ಮೋದಿ ಪ್ರಧಾನಿ ಅಭ್ಯರ್ಥಿಗೆ RSS ನಾಲ್ಕು ಷರತ್ತು!
ಬೆಂಗಳೂರು, ಸೆಪ್ಟೆಂಬರ್12: ಮುಂಬರುವ ಲೋಕಸಭಾ ಚುನಾವಣೆಗಾಗಿ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಸಂಬಂದ ಬಿಜೆಪಿಯಲ್ಲಿ ಯಾವುದೂ ಸರಿಯಿಲ್ಲ. ಏನೇನೋ ನಡೆಯುತ್ತಿದೆ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಗುಜರಾತಿನ ''ಹಾಲಿ ಮುಖ್ಯಮಂತ್ರಿ'' ನರೇಂದ್ರ ಮೋದಿಗೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ದಕ್ಕಿಸಿಕೊಡುವ ಸಾಮರ್ಥ್ಯ/ ವರ್ಚಸ್ಸು ಇದೆ ಎಂದು ಜನ ಮಾತನಾಡಿಕೊಳ್ಳುತ್ತಿರುವಾಗ ಆಂತರಿಕವಾಗಿ ಬಿಜೆಪಿ ವೈಮನಸ್ಸಿನಿಂದ ಕುದಿಯುತ್ತಿದೆ.
ಪಕ್ಷಕ್ಕಾಗಿ ಅಹಿರ್ನಿಷಿ ದುಡಿಯುತ್ತಾ ಬಂದಿರುವ ಉನ್ನತಮಟ್ಟದ ನಾಯಕರು ಪರಸ್ಪರ ವಿಮುಖರಾಗತೊಡಗಿದ್ದಾರೆ. ಆದರೆ ಎಲ್ಲವೂ ನರೇಂದ್ರ ಮೋದಿಯತ್ತಲೇ ಗಿರಕಿ ಹೊಡೆಯುತ್ತಿರುವುದು ಈ ಕ್ಷಣದ ಸತ್ಯ, ಪಕ್ಷದ ದುರ್ದೈವ.

ಮೋದಿಗೆ ನಾಲ್ಕು ಷರತ್ತುಗಳ ಸರಮಾಲೆ
ಈ ಮಧ್ಯೆ RSSಗೂ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಗೆ ಸಮ್ಮತಿ ಸೂಚಿಸಿದೆಯಾದರೂ ಸಂಘ ಪರಿವಾರದ ಕೃಪಾಶೀರ್ವಾದ ಗಳಿಸಲು ಮೋದಿ ಸಹ RSS ಆಣಿತಿಯಂತೆ ನಡೆಯಬೇಕಾದ ಜರೂರತ್ತು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಲು ಕಾತುರರಾಗಿರುವ ನರೇಂದ್ರ ಮೋದಿಗೆ RSS ನಾಲ್ಕು ಷರತ್ತುಗಳನ್ನು ವಿಧಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಷರತ್ತುಗಳತ್ತ ಕಣ್ಣುಹಾಯಿಸಿದರೆ ಬಿಜೆಪಿ ಮತ್ತು ಮೋದಿ ಹಿಂದುತ್ವ ಅಜೆಂಡಾಕ್ಕೆ ವಾಪಸಾಗುವುದು ಅನಿವಾರ್ಯವಾಗಲಿದೆ.

ರಾಮ ಮಂದಿರ ನಿರ್ಮಾಣ ಅನಿವಾರ್ಯ
ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾಗಬೇಕೆಂದರೆ ಅವರು ತಕ್ಷಣವೇ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನವನ್ನು ನಿರ್ಮಿಸುವ ವಾಗ್ದಾನ ನೀಡಬೇಕು. ಆದರೆ ಇದು ಸದ್ಯಕ್ಕೆ ನ್ಯಾಯಾಲಯದಲ್ಲಿ ಬಗೆಹರಿಬೇಕಾದ ವಿಷಯ.

uniform civil code -minority community
ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿಬೇಕು. ಇದಕ್ಕೆ ಅಲ್ಪಸಂಖ್ಯಾತರ ಕಡುವಿರೋಧ ಎದುರಾಗುವ ಸಾಧ್ಯತೆಯಿದೆ.

Article 370 - Jammu and Kashmir
ಸಂವಿಧಾನದಲ್ಲಿನ Article 370 ಅನ್ನು ವಾಪಸ್ ಪಡೆಯಬೇಕು. ಅಂದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಕೊಡಮಾಡಲಾಗಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವಂತಾಗಬೇಕು.

ಗೋಮಾತೆಯ ಸಂರಕ್ಷಣೆ
ಸಂವಿಧಾನಬದ್ಧವಾಗಿ ಗೋಮಾತೆಯ ಸಂರಕ್ಷಣೆಗೆ ನರೇಂದ್ರ ಮೋದಿ ಕಂಕಣಬದ್ಧರಾಗಬೇಕು.











Click it and Unblock the Notifications