ಸಿಡಿ ಪ್ರಕರಣದಿಂದ ಅಂತ್ಯವಾಗಲಿದೆಯಾ ಇಬ್ಬರು ಮಹಾ ನಾಯಕರ ರಾಜಕೀಯ ಭವಿಷ್ಯ!
ಬೆಂಗಳೂರು, ಮಾರ್ಚ್ 26: ಇಪ್ಪತ್ತಾಲ್ಕು ದಿನಗಳ ಹಿಂದೆ ಸ್ಫೋಟಗೊಂಡ ಅಶ್ಲೀಲ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ರಾಜ್ಯ ರಾಜಕೀಯ ಇತಿಹಾಸದ ಪಾಲಿಗೆ ಇದು ಎಂದೂ ನಡೆಯದ ಮತ್ತೆ ಮರುಕಳಿಸದ ವಿಚಿತ್ರ ಪ್ರಕರಣ. ಇಲ್ಲಿ ಕೇವಲ ಅಪರಾಧ ಮಾತ್ರವಿಲ್ಲ, ರಾಜಕೀಯ ಚದುರಂಗ ಆಟವಿದೆ. ಯಾರ ಊಹೆಗೂ ನಿಲುಕದ ತಂತ್ರ - ಪ್ರತಿತಂತ್ರ ತಂತ್ರಜ್ಞಾನ ಅಡಗಿದೆ. ಮಾಧ್ಯಮ ರಂಗವಿದೆ, ವಿಶೇಷ ತನಿಖಾ ತಂಡದ ಮೂಲಕ ಪೊಲೀಸ್ ಎಂಟ್ರಿ ಕೊಟ್ಟಿದೆ. ಭವಿಷ್ಯದಲ್ಲಿ ನ್ಯಾಯಾಂಗವೂ ಕೂಡ ಪ್ರವೇಶವಾಗದೇ ಈ ಪ್ರಕರಣ ಇತ್ಯರ್ಥ ಅಸಾಧ್ಯ ಬಿಡಿ. ಇಷ್ಟೆಲ್ಲಾ ಒಳಗೊಂಡ ಈ ಪ್ರಕರಣದ ತಾರ್ಕಿಕ ಅಂತ್ಯದೊಂದಿಗೆ ಇಬ್ಬರು ಪ್ರಭಾವಿ ರಾಜಕೀಯ ನಾಯಕರ ರಾಜಕೀಯ ಭವಿಷ್ಯ ಕೂಡ ಮಂಕಾಗಲಿದೆಯಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಭವಿಷ್ಯದಲ್ಲಿ ಮುಖ್ಯಮಂತ್ರಿ ಪಟ್ಟಕ್ಕೇರುವ ಆಸೆ ಹೊತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಈ ಅಡಿಯೋದಲ್ಲಿ ಕೇಳಿ ಬಂದಿದೆ. ಇದು ಡಿಕೆಶಿ ರಾಜಕೀಯ ಭವಿಷ್ಯಕ್ಕೆ ಬಹುದೊಡ್ಡ ಪೆಟ್ಟು ನೀಡುವ ಸಾಧ್ಯತೆಯಿದೆ. ಕಾಂಗ್ರೆಸ್ ನಲ್ಲಿಯೇ ಇರುವ ಡಿಕೆಶಿ ಎದುರಾಳಿಗಳು ಈ ಅಸ್ತ್ರ ಮುಂದಿಟ್ಟುಕೊಂಡು ಅವಕಾಶ ತಪ್ಪಿಸಲು ಯತ್ನಿಸಿದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಇದೇ ಯುವತಿಗೆ ಸೇರಿದ ಎನ್ನಲಾದ ಅಶ್ಲೀಲ ವಿಡಿಯೋದಿಂದ ರಮೇಶ್ ಜಾರಕಿಹೊಳಿ ಸಾಮಾಜಿಕ ಜೀವನ ಮುಗಿದಿದೆ. ಇನ್ನೇನಿದ್ದರೂ ರಾಜಕೀಯ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟ ಅಷ್ಟೇ. ಇನ್ನು ಡಿಕೆಶಿಗೆ ಈ ಪ್ರಕರಣ ಯಾವ ತೊಡಕು ಮುಂದಿಡಲಿದೆಯೋ ಕಾದು ನೋಡಬೇಕು.
ಸವಿವರ ಓದಿಗೆ : ಸಿಡಿ ಗರ್ಲ್ ವೈರಲ್ ಆಡಿಯೋ ಸಂಭಾಷಣೆ ಪೂರ್ಣಪಾಠ

ಯುವತಿ ರೆಕಾರ್ಡ್ ನಿಂದಲೇ ಟ್ವಿಸ್ಟ್ ಕೊಟ್ಟ ಜಾರಕಿಹೊಳಿ ಬ್ರದರ್ಸ್
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತೆ ಎನ್ನಲಾದ ಸಿಡಿ ಗರ್ಲ್ ವಕೀಲರೊಬ್ಬರ ಮೂಲಕ ದೂರು ಸಲ್ಲಿಸಿದಳು. ದೂರನ್ನಾಧರಿಸಿ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಿದರು. ಇನ್ನೇನು ಎಫ್ಐಆರ್ ದಾಖಲಾಗಿ, ರಮೇಶ್ ಜಾರಕಿಹೊಳಿ ಬಂಧನಕ್ಕೆ ಒಳಗಾಗುತ್ತಾರಾ ಎಂಬ ವಿಶ್ಲೇಷಣೆಗಳು ಮುನ್ನೆಲೆಗೆ ಬಂದವು. ಈ ಚರ್ಚೆ ಮಾಧ್ಯಮಗಳಲ್ಲಿ ಆರಂಭವಾಗುತ್ತಿದ್ದಂತೆ ಸದ್ದಿಲ್ಲದೇ ಸಿಡಿಗರ್ಲ್ ಮಾತನಾಡಿದ್ದಾಳೆ ಎನ್ನಲಾದ "ಅಡಿಯೋ ಆಸ್ತ್ರ" ಬಿಡುಗಡೆಯಾಗಿದೆ.
ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲಾಗಿದೆ. ಪ್ರಕರಣದ ಆರಂಭದಿಂದ ಕೇಳಿ ಬರುತ್ತಿದ್ದ ಷಡ್ಯಂತ್ರದ ಮಹಾ ನಾಯಕ ಹೆಸರಿನ ಮುಂದೆ ಡಿ.ಕೆ. ಶಿವಕುಮಾರ್ ಹೆಸರು ತಳಕು ಹಾಕಿಕೊಂಡಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬಿಟ್ಟ " ದೂರು ಅಸ್ತ್ರ" ಕ್ಕೆ ಪ್ರತಿಯಾಗಿ ಹೊರ ಬಿದ್ದಿರುವ "ಅಡಿಯೋ ಅಸ್ತ್ರ" ರಾಜ್ಯದ ಇಬ್ಬರು ಪ್ರಭಾವಿ ನಾಯಕರ ರಾಜಕೀಯ ಕಾಳಗಕ್ಕೆ ನಾಂದಿ ಹಾಡಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗುದ್ದಾಟ
ಸದ್ಯ ರಾಜ್ಯ ರಾಜಕಾರಣದಲ್ಲಿ ವೈರಲ್ ಆಗಿರುವ ವಿಡಿಯೋ ಉಲ್ಲೇಖಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. "ಪಾಪ ಡಿ.ಕೆ. ಶಿವಕುಮಾರ್ ನನ್ನಂತೆ ಕಷ್ಟ ಪಟ್ಟು ಮೇಲೆ ಬಂದವರು. ಇದ್ಯಾವುದೋ ಒಂದು ವಿಚಾರದಿಂದ ಎದುರು ನಿಲ್ಲುವಂತೆ ಮಾಡಿದೆ. ಅವರ ಹೆಸರು ಕೇಳಿ ಬಂದಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಈ ಪ್ರಕರಣದಿಂದ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಳೆದುಕೊಳ್ಳದಂತೆ ಆಗಲಿ ಎಂದು ಹೇಳಿಕೆ ನೀಡುವ ಮೂಲಕವೇ ಪರೋಕ್ಷವಾಗಿ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ. ಇದರ ಅರ್ಥ ಇಷ್ಟೇ, ತಮ್ಮ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬುಡಕ್ಕೆ ಪೆಟ್ಟು ನೀಡಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಅಂತೂ ಸಂತ್ರಸ್ತೆ ಎನ್ನಲಾದ ಯುವತಿ ತನ್ನ ಸಹೋದರನ ಜತೆ ನಡೆಸಿರುವ ಸಂಭಾಷಣೆಯಲ್ಲಿ ಡಿ.ಕೆ. ಶಿವಕುಮಾರ್ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಇದು ಮತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಗುದ್ದಾಟಕ್ಕೂ ನಾಂದಿ ಹಾಡಿದೆ.

ಅಡಿಯೋ ಬಾಂಬ್ ನಿಂದ ರಕ್ಷಣೆ !
ಕಾನೂನು ಪ್ರಕಾರ ನೋಡುವುದಾದರೆ ಆ ಯುವತಿ ಮಾತನಾಡಿದ್ದಾರೆ ಎನ್ನಲಾದ ಆ ಅಡಿಯೋಗೆ ಸದ್ಯಕ್ಕೆ ಸಾಕ್ಷಿ ಎಂದು ಪರಿಗಣಿಸಲು ಮಾನ್ಯತೆ ಇಲ್ಲ. ಯಾಕೆಂದರೆ ಆ ಅಡಿಯೋ ಮೂಲದ ಬಗ್ಗೆ ಸ್ಪಷ್ಟತೆ ಇಲ್ಲ. ಮೊದಲು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಅಡಿಯೋನ್ನು ಒಂದು ಸಾಕ್ಷಿಯನ್ನಾಗಿ ಪರಿಗಣಿಸಬೇಕಾದರೆ, ಮೊದಲು ಎಸ್ಐಟಿ ಅಧಿಕಾರಿಗಳು ಆ ಅಡಿಯೋ ಕ್ಲಿಪ್ ಪರಿಶೀಲಿಸಬೇಕು. ಅದರಲ್ಲಿ ಮಾತನಾಡಿದ್ದಾರೆ ಎನ್ನಲಾದ ಸಂತ್ರಸ್ತೆ ಯುವತಿ, ಆಕೆಯ ಸಹೋದರ, ಲವರ್ ಹಾಗೂ ತಾಯಿಯ ಧ್ವನಿ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕು. ವರದಿಯಲ್ಲಿ ಇವರದ್ದೇ ಎಂಬುದು ಖಚಿತವಾದರೆ ಆಕೆಯ ಹೇಳುವ ಪ್ರತಿ ಮಾತು ಕೂಡ ಮಹತ್ವ ಪಡೆದುಕೊಳ್ಳುತ್ತದೆ.

ಬಾಲಚಂದ್ರ ರಿಲೀಸ್
ಯುವತಿ ಲಿಖಿತ ದೂರು ಆಧರಿಸಿ ವಕೀಲ ಜಗದೀಶ್ ನೀಡಿದ ದೂರಿನ ಮೇರೆಗೆ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಯಿತು. ಇದಕ್ಕೆ ಎದೆ ಗುಂದದ ರಮೇಶ್ ಜಾರಕಿಹೊಳಿ ನಾನು ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ. ಇಂತಹ ಹತ್ತು ಸಿಡಿ ಬರಲಿ. ಸರ್ಕಾರವನ್ನೇ ಉರುಳಿಸಿದವನು. ಎಷ್ಟು ಸಿಡಿ ಬಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡಿದರು.
ಹೇಳಿಕೆ ನೀಡಿದ ಬೆನ್ನಲ್ಲೇ ಸಹೋದರ ಬಾಲಚಂಧ್ರ ಜಾರಕಿಹೊಳಿ ಕೂಡ ತನ್ನ ಅಣ್ಣ ಇದರಲ್ಲಿ ನಿರಪರಾಧಿಯಾಗುತ್ತಾರೆ ಎಂದಷ್ಟೇ ಹೇಳಿಕೆ ನೀಡಿದರು. ಇದಾದ ಕೆಲವೇ ತಾಸಿನಲ್ಲಿ ಸಂತ್ರಸ್ತೆ ಎನ್ನಲಾದ ಯುವತಿ ತನ್ನ ಸಹೋದರರ ಜತೆ ಮಾತನಾಡಿರುವ ಅಡಿಯೋ ಇದು. ಇದನ್ನು ಸದ್ಯದ ಮಟ್ಟಿಗೆ ಸಾಕ್ಷಿಯನ್ನಾಗಿ ಪರಿಗಣಿಸುವ ಅರ್ಹತೆ ಇಲ್ಲದಿದ್ದರೂ ಬಿಡುಗಡೆ ಮಾಡುವ ಮೂಲಕ ಸಹ "ಷಡ್ಯಂತ್ರದ ಮಹಾ ನಾಯಕ ಯಾರು" ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಅಶ್ಲೀಲ ವಿಡಿಯೋ ಬಿಡುಗಡೆಯಾದ ಬಳಿಕ ಸಹೋದರನ ಜತೆ ಸಂತ್ರಸ್ತೆ ಯುವತಿ ಮಾತನಾಡಿರುವ ಅಡಿಯೋದಲ್ಲಿ ಸ್ಪಷ್ಟವಾಗಿ ಡಿಕೆಶಿ ಹೆಸರು ಉಲ್ಲೇಖಿಸಿದ್ದಾಳೆ. ಆ ಅಡಿಯೋ ಅವರ ಕುಟುಂಬ ಸದಸ್ಯರ ಮೂಲಕವೇ ಬಾಲಚಂದ್ರ ಜಾರಕಿಹೊಳಿ ಕೈ ಸೇರಿತ್ತು ಎನ್ನಲಾಗಿದೆ. ಇದೀಗ ಅಣ್ಣನ ವಿರುದ್ಧ ಎಫ್ಐಆರ್ ಆಗುತ್ತಿದ್ದಂತೆ ಅಡಿಯೋ ಅಸ್ತ್ರ ಬಿಡುವ ಮೂಲಕ ಬಹುದೊಡ್ಡ ರಕ್ಷಣಾ ಕೋಟೆ ಕಟ್ಟಿಕೊಂಡಿದ್ದಾರೆ.

ಇಬ್ಬರ ಭವಿಷ್ಯಕ್ಕೆ ಯುವತಿಯೇ ನಾಯಕಿ ?
ಒಂದಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಮುಕ್ತಿ ಸಿಗಬೇಕಾದರೆ ಸಂತ್ರಸ್ತೆ ಎನ್ನಲಾದ ಯುವತಿ ಹೇಳಿಕೆ ಅಗತ್ಯ. ಇತ್ತ ಇದೊಂದು ರಾಜಕೀಯ ಷಡ್ಯಂತ್ರ, ಇದರಲ್ಲಿ ಮಹಾ ನಾಯಕ ಪಾತ್ರವಿದೆ ಎಂದು ಮೊದಲಿನಿಂದಲೂ ಬಿಂಬಿಸಲಾಗಿತ್ತು. ಇದೀಗ ಯುವತಿ ಮಾತನಾಡಿದ್ದಾರೆ ಎನ್ನಲಾದ ಯುವತಿಯೇ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪಿಸಿರುವುದರಿಂದ ಈ ಪ್ರಕರಣ ಬಹು ದೊಡ್ಡ ತಿರುವು ಪಡೆದುಕೊಂಡಿದೆ.
ಹೀಗಾಗಿ ಈ ಪ್ರಕರಣದಿಂದ ಮುಕ್ತಿ ಪಡೆಯಬೇಕಾದರೆ ಡಿ.ಕೆ. ಶಿವಕುಮಾರ್ ಗೆ ಸಂತ್ರಸ್ತೆ ಎನ್ನಲಾದ ಯುವತಿಯ ನಡೆಯೇ ಮುಖ್ಯವಾಗುತ್ತದೆ. ಆದರೆ ಕಳೆದ 24 ದಿನದಲ್ಲಿ ಈ ಪ್ರಕರಣ ನಡೆದು ಬಂದ ಹಾದಿ ನೋಡಿದರೆ ಇದರಲ್ಲಿ ಗೆದ್ದವನು ಸೋತ. ಸೋತವನು ಸತ್ತ ಎಂಬ ಮಾತು ಸತ್ಯವಾಗಲಿದೆ. ಈ ಸಿಡಿ ಚದುರಂಗದಾಟದಲ್ಲಿ ಗೆದ್ದವನು ಸೋತಂತೆ. ಸೋತವನು ರಾಜಕೀಯವಾಗಿ ಸತ್ತಂತೆ. ಅಂತೂ ಇನ್ನೆರಡು ದಿನದಲ್ಲಿ ಹೊಸದೊಂದು ಆಯಾಮ ಪಡೆದುಕೊಳ್ಳುವ ಸಾಧ್ಯತೆಯಿದೆ.

ಒನ್ ಇಂಡಿಯಾ ವರದಿ
ಮಾ. 2 ರಂದು ಜಾರಕಿಹೊಳಿ ಹಾಗೂ ಯುವತಿಗೆ ಸೇರಿದ ಅಶ್ಲೀಲ ವಿಡಿಯೋ ಆಧರಿಸಿ ಮಾಧ್ಯಮಗಳು ಇದೊಂದು ಲೈಂಗಿಕ ತೃಷೆ ಪ್ರಕರಣ ಎಂದು ಭಾವಿಸಿ ಸುದ್ದಿ ಪ್ರಸಾರ ಮಾಡಿದವು. ಆದರೆ ಒನ್ಇಂಡಿಯಾ ಕನ್ನಡ ವಿಡಿಯೋದ ಸೂಕ್ಷ್ಮತೆಗಳನ್ನು ಆಧರಿಸಿ ಇಂದೊಂದು ಹನಿಟ್ರ್ಯಾಪ್ ಎಂಬ ಸಂಶಯ ವ್ಯಕ್ತಪಡಿಸಿತ್ತು. ಇಡೀ ಪ್ರಕರಣ ನಾನಾ ತಿರುವು ಪಡೆದು ಇದೀಗ ಕೊನೆ ಹಂತದಲ್ಲಿ ಇದೊಂದು ಹನಿಟ್ರ್ಯಾಪ್ ಎಂಬ ಲೆಕ್ಕಾಚಾರದಲ್ಲಿಯೇ ಬಂದು ನಿಂತಿದೆ. ಇನ್ನು ಸಂತ್ರಸ್ತೆ ಎನ್ನಲಾದ ಯುವತಿಯ ವಿಡಿಯೋ, ದೂರು ಅಸ್ತ್ರಗಳ ಮೂಲಕ ಜಾರಕಿಹೊಳಿಗೆ ಕೊಡುವ ಚೆಕ್ ಮೇಟ್‌ಗಳ ಬಗ್ಗೆಯೂ ಒನ್ಇಂಡಿಯಾ ಕನ್ನಡ ವರದಿ ಪ್ರಸ್ತಾಪಿಸಿ ವರದಿ ಮಾಡಿತ್ತು. ವಿಪರ್ಯಾಸವೆಂದರೆ ಇದೀಗ ಅದೇ ಹಾದಿಯಲ್ಲಿ ಸಾಗಿದೆ ಪ್ರಕರಣ ಎಂಬುದು ಇಲ್ಲಿ ಗಮನಾರ್ಹ.