ಜಾಗತೀಕರಣ ಯುಗದಲ್ಲಿ ನಮ್ಮತನದ ಯುಗಾದಿ

*ವಿಶಾಖ ಎನ್‌.

Natures beautyಚೆಲುವಿನ ಖನಿಯ ಪುನರುತ್ಥಾನ. ನಿಸರ್ಗದ ಇಂಚಿಂಚಲ್ಲೂ ಚೇತನ ಸಂಚಾರ. ಖಗ ಮಿಗಗಳಿಗೆ ಇದ್ದಲ್ಲೇ ಹೊಸ ಪ್ರಪಂಚ ಕಂಡ ಖುಷಿ. ಖುರಪುಟದ ಸದ್ದಿಗೂ ಹೊಸ ಲಯ. ನೊಂದು- ಬೆಂದು ಮುಪ್ಪನಪ್ಪಿ , ಮತ್ತೆ ತುಂಟತನದ ಬಾಲನಂತಾಗುವ ಪ್ರಕೃತಿಯ ಕಾಣುವ ಜೀವಿಗಳ ಹೃದಯದಲ್ಲಿ ಪುಳಕ. ಹಬ್ಬಕ್ಕೆ, ಆಚರಣೆಗೆ ಇದಕ್ಕಿಂತ ವಿಶೇಷ ಸಮಯ ಇನ್ನಾವುದೂ ಸಿಗಲಾರದು. ಮನುಷ್ಯನೂ ಮಾನಸಿಕವಾಗಿ ಹೊಸ ಹುಟ್ಟನ್ನು ಪಡೆಯಲು ಹುಟ್ಟು ಹಾಕಿದ- ಯುಗಾದಿ.

ಈ ಹಬ್ಬಕ್ಕೆ ಪೌರಾಣಿಕವಾಗಿ ಹತ್ತಾರು ಕಾರಣಗಳಿರಬಹುದು. ಬ್ರಹ್ಮ ಸೃಷ್ಟಿ ಕ್ರಿಯೆ ಪ್ರಾರಂಭಿಸಿದ ದಿನವಿದು, ವನವಾಸಾನಂತರ ಶ್ರೀರಾಮ ಅಯೋಧ್ಯೆಯಲ್ಲಿ ಮತ್ತೆ ಆಡಳಿತ ಶುರು ಮಾಡಿದ್ದು ಇದೇ ಚೌತಿಯ ದಿನ... ಹೀಗೇ ಮನೆಯಲ್ಲಿನ ಅಜ್ಜ- ಅಜ್ಜಿ ಮನದಲ್ಲಿರುವ ಕಥಾ ಸರಕು ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ನೀವೇನಾದರೂ ನಾಸ್ತಿಕರಾದರೆ ಇವನ್ನೆಲ್ಲಾ ಬೋಗಸ್‌ ಅನ್ನಬಹುದು. ಆದರೆ ಯುಗಾದಿಯ ಆಸುಪಾಸಿನ ದಿನಗಳೇ ಮನಕ್ಕೆ ಮುದ ನೀಡುತ್ತವೆ ಅನ್ನೋದನ್ನ ಒಪ್ಪದವನು ಅರಸಿಕ.

ಕಾಂಕ್ರೀಟ್‌ ಕಾಡಿನ ಎಷ್ಟೋ ಮಂದಿಗೆ ಯುಗಾದಿಯೂ ಮತ್ತಾವುದೋ ಹಬ್ಬದಂತೆ ಬಂದು ಹೋಗಿಬಿಡುವ ಒಂದು ಸಾಂಪ್ರದಾಯಿಕ ಆಚರಣೆಯಾಗಬಹುದು. ರಜೆಗೆಂದು ಮಲೆನಾಡಿಗೋ, ಅಜ್ಜಿ ಊರಿಗೋ ಹೋಗುವ ಮಕ್ಕಳೇ ಯುಗಾದಿಯನ್ನು ಅಕ್ಷರಶಃ ಯುಗಾದಿಯೆಂದು ಗುರ್ತಿಸುತ್ತವೆ. ಯಾಕೆಂದರೆ ಯಾಂತ್ರಿಕ ತೊಳಲಾಟದಲ್ಲಿ ಮನೆ ಮುಂದಿನ ಗುಲಾಬಿ ಗಿಡವನ್ನೂ ನೋಡದ ಮಗು ಒಮ್ಮೆಲೇ ಕಣ್ಣ ಚುಚ್ಚುವ ಹಸಿರ ಕಂಡರೆ ಡೈರಿಮಿಲ್ಕು, ಪಿಡ್ಜಾ ಎಲ್ಲಾ ಅದರ ಮನಸ್ಸಿಂದ ಓಡಿಹೋಗುತ್ತದೆ; ಕನಿಷ್ಠ ಆ ಕ್ಷಣಕ್ಕಾದರೂ.

ಒಂದೊಂದು ಹಬ್ಬವನ್ನೂ ನಗರ ಮಂದಿ ಈ ಹೊತ್ತು ಆಚರಿಸುತ್ತಿರುವುದನ್ನು ಕಂಡರೆ, ಅವರು ಅದರ ಅನುಭಾವಿಗಳೇ ಆಗಿರುವುದಿಲ್ಲ ಅನ್ನಿಸುತ್ತದೆ. ಸದ್ಯಕ್ಕೇನೋ ಕಥೆ ಹೇಳಲು ತಾತ- ಅಜ್ಜಿಯಾದರೂ ಇದ್ದಾರೆ. ಮುಂದೆ?

ರಜೆಗೆ ಯಾವುದೋ ಮಲೆನಾಡಿಗೆ ಹೋದಾಗ ಟೇಪ್‌ರೆಕಾರ್ಡ್‌ನಲ್ಲಿ ಖಾಲಿ ಕ್ಯಾಸೆಟ್‌ ಹಾಕಿ, ಹಕ್ಕಿಗಳಿಂಚರ, ತೊರೆಗಳ ಝುಳುಝುಳು ರೆಕಾರ್ಡ್‌ ಮಾಡಿಕೊಳ್ಳುವುದು ಕಂಡರೆ ಭವಿಷ್ಯತ್ತು ಆತಂಕ ಹುಟ್ಟಿಸುತ್ತದೆ.

ಇವೆಲ್ಲಾ ನಮ್ಮ ಸಂಸ್ಕೃತಿಯನ್ನು ಹಂತಹಂತವಾಗಿ ನುಂಗಿಕೊಳ್ಳುತ್ತಿರುವ ಜಾಗತೀಕರಣದ ಭೂತದ ಕೊಡುಗೆಗಳು. ವರ್ಷದಡುಕಿನ ದಿನ ನಮ್ಮ ರೈತ ಪಕ್ಕದಂಗಡಿಯಲ್ಲಿ ಸಾಲ ಸೋಲ ಮಾಡಿ ಒಬ್ಬಟ್ಟು ಮಾಡಬಹುದು. ಆದರೆ ಅದರಲ್ಲಿ ವಿಷ ಬೆರೆಸುವನೋ, ಇಲ್ಲ ಖುಷಿಯಿಂದ ತಿನ್ನುವನೋ ಎಂಬುದನ್ನು ಕೃಷ್ಣ ಸರ್ಕಾರ ಆವತ್ತು ಹೊರಡಿಸಲಿರುವ ಬಜೆಟ್ಟು ಬಹುತೇಕ ತೀರ್ಮಾನಿಸಲಿದೆ.

ಇವ್ಯಾವ ಅವಘಡಗಳ ಸುಳಿವೂ ಇಲ್ಲದ ಪಟ್ಟಣದ ಮಗು, ‘ಅಮ್ಮಾ, ಭತ್ತ ಮರದಲ್ಲಿ ಬಿಡುತ್ತ’ ಅಂತ ಕೇಳುವಾಗ ಕರಳು ಚುರ್ರೆನ್ನುತ್ತದೆ. ನಿಮ್ಮ ಮಗುವನ್ನಾದರೂ ಇಂಥಾ ಪ್ರಶ್ನೆ ಕೇಳದಿರುವಂತೆ ಬೆಳೆಸಿ.

ಮುಖಪುಟ / ಯುಗಾದಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+