ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಜಿತ್‌ ಯುಗಾದಿಗೆ ಸಣ್ಣ ಕತೆವಾಸಂತಿಯ ಚಿತ್ರ

By Staff
|
Google Oneindia Kannada News


(ಹಿಂದಿನ ಪುಟದಿಂದ)

ಅದೇ ಮತ್ತೆ ಮತ್ತೆ ನೆನಪಾಗುತ್ತಿದೆ. ಈ ನಾಲ್ಕೈದು ವರ್ಷಗಳಲ್ಲಿ ನಿಜವಾಗಿಯೂ ಅದು ಮನಸ್ಸಿನ ಅಜೂ ಬಾಜೂ ಕೂಡಾ ಸುಳಿಯುತ್ತಿಲ್ಲ ಎಂಬ ಹಾಗೇ ಇದ್ದೆ. ಆದರೆ ಮೊನ್ನೆ ಕಾರ್ತಿಕೋತ್ಸವದ ದಿನ ಇದ್ದಕ್ಕಿದ್ದಂತೆ ಸಳಕ್ಕನೆ ಹೊಕ್ಕಿ ನರನರದಲ್ಲೂ ಪ್ರವಹಿಸಿ ಬಾಧಿಸತೊಡಗಿತ್ತು ಆ ನೆನಪು. ಆ ಘಳಿಗೆಯಿಂದಲೇ ಯಾತನೆ ಹಸಿಹಸಿಯಾಗಿ ಕಾಡತೊಡಗಿದೆ.

ಊರು ಕಾರ್ತಿಕೋತ್ಸವವನ್ನು ತುಂಬಿಕೊಳ್ಳುವ ದಿನವನ್ನು ಹಲವು ವರ್ಷಗಳ ನಂತರ ಮೊನ್ನೆಯೇ ಕಂಡೆ. ಇಷ್ಟು ವರ್ಷಗಳ ಅಂತರವೊಂದನ್ನು ಸಾವಕಾಶವಾಗಿ ಕರಗಿಸುವಂಥ ಎಳೆಗಳು ಸಿಕ್ಕತೊಡಗಿದ್ದೇ ಆವತ್ತು. ನಾವು ಎಷ್ಟೊಂದು ಹುಡುಗರು ಧ್ಯಾಸ ತಪ್ಪಿದವರಂತೆ ಸಂಭ್ರಮಗೊಳ್ಳುತ್ತಾ, ರಾತ್ರಿಯೆಲ್ಲಾ ಬೆಳಕ ತೋರಣದಲ್ಲಿ ಒದ್ದೆಯಾಗುವ ಬೀದಿಗಳ ಈ ತುದಿಯಿಂದ ಆ ತುದಿವರೆಗೂ ಓಡಾಡುತ್ತ, ಆ ಸಮಯದಲ್ಲಿ ಒಮ್ಮೊಮ್ಮೆ ರಾಜಪುತ್ರರಂತೆ, ಒಮ್ಮೊಮ್ಮೆ ಪಕ್ಕಾ ತಂಟೆಕೋರರೇ ಆಗಿ ಬೀದಿ ಬೀದಿಯನ್ನೇ ಕೈವಶಕ್ಕೆ ತಕ್ಕೊಂಡವರಂತೆ ಶೋಭಿಸುವುದೂ , ಮಾತು, ನಗೆ, ಕೇಕೆಯ ಅಬ್ಬರವೆಬ್ಬಿಸಿ ಉಲ್ಲಾಸದ ಬಾಂದುಗಳನ್ನು ವಿಸ್ತರಿಸುವುದೂ ಇತ್ತು. ಬೆಳಕ ಚಿಗುರಿಸಿಕೊಂಡು ಕಣ್ಸೆಳೆವ ತೋರಣಗಳಲ್ಲಿ ದೀಪಗಳು ಸಿಡಿವಾಗಿನ ಚಿತ್ತಾರದ ಸೊಬಗಿಗೆ ಸಾಟಿಯಾಗುವಂಥ ಇನ್ನೊಂದು ಕಲ್ಪನೆಯನ್ನು ಕೂಡ ಕಣ್ಣಲ್ಲಿ ಮೂಡಿಸಿಕೊಳ್ಳಲು ಆಗಿಲ್ಲ ಈತನಕವೂ.

ಅಂಥ ಕಾರ್ತಿಕೋತ್ಸವದ ದಿನ ಮೊನ್ನೆ ನಾನು ಊರಲ್ಲಿದ್ದೆ. ಕಾರ್ತಿಕೋತ್ಸವ ಊರನ್ನೇ ಹೂವಂತೆ ಅರಳಿಸುವ ಹಬ್ಬವಾದರೂ ನಮಗೆ ಅಷ್ಟೂ ಮಂದಿ ಗೆಳೆಯರಿಗೆ ಮಾತ್ರ, ನಮ್ಮ ನಡುವೆ ಎಂಥದೋ ಬೆಸುಗೆಯನ್ನು ಏರ್ಪಡಿಸುವ ಉತ್ಸವವಾಗಿ ಗೊತ್ತಿರುವಂಥದ್ದು. ಮನೆಯಲ್ಲಿ ಯಾರು ಎಷ್ಟೇ ಬೆೃದುಕೊಂಡರೂ, ತಲೆ ಹೋಗುವಂಥ ಕೆಲಸವಿದ್ದರೂ ಕಾರ್ತಿಕೋತ್ಸವಕ್ಕೆ ಮಾತ್ರ ನಮ್ಮ ಹಾಜರಾತಿ ಯಾವತ್ತೂ ತಪ್ಪಿದಲ್ಲ ನಮ್ಮ ಚಡ್ಡೀ ದೋಸ್ತಿಯ ದಿನಗಳಲ್ಲಿ. ಓದು ಮುಗಿಸಿ ಹೊಟ್ಟೆಪಾಡಿನ ಹಾದಿಯನ್ನು, ಹೈವೇಗಳನ್ನು ಸೇರಿಸಿಕೊಳ್ಳತೊಡಗಿದಂತೆ ನಮ್ಮದೇ ಗೊಂದಲಗಳು, ಗಡಿಬಿಡಿಗಳು, ವಜ್ಜೆಗಳು ಬೆಳೆದವು. ಇದೆಲ್ಲಾ ಜಂಜಾಟಗಳ ನಡುವೆಯೂ, ಎಳವೆಯ ದಿನಗಳಲ್ಲಿನ ಕಾರ್ತಿಕೋತ್ಸವದ

ಖುಷಿಯನ್ನು ಕೂಡಿಸಲು ಹೊತ್ತಿನ ಬಾಗಿಲು ತೆರೆಯುವದಕ್ಕಿಂತ ಮಿಗಿಲಾದ್ದು ನಮಗೆ ಮತ್ತೊಂದಿಲ್ಲ ಎಂಬುದರ ಭಾವದಲ್ಲೇ ನಾವು ಪುಳಕಿತರಾಗುತ್ತಿದ್ದುದು. ಹಂತದಲ್ಲಿ ತಲೆದೋರಿದ್ದ ಒಂದೇ ಒಂದು ವ್ಯತ್ಯಾಸವೆಂದರೆ , ಎಳವೆಯ ತುಂಟತನದ ಜಾಗದಲ್ಲಿ ಎಂಥದೋ ಪುಟ್ಟ ಸೈಜಿನ ಗಾಂಭೀರ್ಯವೊಂದು ತಾನೇತಾನೆಂಬಂತೆ ರಾರಾಜಿಸ ತೊಡಗಿತ್ತು.

ಯುವಕ ಸಂಘ ಅಂತ ಒಂದನ್ನು ಕಟ್ಟಿದ್ದೆವು. ಕಾರ್ತಿಕೋತ್ಸವಕ್ಕೆ ಭಾಷಣಗಳು, ನಾಟಕ, ಹಾಡು ಎಂದು ಹೊಸ ಐಟಂಗಳು ಸೇರಿಕೊಳ್ಳತೊಡಗಿದ್ದವು. ಇಂಥಾ ಕಾರ್ತಿಕೋತ್ಸವದ ದಿನ ಮೊನ್ನೆ ನಾನು ಊರಲ್ಲಿದ್ದಾಗ ಇದೆಲ್ಲದರಿಂದಲೂ ಬೇರೆಯಾದವನಾಗಿದ್ದೆ. ಕಾರ್ತಿಕೋತ್ಸವದ ಈ ಎಲ್ಲವೂ ನನ್ನದೆಂದುಕೊಳ್ಳುವಂತೆ ನಾನು ತನ್ಮಯನಾಗಿದ್ದ ಕಡೇ ಕಾರ್ತಿಕೋತ್ಸವದ ಮೇಲೆ ಈಗ ವರ್ಷಗಳ ಹಾಸು ಬಿದ್ದಿತ್ತು. ಅವೆಲ್ಲವೂ ಸರಿದು ನಮ್ಮ ಹುಡುಗುತನದ ಸಂಭ್ರಮ ನೆನಪಾದದ್ದು, ತಾರುಣ್ಯ ಚಿಗಿಯತೊಡಗಿದಾಗಿನ ಉಮೇದು ನೆನಪಾದದ್ದು, ವಾಸಂತಿಯ ಚಿತ್ರ ಗಾಢವಾದದ್ದು ಮೊನ್ನೆ ಕಾರ್ತಿಕೋತ್ಸವದ ಆಯಾದ ಕೆಲವು ದೋಸ್ತರ ನಡುವೆಯೂ ನಾನು ಒಬ್ಬಂಟಿಯಂತೆ ಅನ್ನಿಸುತ್ತಾ ದುಃಖ ಒಳಗೊಳಗೇ ಮೊರೆಯತೊಡಗಿದಾಗ.

ಆ ವರ್ಷದ ಕಾರ್ತಿಕೋತ್ಸವದಲ್ಲಿ ನಾವು ಗೆಳೆಯರೆಲ್ಲಾ ಸೇರಿ ಎಂದಿನದೇ ಸಂಭ್ರಮಕ್ಕೆ ಇನ್ನೊಂದು ನವಿರಾದ ಗರಿ ಸೇರಿದ್ದ ಖುಷಿಯಲ್ಲಿದ್ದೆವು, ನಮ್ಮ ಜತೆಗೇ ಆಡಿ ಬೆಳೆದ, ನಮ್ಮದೇ ಕೇರಿಯ ಹುಡುಗಿ ವಾಸಂತಿ ಬರೆದ ಚಿತ್ರಗಳನ್ನು , ಒಟ್ಟಿಗೆ ಎಷ್ಟೆಲ್ಲಾ ಕಣ್ಣುಗಳ ಮುಂದೆ ನಿಲ್ಲಿಸಲು ನಾವು ತಯಾರಿ ನಡೆಸಿದ್ದೆವು. ಹಠ ಹಿಡಿದಿದ್ದ ವಾಸಂತಿಯನ್ನು ದಿನಗಟ್ಟಲೆ ಕಾಡಿ ಒಲಿಸಿದ್ದೆವು.

ಅವಳೊಲಿದದ್ದೇ ಸಾಕು, ಉಳಿದ ಕೆಲಸವೆಲ್ಲ ನಮಗಿರಲಿ ಎಂಬಂತೆ ಅವಳ ಮನೆಯಾಳಗೆ ನೆರೆದಿದ್ದೆವು. ಅವಳು ಬರೆದೂ ಟ್ರಂಕಿನಲ್ಲಿ, ಗೋಣಿಚೀಲದಲ್ಲಿ ಸೇರಿಸಿ ಅಟ್ಟಕ್ಕೆ ಎತ್ತಿಸಿದ್ದ ಚಿತ್ರಗಳನ್ನೆಲ್ಲಾ ಕೆಳಗಿಳಿಸಿ ಧೂಳು ಒರೆಸತೊಡಗಿದಾಗ ನೆರೆದಿದ್ದ ಬೆರಗನ್ನು ಹೆಕ್ಕಿ ಹೆಕ್ಕಿ ನಮ್ಮ ಕಣ್ಣುಗಳಲ್ಲಿ ಬರೆದುಕೊಳುತ್ತಾ ನಾವೇ ರೇಖೆಗಳೂ ಬಣ್ಣಗಳೂ ಆಗುತ್ತಾ ಆಕಾಶಕ್ಕೆ ಮೆತ್ತಿಕೊಳ್ಳತೊಡಗಿದ್ದೆವು.

ಇದೆಲ್ಲಾ ತನಗಾಗಿ ಎಂದು ತಿಳಿದೂ ವಾಸಂತಿ ನಮ್ಮ ಉಮೇದಿನಲ್ಲಿ ಬೆರೆಯಲಿಲ್ಲ. ಯಾಕೆ ಎಂದು ನಮ್ಮಷ್ಟಕ್ಕೇ ಕೇಳಿಕೊಂಡೆವು. ವಾಸಂತಿಯ ಕಣ್ಣುಗಳಲ್ಲ್ಲಿ ನಮ್ಮ ಪ್ರಶ್ನೆಗೆ ಉತ್ತರದ ಸುಳಿವೇನಾದರೂ ಸಿಕ್ಕೀತೇ ಎಂದು ಹುಡುಕಿದೆವು. ಇಲ್ಲ. ಎಂಥದೂ ತಿಳಿಯಲಿಲ್ಲ. ಕಾರ್ತಿಕೋತ್ಸವ ಏಳತೊಡಗಿತ್ತು. ನಮ್ಮೆಲ್ಲರ ಉತ್ಸಾಹದ ಜೀಕಿನಿಂದ ಮೆರುಗುಗೊಂಡು ಏಳತೊಡಗಿತ್ತು. ಆಗಲೇ... ಬೆಳಕು ವಿಜೃಂಭಿಸುತ್ತಾ, ಮಕ್ಕಳು ಹೋ ಎಂದು ಅದಮ್ಯ ಖುಷಿಯಲ್ಲಿ ಹರಿಹಾಯುತ್ತಾ, ಪ್ರಾಯದ ಹೆಣ್ಣುಮಕ್ಕಳು ಲಕಗುಡುತ್ತಾ, ಹೊಂತಗಾರ ಹುಡುಗರು ದಂಡಿನಂತಾಡುತ್ತಾ , ಇನ್ನೇನು ತೋರಣದ ದೀಪಗಳು ಸಿಡಿಯಲಿಕ್ಕೆ ಸ್ವಲ್ಪೇ ಸ್ವಲ್ಪ ಹೊತ್ತು ಎನ್ನುವಾಗಲೇ ನಮ್ಮೆಲ್ಲರ ಎದೆಯೇ ಸಿಡಿದು ಹೋಗುವಂಥ ಸುದ್ದಿಯಾಂದು ಬಂದು ಬಡಿದದ್ದು.

ವಾಸಂತಿ ಮನೆ ಹಿಂದಿನ ಬಾವಿಗೆ ಹಾರಿಕೊಂಡಿದ್ದಳು.

ಜೀವ ಬಿಟ್ಟು ಓಡಿದೆವು. ಅಲ್ಲೇನಿತ್ತು? ನಾಗೂ ಎಂಬ ಅಪ್ಪನ, ದೇವಿ ಎಂಬ ಅಮ್ಮನ ಒಬ್ಬಳೇ ಮಗಳು ವಾಸಂತಿ, ಚಿತ್ರಗಳಲ್ಲಿ ಬಣ್ಣಗಳಲ್ಲಿ ಬೆಳೆದು ನಿಂತ ವಾಸಂತಿ, ನಾವು-ಅಷ್ಟೊಂದು ಗೆಳೆಯರ ನದರಿನಲ್ಲಿ ಮನೆಯ ಮಗಳಂತೆ ಆಪ್ತಳಾಗಿ ತುಂಬಿದ್ದ ವಾಸಂತಿ ಯಾರಿಗೂ ಒಂದು ಮಾತೂ ಹೇಳದೆ ಹೊರಟು ಹೋಗಿದ್ದಳು. ಪ್ರಶ್ನೆಗಳನ್ನು ಕಚ್ಚಿಕೊಂಡೇ ನಿದ್ದೆಗೆಟ್ಟಿತು ಆ ರಾತ್ರಿ.

ನಮ್ಮೊಳಗೆ ಮಾತುಗಳಿರಲಿಲ್ಲ. ಕಾರ್ತಿಕೋತ್ಸವ ಮುಗಿದಿತ್ತು. ವಾಸಂತಿ ಇಲ್ಲದ ಮರಮೌನದಲ್ಲಿ ಮಾರನೇ ದಿನದ ಸೂರ್ಯ ಬೇಯುತ್ತಿದ್ದಾಗ ನಾವು ವಾಸಂತಿಯ ಚಿತ್ರಗಳು ಬಣ್ಣವಳಿಸಿದ ಬಯಲಲ್ಲಿ ಯಾರೂ ಇಲ್ಲದವರಾಗಿ ಕೂತಿದ್ದೆವು. ಇದ್ದಕ್ಕಿದ್ದಂತೆ, ಚಿತ್ರಗಳೆಲ್ಲ ನಮ್ಮನ್ನೇ ದಿಟ್ಟಿಸತೊಡಗಿವೆ ಎಂದು ತಿಳಿದಿದ್ದೇ, ಎದುರಿಸಲಾಗದ ಭಯದಲ್ಲಿ ದೃಷ್ಟಿ ತಪ್ಪಿಸಿದೆವು. ಅಲ್ಲೂ ಬಂದವು ಚಿತ್ರಗಳು. ದೃಷ್ಟಿ ಇಟ್ಟಲ್ಲೆಲ್ಲಾ ಅವೇ. ನಾವು ಎದುರಿಸುವ ಶಕ್ತಿಯನ್ನು ಕಳೆದುಕೊಂಡು ಕಂಗಾಲಾದೆವು. ವಾಸಂತಿಗೆ ಸಿಟ್ಟು ಬಂದು ಬಿಟ್ಟಿತೇನೋ. ‘ತಲೆಗಿಲೆ ಕೆಟ್ಟಿದೆಯೇನ್ರೊ ನಿಮಗೆಲ್ಲಾ?’ ಎಂದು ನುಕ್ಕಿಸಳೆ ಹಿಡಿದ ಮಾಸ್ತರನ ಗತ್ತಿನಲ್ಲಿ ಗದರುತ್ತಾಬಂದು ನಿಂತಳು. ನಾವು ಕೂತಲ್ಲೇ ಇನ್ನಷ್ಟು ಮುದುರಿದೆವು.

ಈ ಚಿತ್ರದ ಸಾರ್ಥಕತೆಯ ಬಗ್ಗೆ ನನಗೆ ಭ್ರಮೆಗಳಿಲ್ಲ. ಆದರೆ ನೆನಪಿನಾಳದಿಂದ ಸದ್ಯಕ್ಕೇ, ಇಲ್ಲಿಗೇ ಜಿಗಿದು ನಿಲ್ಲಬಲ್ಲ ರೂಪಕವಾಗಿ ‘ವಾಸಂತಿ’ ನನ್ನನ್ನು ಆವರಿಸಿದ್ದಾಳೆ. ತನ್ನ ದುರಂತದ ಸುದ್ದಿ ಬರೆಸುವ ಆಸೆಯಿಲ್ಲದ ಅವಳು ಇತರರ ಬಗೆಗಿನ ಕಾಳಜಿಯಲ್ಲಿ ಬೆಳೆಯುತ್ತಾಳೆ. ಅವಳ ಹೇಳಲಾರದ ನೋವುಗಳ ಬಗ್ಗೆ ನಾನು ಮಿಡಿಯುತ್ತೇನೆ. ಹೇಳುವುದು ಸಾಧ್ಯವಾಗಲಿಲ್ಲ ಎಂಬ ಕಾರಣದಿಂದಲೇ ಹುಡುಕಾಟವೂ ಮುಂದುವರಿಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X