೇಟರ್ ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ವರದಿ ತಿಳಿಸಿದೆ.
ಟೀಮ್‌ಲೀಸ್ ಸರ್ವಿಸಸ್‌ನಲ್ಲಿ ಬಿಎಫ್‌ಎಸ್‌ಐ ವಿಪಿ ಮತ್ತು ಬಿಸಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣೇಂದು ಚಟರ್ಜಿ, 'ಕ್ರೆಡಿಟ್ ಕಾರ್ಡ್ ವಹಿವಾಟುಗಳು, ವೈಯಕ್ತಿಕ ಹಣಕಾಸು ಅಪ್ಲಿಕೇಶನ್‌ಗಳು ಹೆಚ್ಚಾಗುತ್ತಿದ್ದಂತೆ ಭಾರತದ ಡಿಜಿಟಲ್ ಪಾವತಿಗಳ ವ್ಯವಹಾರ ಪ್ರವರ್ಧಮಾನಕ್ಕೆ ಬರುತ್ತಿದೆ. ನಾವು ಮುಂದಿನ ಐದು-ಆರು ತಿಂಗಳುಗಳಲ್ಲಿ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಗೆ ಸಿದ್ಧರಾಗಿದ್ದೇವೆ' ಎಂದು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳುಗಳಲ್ಲಿ, ತಾತ್ಕಾಲಿಕ ಹುದ್ದೆಗಳಿಗೆ 25,000 ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ವರದಿ ಹೇಳಿದೆ. ಮುಂಬರುವ ತಿಂಗಳುಗಳಲ್ಲಿ ಇದು ಹೆಚ್ಚಾಗಲಿಗೆ ಎಂದು ನಿರೀಕ್ಷಿಸಲಾಗಿದೆ. ಈ ಉದ್ಯೋಗಗಳಲ್ಲಿ ಅರೆಕಾಲಿಕ ಕೆಲಸಗಾರರ ಗಳಿಕೆಯು ಕಳೆದ ವರ್ಷಕ್ಕೆ ಹೋಲಿಸಿದರೆ 7 ರಿಂದ 10ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಕೋವಿಡ್ ಪೂರ್ವ ಸಂದರ್ಭ ಅಥವಾ ಕಳೆದ ಐದು ವರ್ಷಗಳಲ್ಲಿ ತಾತ್ಕಾಲಿಕ ಉದ್ಯೋಗಗಳಿಗೆ ಹೋಲಿಸಿದರೆ, ಈಗೀನ ಅಗತ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಬಿಎಫ್‌ಎಸ್‌ಐ ವಲಯವು ವರ್ಷದಿಂದ ವರ್ಷಕ್ಕೆ ತಾತ್ಕಾಲಿಕ ಕಾರ್ಮಿಕರಲ್ಲಿ ಗಮನಾರ್ಹವಾದ ಶೇ 15 ರಷ್ಟು ಹೆಚ್ಚಳವನ್ನು ಕಂಡಿದೆ ಎಂದು ವರದಿಯಾಗಿದೆ.
ಈ ಅವಕಾಶಗಳು ಹಿಂದೆ ಮೆಟ್ರೋಪಾಲಿಟನ್ ನಗರಗಳಲ್ಲಿ ಕೇಂದ್ರೀಕೃತವಾಗಿದ್ದವು. ಇ-ಕಾಮರ್ಸ್, ಚಿಲ್ಲರೆ ಸಾಲ ನೀಡುವಿಕೆ, ರಾಷ್ಟ್ರದಾದ್ಯಂತ ವಿಮಾ ಸೇವೆಗಳ ವಿಸ್ತರಣೆಯು ಅಹಮದಾಬಾದ್, ಸೂರತ್, ನಾಸಿಕ್ ಮತ್ತು ಕಾನ್ಪುರದಂತಹ ನಗರಗಳಿಗೆ ಬೇಡಿಕೆಯನ್ನು ವಿಸ್ತರಿಸಿದೆ ಎಂದು ತಿಳಿದುಬಂದಿದೆ.












Click it and Unblock the Notifications