Amazon layoff: ಎಐಗೆ ಹೆಚ್ಚಿನ ಒತ್ತು; 16,000 ಉದ್ಯೋಗ ಕಡಿತ ಘೋಷಿಸಿದ ಅಮೆಜಾನ್
amazon: ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ತನ್ನ ವ್ಯವಹಾರ ಪುನರ್‌ರಚನೆಯ ಭಾಗವಾಗಿ ಜಾಗತಿಕ ಮಟ್ಟದಲ್ಲಿ 16,000ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಬುಧವಾರ ಘೋಷಿಸಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಕಾರ್ಯವಿಧಾನಗಳತ್ತ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. "ಇಂದು ಕೈಗೊಳ್ಳಲಾಗಿರುವ ಈ ಕಡಿತ ಕ್ರಮವು ಅಮೆಜಾನ್‌ನ ವಿವಿಧ ವಿಭಾಗಗಳಲ್ಲಿನ ಸುಮಾರು 16,000 ಹುದ್ದೆಗಳ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮಕ್ಕೊಳಗಾಗುವ ಪ್ರತಿಯೊಬ್ಬರಿಗೂ ಅಗತ್ಯ ಬೆಂಬಲ ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಉದ್ಯೋಗ ಕಡಿತವು ಅಮೆಜಾನ್‌ನ ಸಂಘಟನಾ ಪುನರ್‌ರಚನೆಯ ಭಾಗವಾಗಿದ್ದು, ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಈ ಬಗ್ಗೆ ಅಮೆಜಾನ್‌ನ ಪೀಪಲ್ ಎಕ್ಸ್‌ಪೀರಿಯನ್ಸ್ ಮತ್ತು ಟೆಕ್ನಾಲಜಿ ವಿಭಾಗದ ಹಿರಿಯ ಉಪಾಧ್ಯಕ್ಷೆ ಬೆತ್ ಗ್ಯಾಲೆಟ್ಟಿ ತಮ್ಮ ಬ್ಲಾಗ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. "ಅಕ್ಟೋಬರ್‌ನಲ್ಲೇ ನಾನು ತಿಳಿಸಿದಂತೆ, ಉದ್ಯೋಗಿಗಳನ್ನು ಕಡಿಮೆ ಮಾಡಿ, ಜವಾಬ್ದಾರಿಯನ್ನು ಹೆಚ್ಚಿಸಿ, ಅನಗತ್ಯ ಕಾಗದಕಾರ್ಯ ದೂರ ಮಾಡುವ ಮೂಲಕ ಸಂಸ್ಥೆಯನ್ನು ಬಲಪಡಿಸುವ ಕೆಲಸದಲ್ಲಿ ನಾವು ತೊಡಗಿದ್ದೇವೆ. ಅನೇಕ ತಂಡಗಳು ಅಕ್ಟೋಬರ್‌ನಲ್ಲೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೂ, ಕೆಲವು ತಂಡಗಳು ಈಗಷ್ಟೇ ಅದನ್ನು ಮುಗಿಸಿವೆ" ಎಂದು ಹೇಳಿದ್ದಾರೆ.

ಹೊಸ ಕೆಲಸ ಹುಡುಕಲು 90 ದಿನ ಅವಕಾಶ
ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇರುವ ಉದ್ಯೋಗಿಗಳಿಗೆ ಹೊಸ ಹುದ್ದೆ ಹುಡುಕಿಕೊಳ್ಳಲು 90 ದಿನಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಅಮೆಜಾನ್ ತಿಳಿಸಿದೆ. ಈ ಅವಧಿಯಲ್ಲಿ ಹೊಸ ರೋಲ್ ಪಡೆಯಲು ಸಾಧ್ಯವಾಗದಿದ್ದರೆ ಅಥವಾ ಹುಡುಕಿಕೊಳ್ಳಲು ಇಚ್ಛಿಸದಿದ್ದರೆ, ಅವರಿಗೆ ವರ್ಗಾವಣಾ ಬೆಂಬಲ ನೀಡಲಾಗುತ್ತದೆ. ಇದರಲ್ಲಿ ಸೇವಾನಿವೃತ್ತಿ ಪ್ಯಾಕೇಜ್ (severance pay), ಉದ್ಯೋಗಾವಕಾಶ ಮಾರ್ಗದರ್ಶನ ಸೇವೆಗಳು (outplacement services), ಅಗತ್ಯವಿದ್ದಲ್ಲಿ ಆರೋಗ್ಯ ವಿಮಾ ಸೌಲಭ್ಯಗಳು ಸೇರಿದಂತೆ ಹಲವು ನೆರವುಗಳು ಒಳಗೊಂಡಿರಲಿವೆ ಎಂದು ಕಂಪನಿ ಭರವಸೆ ನೀಡಿದೆ.
ಉದ್ಯೋಗ ಕಡಿತ ಘೋಷಣೆಯ ನಡುವೆಯೇ, ಭವಿಷ್ಯಕ್ಕೆ ಅತ್ಯಂತ ಮಹತ್ವದ ಹಾಗೂ ತಂತ್ರಾತ್ಮಕ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ನೇಮಕಾತಿ ಮುಂದುವರಿಯಲಿದೆ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ. ಎಐ, ಹೊಸ ತಂತ್ರಜ್ಞಾನಗಳು ಮತ್ತು ಪ್ರಮುಖ ವ್ಯವಹಾರ ವಿಭಾಗಗಳಲ್ಲಿ ಸಂಸ್ಥೆ ಮುಂದುವರಿದು ಬಂಡವಾಳ ಹೂಡುವುದರೊಂದಿಗೆ, ದೀರ್ಘಕಾಲೀನ ಬೆಳವಣಿಗೆಯತ್ತ ಗಮನ ಹರಿಸಲಿದೆ ಎಂದು ಕಂಪನಿ ತಿಳಿಸಿದೆ.
ಕೃತಕ ಬುದ್ಧಿಮತ್ತೆ (ಎಐ) ಇಂದು ಕೇವಲ ತಂತ್ರಜ್ಞಾನವಲ್ಲ, ಸಮಾಜ, ಉದ್ಯೋಗ, ಆರ್ಥಿಕತೆ ಮತ್ತು ಮಾನವ ಜೀವನದ ಪ್ರತಿಯೊಂದು ಅಂಗವನ್ನೂ ಆಳವಾಗಿ ಸ್ಪರ್ಶಿಸುವ ಶಕ್ತಿಯಾಗಿ ರೂಪುಗೊಂಡಿದೆ. ಡೇಟಾ ವಿಶ್ಲೇಷಣೆ, ಸ್ವಯಂಚಾಲಿತ ಕಾರ್ಯವಿಧಾನ, ನಿರ್ಧಾರ ಕೈಗೊಳ್ಳುವಿಕೆ ಮತ್ತು ಗ್ರಾಹಕ ಸೇವೆಗಳಂತಹ ಕ್ಷೇತ್ರಗಳಲ್ಲಿ ಎಐ ಬಳಕೆ ಹೆಚ್ಚಾಗುತ್ತಿರುವುದರಿಂದ ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಾಗಿ ಕಂಪನಿಗಳು ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಿದ್ದು, ವೆಚ್ಚ ನಿಯಂತ್ರಣ ಮತ್ತು ಲಾಭವರ್ಧನೆಯತ್ತ ಗಮನಹರಿಸುತ್ತಿವೆ.












Click it and Unblock the Notifications