ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕೆಲಸ ಖಾಲಿ ಇದೆ
ಬಳ್ಳಾರಿ, ಮಾರ್ಚ್ 18; ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಲು ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.
"ಒಂದು ವರ್ಷದ ಅವಧಿಗೆ ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ" ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿ ಪಡೆದಿರಬೇಕು. ಜಿಲ್ಲಾ/ ಉಚ್ಛನ್ಯಾಯಾಲಯಗಳಲ್ಲಿ ಕನಿಷ್ಠ 5 ವರ್ಷಗಳು ಸ್ವತಂತ್ರವಾಗಿ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿರಬೇಕು.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 65 ವರ್ಷ ವಯೋಮಿತಿಯವರಾಗಿರತಕ್ಕದ್ದು. ಸದರಿ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ 1 ವರ್ಷದ ಅವಧಿಯದ್ದಾಗಿದ್ದು, ನಿಯಮಾನುಸಾರ ಮಾಸಿಕ ಸಂಚಿತ ವೇತನ (ಭತ್ಯೆಗಳ ರಹಿತ)ದ ಆಧಾರಿತವಾಗಿರುತ್ತದೆ.
ಪಾಲಿಕೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾದ ಸಿವಿಲ್/ ಕ್ರಿಮಿನಲ್ ಮೊಕದ್ದಮೆಗಳನ್ನು ನಿರ್ವಹಿಸಿದ ಅನುಭವ ಹೊಂದಿರಬೇಕು, ಸರ್ಕಾರ/ ಪೌರಾಡಳಿತ ನಿರ್ದೇಶನಾಲಯದಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶಗಳಿಗೆ ಹಾಗೂ ಸಕ್ಷಮ ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ.
ನೇಮಕಾತಿಯ ಪೂರ್ವದಲ್ಲಿ ಶಾರೀರಿಕ ಸದೃಢ ಪ್ರಮಾಣ ಪತ್ರವನ್ನು ಸರ್ಕಾರಿ ಜಿಲ್ಲಾ ಸರ್ಜನ್‍ರವರಿಂದ ಪಡೆದು ಸಲ್ಲಿಸಬೇಕಾಗಿರುತ್ತದೆ, ನೇಮಕಾತಿಯ ವಿರುದ್ಧ ಯಾವುದೇ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಲು ಅವಕಾಶವಿರುವುದಿಲ್ಲ.
ಯಾವುದೇ ಅರ್ಜಿಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಮಹಾನಗರ ಪಾಲಿಕೆಗೆ ಆಯುಕ್ತರಿಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮಹಾನಗರಪಾಲಿಕೆಯ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08392-273479/278168.












Click it and Unblock the Notifications