Infographics: ಜುಲೈ 8ರಂದು ರಾಜ್ಯದ ಯಾವ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ?
ಬೆಂಗಳೂರು, ಜುಲೈ 8: ಕರ್ನಾಟಕದ ಹಲವೆಡೆ ಮಳೆ ಚುರುಕಾಗಿದೆ. ನೈಋತ್ಯ ಮುಂಗಾರು ರಾಜ್ಯಾದ್ಯಂತ ಚುರುಕಾಗಿದ್ದು, ಜುಲೈ 10ರವರೆಗೂ ಮಳೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕರಾವಳಿ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮತ್ತು ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ಒಂದೆರೆಡು ಕಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಿಲ್ಲ ಎಂದು ರಾಜ್ಯ ಹವಮಾನ ಇಲಾಖೆಯು ಮಾಹಿತಿ ನೀಡಿದೆ.
ರಾಜ್ಯದಲ್ಲಿ 24 ಗಂಟೆಗಳಲ್ಲಿ ಮಳೆಯೋ ಮಳೆ:
ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರಿಯಿಂದ ಅತಿಭಾರಿ ಮಳೆಯಾಗುವ ನಿರೀಕ್ಷೆಯಿದೆ. ಒಂದೆರೆಡು ಕಡೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಹೊರತಾಗಿಯೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ಒಂದೆರೆಡು ಕೆಡಗಳಲ್ಲಿ ಭಾರಿಯಿಂದ ಅತಿಭಾರೀ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಬೀದರ್, ಹಾವೇರಿ, ಕಲಬುರಗಿ ವಿಜಯಪುರ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯ ಒಂದೆರೆಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 45 ರಿಂದ 55 ಕಿಲೋ ಮೀಟರ್ ಇರಲಿದ್ದು, 65 ಕಿ. ಮೀ ವೇಗಕ್ಕೆ ತಲುಪುವ ಸಾಧ್ಯೆತೆಯೂ ಇದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ. ರಾಜ್ಯದಲ್ಲಿ ಚುರುಕುಗೊಂಡ ಮಳೆಯಿಂದಾಗಿ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ರಾಜ್ಯದ ಯಾವ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ
ಲಿಂಗನಮಕ್ಕಿಯಲ್ಲಿ ಪೂರ್ಣಮಟ್ಟ 554.44 ಮೀಟರ್ ಇದ್ದು, ಇಂದು 540.26 ಮೀಟರ್ ಇದೆ. ಹಾರಂಗಿಯಲ್ಲಿ ಪೂರ್ಣಮಟ್ಟ 871.38 ಮೀಟರ್ ಇದ್ದು, ಇಂದು 869.76ರಷ್ಟಿದೆ. ಇನ್ನು ಹೇಮಾವತಿಯಲ್ಲಿ ನೀರಿನ ಮಟ್ಟ 890.58 ಮೀಟರ್ ಇದ್ದು ಇಂದು 888.58ಮೀಟರ್‌ನಷ್ಟಿದೆ.

ಕಬಿನಿ ಜಲಾಶಯದ ಮಟ್ಟ
ಕಬಿನಿಯಲ್ಲಿ ಪೂರ್ಣ ಮಟ್ಟ 696.13 ಮೀಟರ್‌ನಷ್ಟಿದ್ದು, ಇಂದು 694.61ರಷ್ಟಿದೆ, ಕೆಆರ್‌ಎಸ್‌ನಲ್ಲಿ 38.04 ಸಾಮರ್ಥ್ಯವಿದ್ದು ನೀರಿನ ಮಟ್ಟ 36.40 ಮೀಟರ್‌ನಷ್ಟಿದೆ, ಭದ್ರಾದಲ್ಲಿ ನೀರಿನ ಸಾಮರ್ಥ್ಯ 657.73ರಷ್ಟಿದ್ದು, ಇಂದಿನ ಮಟ್ಟ 651.73ರಷ್ಟಿದೆ.

ತುಂಗಭದ್ರಾ ಜಲಾಶಯ
ತುಂಗಭದ್ರದಲ್ಲಿ 497.71 ಮೀಟರ್ ಸಾಮರ್ಥ್ಯವಿದ್ದು, ಇಂದು 494.11 ಮೀಟರ್‌ನಷ್ಟು ನೀರಿದೆ, ಆಲಮಟ್ಟಿಯಲ್ಲಿ ಸಾಮರ್ಥ್ಯ 519.60ರಷ್ಟಿದ್ದರೂ ಇಂದು 515.05ಮೀಟರ್‌ನಷ್ಟಿದೆ. ಇನ್ನು ನಾರಾಯಣಪುರದಲ್ಲಿ 492.25ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದರೂ 491.00 ಮೀಟರ್‌ನಷ್ಟು ನೀರಿದೆ.

ಸೂಪಾ ಜಲಾಶಯದ ನೀರಿನ ಮಟ್ಟ
ಸೂಪಾ ಜಲಾಶಯದಲ್ಲಿ 564.00 ನೀರಿನ ಸಾಮರ್ಥ್ಯ ಹೊಂದಿದೆ, 526.40ರಷ್ಟು ನೀರು ಸಂಗ್ರಹವಾಗಿದೆ. ಘಟಪ್ರಭಾದಲ್ಲಿ 662.91 ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದು, 639.40ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್ ನೀರಿನ ಸಾಮರ್ಥ್ಯವಿದ್ದು, 626.36ರಷ್ಟು ನೀರು ಸಂಗ್ರಹವಾಗಿದೆ.











Click it and Unblock the Notifications