ಮೋದಿ ಪ್ರಧಾನಿ ಅಭ್ಯರ್ಥಿಗೆ ಅಡ್ವಾಣಿ ನಾಲ್ಕು ಷರತ್ತು?
ಬೆಂಗಳೂರು, ಸೆಪ್ಟೆಂಬರ್12: ಗುಜರಾತಿನ ''ಹಾಲಿ ಮುಖ್ಯಮಂತ್ರಿ'' ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಗಾಗಿ ಪ್ರಧಾನಿ ಅಭ್ಯರ್ಥಿಯನ್ನಾಗಿಸುವ ಪ್ರಯತ್ನಕ್ಕೆ ಭಾರಿ ವಿಘ್ನಗಳು ಎದುರಾಗುತ್ತಿವೆ.
ಓಂ ಪ್ರಥಮ ಎಂದು ಭೀಷ್ಮ ಪಿತಾಮಹ ಎಲ್ ಕೆ ಅಡ್ವಾಣಿ ಅವರೇ ಇದಕ್ಕೆ ತಗಾದೆ ತೆಗೆದಿರುವುದಕ್ಕೆ ಪಕ್ಷದಲ್ಲಿನ ಮೋದಿ ವಿರೋಧಿಗಳ ಕೆಲಸ ಸಲೀಸಾಗಿದೆ. ಬಿಜೆಪಿಯಲ್ಲಿನ ತಾಜಾ ಬೆಳವಣಿಗೆಗಳು/ ಮನೆ ಹಿರಿಯರ ರಗಳೆಗಳನ್ನು ನೋಡಿದರೆ ಪಕ್ಷದ ಸಾಮಾನ್ಯ ಕಾರ್ಯಕರ್ತರು ಬೆಚ್ಚಿಬೀಳುವಂತಾಗಿದೆ.
ಸೆ. 19ರೊಳಗೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರ ಆಶಯ ಸದ್ಯಕ್ಕೆ ನೆರವೇರುವಂತಿಲ್ಲ. ಒಂದು ವೇಳೆ ಸೆ. 13 ರಂದು ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲೇ ಬೇಕೆಂದಿದ್ದರೆ ಅಡ್ವಾಣಿ ಸೇರಿದಂತೆ ಕೆಲ ಹಿರಿಯನ್ನು ಹೊರಗಿಟ್ಟೇ ಈ ನಿರ್ಧಾರ ತೆಗೆದುಕೊಳ್ಳುವುದು ಪಕ್ಷಾಧ್ಯಕ್ಷ ರಾಜನಾಥ್‌ಸಿಂಗ್ ಅವರಿಗೆ ಅನಿವಾರ್ಯವಾಗಲಿದೆ.

5 ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಬೇಡ
ಸದ್ಯಕ್ಕೆ 5 ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಪ್ರಧಾನಿ ಅಭ್ಯರ್ಥಿ ಘೋಷಿಸುವುದು ಬೇಡ ಎಂದು ಆಡ್ವಾಣಿ ತಿದಿಯೊತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಇನ್ನೂ 3 ಷರತ್ತುಗಳನ್ನು ವಿಧಿಸಿದ್ದಾರೆ ಎಂದೂ ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. ಹಾಗಾಗಿ ಮೋದಿ ಷರತ್ತುಗಳ ಸಂಕಟಮಾಲೆಯನ್ನೇ ಎದುರಿಸಬೇಕಿದೆ.

ಹಾಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
ಗುಜರಾತಿನ ''ಹಾಲಿ ಮುಖ್ಯಮಂತ್ರಿ'' ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗುವುದಕ್ಕೂ ಮುನ್ನ ಗುಜರಾತಿನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು. ಆದರೆ,ಮುಂದೆ ಅಡ್ವಾಣಿ ಕಡೆಯಿಂದ ಇಂತಹ ಷರತ್ತು ಎದುರಾಗಬಹುದು ಎಂದು ಎಣಿಸಿಯೇ ಇತ್ತೀಚೆಗೆ ಮೋದಿ ಸಾಹೇಬರು 'ಗುಜರಾತ್ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸುವುದು ತನ್ನ ಆದ್ಯ ಕರ್ತವ್ಯ' ಎಂದು ಘೋಷಿಸಿದ್ದರು.

ಅಡ್ವಾಣಿ ಆಣಿತಿಯಂತೆ ನಡೆಯಬೇಕು
ಭವಿಷ್ಯದಲ್ಲಿ ನರೇಂದ್ರ ಮೋದಿ ಅವರು ಅಡ್ವಾಣಿ ಆಣಿತಿಯಂತೆ ನಡೆಯಬೇಕು. ಅಡ್ವಾಣಿ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ನಾಲ್ಕನೆಯ ಷರತ್ತು ಅಂದರೆ
ಇನ್ನು ನಾಲ್ಕನೆಯ ಷರತ್ತು ಅಂದರೆ ಮೋದಿ ಅವರು ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ಅಡ್ವಾಣಿಯ ಅವಸಾನ -ಕಾರ್ಯಕರ್ತನ ತರ್ಕ
ಹಿರಿಯ ನಾಯಕ ಅಡ್ವಾಣಿ ಅವರ ಷರತ್ತುಗಳ ಸಂಕಟವನ್ನು ಅರ್ಥ ಮಾಡಿಕೊಂಡಂತಿರುವ ಬಿಜೆಪಿಯ ಸಾಮಾನ್ಯ ಕಾರ್ಯರ್ತರೊಬ್ಬರು 'ಇಷ್ಟಕ್ಕೂ ಅಡ್ವಾಣಿ ಹೀಗೇಕೆ ಹಠ ಹಿಡಿದಿದ್ದಾರೆ?' ಎಂದು ಚಿಂತಾಕ್ರಾಂತರಾಗಿದ್ದಾರೆ.
ಅಡ್ವಾಣಿಯ ಚಿಂತೆಯೆಂದರೆ 'ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಮರು ಘಳಿಗೆಯೇ ತಮ್ಮ (ಅಡ್ವಾಣಿ) ರಾಜಕೀಯ ಅವಸಾನವಾದಂತೆ ಎಂಬುದು ಅಡ್ವಾಣಿಯ ಅಳಲಾಗಿರಬಹುದು' ಎಂಬುದು ಆ ಕಾರ್ಯಕರ್ತನ ತರ್ಕವಾಗಿದೆ.











Click it and Unblock the Notifications