ಕನ್ನಡ ಕವನ : ಯುಗಾದಿ ಅಂದರೆ...

ಚಿಗುರಿನ ಪಲ್ಲವಿ
ನೆನಪಿನ ಚರಣ
ಹೊಸ ಠರಾವು
ಹಳೆಯ ಬೇಸರಕ್ಕೆ ವಿಚ್ಛೇದನ
ತೊಳೆದ ಮನೆ
ಬೆಳಗುವ ಮನಸ್ಸು
ಹೊಸ ಬಟ್ಟೆ
ಒಬ್ಬಟ್ಟಿನ ತಟ್ಟೆ
ಸಂಕಲ್ಪಗಳ ತೇರು
ಭಾವ ಪುನರುತ್ಥಾನ
ಪ್ರಕೃತಿಯ ಪರಿಭ್ರಮಣೆ
ತನ್ನಿಂದ ತಾನೆ ನಡೆಯುವ ಒಂದು ಮಾಯೆ
ಹಳೇ ಮಾತಿಗೆ ಹೊಸ ಮೌನ
ಇತಿಹಾಸದ ಅಟ್ಟಹಾಸಕ್ಕೆ ಹೊಸ ಮಂದಹಾಸ
ತಾಳ್ಮೆಯ ತಳಿರು
ಅರಿವಿನ ಹೂರಣ
ತಿಳಿವಿನ ರಂಗೋಲಿ
ಬದುಕಿನ ಆರಂಭ
ನಂದನದ ಜೊತೆಗಾತಿ
ಸಂಭ್ರಮದ ದಿಬ್ಬಣ
ನವೋಲ್ಲಾಸಕ್ಕೆ ನಾಂದಿ
ಕಾಲಕ್ಕೆ ಕನ್ನಡಿ
ನವಯುಗದ ಮುನ್ನುಡಿ
ಭರವಸೆ ನೀಡುವ ಅಭಯ ಹಸ್ತ
ಜೀವಂತಿಕೆಯ ಪರಮಾವಧಿ
ಕನಸುಗಳ ಆದಿ
ಪರಿಸರದಲ್ಲೆಲ್ಲ ಪ್ರಸನ್ನತೆಯನ್ನು ಪ್ರಚೋದಿಸುವ ಪರ್ವಕಾಲ
ಅದಮ್ಯ ಚೇತನದ ಸಂಕೇತ
ಪಂಚಾಂಗ ಶ್ರವಣ
ನೂತನ ವಸ್ತ್ರಧಾರಣ
ಹೋಳಿಗೆ ಪಾಯಸ ಭೋಜನ
ಬೇವು-ಬೆಲ್ಲ ಸೇವನ
ಶುಭಾಶಂಸನ
ವಸಂತನ ಆಗಮನ
ಚೈತನ್ಯದ ಆಗರ
ನೋವು ನಲಿವಿನ ಸಂಭ್ರಮ
ಜೀವಸಂಕುಲದ ಸಂತಸ
ಚಿಗುರೆಲೆಗಳ ಸೊಗಡು
ಹೂದುಂಬಿಯ ರಸದೌತಣ
ಮತ್ತೊಂದು ಸಂವತ್ಸರಕ್ಕೆ ಸ್ವಾಗತ
ಬೀಳ್ಕೊಂಡ ವರ್ಷದ ಸಿಂಹಾವಲೋಕನ
ಸೂರ್‍ಯೋದಯದ ಹರ್ಷೋದಯ












Click it and Unblock the Notifications