Infographics: ಕರ್ನಾಟಕದ ಕರಾವಳಿ, ಮಲೆನಾಡಿಗೆ 'ಹೈ ಅಲರ್ಟ್' ಘೋಷಣೆ
ಬೆಂಗಳೂರು, ಆಗಸ್ಟ 02: ಕರ್ನಾಟಕದಾದ್ಯಂತ ಗುಡುಗು, ಗಾಳಿ ಸಹಿತ ಅತ್ಯಧಿಕ ಭಾರಿ ಮಳೆಯ ನಿರೀಕ್ಷೆ ಇದ್ದು ಹೈ ಅಲರ್ಟ್ ಘೋಷಿಸಲಾಗಿದೆ. ಶನಿವಾರದವರೆಗೆ (ಆ.6) ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮುಂಗಾರು ಅಬ್ಬರಿಸುವ ಲಕ್ಷಣಗಳು ಇವೆ. ಈಗಾಗಲೇ ಮಂಗಳವಾರ ರಾಜ್ಯಾದ್ಯಂತ ಉತ್ತಮ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ ನಾಲ್ಕುವೂ ಕರ್ನಾಟಕದ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಗೂ 2-3ದಿನ ಮಲೆನಾಡಿನ ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಒಂದು ಶಿವಮೊಗ್ಗದ ಜಿಲ್ಲೆಯ ಹಲವೆಡೆ ಧಾರಾಕಾರವಾಗಿ ನಿರಂತರವಾಗಿ ತೀವ್ರ ಮಳೆ ಅಬ್ಬರಿಸಲಿದೆ. ಈ ವೇಳೆ ಹವಾಮಾನ ಇಲಾಖೆ ಸೂಚಿಸಿದ ಈ ಇಷ್ಟು ಜಿಲ್ಲೆಗಳಲ್ಲಿ 20ಸೆಂ.ಮೀ.ಗಿಂತ ಹೆಚ್ಚು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಅದೇ ರೀತಿ ದಕ್ಷಿಣ ಒಳನಾಡಿನಲ್ಲಿ ಶನಿವಾರದ ವರೆಗೆ ದಿನಬಿಟ್ಟು ದಿನ ಭಾರಿಯಿಂದ ಅತೀ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ಸಾಧಾರಣದಿಂದ ಭಾರಿ ಮಳೆ ಬಿದ್ದರೆ, ನಂತರ ಒಂದು ದಿನ ಭಾರಿಯಿಂದ ಅತೀ ಭಾರಿ ವರ್ಷಧಾರೆ ಧರೆಗಿಳಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ
ಭಾರತ ದೇಶಾದ್ಯಂತ ಮುಂಗಾರು ಚುರುಕಾಗುವ ಲಕ್ಷಣಗಳು ಕಂಡು ಬಂದಿದೆ. ಈ ಪೈಕಿ ಕರ್ನಾಟಕದಲ್ಲಿ ಈಗಾಗಲೇ ಮಳೆ ಅಬ್ಬರ ಶುರುವಿಟ್ಟುಕೊಂಡಿದ್ದು, ನಾಲ್ಕು ದಿ ಹೀಗೆ ಮುಂದುವರಿಯಲಿದೆ. ಉಳಿದಂತೆ ಲಕ್ಷದ್ವೀಪ, ಕೇರಳ, ಪುದಚೇರಿ, ರಾಯಸೀಮಾ, ತೆಲಂಗಾಣ, ಗೋವಾ, ಉತ್ತರಾಖಂಡು, ಉತ್ತರ ಪ್ರದೇಶ, ಝಾರ್ಖಂಡ, ಬಿಹಾರ, ಸಿಕ್ಕಿಂ, ಪಶ್ಚಿಮ ಬಂಗಾಳ ಅನೇಕ ಪ್ರದೇಶಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಇದು ಕೆಲವು ದಿನ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ವರದಿಯಲ್ಲಿ ತಿಳಿಸಿದೆ.

ಕರಾವಳಿ, ಮಲೆನಾಡಿಗೆ ಹೈ ಅಲರ್ಟ್
ಕರ್ನಾಟಕದ ಕರಾವಳಿ ಮತ್ತು ಮಲೆನಾಡಿಗೆ ರಾಜ್ಯ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಅದೇ ರೀತಿ ಮಲೆನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ನೀಡಲಾಗಿದೆ. ಇನ್ನೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.

ಬೆಂಗಳೂರಿಗೆ ವ್ಯಾಪಕ ಮಳೆ ನಿರೀಕ್ಷೆ
ರಾಜ್ಯ ರಾಜಧಾನಿ ಬೆಂಗಳೂರಿಗೆ ಮಂಗಳವಾರವು ಉತ್ತಮ ಮಳೆ ದಾಖಲಾಗಿದೆ. ಬೆಳಗ್ಗೆ ಕೆಲ ಕಾಲ ಬಿಸಿಲು ದಾಖಲಾದರೂ ಸಹ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಯಿತು. ಬೆಂಗಳೂರು ನಗರ ಹಾಗೂ ಸುತ್ತಮುತತಲಿನ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆ ಆಯಿತು. ಸಂಜೆ ನಂತರವು ಮಳೆ ಮುಂದುವಿದೆ. ಎಲ್ಲೆ ಮೋಡ ಮುಸಿಕಿನ ವಾತಾವರಣವೇ ಕಂಡು ಬಂದಿದೆ. ಇದೇ ರೀತಿಯ ವಾತಾವರಣ ಮುಂದಿನ 48ಗಂಟೆ ಇರಲಿದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 29 ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯ ಪ್ರಮುಖ ನಗರಗಳ ಉಷ್ಣಾಂಶ ವಿವರ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದರೆ, ತೇವಾಂಶ 82ರಷ್ಟು ಇದೆ. ಇನ್ನು ಗಾಳಿಯ ವೇಗ ಗಂಟೆಗೆ 34ಕಿ.ಮೀ. ದಾಖಲಾಗಿದೆ. ಅಲ್ಲದೇ ಬಾಗಲಕೋಟೆ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 82ರಷ್ಟು ತೇವಾಂಶ, ಮಂಗಳೂರಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 78ರಷ್ಟು ತೇವಾಂಶ ಇದೆ. ಶಿವಮೊಗ್ಗದಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 87ರಷ್ಟು ತೇವಾಂಶ ದಾಖಲಾಗಿದೆ. ಮೈಸೂರಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 71 ಇದೆ. ಬಳ್ಳಾರಿಯಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು ತೇವಾಂಶ 78ರಷ್ಟು ದಾಖಲಾಗಿದೆ.
ರಾಯಚೂರಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 59ರಷ್ಟು ತೇವಾಂಶ ಇದ್ದು, ಚಿತ್ರದುರ್ಗದಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70ರಷ್ಟು ತೇವಾಂಶ ಇದೆ. ಇನ್ನು ಕಲಬುರಗಿಯ್ಲಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 61ರಷ್ಟು ತೇವಾಂಶ, ಚಿಕ್ಕಮಗಳೂರು 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 70ರಷ್ಟು ತೇವಾಂಶ ಇದೆ.












Click it and Unblock the Notifications