ಬಳ್ಳಾರಿ; ಯುವ ಸ್ವಯಂ ಕಾರ್ಯಕರ್ತರ ಹುದ್ದೆಗೆ ಅರ್ಜಿ ಹಾಕಿ
ಬಳ್ಳಾರಿ, ಫೆಬ್ರವರಿ 03: 2020-21ನೇ ಸಾಲಿಗಾಗಿ ರಾಷ್ಟ್ರೀಯ ಯುವ ಸ್ವಯಂ ಕಾರ್ಯಕರ್ತರ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ನೆಹರು ಯುವ ಕೇಂದ್ರ (ಭಾರತ ಸರ್ಕಾರ) ಜಿಲ್ಲಾ ಯುವ ಅಧಿಕಾರಿ ಮಾಂಟು ಪಾತರ್ ಹೇಳಿದ್ದಾರೆ.
ನಗರ ಮತ್ತು ಗ್ರಾಮಾಂತರ ಯುವ ಜನರಿಗಾಗಿ ಇರುವ ಕೇಂದ್ರ ಸರ್ಕಾರದ ಯುವ ಪರ ಕಾರ್ಯಕ್ರಮಗಳನ್ನು ಸಂಘಟಿಸುವುದು ಹಾಗೂ ಯುವಕ-ಯುವತಿ, ಮಹಿಳಾ ಮಂಡಳಿಗಳನ್ನು ರಚಿಸುವುದು ಈ ಕಾರ್ಯಕರ್ತರ ಕೆಲಸವಾಗಿದೆ.
ಪ್ರಸಕ್ತ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಕೆಲಸ ನಿರ್ವಹಿಸಲು ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವವರು ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ವಯೋಮಿತಿ 2021ರ ಏ.1ಕ್ಕೆ 18 ವರ್ಷ ಮೇಲ್ಪಟ್ಟು 29 ವರ್ಷ ಒಳಗಿನವರಾಗಿರಬೇಕು. ಆಯಾ ತಾಲೂಕಿನವರು ತಮ್ಮ ತಾಲೂಕಿಗೆ ಮಾತ್ರ ಕೆಲಸ ನಿರ್ವಹಿಸಲು ಅರ್ಜಿಗಳನ್ನು ಸಲ್ಲಿಸಬೇಕು.

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 5 ಸಾವಿರ ರೂ. ಗಳನ್ನು ಗೌರವಧನ (ಪ್ರವಾಸ ಭತ್ಯೆ ಸೇರಿ) ನೀಡಲಾಗುವುದು. ಈ ಹುದ್ದೆಯು 1ವರ್ಷ ಅವಧಿ ಮಾತ್ರ ಹಾಗೂ ಗ್ರಾಮೀಣ ಪ್ರದೇಶ, ಯುವತಿ, ಯುವಕ, ಮಹಿಳಾ ಮಂಡಳದ ಸದಸ್ಯರಿಗೆ, ಎನ್. ಸಿ. ಸಿ., ಎನ್. ಎಸ್. ಎಸ್, ಕ್ರೀಡೆ, ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿದ್ದವರಿಗೆ ಹಾಗೂ ಪದವೀಧರರಿಗೆ ಆದ್ಯತೆ ನೀಡಲಾಗುವುದು. ವ್ಯಾಸಂಗ ಮಾಡುತ್ತಿರುವರು ಅರ್ಜಿಸಲ್ಲಿಸಬಾರದು.
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಫೆಬ್ರವರಿ 20ರೊಳಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿ, ಅದರ ನಕಲು ಪ್ರತಿಯನ್ನು ಜಿಲ್ಲಾ ಯುವ ಸಮನ್ವಯಾಧಿಕಾರಿಗಳು, ನೆಹರು ಯುವ ಕೇಂದ್ರ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಬಳ್ಳಾರಿ ಇವರಿಗೆ ತಲುಪುವಂತೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-276839.












Click it and Unblock the Notifications