ಶಿವಮೊಗ್ಗ: ಕೆಲಸ ಖಾಲಿ ಇದೆ, ವೇತನ 22,450 ರೂ.ಗಳು, ವಿವರ
ಶಿವಮೊಗ್ಗ, ಡಿಸೆಂಬರ್ 29: ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಹುಡುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿಯೊಂದಿದೆ. ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಎರಡು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಮತ್ತು ಅರ್ಹರು ಆರು ತಿಂಗಳ ಗುತ್ತಿಗೆ ಆಧಾರದ ಈ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 20/1/2025ರ ಸಂಜೆ 5 ಗಂಟೆ.
ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಎಜುಕೇಶನ್ ಆಫೀಸರ್ 1, ವೆಟರ್ನರಿ ಅಸಿಸ್ಟೆಂಟ್ 1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಗುತ್ತಿಗೆ ಅವಧಿ 6 ತಿಂಗಳು. ಪುನಃ ಅದನ್ನು ವಿಸ್ತರಣೆ ಮಾಡಲು ಸಹ ಅವಕಾಶವಿದೆ.

ವೇತನ ವಿವರ: ಎಜುಕೇಶನ್ ಆಫೀಸರ್ ಹುದ್ದೆಗೆ 22,450 ರೂ. ಮತ್ತು ವೆಟರ್ನರಿ ಅಸಿಸ್ಟೆಂಟ್ ಹುದ್ದೆಗೆ 17,287 ರೂ. ವೇತನ ನಿಗದಿ ಮಾಡಲಾಗಿದೆ. ಎಜುಕೇಶನ್ ಆಫೀಸರ್ ಹುದ್ದೆಗೆ ಲಿಖಿತ ಪರೀಕ್ಷೆ 26/1/2025ರ 2 ಗಂಟೆಗೆ ಮತ್ತು ವೆಟರ್ನರಿ ಅಸಿಸ್ಟೆಂಟ್ ಹುದ್ದೆಗೆ ಅದೇ ದಿನ ಸಂಜೆ 4 ಗಂಟೆಗೆ ಪರೀಕ್ಷೆ ನಡೆಯಲಿದೆ.
ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದ ಬಳಿಕ 2ನೇ ಹಂತಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಮೆರಿಟ್ ಪಡೆದ ಎರಡೂ ಹುದ್ದೆಗಳ 10 ಅಭ್ಯರ್ಥಿಗಳನ್ನು 2ನೇ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.
2ನೇ ಹಂತದಲ್ಲಿ ಅಭ್ಯರ್ಥಿಗಳಿಗೆ ಪ್ರಾಕ್ಟಿಕಲ್ ಪರೀಕ್ಷೆಗಳು ಇರುತ್ತದೆ. ಒಟ್ಟು ಎರಡು ಪರೀಕ್ಷೆಗಳು 30 ಅಂಕಗಳಿಗೆ ನಡೆಯಲಿದೆ. ಮೊದಲ ಮತ್ತು 2ನೇ ಹಂತದ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳುಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಕೆ ಮಾಡಲು https://shivamoggazoo.com/ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ.
ಅಭ್ಯರ್ಥಿಗಳನ್ನು ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ (6 ತಿಂಗಳು) ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಗುತ್ತಿಗೆ ಅವಧಿಯನ್ನು ವಿಸ್ತರಣೆ ಮಾಡುವ ಅವಕಾಶವೂ ಇದೆ. ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಈ ತೀರ್ಮಾನ ಕೈಗೊಳ್ಳಲಾಗುತ್ತದೆ.
ತಿಂಗಳ ವೇತನ ಎಲ್ಲಾ ಭತ್ಯೆಗಳನ್ನು ಒಳಗೊಂಡಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕೆಲಸವನ್ನು ಖಾಯಂಗೊಳಿಸುವಂತೆ ಮನವಿ ಮಾಡುವುದಿಲ್ಲ. ಅಲ್ಲಿಯೇ ಬೇರೆ ವಿಭಾಗಕ್ಕೆ ವರ್ಗಾವಣೆ ಕೇಳುವುದಿಲ್ಲ ಎಂದು ಅಫಿಡೆವಿಟ್ ಸಲ್ಲಿಕೆ ಮಾಡಬೇಕಿದೆ.
ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮ ಸಹ ಒಂದು. ಇದು ಶಿವಮೊಗ್ಗ ನಗರಕ್ಕೆ ಸಮೀಪದಲ್ಲಿದ್ದು, ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಮೈಸೂರು ಮತ್ತು ಬೆಂಗಳೂರಿನ ಬನ್ನೇರುಘಟ್ಟದ ನಂತರ ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮ ರಾಜ್ಯದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ.
ಅರಣ್ಯದ ನಡುವೆ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಈ ಮೃಗಾಲಯವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಪ್ರವಾಸಿಗರು ಪ್ರಾಣಿ ಲೋಕದ ಜೊತೆಗೆ ಸಸ್ಯ ಪ್ರಪಂಚವನ್ನು ಕಣ್ತುಂಬಿಕೊಳ್ಳಲು ಇಲ್ಲಿ ಅವಕಾಶವಿದೆ. ಇಲ್ಲಿನ ಲಯನ್ ಸಫಾರಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಅರಣ್ಯದ ನಡುವೆ ಪ್ರಾಣಿಗಳನ್ನು ಸ್ವತಂತ್ರವಾಗಿ ಓಡಾಡುವುದನ್ನು ನೋಡಿ ಆನಂದಿಸಲು ಇಲ್ಲಿ ಅವಕಾಶವಿದೆ.












Click it and Unblock the Notifications