ಶೀಘ್ರದಲ್ಲೇ 8,000 ಪೊಲೀಸ್ ಪೇದೆ ಹುದ್ದೆಗಳು ಭರ್ತಿ: ಸಚಿವ ಜಿ.ಪರಮೇಶ್ವರ್
Karnataka Police Recruitment 2025: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಬಗ್ಗೆ ಅಪ್ಡೇಟ್ ಮಾಹಿತಿಗಳು ಹೊರಬೀಳುತ್ತಲಿವೆ. ಹಾಗೆಯೇ ಇದೀಗ ಕರ್ನಾಟಕದಾದ್ಯಂತ ಕಳೆದ 5 ವರ್ಷದಲ್ಲಿ 8,000 ಪೊಲೀಸ್ ಪೇದೆ ಹುದ್ದೆಗಳು ಖಾಲಿ ಆಗಿವೆ. ಶೀಘ್ರದಲ್ಲೇ ಅವುಗಳನ್ನು ಭರ್ತಿ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಕೊಪ್ಪಳದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ಯಾವುದೇ ನೇಮಕಾತಿ ಮಾಡಿಲ್ಲ. ಆದ್ದರಿಂದ ಒಂದಷ್ಟು ಕಡೆ ಸಿಬ್ಬಂದಿ ಕೊರತೆಯಿರುವ ಬಗ್ಗೆ ಮಾಹಿತಿಯಿದೆ. ಬಿಜೆಪಿ ಸರ್ಕಾರ ಇದ್ದಾಗ ನಡೆದ ಪಿಎಸ್‌ಐ ಹಗರಣದಿಂದ ಯಾವುದೇ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ನಡೆಯಲಿಲ್ಲ. ನಮ್ಮ ಸರ್ಕಾರ ಎಲ್ಲವನ್ನೂ ಸರಿಪಡಿಸಿ, ಈಗಾಗಲೇ 500 ಪಿಎಸ್‌ಐ ಹುದ್ದೆಗಳ ನೇಮಕಾತಿ ಮಾಡಿದೆ. ಉಳಿದ 500 ಪಿಎಸ್‌ಐ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ಕೊಟ್ಟರು.

ಜಿಲ್ಲಾ ನ್ಯಾಯಾಧೀಶರು ಕೊಪ್ಪಳ ಗಾಜಾಪಟ್ಟಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಏನಾದರೂ ಹೇಳಿಕೊಳ್ಳಲಿ. ಅಕ್ರಮ ತಡೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸೂಚನೆ ನೀಡಿದ್ದೇವೆ. ರಾಜ್ಯಕ್ಕೆ ಪ್ರತಿದಿನ ಕೋಟ್ಯಂತರ ರೂಪಾಯಿ ಡ್ರಗ್ಸ್ ಆಮದು ಆಗುತ್ತಿದೆ. ಕರ್ನಾಟಕ ಡ್ರಗ್ಸ್ ಮುಕ್ತ ಮಾಡಲು ಸರ್ಕಾರ ಮುಂದಾಗಿದೆ. ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದುರು.
ಅಗತ್ಯ ಇದ್ದರೆ ಆನೆಗೊಂದಿ ಭಾಗದಲ್ಲಿ ಪ್ರವಾಸಿ ಪೊಲೀಸ್ ಠಾಣೆ ಮಾಡುತ್ತೇವೆ. ರಾಯರೆಡ್ಡಿ ಅವರು ಆನೆಗೊಂದಿ ಕರ್ನಾಟಕದ ಡ್ರಗ್ಸ್ ಹಬ್ ಆಗಿದೆ ಎಂಬ ಸಲಹೆ ಹಾಗೂ ದೂರಿನ ಹಿನ್ನೆಲೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಮುಕ್ತವಾಗಿ ಕೆಲಸ ಮಾಡಲು ಸೂಚಿಸಿದ್ದೇವೆ ಎಂದು ಹೇಳಿದರು.
35,000 ಹುದ್ದೆಗಳ ಭರ್ತಿ ಮಾಡಲಾಗುವುದು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ದಲ್ಲಿ ಖಾಲಿಯಿರುವ 35,000 ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು. ಜೊತೆಗೆ 532 ಪೌರಕಾರ್ಮಿಕರ ಹುದ್ದೆಗಳನ್ನು ಸಹ ಖಾಯಂ ಮಾಡುವುದಾಗಿಯೂ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ತಿಳಿಸಿದ್ದರು
ಬೆಂಗಳೂರಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ನ ಪ್ಲಾಟಿನಂ ಮಹೋತ್ಸವ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ನೌಕರರು ಇಟ್ಟಿರುವ ಬೇಡಿಕೆಗಳನ್ನು ಸರ್ಕಾರ ಅಧ್ಯಯನ ಮಾಡಿ ಅವುಗಳನ್ನು ಪರಿಹರಿಸಲಿದೆ ಎಂದು ಭರವಸೆ ನೀಡಿದ್ದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದನ್ನು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು ಎಂದು ಸಿಎಂ ಸಿದ್ದರಾಯಮ್ಮ ಅವರು ತಿಳಿಸಿದ್ದರು.
ಕರ್ನಾಟಕವು 34,000 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುತ್ತಿದ್ದು, ಅದನ್ನು 60,000 ಮೆಗಾವ್ಯಾಟ್‌ಗೆ ಹೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರೈತರಿಗೆ 7 ಗಂಟೆಗಳ ವಿದ್ಯುತ್ ಸರಬರಾಜು ಮತ್ತು ಸೌರಶಕ್ತಿ ಆಧಾರಿತ ಐಪಿ ಸೆಟ್‌ಗಳ ಅಳವಡಿಕೆಗೆ ಸಬ್ಸಿಡಿಗಳು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಕೂಡ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಂದು ಹೇಳಿದ್ದರು.












Click it and Unblock the Notifications