• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಬ್ಬ ಅಂದ್ರೆ ಹಬ್ಬ ಯುಗಾದಿ ಹಬ್ಬ

By Staff
|
  • ಸುಮಿತ್ರ ಸೊಂಡೆಕೆರೆ, ಕ್ಯಾಲಿಫೋರ್ನಿಯ

ssondekere@yahoo.com

Sumithra Sondekere‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ --ಈ ಪದ್ಯ ನೆನಪಿಗೆ ಬಂದ ತಕ್ಷಣ ನನ್ನ ಮನ ಎಲ್ಲಿಗೋ ಹೊರಟು ಬಿಡುತ್ತದೆ. ಏನೇನೋ ನೆನಪುಗಳು... ವರ್ಷಕ್ಕೊಮ್ಮೆ ಮಾತ್ರ ಸ್ನಾನ ಮಾಡುತ್ತಿದ್ದ ಪಾಲಜ್ಜ, ಹಬ್ಬಕ್ಕೆ ಮಾತ್ರ ಬರುತ್ತಿದ್ದ ತಿಪ್ಪರಾಜನ ಹೆಂಡತಿ, ಚೌಕಭಾರ ಆಡುತ್ತ ಸೋತಮೇಲೆ ಜಗಳವಾಡಿ ಮಾತುಬಿಡುತ್ತಿದ್ದ ಪಕ್ಕದ ಮನೆಯ ಅಜ್ಜಿ ತಾತ ಹೀಗೆ...

ಹೌದು ಆ ನೆನಪುಗಳೆ ಅದ್ಭುತ! ಚಿಕ್ಕವಳಿದ್ದಾಗ ಯುಗಾದಿ ಹಬ್ಬ ಬಂತು ಅಂದ್ರೆ ಏನೋ ಒಂದು ರೀತಿಯ ಸಂತೋಷ, ಹೇಳಲಾರದ ಸಂತೋಷ. ಹಬ್ಬಕ್ಕೆ ಒಂದು ದಿನ ಮೊದಲೇ ಹಬ್ಬದ ಬಗ್ಗೆ ಕನಸು ಕಾಣುತ್ತಿದ್ದೆವು. ಅಮ್ಮ ನಾಳೆ ಮಾಡುವ ಹೋಳಿಗೆ, ಹೊಸ ಬಟ್ಟೆ, ಜೋಕಾಲಿ, ಚೌಕಭಾರ, ಹೀಗೆ... ನಿಜಕ್ಕೂ ಆಗೆಲ್ಲಾ ಹಬ್ಬ ಅಂದ್ರೆ ಎಷ್ಟೊಂದು ಖುಷಿ ಇರುತ್ತಿತ್ತು. ಆ ರೀತಿಯ ಖುಷಿಯನ್ನು ಇಂದು ಕಳೆದುಕೊಂಡಿದ್ದೇವೆ ಅನ್ನಿಸ್ತಾ ಇದೆ.

ಹಬ್ಬದ ಹಿಂದಿನ ರಾತ್ರಿ ನಮಗೆಲ್ಲ ನಿದ್ದೇನೇ ಬರ್ತಾ ಇರಲಿಲ್ಲ. ನಮ್ಮೂರಿನಲ್ಲಿ ನೀರಿಗೆ ಕಷ್ಟವಿದ್ದುದರಿಂದ ಅಪ್ಪ ಮತ್ತು ಅಣ್ಣ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಬೀದಿ ನಲ್ಲಿಯಿಂದ ನೀರು ತುಂಬಿಸುತ್ತಿದ್ದರು. ಅಮ್ಮನೂ ಮೂರಕ್ಕೆ ಎದ್ದು ಸ್ನಾನ ಮುಗಿಸಿ ಅಡುಗೆಗೆ ತೊಡಗುತ್ತಿದ್ದಳು. ನಾನೂ ಕೂಡಾ ಅಮ್ಮನೊಂದಿಗೆ ಎದ್ದು ಅಂಗಳ ಗುಡಿಸಿ- ಸಾರಿಸಿ ರಂಗೋಲಿ ಇಟ್ಟು, ಬಣ್ಣ ತುಂಬಿ ಕುಣಿದಾಡುತ್ತಿದ್ದೆ. ಅಡುಗೆ ಕೆಲಸದಲ್ಲೇ ಮುಳುಗಿ ಹೋಗಿದ್ದ ಅಮ್ಮ ಬಂದು ರಂಗೋಲಿ ನೋಡಿ ಮೆಚ್ಚುಗೆ ಸೂಚಿಸಿದ ಮೇಲೇನೇ ಸಮಧಾನ. ಅಷ್ಟೊತ್ತಿಗಾಗಲೇ ಅಪ್ಪ ಅಣ್ಣ ನೀರು ತುಂಬಿಸಿರುತ್ತಿದ್ದ ರು. ನಂತರ ಅಮ್ಮ ಎಲ್ಲರಿಗೂ ಹರಳೆಣ್ಣೆ ಹಚ್ಚುತ್ತಿದ್ದಳು. ಎಣ್ಣೆ ಹಚ್ಚಿಸಿಕೊಂಡ ಮೇಲೆ ಅಪ್ಪ ಅಣ್ಣ ಬೇವು ಹಾಗೂ ಮಾವು ತರಲು ಹೋಗುತ್ತಿದ್ದರು.

ನಮಗಾದರೂ ಯಾವಾಗ ಹೊಸಬಟ್ಟೆ ಹಾಕಿ ಕೊಳ್ತೀವಿ, ಪೂಜೆ ಎಷ್ಟೊತ್ತಿಗೆ ಮುಗಿಯುತ್ತೆ, ಹೋಳಿಗೆ ಯಾವಾಗ ತಿಂತೀವಿ, ಎಷ್ಟೊತ್ತಿಗೆ ಜೋಕಾಲಿ ಆಡಲು ಹೋಗುತ್ತೇವೆ... ಎನ್ನುವ ಕಾತರ! ಅಮ್ಮ ಬಂದು ಸೀಗೆಕಾಯಿ, ಕಡ್ಲೆಹಿಟ್ಟು ಹಾಕಿ ಚೆನ್ನಾಗೆ ಸ್ನಾನ ಮಾಡಿಸುತ್ತಿದ್ದಳು. ಸ್ನಾನ ಮಾಡಿಕೊಂಡು ಹೋಗಿ ದೇವರಿಗೆ ಕೈ ಮುಗಿದು ಹೊಸಬಟ್ಟೆ ಹಾಕಿಕೊಳ್ಳುತ್ತಿದ್ದೆವು. ಹೊಸ ಬಟ್ಟೆ ಹಾಕಿಕೊಂಡ ಮೇಲೆ ಅರ್ಧ ಹಬ್ಬ ಮುಗಿದಂತೆ.

ಸಾಮಾನ್ಯವಾಗಿ ನಮ್ಮೂರಿನ ಎಲ್ಲರೂ ಹೊಸಬಟ್ಟೆ ತರುತ್ತಿದ್ದದ್ದು ಯುಗಾದಿ ಹಬ್ಬಕ್ಕೇನೆ. ಅದಕ್ಕಾಗಿ ಅಷ್ಟೊಂದು ಖುಶಿಯಾಗುತ್ತಿತ್ತೇನೊ ಗೊತ್ತಿಲ್ಲ. ಎಷ್ಟೇ ಕಷ್ಟವಿದ್ದರೂ ಬಟ್ಟೆ ತಂದೇ ತರುತ್ತಿದ್ದರು. ಮಾವು ಬೇವು ಚಿಗುರಿ ಕಂಗೊಳಿಸುವಂತೆ ನಮ್ಮೂರಿನ ಜನ ಯುಗಾದಿ ಹಬ್ಬಕ್ಕೆ ಹೊಸಬಟ್ಟೆ ಉಟ್ಟುಕೊಂಡು ಕಂಗೊಳಿಸುತ್ತಿದ್ದರು. ನಮಗೆಲ್ಲಾ ಹೊಸ ಬಟ್ಟೆ ತೊಟ್ಟುಕೊಂಡಿರುವುದನ್ನು ಅದೆಷ್ಟುಸಾರಿ ಕನ್ನಡಿಯಲ್ಲಿ ನೋಡಿಕೊಂಡರೂ ಸಮಾಧಾನ ವಾಗುತ್ತಿರಲಿಲ್ಲ. ಈಗ ಬರೀ 10-12 ವರ್ಷಗಳಲ್ಲಿ ಅದೆಷ್ಟೊಂದು ಬದಲಾವಣೆ! ಈಗ ಒಂದು ಡಜನ್‌ ಬಟ್ಟೆ ತೆಗೆದುಕೊಂಡು ಬಂದ್ರೂ ಆ ಖುಷಿ ಬರೊದಿಲ್ಲ. ಯಾಕೆ ಹಾಗೆ ಅಂದ್ರೆ ಉತ್ತರ ಗೊತ್ತಿಲ್ಲ. ಈಗಿನ ಮಕ್ಕಳಿಗಂತೂ ಆ ರೀತಿಯಸಂತೋಷ ಗೊತ್ತೇ ಇಲ್ಲವೇನೊ ಅನ್ನಿಸುತ್ತಿದೆ. ಹಬ್ಬಗಳಿಗೆ ಆಗ ಇದ್ದಂತಹ ಜೀವಂತಿಕೆ ಇಂದು ಇಲ್ಲವಾಗಿದೆ ಎನಿಸುತ್ತಿದೆ.

ಇನ್ನು ಬೇವು ಮಾವನ್ನು ಮೂಟೆ ತುಂಬ ಹೊತ್ತು ತರುತ್ತಿದ್ದರು. ಎಲ್ಲರೂ ಒಟ್ಟಿಗೆ ಕೂಡಿ ಮಾವಿನ ತೋರಣ ಕಟ್ಟುತ್ತಿದ್ದೆವು. ಅಮ್ಮನ ಅಡುಗೆಕೆಲಸ ಮುಗಿದ ಮೇಲೆ ಪೂಜೆ ಮುಗಿಸಿ ಬೇವು-ಬೆಲ್ಲ ತಿಂದು, ಒಬ್ಬಟ್ಟಿನ ಊಟ ಮಾಡಿದ ಮೇಲೆ, ಜೋಕಾಲಿ ಆಡುವ ನೆಪದಲ್ಲಿ ಪಾಲಜ್ಜನನ್ನು ನೋಡಲು ಹೋಗುತ್ತಿದ್ದೆವು. ಈ ಪಾಲಜ್ಜ ಒಬ್ಬ ವೆರಿ ಇಂಟರೆಸ್ಟಿಂಗ್‌ ಪರ್ಸನಾಲಿಟಿ. ವರ್ಷಕ್ಕೆ ಒಂದೇ ಒಂದು ಸಾರಿ ಅದೂ ಯುಗಾದಿ ದಿನ ಮಾತ್ರ ಸ್ನಾನ ಮಾಡುತ್ತಿದ್ದ ಪಾಲಜ್ಜ! ಈ ಯುಗಾದಿಗೆ ಮಾಡಿದರೆ ನಂತರದ ಸ್ನಾನ ಮುಂದಿನ ಯುಗಾದಿಗೇನೆ (ಅಥವಾ ಹಾಗಂತ ಹಿರಿಯರೆಲ್ಲ ಆಡಿಕೊಳ್ತಿದ್ದರಿಂದ ನಾವೂ ನಂಬಿದ್ದೆವೊ ಏನೋ).

ಅವತ್ತು ಹೊಸ ಬಟ್ಟೆ ತೊಟ್ಟುಕೊಂಡು ಮದಲಿಂಗನಂತೆ ಮಿಂಚುತ್ತಿದ್ದ ಅವನನ್ನು ನೋಡಲು ಹುಡುಗರ ಹಿಂಡೇ ಜಮಾಯಿಸುತ್ತಿತ್ತು. ಯುಗಾದಿಯದಿನ ಪಾಲಜ್ಜ ನಮ್ಮೂರಿನ ಎಲ್ಲರಿಗೂ ಆಕರ್ಷಣೆಯಕೇಂದ್ರ ವಾಗಿದ್ದ. ಇನ್ನು ತಿಪ್ಪರಾಜನ ಹೆಂಡತಿ ವಿಚಾರ. ಆಕೆ ಗಂಡನ ಮನೆಗೆ ಬಂದ್ರೆ ಸಾಕು ಯಾವಾಗಲೂ ದೆವ್ವ ಬರುತ್ತಿತ್ತು ಯುಗಾದಿ ಹಬ್ಬವನ್ನು ಹೊರತು ಪಡಿಸಿ. ಯಾಕೆಂದರೆ ತಿಪ್ಪರಾಜ ವರ್ಷಪೂರ್ತಿ ಮೇಕೆ ಕಾದು, ಯುಗಾದಿ ಹಬ್ಬಕ್ಕೆ 2-3 ಮೇಕೆಗಳನ್ನು ಮಾರಿ ಆಕೆಗೆ ಬಟ್ಟೆ ಬರೆ ತಂದು ಕೊಡುತ್ತಿದ್ದ. ಹೊಸ ಬಟ್ಟೆ ಉಟ್ಟುಕೊಂಡು ಚೆನ್ನಾಗಿ ಹಬ್ಬ ಮಾಡಿ ಮತ್ತೆ ತವರು ಮನೆಗೆ ಹೋಗಿಬಿಡುತ್ತಿದ್ದಳು. ಅಕಸ್ಮಾತ್‌ ಅಲ್ಲೇ ಏನಾದ್ರೂ ಇದ್ರೆ ಮತ್ತೆ ಅವಳಿಗೆ ದೆವ್ವ ಬಂದು ಬಿಡುತ್ತಿತ್ತು.

ಇವೆಲ್ಲ ಕತೆಗಳು ಏನೇ ಇರಲಿ, ಹಬ್ಬ ಅಂದ್ರೆ ಹಬ್ಬ ನಮ್ಮೂರಿನ ಎಲ್ಲರಿಗೂ. ಏನೇ ಕಷ್ಟವಿರಲಿ ಹೊಸಬಟ್ಟೆ ತಂದೇ ತರುತ್ತಿದ್ದರು. ಮಳೆ ಬಂದು ಚೆನ್ನಾಗಿ ಬೆಳೆಬಂದರೆ ಆ ವರ್ಷ ಸಕತ್‌ ಹಬ್ಬ. ಮನೆಗಳಿಗೆ ಸುಣ್ಣ ಬಣ್ಣ ಬಳಿಯುತ್ತಿದ್ದರು. ಹಬ್ಬದ ನೆಪದಲ್ಲಾದರೂ ಹಬ್ಬದ ಸಂತೆ ಮಾಡುತ್ತಿದ್ದರು. ಹಬ್ಬದ ಅಡುಗೆ ಮಾಡುತ್ತಿದ್ದರು. ಸಡಗರದಿಂದ ಹಬ್ಬ ಆಚರಿಸುತ್ತಿದ್ದರು. ಜೀವನದಲ್ಲಿ ಬರೀ ಬೇವು ತಿಂದವರು ಈ ಹಬ್ಬದಲ್ಲಿ ಮಾತ್ರ ಬೇವು-ಬೆಲ್ಲ ಒಟ್ಟಿಗೆ ತಿನ್ನುತ್ತಾರೆ. ಎರಡು ಸಮವಾಗಿ ಬಂದರೆ ಹೇಗೊ ಸಹಿಸಿಕೊಳ್ಳಬಹುದು. ಬಯಲುಸೀಮೆಯಾದ ನನ್ನೂರಿಗೆ ಮಳೆ ಕಡಿಮೆ ಬೆಳೆ ಕಡಿಮೆ. ಹಬ್ಬ ಅನ್ನೋದು ಇಲ್ಲದೇ ಇದ್ದಿದ್ದರೇ...? ನಿಜವಾಗಿಯೂ ಇಂತಹ ಎಲ್ಲಾ ಖುಷಿಗಳಿಂದ ಜನ ವಂಚಿತರಾಗಿಬಿಡುತ್ತಿದ್ದರು.

ನಮ್ಮೂರಲ್ಲಿ ಯುಗಾದಿಹಬ್ಬ ಎಲ್ಲಾ ಹಬ್ಬಗಳಿಗಿಂತ ದೊಡ್ಡ ಹಬ್ಬ. ಕೆಲವೊಂದು ಕಡೆ ಎರಡು ದಿನ ಆಚರಿಸಿದರೆ, ನಮ್ಮೂರಲ್ಲಿ ಸರಿ ಸುಮಾರು ಒಂದು ವಾರ ಆಚರಿಸುತ್ತಾರೆ. ಮೊದಲನೆ ದಿನ ಅಂದರೆ ಅಮವಾಸೆಯ ದಿನ ದೋಸೆ ಹಬ್ಬ. ಅವತ್ತು ಎಲ್ಲರ ಮನೆಯಲ್ಲಿಯೂ ದೋಸೆ...ದೋಸೆ. ನಿತ್ಯಾವಳಿಗೆ ದೋಸೆ ಮಾಡುವುದು ಕೂಡಾ ಅಪರೂಪವಾಗಿದ್ದರೂ, ಅವತ್ತು ಮಾತ್ರ ಎಲ್ಲರ ಮನೆಯಲ್ಲಿಯೂ ದೋಸೆ ಮಾಡಿ ಅಮವಾಸ್ಯೆ ಪೂಜೆ ಮಾಡುತ್ತಿದ್ದರು. ಈಗ ಬಿಡಿ ಕಾಲ ಬದಲಾಗಿದೆ. ಮೊದಲಿನ ಹಾಗಿಲ್ಲ, ಎಲ್ಲಾ ಅಡುಗೆಗಳನ್ನು ಮಾಡುತ್ತಾರೆ. ಎರಡನೆಯದಿನ ಬೇವು ಬೆಲ್ಲ ತಿನ್ನುವ ಹಬ್ಬ. ಇದು ಮುಖ್ಯವಾದ ದಿನ. ನಂತರ ಚಂದ್ರನ ನೋಡುವ ಹಬ್ಬ. ಸಾಯಂಕಾಲ ವಾದ ತಕ್ಷಣ ಪುಟ್ಟ ಮಕ್ಕಳಿಂದ ಹಿಡಿದು ಮುದುಕರ ವರೆಗೆ ಹೊಸ ಬಟ್ಟೆ ತೊಟ್ಟುಕೊಂಡು, ಹೆಣ್ಣು ಮಕ್ಕಳು ತಲೆ ತುಂಬಾ ಹೂ ಮುಡಿದು ಅಲಂಕಾರ ಮಾಡಿಕೊಂಡು ಓಡಾಡುತ್ತಿದ್ದರೆ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ.

ಚಂದ್ರನ ದರ್ಶನ ಪಡೆದು ಪೂಜೆ ಮಾಡಿ ಊರಿನಲ್ಲಿರುವ ಎಲ್ಲಾ ದೇವಸ್ಥಾನಗಳಿಗೂ ಹೋಗಿಬರುತ್ತಿದ್ದೆವು. ನಂತರ ಚಂದ್ರನ ನೋಡಿದ್ರಾ ಎಂದು ಎಲ್ಲರಲ್ಲಿಯೂ ಕೇಳುವುದು. ದೊಡ್ಡವರ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಳ್ಳುವುದು. ಅವರು ಮನಃ ಪೂರ್ವಕವಾಗಿ ಆಶೀರ್ವಾದ ಮಾಡುತ್ತಾರೊ ಇಲ್ಲವೊ, ಕಾಲಿಗೆ ಬೀಳುವಾಗ ಭಕ್ತಿ ಇರುತ್ತದೊ ಇಲ್ಲವೊ ಗೊತ್ತಿಲ್ಲ. ಮೂರನೆಯ ದಿನ ‘ವರ್ಷದ ತಡಕು’ ಅಂತ. ಚಿತ್ರದುರ್ಗದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಅವತ್ತು ಮೆಣಸಿನಕಾಯಿ ಬಜ್ಜಿ ಮಂಡಕ್ಕಿ ಉಸಲಿ (ಕಳ್ಳೆಪುರಿ ಉಪ್ಪಿಟ್ಟು) ಮಾಡುತ್ತಾರೆ. ಮರು ದಿವಸ ನೀರು ಎರಚುವ ಹಬ್ಬ. ದೊಡ್ಡವರು, ಮುದುಕರು, ಚಿಕ್ಕಮಕ್ಕಳವರೆಗೆ ಒಬ್ಬರಿಗೊಬ್ಬರು ನೀರನ್ನು ಎರಚಿಕೊಳ್ಳುತ್ತಾ ಸಂತೋಷ ದಿಂದ ಕಳೆಯುವ ದಿನ. ಗಂಡಸರು ಇಸ್ಪೀಟ್‌ ಆಡುತ್ತಾರೆ. ಈ ಹಬ್ಬದಲ್ಲಿ ಮಾತ್ರ ಇಸ್ಪೀಟ್‌ ಆಟಕ್ಕೆ ನಿಷೇಧವಿಲ್ಲ. ಹೀಗೆ ನಾಲ್ಕು ದಿನಗಳ ಸತತ ಗೌಜಿಯ ನಂತರ ಯುಗಾದಿ ಹಬ್ಬಕ್ಕೆ ತೆರೆ ಬೀಳುತ್ತದೆ. ಮತ್ತೆ ಅದೇ ರುಟೀನ್‌ ಲೈಫ್‌. ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದು ಎನ್ನುವ ಹಾಡಿಗೆ ಧ್ವನಿಗೂಡಿಸುತ್ತಾರೆ ಜನ.

ಇಷ್ಟೆಲ್ಲಾ ನೆನಪುಗಳೊಂದಿಗೆ ಈ ವರ್ಷ ನಾನೀಗ ನಮ್ಮೂರಲ್ಲಿರದೆ ಇಲ್ಲಿ ದೂರದ ಅಮೆರಿಕದಲ್ಲಿ ಇರುವುದರಿಂದ ಹೊಸತರದ ಹಬ್ಬ. ತೋರಣ ಕಟ್ಟಲಿಕ್ಕೆ ಇಲ್ಲಿ ಮಾವಿನ ಎಲೆಗಳಿಲ್ಲ. ಬೇವು ಬೆಲ್ಲ ಕಲೆಸಲಿಕ್ಕೆ ಬೇವೂ ಇಲ್ಲ. ತರಬೇಕೆಂದರೂ ಇಲ್ಲಿ ಸಿಗುವುದಿಲ್ಲ. ಇನ್ನು, ಇಲ್ಲಿರುವವರು ಬೇವು ಬೆಲ್ಲ ಹೇಗೆ ಮಾಡ್ತಾರೆ ಎಂದು ತಿಳಿದು ಕೊಳ್ಳುವ ಕುತೂಹಲವುಂಟಾಗಿ ನನಗೆ ಗೊತ್ತಿದ್ದ ಕೆಲವರಿಗೆ ಪೋನಾಯಿಸಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರಿಸಿದರು. ಇಲ್ಲಿ ಬೇವಿನ ಎಣ್ಣೆ ಸಿಗುತ್ತದೆ ಅದನ್ನು ಬೆಲ್ಲದ ಜೊತೆ ಮಿಕ್ಸ್‌ ಮಾಡಿ ನೈವೇದ್ಯ ಮಾಡುತ್ತೇವೆ ಅಂತ ಒಬ್ಬರು ಹೇಳಿದರೆ, ಇಂಡಿಯಾಗೆ ಹೋದಾಗ ಬೇವಿನ ಎಲೆಗಳನ್ನು ತಂದಿದ್ದೆ ಅದರ ಜೊತೆ ಮಾಡ್ತೀನಿ ಅಂದರು ಇನ್ನೊಬ್ಬರು. ನಾನೂ ಕೂಡಾ ಇದೇ ರೀತಿ ಯಾವುದಾದರೂ ತತ್ವವನ್ನು ಉಪಯೋಗಿಸಿ ಬೇವು ಬೆಲ್ಲ ಮಾಡಲು ನಿರ್ಧರಿಸಿದ್ದೇನೆ.

ಏನೇ ಅನ್ನಿ ಹಬ್ಬ ಅದು ನಮ್ಮೂರಿನಲ್ಲೇ ಚೆಂದ ಅಲ್ವಾ? ಅಂದ ಹಾಗೆ ನಾಳಿದ್ದು ಶನಿವಾರ ಬೆಳಿಗ್ಗೆ ಹಬ್ಬ ಮಾಡುವ ಎಲ್ಲರಿಗೂ ಕೈ ತುಂಬಾ ಕೆಲಸವಿದೆ. ಬೆಳಿಗ್ಗೆಯಿಂದ ಉಪವಾಸವಿದ್ದು ಎಣ್ಣೆ ಸ್ನಾನ ಮಾಡಿ, ಒಬ್ಬಟ್ಟು, ಹಬ್ಬದ ಅಡುಗೆ ಮಾಡಬೇಕು. ಹೊಸಬಟ್ಟೆ ತೊಟ್ಟುಕೊಂಡು ಪೂಜೆ ಮಾಡಬೇಕು. ಈ ಸಾರಿಯಹಬ್ಬ ವೀಕೆಂಡ್‌ನಲ್ಲೇ ಬಂದಿರೋದ್ರಿಂದ ಪರವಾಗಿಲ್ಲ, ಆಫೀಸುಗಳಿಗೆ ರಜೆಇರುತ್ತದೆ ನಿಶ್ಚಿಂತೆಯಿಂದ ಹಬ್ಬ ಆಚರಿಸ ಬಹುದು. ಮತ್ತೆ ಹಬ್ಬದ ದಿನವಾದರೂ ಯಾರಿಗೂ ಆಫೀಸಿಂದ ತುರ್ತುಕರೆ ಬರದೆ ಇರಲಿ ಅಂತ ದೇವರಲ್ಲಿ ಪ್ರಾರ್ಥಿಸಿ ಕೊಳ್ಳುತ್ತೇನೆ! ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಮುಖಪುಟ / ಯುಗಾದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more