Ugadi 2023: ಯುಗಾದಿ ಬೇವು-ಬೆಲ್ಲವನ್ನೇ ಏಕೆ ಸೇವಿಸಬೇಕು? ಇದನ್ನು ತಯಾರಿಸುವುದು ಹೇಗೆ?
ಸಂಕ್ರಾಂತಿ ಹಬ್ಬವೆಂದರೆ ಹೇಗೆ ಎಳ್ಳು ಬೆಲ್ಲವೋ ಹಾಗೇ ಯುಗಾದಿ ಹಬ್ಬಕ್ಕೂ ಬೇವು ಬೆಲ್ಲ ಸವಿಯುವುದು, ಹಂಚುವುದು ರೂಢಿ. ಬೇವು ಬೆಲ್ಲ ಎಂದರೆ ಸಿಹಿ ಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬುದಕ್ಕೆ ಸಂಕೇತ ಎನ್ನುವುದು ಎಲ್ಲರಿಗೂ ತಿಳಿದಿದೆ. ಯುಗಾದಿಯ ದಿನ ಬೇವು ಬೆಲ್ಲ
ಹಿಂದೂಗಳ ಹೊಸ ವರ್ಷವನ್ನು ಸೂಚಿಸುವ ಹಬ್ಬವೇ ಯುಗಾದಿ. ಹೊಸ ವರುಷಕ್ಕೆ ಯುಗಾದಿ ಹೊಸತನವನ್ನು ಹೊತ್ತು ತರುತ್ತದೆ ಎನ್ನುವುದು ಜನರ ನಂಬಿಕೆ. ಮರಗಳಲ್ಲಿ ಹೊಸ ಚಿಗುರು ಮೂಡುವ ಈ ಕಾಲದಲ್ಲಿ ಹೊಸ ಫಲಕ್ಕೆ ಮರಗಳು ಹೂವಿನಿಂದ ಮೈ ತುಂಬಿ ನಿಂತಿರುವುದು ಎಲ್ಲೆಡೆ ಕಾಣ ಸಿಗುತ್ತದೆ.
ಯುಗಾದಿಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಸದ ಮೊದಲ ದಿನದಂದು ಹಿಂದೂಗಳ ಮೊದಲ ಹಬ್ಬ, ಪವಿತ್ರವಾದ ಹಬ್ಬ, ಸಂಭ್ರಮದ ಹಬ್ಬವಾಗಿ ಆಚರಿಸಲಾಗುತ್ತದೆ. ಯುಗಾದಿಯಲ್ಲಿ ಯುಗ ಎಂದರೆ ಅವಧಿ ಮತ್ತು ಆದಿ ಎಂದರೆ ಆರಂಭ ಎನ್ನುವ ಪದಗಳಿದ್ದು, ಯುಗಾದಿ ಎಂದರೆ ಹೊಸ ಯುಗದ ಆರಂಭ ಎಂದರ್ಥವಾಗಿದೆ.

ಹೊಸ ವರ್ಷವು ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲಿ ಎಂದು ಯುಗಾದಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಬ್ಬದ ದಿನದ ಮುಂಜಾನೆಯಿಂದಲೇ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ. ಮನೆಯನ್ನು ಹೂವುಗಳಿಂದ ಅಲಂಕರಿಸಿ, ಮಾವಿನ ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ಹೊಸ ಬಟ್ಟೆ, ಹಬ್ಬದೂಟ ಹೀಗೆ ಯುಗಾದಿ ಸಂಭ್ರಮವೆಂದರೆ ಒಂದೇ ಎರಡೇ.
ಇನ್ನು ಮುಖ್ಯವಾಗಿ ಸಂಕ್ರಾಂತಿ ಹಬ್ಬವೆಂದರೆ ಹೇಗೆ ಎಳ್ಳು ಬೆಲ್ಲವೋ ಹಾಗೇ ಯುಗಾದಿ ಹಬ್ಬಕ್ಕೂ ಬೇವು ಬೆಲ್ಲ ಸವಿಯುವುದು, ಹಂಚುವುದು ರೂಢಿ. ಬೇವು ಬೆಲ್ಲ ಎಂದರೆ ಸಿಹಿ ಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬುದಕ್ಕೆ ಸಂಕೇತ ಎನ್ನುವುದು ಎಲ್ಲರಿಗೂ ತಿಳಿದಿದೆ. ಯುಗಾದಿಯ ದಿನ ಬೇವು ಬೆಲ್ಲ ಏಕೆ ಸೇವಿಸಬೇಕು, ತಯಾರಿಸುವ ವಿಧಾನವೇನು? ಈ ಬಗ್ಗೆ ವಿವರವಾಗಿ ತಿಳಿಯೋಣ.

ಯುಗಾದಿ ಬೇವು ಬೆಲ್ಲ ತಯಾರಿಸುವುದು ಹೇಗೆ?
ಯುಗಾದಿ ಹಬ್ಬಕ್ಕೆ ಬೇವು ಬೆಲ್ಲ ತಯಾರಿಸಲು ಹುರಿಗಡಲೆ, ಬೆಲ್ಲ, ಒಣ ಕೊಬ್ಬರಿ ತುರಿ, ಬೇವಿನ ಹೂವಿನ ದಳಗಳು ಬೇಕಾಗುತ್ತದೆ. ಹುರಿಗಡಲೆಯನ್ನು ಹಾಗೂ ಬೆಲ್ಲವನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು. ಒಣಕೊಬ್ಬರಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು. ಬಳಿಕ ಪುಡಿಕೊಂಡ ಹುರಿಗಡಲೆಗೆ ಬೆಲ್ಲವನ್ನು, ಬೇವಿನ ಎಲೆಯನ್ನು ಕೊಬ್ಬರಿ ತುರಿಯನ್ನು ಹಾಕಿ ಮಿಶ್ರಣ ಮಾಡಬೇಕು. ಬೇವಿನ ಎಲೆ ಬದಲು ಬೇವಿನ ಚಿಗುರನ್ನು ಹೂವಿನ ದಳವನ್ನು ಸಹ ಬಳಸಬಹುದಾಗಿದೆ.
ಯುಗಾದಿ ಪಚಡಿ ತಯಾರಿಸುವುದು ಹೇಗೆ?
ಇನ್ನು ಯುಗಾದಿಗೆ ಕೆಲವು ಭಾಗಳಲ್ಲಿ ಪಚಡಿ ಎನ್ನುವ ಖಾದ್ಯವನ್ನು ಸಹ ಮಾಡಲಾಗುತ್ತದೆ. ಬೇವಿನ ಹೂಗಳು, ಮಾವಿನಕಾಯಿ, ಹುಣಸೆಹಣ್ಣು ಬಳಸಿಕೊಂಡು ಪಚಡಿಯನ್ನು ತಯಾರು ಮಾಡಲಾಗುತ್ತದೆ. ಮೊದಲಿಗೆ 1 ಟೀಚಮಚ ಆಗುವಷ್ಟು ಬೇವಿನ ಹೂಗಳನ್ನು ತೆಗೆದುಕೊಳ್ಳಿ. ಅದಕ್ಕೆ 1 ಟೇಬಲ್ ಚಮಚ ತುರಿದ ಹಸಿ ಮಾವಿನಕಾಯಿ, ಒಂದು ಸಣ್ಣ ಗಾತ್ರದ ಹುಣಸೆಹಣ್ಣು ಕಾಲು ಟೀ ಚಮಚ ಉಪ್ಪು ಅರ್ಧ ಟೀ ಚಮಚ ಕೆಂಪು ಮೆಣಸಿನಕಾಯಿ ಪುಡಿ ಅಥವಾ ಕಪ್ಪು ಕಾಳುಮೆಣಸಿನಪುಡಿ, ಎರಡು ಟೇಬಲ್ ಚಮಚ ಬೆಲ್ಲ ಸೇರಿಸಿ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿದರೆ ಯುಗಾದಿ ಹಬ್ಬದ ಪಚಡಿ ತಯಾರಾಗುತ್ತದೆ.

ಯುಗಾದಿ ಬೇವು ಬೆಲ್ಲದ ಮಹತ್ವ
ನಾವು ಯುಗಾದಿಯಂದು ಸೇವಿಸುವ ಬೇವು - ಬೆಲ್ಲವು ನಮ್ಮ ಜೀವನದ ಸುಖ-ದುಃಖವನ್ನು, ಸೋಲು - ಗೆಲುವನ್ನು ಸೂಚಿಸುತ್ತದೆ. ಬೇವು - ಬೆಲ್ಲದ ಸಿಹಿ ಮತ್ತು ಕಹಿಯ ಆಸ್ವಾದದಂತೆ ನಮ್ಮ ಜೀವನವೂ ಏರಿಳಿತ ನೋವು ನಲಿವುಗಳಿಂದ ತುಂಬಿರುತ್ತದೆ ಎನ್ನುವ ಅರ್ಥವವನ್ನು ನೀಡುತ್ತದೆ.
ಯುಗಾದಿ ಹಬ್ಬದ ದಿನ ಬೇವು ಬೆಲ್ಲವು ಸಂಪ್ರದಾಯದ ಪ್ರಕಾರ ಸವಿದರೂ ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು , ಔಷಧಿ ಉಪಯುಕ್ತ ಸಸ್ಯವಾಗಿದೆ. ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ಬೆಲ್ಲವೂ ಖನಿಜಾಂಶವನ್ನು ಹೊಂದಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.












Click it and Unblock the Notifications