ಜಪಾನ್ ಚುನಾವಣೆ: ಅಧಿಕಾರ ಉಳಿಸಿಕೊಂಡ ಕಿಶಿದಾ, ಅಭಿನಂದಿಸಿದ ಮೋದಿ
ಟೊಕಿಯೋ, ನವೆಂಬರ್ 02: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾರ ಪಕ್ಷ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ಬಹುಮತವನ್ನು ಸಾಧಿಸಿದೆ. ಈ ಮೂಲಕ ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾ ತನ್ನ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.
ಜಪಾನ್ ಸಂಸತ್ತು ಇತ್ತೀಚೆಗೆ ವಿಸರ್ಜನೆಗೊಂಡ ಬಳಿಕ ಭಾನುವಾರ ಚುನಾವಣೆ ನಡೆದಿದೆ. ಈ ಚುನಾವಣೆಯು ಈ ತಿಂಗಳ ಆರಂಭದಲ್ಲಷ್ಟೇ ಅಧಿಕವಾರವನ್ನು ವಹಿಸಿಕೊಂಡ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾರಿಗೆ ಪರೀಕ್ಷೆ ಆಗಿತ್ತು. ಈ ಅಗ್ನಿ ಪರೀಕ್ಷೆಯನ್ನು ಎದುರಿಸಿರುವ ಕಿಶಿದಾ ತನ್ನ ಪ್ರಧಾನಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕಾರ
ಇನ್ನು ಈ ಹಿನ್ನೆಲೆ ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾಗೆ ಶುಭಾಶಯ ತಿಳಿಸಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. "ಜಪಾನ್ ಸಂಸತ್ತಿನ ಕೆಳಮನೆಯ ಚುನಾವಣೆಯಲ್ಲಿ ಜಯ ಗಳಿಸಿದ ಫುಮಿಯೋ ಕಿಶಿದಾರಿಗೆ ಹೃದಯ ತುಂಬಿದ ಅಭಿನಂದನೆಗಳು. ನಮ್ಮ ಕಾರ್ಯತಂತ್ರವನ್ನು ಬಲಪಡಿಸಲು ಹಾಗೂ ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಇಂಡೋ-ಪೆಸಿಫಿಕ್ ಹಾಗೂ ಜಾಗತಿಕವಾಗಿ ಶಾಂತಿ, ಸಮೃದ್ಧಿಗಾಗಿ ನಾವು ಜೊತೆಯಾಗಿ ಕಾರ್ಯ ನಿರ್ವಹಣೆ ಮಾಡುವ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
|
ಜಪಾನ್ ಜನರಿಗೆ ರಕ್ಷಣೆಗೆ ಆದ್ಯತೆ ಎಂದ ಕಿಶಿದಾ
ತಮ್ಮ ಗೆಲುವಿನ ಬೆನ್ನಲ್ಲೇ ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾ "ಚೀನಾದ ಬೆದರಿಕೆ ತಡೆಗೆ ರಕ್ಷಣಾ ನೀತಿಗಳ ಪರಿಷ್ಕರಣೆ ಸೇರಿದಂತೆ ಕೆಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಕುಗ್ಗಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ಬಜೆಟ್ ಅನ್ನು ನಿಗದಿ ಮಾಡಲಾಗುವುದು. ಹಾಗೆಯೇ ಜಾಗತಿಕ ತಾಪಮಾನ ತಡೆಗೂ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ," ಎಂದು ಹೇಳಿದ್ದಾರೆ. ಇನ್ನು ರಕ್ಷಣಾ ನೀತಿಯ ಪರಿಷ್ಕರಣೆ ಮಾಡಲು, ಜಿಡಿಪಿಯ ಶೇಕಡ 2 ರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ವಿನಿಯೋಗ ಮಾಡಿಕೊಳ್ಳಲು ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯು ಫುಮಿಯೋಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಿಂದಾಗಿ "ನಾವು ಜನರ ಜೀವ, ಜೀವನದ ರಕ್ಷಣೆಗೆ ಪ್ರಥಮ ಆದ್ಯತೆಯನ್ನು ನೀಡುತ್ತೇವೆ. ಇದಕ್ಕೆ ಬಜೆಟ್ ಯಾವುದೇ ಅಡೆ ತಡೆ ಉಂಟು ಮಾಡುವುದಿಲ್ಲ," ಎಂದು ಕಿಶಿದಾ ಭರವಸೆ ನೀಡಿದರು.

233 ಸ್ಥಾನದಲ್ಲಿ ಗೆಲುವು ಸಾಧಿಸಿದ ಕಿಶಿದಾ ಪಕ್ಷ
ಜಪಾನ್‌ನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 465 ಸ್ಥಾನಗಳು ಇದೆ. ಹಾಗೆಯೇ ಜಪಾನ್‌ನ ಸಂಸತ್ತಿನ ಅತೀ ಬಲಿಷ್ಠವಾದುದ್ದು ಈ ಕೆಳಮನೆಯಾಗಿದೆ ಎಂದು ವರದಿಯು ತಿಳಿಸಿದೆ. ಜಪಾನ್‌ನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 465 ಸ್ಥಾನಗಳ ಪೈಕಿ ಬಹುಮತ ಪಡೆಯಲು ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ಹಾಗೂ ಅದರ ಕೊಮಿಟೊ ಒಕ್ಕೂಟವು 233 ಸ್ಥಾನದಲ್ಲಿ ಗೆಲುವು ಸಾಧಿಸುವು ಅನಿವಾರ್ಯವಾಗಿತ್ತು. ಭಾನುವಾರ ನಡೆದ ಚುನಾವಣೆಯಲ್ಲಿ ಎಲ್‌ಡಿಪಿ 259 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಮಿತ್ರ ಪಕ್ಷ ಕೊಮಿಟೊ ಒಕ್ಕೂಟವು 32 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ವರದಿಯು ಹೇಳಿದೆ. ಆದರೆ ಆಧಿಕೃತ ಫಲಿತಾಂಶ ಬಿಡುಗಡೆಯಾಗಿಲ್ಲ. ಈ ಎರಡು ಮೈತ್ರಿ ಪಕ್ಷಗಳು ಜೊತೆಯಾಗಿ ಒಟ್ಟು ಜಪಾನ್ ಸಂಸತ್ತಿನ ಕೆಳಮನೆಯಲ್ಲಿ 291 ಸ್ಥಾನದಲ್ಲಿ ಜಯಗಳಿಸಿ ಅಧಿಕಾರ ಉಳಿಸಿಕೊಂಡಿದ್ದಾರೆ.
ಜಪಾನ್ ಸಂಸತ್ ವಿಸರ್ಜನೆ, ಅಕ್ಟೋಬರ್ 31ಕ್ಕೆ ಚುನಾವಣೆ

ಜಪಾನ್ ಸರ್ಕಾರದಲ್ಲಿ ನಡೆದಿದ್ದು ಇಷ್ಟು..
2017ರಲ್ಲಿ ಆಗಿನ ಪ್ರಧಾನ ಶಿಂಜೋ ಅಬೆ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ಉತ್ತರಾಧಿಕಾರಿಯಾಗಿ ಯೋಶಿಹಿದೆ ಸುಗಾ ಆಡಳಿತ ನಡೆಸಿದ್ದರು. ಕೊರೊನಾ ಕಾಲಘಟ್ಟದಲ್ಲಿ ಆಡಳಿತವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿಲ್ಲ ಎಂಬ ಆಕ್ರೋಶಕ್ಕೆ ಯೋಶಿಹಿದೆ ಸುಗಾ ಒಳಗಾದರು. ಹಾಗೆಯೇ ಬಳಿಕ ಟೋಕಿಯೋ ಒಲಿಂಪಿಕ್ ಹೊರತಾಗಿಯೂ ಜಪಾನ್‌ನಲ್ಲಿ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳಲಿಲ್ಲ ಎಂಬುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. ಇದು ಸರ್ಕಾರದ ಪತನಕ್ಕೆ ಕಾರಣವಾಯಿತು. ಈ ಬೆನ್ನಲ್ಲೇ ಅಕ್ಟೋಬರ್ 4 ರಂದು ಫುಮಿಯೋ ಕಿಶಿದಾ ಜಪಾನ್‌ನ ನೂತನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆಡಳಿತರೂಢ ಪಕ್ಷ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಫುಮಿಯೋ ಕಿಶಿದಾ ಬಳಿಕ ಜಪಾನ್‌ನ ನೂರನೇ ಪ್ರಧಾನ ಮಂತ್ರಿಯಾಗಿ ಅಕ್ಟೋಬರ್ 4 ರಂದು ಅಧಿಕಾರ ಪಡೆದುಕೊಂಡಿದ್ದರು. ಆದರೆ ತಾನು ಜಪಾನ್‌ನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಹತ್ತು ದಿನಗಳಲ್ಲೇ ಫುಮಿಯೋ ಕಿಶಿದಾ ಸಂಸತ್ತಿನ ಕೆಳಮನೆಯನ್ನು ವಿಸರ್ಜನೆ ಮಾಡಿ ಚುನಾವಣೆ ಎದುರಿಸಲು ಮುಂದಾಗಿ ಈಗ ಗೆಲುವು ಸಾಧಿಸಿ ಪ್ರಧಾನ ಮಂತ್ರಿ ಗದ್ದುಗೆಯನ್ನು ಉಳಿಸಿಕೊಂಡಿದ್ದಾರೆ.
ಜಪಾನ್ ಚುನಾವಣೆ ಆರಂಭ: ಕಿಶಿದಾಗೆ ಮೊದಲ ಪರೀಕ್ಷೆ

ಕಿಶಿದಾ ಪಕ್ಷದ ಕೈ ಜಾರಿದ 17 ಸ್ಥಾನಗಳು
ಇನ್ನು ಈ ಚುನಾವಣೆಗೂ ಮುನ್ನ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ಮಾತ್ರವೇ ಜಪಾನ್‌ನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 276 ಸ್ಥಾನವನ್ನು ಹೊಂದಿದ್ದು, ಬಹುಮತ ಎಲ್‌ಡಿಪಿಯದ್ದು ಆಗಿತ್ತು. ಈಗ ಚುನಾವಣೆಯಲ್ಲಿ ಎಲ್‌ಡಿಪಿ ಗೆಲುವು ಸಾಧಿಸಿದ್ದರೂ ತನ್ನ ತೆಕ್ಕೆಯಲ್ಲಿದ್ದ ಸುಮಾರು 17 ಸ್ಥಾನಗಳನ್ನು ಕಳೆದುಕೊಂಡಿದೆ. ಈ 17 ಕ್ಷೇತ್ರಗಳ ಪೈಕಿ ಲಂಚ ಹಗರಣದ ಆರೋಪವನ್ನು ಹೊತ್ತಿರುವ ಪಕ್ಷದ ಪ್ರಭಾವಿ ಸದಸ್ಯ, ಪ್ರಧಾನ ಕಾರ್ಯದರ್ಶಿ ಅಕಿರಾ ಅಮರಿ ಕ್ಷೇತ್ರವೂ ಸೇರಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಕ್ಷವು, ಈ ರೀತಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಲು ಕಾರಣ ಇದೆ. ಇವೆಲ್ಲವೂ ವಿರೋಧ ಪಕ್ಷಗಳು ಕಾರ್ಯತಂತ್ರ. ವಿರೋಧ ಪಕ್ಷಗಳು ಒಂದೇ ಕ್ಷೇತ್ರದಲ್ಲಿ ಏಕೀಕೃತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಆ ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಹಾಗೆಯೇ ಇದಕ್ಕೆ ಕಳೆದ ನಾಲ್ಕು ವರ್ಷದಲ್ಲಿ ಈ ಕ್ಷೇತ್ರದಲ್ಲಿ ಈ ಹಿಂದಿನ ಸರ್ಕಾರ ನಡೆಸಿದ ಅಧಿಕಾರದ ಕಾರಣವೂ ಇದೆ," ಎಂದು ಹೇಳಿಕೊಂಡಿದೆ. ಇನ್ನು ಎಲ್‌ಡಿಪಿ ಹಲವು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಈ ಹಿಂದೆಯೇ ಮಾಧ್ಯಮಗಳ ಸಮೀಕ್ಷೆಯು ಹೇಳಿತ್ತು. ಎಲ್‌ಡಿಪಿ ಬಹುಮತವನ್ನು ಪಡೆದು ಸುಲಭವಾಗಿ ಜಯ ಸಾಧಿಸಲಿದೆ. ಆದರೆ ಈ ಹಿಂದೆ ತನ್ನ ವಶದಲ್ಲಿ ಇದ್ದ ಸ್ಥಾನಗಳನ್ನು ಎಲ್‌ಡಿಪಿ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಯು ಉಲ್ಲೇಖ ಮಾಡಿತ್ತು.
(ಒನ್‌ಇಂಡಿಯಾ ಸುದ್ದಿ)