ಸರಕಾರಿ ನೇಮಕಾತಿಯಲ್ಲಿ ಇನ್ನು ವಿಳಂಬ ಆಗಲ್ಲ, ರಾಷ್ಟ್ರ ಮಟ್ಟದಲ್ಲಿ ಹೊಸ ಯೋಜನೆ
ನವದೆಹಲಿ, ಮೇ 10: ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರ (ಎನ್ ಆರ್ ಎ) ರಚನೆ ಮಾಡಲು ಕೇಂದ್ರ ಸರಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಅದು ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ಸಾಮಾನ್ಯ ಪರೀಕ್ಷೆಯನ್ನು ಆಯೋಜಿಸುತ್ತದೆ. ಈ ಮೂಲಕ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪ್ರಮುಖ ಬದಲಾವಣೆ ತಂದಂತೆ ಅಗುತ್ತದೆ.
ಸರಕಾರದ ಹಿರಿಯ ಅಧಿಕಾರಿಗಳ ಪ್ರಕಾರ, ರಾಷ್ಟ್ರಿಯ ನೇಮಕಾತಿ ಪ್ರಾಧಿಕಾರದಿಂದ ಎಲ್ಲ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಒಂದು ಪರೀಕ್ಷೆ ನಡೆಸಲಾಗುತ್ತದೆ. ಸದ್ಯಕ್ಕೆ ಸರಕಾರವೇ ಅಂದಾಜು ಮಾಡಿರುವಂತೆ ಒಂದೂವರೆ ಲಕ್ಷದಷ್ಟು ಹುದ್ದೆಗಳಿವೆ. ಈಗಿರುವ ಪದ್ಧತಿ ಪ್ರಕಾರ, ಎಸ್ ಎಸ್ ಸಿ, ರೈಲ್ವೆ ಮಂಡಳಿ ಹೀಗೆ ಪರೀಕ್ಷೆ ಆಯೋಜಿಸಲಾಗುತ್ತದೆ. ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಮುಗಿಯುವುದಕ್ಕೆ ಹದಿನೆಂಟರಿಂದ ಇಪ್ಪತ್ತು ತಿಂಗಳು ಸಮಯ ಹಿಡಿಸುತ್ತದೆ.
ಈಗ ಹೊಸ ಪದ್ಧತಿ ಜಾರಿಗೆ ತಂದರೆ ನೇಮಕಾತಿ ಪ್ರಕ್ರಿಯೆ ಸಮಯ ಮೂರು ತಿಂಗಳಿಗೆ ಮಿತಿಯಾಗುತ್ತದೆ. "ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರ ಇನ್ನು ಒಂದು ವರ್ಷದಲ್ಲಿ ಆರಂಭ ಆಗಬಹುದು. ಹೊಸ ಸರಕಾರ ಬಂದ ತಕ್ಷಣ ಪ್ರಕ್ರಿಯೆಗಳು ಶುರುವಾಗುತ್ತವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲ ಹುದ್ದೆಗೂ ಒಂದೇ ಪರೀಕ್ಷೆ ಇರುತ್ತದೆ
ಇದೊಂದು ಬದಲಾವಣೆಯ ಹಂತ. ಸರಕಾರದಲ್ಲಿನ ಹುದ್ದೆಗಳು ಕಾಲಕಾಲಕ್ಕೆ ಭರ್ತಿ ಆಗುವುದನ್ನು ಖಾತ್ರಿ ಪಡಿಸುತ್ತದೆ. ಅಷ್ಟೇ ಅಲ್ಲ, ಯಾವುದೇ ಸರಕಾರಿ ಹುದ್ದೆ ಖಾಲಿ ಇಲ್ಲದಂತೆ ಗಮನ ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಇಡೀ ಪ್ರಕ್ರಿಯೆ ಹೇಗೆ ಆಗುತ್ತದೆ ಎಂಬುದರ ವಿವರಣೆ ಸಹ ನೀಡಲಾಗಿದೆ. ಹಲವು ಹುದ್ದೆಗಳಿಗೆ ಆಯ್ಕೆಯ ಮಾನದಂಡ ಒಂದೇ ಥರ ಇರುತ್ತದೆ. ಅದು ಹತ್ತನೇ ತರಗತಿ, ಪಿಯುಸಿ ಅಥವಾ ಪದವಿಗೆ ಇರಬಹುದು. ಮಾನದಂಡ ಒಂದೇ ರೀತಿಯಲ್ಲಿ ಇರುತ್ತವೆ. ಆದ್ದರಿಂದ ವಿವಿಧ ಪರೀಕ್ಷೆಗಳನ್ನು ನಡೆಸುವ ಬದಲಿಗೆ ಒಂದೇ ಸಾಮಾನ್ಯ ಮಾನದಂಡದ ಪರೀಕ್ಷೆ ಇರುತ್ತದೆ.

ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ
ಸಂಸ್ಥೆಗಳು ಅಂಕಗಳ ಆಧಾರದಲ್ಲಿ ಆಯಾ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿಕೊಳ್ಳುತ್ತವೆ. ಇದರಿಂದ ಪದೇಪದೇ ಪರೀಕ್ಷೆ ನಡೆಸಬೇಕು, ಅರ್ಜಿ ಆಹ್ವಾನಿಸಬೇಕು ಎಂಬುದೆಲ್ಲ ಇರುವುದಿಲ್ಲ. ಪ್ರತಿ ಅಭ್ಯರ್ಥಿಯು ಸರಕಾರದ ವಿವಿಧ ಹುದ್ದೆಗಳಿಗೆ ಏಕ ಕಾಲದಲ್ಲಿ ಅರ್ಜಿ ಹಾಕಿ ಯಾವುದಾದರೂ ಒಂದರಲ್ಲಿ ಆಯ್ಕೆ ಅಗಬಹುದು. ಹೀಗೆ ಮಾಡುವುದರಿಂದ ಅಭ್ಯರ್ಥಿಯು ಹಲವು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ತಪ್ಪಿಸಬಹುದು. ಇನ್ನು ಸಾಮಾನ್ಯ ಪರೀಕ್ಷೆ ಇದ್ದರೆ ಎಲ್ಲ ಅಭ್ಯರ್ಥಿಯು ಒಂದು ಸಲ ಅರ್ಜಿ ಹಾಕಿಕೊಳ್ಳುತ್ತಾರೆ. ಅವರು ಪಡೆದ ಅಂಕಗಳ ಆಧಾರದಲ್ಲಿ ಆಯ್ಕೆ ಆಗುತ್ತಾರೆ.

ಜಿ ಮ್ಯಾಟ್ ಅಥವಾ ಕ್ಯಾಟ್ ಇತ್ಯಾದಿ ರೀತಿಯ ಪ್ರವೇಶ ಪರೀಕ್ಷೆ
ಈ ಪ್ರಾಧಿಕಾರದ ಮೂಲಕ ಸರಕಾರವು ಜಿ ಮ್ಯಾಟ್ ಅಥವಾ ಕ್ಯಾಟ್ ಇತ್ಯಾದಿ ಪ್ರವೇಶ ಪರೀಕ್ಷೆ ರೀತಿಯಲ್ಲೇ ಆಯೋಜಿಸಲು ತೀರ್ಮಾನಿಸಿದೆ. ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಕ್ಕೆ ಮೂರು ವರ್ಷಗಳ ಕಾಲ ಮಾನ್ಯತೆ ಇರುತ್ತದೆ. ಮತ್ತು ಅಭ್ಯರ್ಥಿಯು ಯಾವುದೇ ಸಮಯದಲ್ಲಿ ತನ್ನ ಅಂಕವನ್ನು ಉತ್ತಮ ಪಡಿಸಿಕೊಳ್ಳಲು ಅವಕಾಶ ಇರುತ್ತದೆ. ಸದ್ಯಕ್ಕೆ ಇರುವ ನಿಯಮದ ಪ್ರಕಾರ ಡಿಸೆಂಬರ್ ನೊಳಗೆ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯಸೂಚಿಯನ್ನು ಸಂಸ್ಥೆಗಳು ಹೊಂದಿವೆ. ಈ ಹೊಸ ಆಲೋಚನೆ ಏನೆಂದರೆ, ಮುಂದಿನ ಸರಕಾರ ಬಂದ ನೂರು ದಿನದೊಳಗೆ ರಾಷ್ಟ್ರಿಯ ನೇಮಕಾತಿ ಪ್ರಾಧಿಕಾರದ ಆರಂಭಿಕ ಕೆಲಸಗಳು ಶುರು ಆಗುತ್ತದೆ. ಸದ್ಯಕ್ಕೆ ಇರುವ ನಿಯಮಗಳ ಪ್ರಕಾರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯೂ ಜತೆಜತೆಗೆ ನಡೆಯುತ್ತದೆ.

ಮೇಲ್ಜಾತಿಗೆ ಮೀಸಲಾತಿ ನೀಡಿದ್ದರೂ ಸಿಟ್ಟು ಕಡಿಮೆಯಾಗಿಲ್ಲ
ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ಈಗಾಗಲೇ ಮೋದಿ ಸರಕಾರದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿವೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳಿರುವಂತೆ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಹತ್ತು ಪರ್ಸೆಂಟ್ ಮೀಸಲಾತಿ ನಿಗದಿ ಮಾಡಿದರೂ ಅದರಿಂದ ಆಕ್ರೋಶ ಏನೂ ಕಡಿಮೆ ಆಗಿಲ್ಲ. ಈ ರೀತಿ ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರ ರಚನೆ ಆಗುವ ಮೂಲಕ ದೇಶದಲ್ಲಿ ಈಗ ಆಗುತ್ತಿರುವ ವಿಳಂಬಕ್ಕೆ ಪರಿಹಾರ ಸಿಗಬಹುದಾ ಎಂಬುದನ್ನು ಕಾದು ನೊಡಬೇಕಿದೆ. ಅದಕ್ಕಾಗಿ ಮುಂದಿನ ವರ್ಷದ ಜನವರಿ ತನಕ ಕಾಯಲೇಬೇಕು. ಏಕೆಂದರೆ ಅಲ್ಲಿಯ ತನಕ ಸದ್ಯದ ಪದ್ಧತಿಯೇ ರೂಢಿಯಲ್ಲಿರುತ್ತದೆ.












Click it and Unblock the Notifications