ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀ ಕೃಷ್ಣ ಜಯಂತಿಯಂದು ಪೂಜೆ ಮಾಡುವುದು ಹೇಗೆ?

By ವಿಷ್ಣುದಾಸ ನಾಗೇಂದ್ರಾಚಾರ್ಯ
|
Google Oneindia Kannada News

ಶ್ರೀಕೃಷ್ಣ ಜಯಂತಿಯಂದು ಬೆಳಗಿನಿಂದ ಸಂಜೆಯ ವರೆಗೆ ಮೂರು ಬಾರಿ ಸ್ನಾನವನ್ನು ಮಾಡಿ, ಪೂಜೆಗೆ ಅಣಿಗೊಳ್ಳಬೇಕಾದ ಕ್ರಮದ ಕುರಿತಾಗಿ ಸಂಪೂರ್ಣ ಜ್ಞಾನ ನೀಡಲಾಗಿದೆ. ಇದು ರಾತ್ರಿ ಪೂಜೆಯ ಬೆಳಕು ಚೆಲ್ಲುತ್ತದೆ. ರಾತ್ರಿ ಸುಮಾರು ಒಂಭತ್ತೂವರೆ - ಹತ್ತು ಗಂಟೆಯ ವೇಳೆಗೆ ಮತ್ತೊಮ್ಮೆ ಸ್ನಾನವನ್ನು ಮಾಡಬೇಕು. ಶಾಸ್ತ್ರದಲ್ಲಿ ರಾತ್ರಿಯ ಪೂಜೆ ನಿಷಿದ್ಧ. ಆದರೆ, ಶ್ರೀಕೃಷ್ಣಜನ್ಮಾಷ್ಟಮಿಯಂದು ಮಾತ್ರ ರಾತ್ರಿಯಲ್ಲಿಯೇ ಷೋಡಶೋಪಚಾರ ಪೂಜೆ.

ಈ ಮಾತು ಭವಿಷ್ಯಪುರಾಣದಲ್ಲಿ ಸ್ಪಷ್ಟವಾಗಿ ಬಂದಿದೆ -

ತ್ರಿಕಾಲಂ ಪೂಜಯೇದ್ ದೇವಂ ದಿವಾರಾತ್ರೌ ವಿಶೇಷತಃ I
ಅರ್ಧರಾತ್ರಾವಪಿ ತಥಾ ಪುಷ್ಪೈರ್ನಾನಾವಿಧೈರಪಿ II

ಜನ್ಮಾಷ್ಟಮಿಯಂದು ಮೂರು ಕಾಲದಲ್ಲಿಯೂ ಸ್ನಾನ ಮಾಡಿ ಪರಮಾತ್ಮನನ್ನು ಮೆಚ್ಚಿಸಬೇಕು. ಅರ್ಧರಾತ್ರಿಯಲ್ಲಿ ವಿಶೇಷವಾಗಿ ಅಂದರೆ ಮಹಾಪೂಜೆಯನ್ನು ಸಲ್ಲಿಸಬೇಕು. ಶ್ರೀ ಮಧ್ವಾನುಜಾಚಾರ್ಯರೂ ಸಹ ಸಂನ್ಯಾಸಪದ್ಧತಿಯಲ್ಲಿ ಈ ಮಾತನ್ನು ತಿಳಿಸುತ್ತಾರೆ - "ಉಪೋಷ್ಯ ಮಧ್ಯರಾತ್ರೇ ಚ ಪೂಜಯೇನ್ನಂದನಂದನಮ್ - ಕೃಷ್ಣಾಷ್ಟಮಿಯಂದು ಉಪವಾಸ ಮಾಡಿ ಮಧ್ಯರಾತ್ರಿಯಲ್ಲಿಯೇ ನಂದನ ಕಂದನನ್ನು ಪೂಜಿಸಬೇಕು"[ಕೃಷ್ಣಜನ್ಮಾಷ್ಟಮಿಯಂದು ಮಾಡಬೇಕಾದ ಸಂಕಲ್ಪ, ಸಿದ್ಧತೆ]

This article give some information about Night Worship of Krishna Janmashtami

ಹೀಗೆ, ಮಧ್ಯರಾತ್ರಿಯ ಪೂಜೆ ನಿಷಿದ್ಧವಾಗಿದ್ದರೂ, ಶ್ರೀಕೃಷ್ಣ ಹುಟ್ಟಿದ ಸಮಯ ಎನ್ನುವದಕ್ಕಾಗಿ ಕೃಷ್ಣಾಷ್ಟಮಿಯಂದು ಮಧ್ಯರಾತ್ರಿಯಲ್ಲಿಯೇ ಪೂಜೆ ವಿಹಿತ. ಮಧ್ಯರಾತ್ರಿಯಲ್ಲಿ ಸ್ನಾನ ನಿಷಿದ್ಧವಾಗಿದ್ದರೂ, ಮಧ್ಯರಾತ್ರಿ ಗ್ರಹಣವಿದ್ದಾಗ ಸ್ನಾನ ಮಾಡುವಂತೆ.

ರಾತ್ರಿಯಲ್ಲಿ ಮೇಲೆ ಹೇಳಿದಂತೆ ಗಂಡಸರು ಮತ್ತೊಮ್ಮೆ ಸ್ನಾನ ಮಾಡಿ ಪೂಜೆಗೆ ಅಣಿಯಾಗಬೇಕು. ನಮ್ಮ ಉದ್ದಾರಕ್ಕಾಗಿ ಅವತರಿಸಿ ಬಂದ ಆ ಪರಬ್ರಹ್ಮನನ್ನು ಇಡಿಯ ಜೀವದ ಭಕ್ತಿಯಿಂದ ಆರಾಧಿಸಬೇಕು. ಪರಮಾತ್ಮನಿಗೆ ಷೋಡಶ ಉಪಚಾರಗಳನ್ನು, ಪಂಚಾಮೃತವನ್ನು, ನವನೀತವನ್ನು, ಭಕ್ತಪೂರ್ಣ ನಮಸ್ಕಾರಗಳನ್ನು ಸಮರ್ಪಿಸಿ ದೇವರನ್ನು ಭುಜಂಗಿಸಿದ ನಂತರ ಮಥುರಾ ವೃಂದಾವನಗಳನ್ನು ನೆನೆದು ಬೆಳಿಗ್ಗೆ ಮಾಡಿಟ್ಟಿರುವ ವಸುದೇವ ದೇವಕೀ ಮುಂತಾದ ಪ್ರತಿಮೆಗಳನ್ನು ಅರ್ಚಿಸಬೇಕು.

ನಮ್ಮ ಪ್ರತೀದಿವಸದ ಪೂಜೆಯ ಕ್ರಮವಿರುವಂತೆಯೇ ಕೃಷ್ಣಾಷ್ಟಮಿಯ ಪೂಜೆಯೂ ಇರುತ್ತದೆ. ಕೃಷ್ಣಾಷ್ಟಮಿಯಂದು ವಿಶೇಷವಾಗಿ ಪಂಚಾಮೃತದ ಅಭಿಷೇಕವನ್ನು ಮಾಡಬೇಕು. ಮೊಸರಿನ ವ್ರತ ನಡೆಯುತ್ತಿರುವದರಿಂದ ಬೆಣ್ಣೆ ತೆಗೆದ ಮಜ್ಜಿಗೆಯನ್ನು ಮೊಸರಿನ ಸ್ಥಾನದಲ್ಲಿ ಅರ್ಪಿಸಬೇಕು. ಬೆಣ್ಣೆಯನ್ನೂ ಅರ್ಪಿಸಬೇಕು. ಈ ದಿವಸ ವಿಶೇಷವಾಗಿ ಗಂಧೋದಕವನ್ನು ಸಮರ್ಪಿಸಬೇಕು.

ಆ ನಂತರ ತುಳಸಿಪತ್ರಗಳಿಂದ, ವಿವಿಧ ರೀತಿಯ ಶುದ್ಧ ಪುಷ್ಪಗಳಿಂದ, ಗರಿಕೆಗಳಿಂದ ಬಿಲ್ವಪತ್ರಗಳಿಂದ ಶ್ರೀಕೃಷ್ಣನನ್ನು ಅರ್ಚಿಸಬೇಕು. ಅರ್ಚನೆ ಮಾಡಬೇಕಾದರೆ,ಯಜ್ಞಾಯ ಯಜ್ಞಪತಯೇ ಯಜ್ಞೇಶ್ವರಾಯ ಯಜ್ಞಸಂಭವಾಯ ಶ್ರೀ ಗೋವಿಂದಾಯ ನಮೋನಮಃ ಎಂಬ ಪರಮಮಂಗಳ ಮಂತ್ರವನ್ನು ಪಠಿಸಬೇಕು.

ಯಜ್ಞಾಯ - ಸಮಸ್ತಯಜ್ಞಗಳನ್ನು ಭಕ್ತರಿಂದ ಸ್ವೀಕರಿಸುವ ಯಜ್ಞನಾಮಕ ಭಗವಂತನಿಗೆ, ಯಜ್ಞಪತಯೇ - ಭಕ್ತರು ಮಾಡುವ ಸಮಸ್ತ ಯಜ್ಞಗಳ ಒಡೆಯನಾದವನಿಗೆ ಯಜ್ಞೇಶ್ವರಾಯ - ಅಂತರ್ಯಾಮಿಯಾಗಿದ್ದು ನಮ್ಮಿಂದ ಯಜ್ಞಗಳನ್ನು ಮಾಡಿಸಿ, ಯಜ್ಞದಲ್ಲಿದ್ದು ಯಜ್ಞವನ್ನು ನಿಯಮಿಸಿ, ಯಜ್ಞದ ಫಲವನ್ನು ಕರುಣಿಸುವ ಯಜ್ಞೇಶ್ವರನಿಗೆ, ಯಜ್ಞಸಂಭವಾಯ - ಜಪಯಜ್ಞ, ಜ್ಞಾನಯಜ್ಞ, ದ್ರವ್ಯಯಜ್ಞ ಮುಂತಾದ ಸಮಸ್ತ ಯಜ್ಞಗಳಿಂದ ದೊರೆಯುವ ಶ್ರೀ ಗೋವಿಂದಾಯ - ಗೋಪಾಲಕನಾದ ಶ್ರೀಕೃಷ್ಣನಿಗೆ ನಮೋನಮಃ - ಅನಂತ ನಮಸ್ಕಾರಗಳು.

ನೈವೇದ್ಯಕ್ಕಾಗಿ ಹಾಲು, ಪಾಯಸ, ಜೇನು, ತುಪ್ಪದಲ್ಲಿ ಕರಿದ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ವಿವಿಧ ರೀತಿಯ ಅವಲಕ್ಕಿಗಳು, ವಿವಿಧ ರೀತಿಯ ಹಣ್ಣುಗಳನ್ನು ಸಮರ್ಪಿಸಬೇಕು. ಈಗ ಚಕ್ಕೋತ ಮತ್ತು ಮಾದಳದ ಹಣ್ಣಿನ ಕಾಲ. ಅವೆರಡನ್ನೂ ಸಮರ್ಪಿಸಬೇಕು ಎಂದು ಶ್ರೀ ಮಧ್ವಾನುಜಾಚಾರ್ಯರು ಸಂನ್ಯಾಸಪದ್ಧತಿಯಲ್ಲಿ ತಿಳಿಸಿದ್ದಾರೆ.

ಯಾರಿಗೆ ಸಾಕ್ಷಾತ್ತಾಗಿ ಪೂಜೆಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು, ಕಣ್ಣುಮುಚ್ಚಿ ಪರಮಾತ್ಮನನ್ನು ಧ್ಯಾನಿಸುತ್ತಾ, ಮೇಲಿನ ಮಂತ್ರವನ್ನು ಹೇಳುತ್ತ ಮನಸ್ಸಿನಲ್ಲಿಯೇ ಪೂಜೆ, ಅಭಿಷೇಕ, ಅರ್ಚನೆ ನೈವೇದ್ಯಗಳನ್ನು ಸಲ್ಲಿಸಬೇಕು. ಹೀಗೆ, ಸಾಲಿಗ್ರಾಮ, ಪ್ರತಿಮೆಗಳಿಗೆ ಹದಿನಾರು ಉಪಚಾರಗಳ ಪೂಜೆಯನ್ನು ಮುಗಿಸಿ, ಬೆಳಿಗ್ಗೆ ಗೋಪೀಚಂದನದಲ್ಲಿ ಮಾಡಿಟ್ಟ ಕೃಷ್ಣ-ಬಲರಾಮ-ವಸುದೇವಾದಿಗಳ ಪೂಜೆಯನ್ನು ಆರಂಭಿಸಬೇಕು.

ವಸುದೇವಾಯ ನಮಃ, ದೇವಕ್ಯೈ ನಮಃ, ನಂದಾಯ ನಮಃ, ಯಶೋದಾಯೈ ನಮಃ, ಬಲರಾಮಾಯ ನಮಃ, ಶ್ರೀಕೃಷ್ಣಾಯ ನಮಃ, ದುರ್ಗಾಯೈ ನಮಃ, ಸುಭದ್ರಾಯೈ ನಮಃ, ಗೋಪಾಲಕೇಭ್ಯೋ ನಮಃ, ಗೋಪಿಕಾಸ್ತ್ರೀಭ್ಯೋ ನಮಃ ಎಂದು ಗರಿಕೆಗಳಿಂದ, ತುಳಸಿಯಿಂದ, ಹೂಗಳಿಂದ ಅರ್ಚಿಸಿ, ಭಾಗವತದಲ್ಲಿ ಬಂದಿರುವ ಅವತಾರದ ಸ್ತೋತ್ರವನ್ನು ಪರಮಾತ್ಮನ ಮುಂದೆ ಹೇಳುತ್ತ ಪರಮಾತ್ಮನ ಅವತಾರದ ಪರಮಮಂಗಳ ಘಟನೆಯನ್ನು ಸ್ಮರಿಸಬೇಕು.

ಪರಮಾತ್ಮನಿಗಾಗಿ ತಪಸ್ಸು ಮಾಡಿ, ಜನನ ಮರಣವಿಲ್ಲದ, ಗರ್ಭವಾಸದ ದುಃಖವಿಲ್ಲದ ಪರಮಾತ್ಮನನ್ನು ತನ್ನ ಪರಮಮಂಗಳ ಗರ್ಭದಲ್ಲಿ ಧರಿಸಿ ಹಡೆದು ನಮಗಾಗಿ ನೀಡಿದ ದೇವಕೀದೇವಿಯನ್ನು, ಅವನ್ನು ಲಾಲಿಸಿ ಪಾಲಿಸಿ ಬೆಳೆಸಿದ ಯಶೋದಾಮಾತೆಯನ್ನು ಭಕ್ತಿಯಿಂದ ಸ್ಮರಿಸಬೇಕು.

ಮುಖ್ಯವಾಗಿ ಮಕ್ಕಳಾಗದವರು, ಮಕ್ಕಳನ್ನು ಪಡೆಯಲು ಸಿದ್ಧರಾಗಿರುವ ನವದಂಪತಿಗಳು ದೇವಕೀ, ಯಶೋದೆಯರನ್ನು ಈ ರೀತಿ ಪ್ರಾರ್ಥಿಸಬೇಕು.

ಯಥಾ ಪುತ್ರಂ ಹರಿಂ ಲಬ್ಧ್ವಾ ಪ್ರಾಪ್ತಾ ತ್ವಂ ನಿರ್ವೃತಿಂ ಪುರಾ I
ತಾಮೇವ ನಿರ್ವೃತಿಂ ದೇವಿ ಸುಪುತ್ರೇ ದರ್ಶಯಸ್ವ ಮೇ II

ಅಮ್ಮಾ, ಪರಮಾತ್ಮನನ್ನು ಮಗನನ್ನಾಗಿ ಪಡೆದು ನೀನೇನು ಸುಖವನ್ನು ಅನುಭವಿಸಿದೆಯೋ, ಅದೇ ರೀತಿಯ ಸಂತಾನಸೌಖ್ಯವನ್ನು ನಾವೂ ಅನುಭವಿಸುವಂತೆ ಮಾಡು.ಯಾರಿಗೆ ಸಾಕ್ಷಾತ್ತಾಗಿ ಪೂಜೆ ಮಾಡಲು ಸಾಧ್ಯವಿಲ್ಲವೋ, ಅವರು ಕನಿಷ್ಠ ಮೇಲಿನ ಮಂತ್ರಗಳನ್ನು ಹೇಳಿ ಮನಸ್ಸಿನಿಂದಾದರೂ ಪೂಜೆಯನ್ನು ಸಲ್ಲಿಸಬೇಕು. ಈ ಮಾತು (ಕರ್ಮ ಮಾಡಲು ಶಕ್ತಿಯಿಲ್ಲದವರು, ಸ್ತೋತ್ರ ಮಾಡಿಯಾದರೂ ಭಗವಂತನನ್ನು ಮೆಚ್ಚಿಸುವ ವಿಷಯ) ವೇದಗಳಲ್ಲಿಯೇ ಬಂದಿದೆ. ವಿಶ್ವನಂದಿನಿಯ ಮತ್ತೊಂದು ಲೇಖನದಲ್ಲಿ ಅದನ್ನು ವಿಸ್ತಾರವಾಗಿ ತಿಳಿಸುತ್ತೇನೆ.[ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಜಯಂತಿಗಿರುವ ವ್ಯತ್ಯಾಸವೇನು?]

ಇಷ್ಟು ಕಾರ್ಯಗಳನ್ನು ಚಂದ್ರೋದಯವಾಗುವದರ ಒಳಗೆ ಮುಗಿಸಿ, ಚಂದ್ರೋದಯವಾಗುತ್ತಿದ್ದಂತೆ ಪರಮಾತ್ಮನಿಗೆ ಅರ್ಘ್ಯ ನೀಡಲು ಉದ್ಯುಕ್ತರಾಗಬೇಕು.
(ಚಂದ್ರೋದಯ ಊರಿನಿಂದ ಊರಿಗೆ ಬೇರೆಯಿರುತ್ತದೆ, ನಿಮ್ಮ ಊರಿನ ಚಂದ್ರೋದಯ ಎಷ್ಟು ಗಂಟೆಗೆ ಎನ್ನುವದನ್ನು Internet ಮುಖಾಂತರ ತಿಳಿದುಕೊಳ್ಳಬಹುದು)

ಭಗವಂತನ ಕಾರುಣ್ಯಕ್ಕೆ ಎಣೆಯಿಲ್ಲ. ಅವನು ನಮಗಾಗಿ ಅವತರಿಸಿದ ಈ ದಿನದಂದು, ಅವನಿಗಾಗಿ ಉಪವಾಸವಿದ್ದು, ಪೂಜೆ ಮಾಡಿ ರಾತ್ರಿಯಲ್ಲಿ ಅರ್ಘ್ಯವನ್ನು ಸಮರ್ಪಿಸಿದರೆ ಸಮಗ್ರ ಭೂಮಿಯನ್ನೇ ಪಾತ್ರೆಯನ್ನಾಗಿ ಮಾಡಿ, ಅದರಲ್ಲಿ ರತ್ನ ಕನಕಗಳನ್ನು ತುಂಬಿಸಿ ವೈಷ್ಣವೋತ್ತಮರಿಗೆ ದಾನ ಮಾಡಿದರೆ ಅದೆಷ್ಟು ಪುಣ್ಯ ಬರುತ್ತದೆಯೋ ಅಷ್ಟು ಪುಣ್ಯವನ್ನು ಕೇವಲ ಕೃಷ್ಣಾಷ್ಟಮಿಯ ಅರ್ಘ್ಯದಿಂದ ಪರಮಾತ್ಮ ನೀಡುತ್ತಾನೆ. ಹೀಗಾಗಿ ಸಮಗ್ರ ಜೀವದ ಭಕ್ತಿಯಿಂದ ಪರಮಾತ್ಮನಿಗೆ ಮತ್ತು ದೇವತೆಗಳಿಗೆ ಅರ್ಘ್ಯವನ್ನು ಸಮರ್ಪಿಸಬೇಕು.

ಯೋ ದದ್ಯಾತ್ ಸಕಲಾಮುರ್ವೀಂ ಸರ್ವರತ್ನಸಮನ್ವಿತಾಮ್
ಅರ್ಘ್ಯದಾನೇನ ತತ್ ಪುಣ್ಯಂ ಲಭತೇ ಮಾನವಃ ಶುಚಿಃ

ಇಲ್ಲಿ ಶುಚಿ ಎನ್ನುವ ಶಬ್ದವನ್ನು ಅವಶ್ಯವಾಗಿ ನಾವು ಗಮನಿಸಬೇಕು. ಮಧ್ಯರಾತ್ರಿಯಲ್ಲಿ ತಾನೇ, ಅರ್ಘ್ಯ ಎಂದು ಉದಾಸೀನ ಮಾಡಿ ಮಲಗಿ ಎದ್ದು ಅರ್ಘ್ಯ ನೀಡಿದರೆ ಫಲ ಬರುವದಿಲ್ಲ. ಆ ದಿವಸ ತ್ರಿಕಾಲ ಸ್ನಾನವನ್ನು ಮಾಡಿ, ರಾತ್ರಿಯಲ್ಲಿಯೂ ಸ್ನಾನ ಮಾಡಿ ಅರ್ಘ್ಯವನ್ನು ನೀಡುವದು ಉತ್ತಮ ಪಕ್ಷ. (ಶಕ್ತಿ ಸೌಕರ್ಯ ಇರುವ ಸ್ತ್ರೀಯರೂ ಸಹ ರಾತ್ರಿ ಸ್ನಾನ ಮಾಡಿ ಅರ್ಘ್ಯ ನೀಡಬೇಕು. ಇಲ್ಲದಿದ್ದಲ್ಲಿ ರೇಶಿಮೆಯ ವಸ್ತ್ರವನ್ನುಟ್ಟು ಅರ್ಘ್ಯವನ್ನು ನೀಡಬೇಕು.)

ಅರ್ಘ್ಯ ಎಂದರೆ ಒಬ್ಬ ದೇವತೆಗಾಗಿ ಕೈಗಳ ಮಧ್ಯದಿಂದ ನೀರನ್ನು ಬಿಡುವದು. ಇಷ್ಟು ಸಣ್ಣ ಕರ್ಮಕ್ಕೆ ಅಷ್ಟು ಹಿರಿದಾದ ಫಲವನ್ನು ನೀಡುವ ಆ ಸರ್ವೋತ್ತಮನ ಕಾರುಣ್ಯವನ್ನು ಭಕ್ತಿಯಿಂದ ಮೇಲಿಂದಮೇಲೆ ನೆನೆಯಬೇಕು. ಆ ನಂತರ ಒಂದು ನಿಂಬೆಹಣ್ಣು, ಬೆಳ್ಳಿಯ ಅಥವಾ ಬಂಗಾರದ ಒಂದು ನಾಣ್ಯ, ಪೂಜೆ ಮಾಡಿರದ ಹೂಗಳನ್ನು ಒಂದು ತಟ್ಟೆಯಲ್ಲಿಟ್ಟುಕೊಳ್ಳಬೇಕು.

ಆ ಬಳಿಕ ಶಂಖದಲ್ಲಿ ನೀರನ್ನು ತುಂಬಿಸಿ ಬಲಗೈಯಿಂದ ಶಂಖವನ್ನು ಎಡಗೈಗೆ ನೀಡಬೇಕು. ಎಡಗೈಯಲ್ಲಿ ಒಂದು ದೇವರ ಬಟ್ಟೆಯನ್ನು ಹಿಡಿದು ಅ ಬಟ್ಟೆಯಿಂದ ಶಂಖವನ್ನು ಹಿಡಿದುಕೊಳ್ಳಬೇಕು. ಬರಿಯ ಎಡಗೈಯಲ್ಲಿ ಶಂಖವನ್ನು ಹಿಡಿಯಬಾರದು.

ನಂತರ ತಟ್ಟೆಯಲ್ಲಿರುವ ನಾಣ್ಯ, ನಿಂಬೆಹಣ್ಣು ಮತ್ತು ಹೂಗಳನ್ನು ತೆಗೆದುಕೊಂಡು, ಬಲಗೈನ ಅಂಗೈಯಲ್ಲಿ ಅವನ್ನು ಹಿಡಿದು, ಕೈಯನ್ನು ಕೆಳಮುಖ ಮಾಡಿ ಕೆಳಗಿನ ಮಂತ್ರವನ್ನು ಹೇಳುತ್ತ ಮೂರು ಬಾರಿ ದೇವಕೀಸಮೇತನಾದ ಶ್ರೀಕೃಷ್ಣನಿಗೆ ದೇವರ ಮನೆಯಲ್ಲಿಯೇ ಅರ್ಘ್ಯವನ್ನು ನೀಡಬೇಕು. ಅರ್ಘ್ಯದ ನೀರು ನೆಲದ ಮೇಲೆ ಬೀಳದಂತೆ ಒಂದು ಪಾತ್ರೆಯಲ್ಲಿ ಬೀಳುವಂತೆ ನೋಡಿಕೊಳ್ಳಬೇಕು.

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ I
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ II

ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ I
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ II

ದೇವಕೀಸಹಿತ-ಶ್ರೀಕೃಷ್ಣಾಯ ನಮಃ I ಇದಮರ್ಘ್ಯಂ ಸಮರ್ಪಯಾಮಿ I

ದುರುಳಕಂಸನನ್ನು ಕೊಲ್ಲಲಿಕ್ಕಾಗಿ, ಭೂಮಿಯ ಭಾರವನ್ನು ಇಳಿಸುವದಕ್ಕಾಗಿ, ಸಕಲದುಷ್ಟಗುಣಗಳಿಗೆ ಆಶ್ರಯರಾದ ಕೌರವರ ವಿನಾಶಕ್ಕಾಗಿ, ನಮ್ಮ ನಮ್ಮ ಮನಸ್ಸಿನಲ್ಲಿ ನೆಲೆನಿಂತ ದೈತ್ಯರ ಸಂಹಾರಕ್ಕಾಗಿ, ಪಾಂಡವರ ಹಿತಕ್ಕಾಗಿ, ಧರ್ಮಸಂಸ್ಥಾಪನೆಗಾಗಿ ಅವತರಿಸಿಬಂದ ಓ ಕೃಷ್ಣರೂಪದ ಪರಬ್ರಹ್ಮನೇ
ತಾಯಿ ದೇವಕಿಯ ಸಮೇತನಾಗಿ ಈ ಅರ್ಘ್ಯವನ್ನು ಸ್ವೀಕರಿಸು.

ಹೀಗೆ ಮೂರು ಬಾರಿ ಅರ್ಘ್ಯವನ್ನು ನೀಡಬೇಕು. ಆ ನಂತರ ಶಂಖವನ್ನು, ಹಾಲನ್ನು, ಮೇಲೆ ಹೇಳಿದ ಅರ್ಘ್ಯದ ಪದಾರ್ಥಗಳನ್ನು ಮನೆಯ ಅಂಗಳಕ್ಕೆ ತೆಗೆದುಕೊಂಡು ಬರಬೇಕು. ಅಲ್ಲಿ ಮೊದಲೇ ಮಾಡಿದ ರಂಗವಲ್ಲಿಯ ಮೇಲೆ ಅರ್ಘ್ಯದ ಪಾತ್ರೆಯನ್ನಿಟ್ಟು ಮೊಣಕಾಲೂರಿ ಕುಳಿತು

ಶಶಿನೇ ಚಂದ್ರದೇವಾಯ ಸೋಮದೇವಾಯ ಚೇಂದವೇ I
ಮೃಗಿಣೇ ಸಿತಬಿಂಬಾಯ ಲೋಕದೀಪಾಯ ದೀಪಿನೇ II
ರೋಹೀಣೀಸಕ್ತಚಿತ್ತಾಯ ಕನ್ಯಾದಾನಪ್ರದಾಯಿನೇ I
ಶೀತದೀಧಿತಿಬಿಂಬಾಯ ತಾರಕಾಪತಯೇ ನಮಃ II

ಶಶೀ, ಚಂದ್ರ, ಸೋಮ, ಇಂದು, ಮೃಗೀ, ಸಿತಬಿಂಬ, ಲೋಕದೀಪ, ದೀಪೀ, ರೋಹಿಣೀಸಕ್ತಚಿತ್ತ, ಕನ್ಯಾದಾನಪ್ರದಾಯೀ, ಶೀತದೀಧಿತಿಬಿಂಬ, ತಾರಕಾಪತಿ ಎಂಬ ಹನ್ನೆರಡು ಹೆಸರುಳ್ಳ ಚಂದ್ರನಿಗೆ ಭಕ್ತಿಯಿಂದ ನಮಸ್ಕಾರಗಳನ್ನು ಸಲ್ಲಿಸಬೇಕು. ಆ ನಂತರ ಶಂಖದಲ್ಲಿ ಹಾಲನ್ನು ತುಂಬಿಸಿ, ಬಲಗೈಯಲ್ಲಿ ಎತ್ತಿಕೊಂಡು, ಬಟ್ಟೆಯಿರುವ ಎಡಗೈಯಲ್ಲಿ ಅದನ್ನು ಹಿಡಿದು, ಆಗತಾನೇ ಉದಯಿಸಿದ ಚಂದ್ರನನ್ನು ಪ್ರೀತಿಯಿಂದ ಕಾಣುತ್ತ

ಕ್ಷೀರೋದಾರ್ಣವಸಂಭೂತ ಅತ್ರಿನೇತ್ರಸಮುದ್ಭವ I
ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃ ಶಶಿನ್ II

ರೋಹಿಣೀಸಹಿತಚಂದ್ರಾಯ ನಮಃ I ಇದಮರ್ಘ್ಯಂ ಸಮರ್ಪಯಾಮಿ I

ಅಮೃತಮಥನದಲ್ಲಿ ಉದಿಸಿದ, ಆ ಬಳಿಕ ಅತ್ರಿಯ ಕಣ್ಗಳಿಂದ ಮತ್ತೊಮ್ಮೆ ಅವತರಿಸಿದ ಒ ಚಂದಾಮ, ರೋಹಿಣಿಯ ಸಮೇತನಾಗಿ ಈ ಅರ್ಘ್ಯವನ್ನು ಸ್ವೀಕರಿಸು ಎಂದು ಪ್ರಾರ್ಥಿಸಿ ಮೂರು ಬಾರಿ ಹಾಲಿನಿಂದ ಅರ್ಘ್ಯವನ್ನು ನೀಡಬೇಕು. ಹೀಗೆ ಶ್ರೀಕೃಷ್ಣನಿಗೆ ನೀರಿನಿಂದಲೂ, ಚಂದ್ರನಿಗೆ ಹಾಲಿನಿಂದಲೂ ಅರ್ಘ್ಯವನ್ನು ನೀಡಿ ಮತ್ತೆ ದೇವರ ಮನೆಗೆ ಬಂದು ಬೆಳಗಿನಿಂದ ಮಾಡಿದ ಸಮಗ್ರ ಸತ್ಕರ್ಮಗಳನ್ನೂ ಪರಮಾತ್ಮನಿಗೆ ಒಪ್ಪಿಸಿಕೊಳ್ಳಬೇಕು.

ವಿಶ್ವಾಯ ವಿಶ್ವಪತಯೇ ವಿಶ್ವೇಶ್ವರಾಯ ವಿಶ್ವಸಂಭವಾಯ ಶ್ರೀಗೋವಿಂದಾಯ ನಮೋನಮಃ

ಸಮಗ್ರ ವಿಶ್ವವನ್ನು ಸೃಷ್ಟಿ ಮಾಡಿ ಅದರಲ್ಲಿ ವ್ಯಾಪಿಸಿ ಇದ್ದು ವಿಶ್ವ ಎಂದು ಕರೆಸಿಕೊಳ್ಳುವ ಸಮಗ್ರ ವಿಶ್ವದ ಅಧಿಪತಿಯಾದ, ಸಮಗ್ರ ವಿಶ್ವದ ಮೇಲೆ ಆಧಿಪತ್ಯವನ್ನು ಹೊಂದಿರುವ ರುದ್ರ ಬ್ರಹ್ಮರಿಗೂ ಒಡೆಯನಾದ ವಿಶ್ವದ ಉದ್ಧಾರಕ್ಕಾಗಿ ವಿಶ್ವದಲ್ಲಿ ಅನಂತ ಅವತಾರಗಳಿಂದ ಅವತರಿಸಿ ಬರುವ ಶ್ರೀಗೋವಿಂದನಿಗೆ ನಮಸ್ಕಾರಗಳು ಎಂದು ಸರ್ವಸ್ವವನ್ನೂ ಅವನಿಗೆ ಸಮರ್ಪಿಸಿಕೊಳ್ಳಬೇಕು.[ನಿಮ್ಮ ಮನೆಗೆ ಬಾಲಕೃಷ್ಣ ಬರುತ್ತಿದ್ದಾನೆ, ಬರಮಾಡಿಕೊಳ್ಳಿ]

ಕೃಷ್ಣಾಷ್ಟಮಿಯಂದು ಪರಮಾತ್ಮನಿಗೆ ಮಾತ್ರ ನೈವೇದ್ಯ. ಲಕ್ಷ್ಮೀ ಮುಂತಾದವರಿಗೆ ನೈವೇದ್ಯವಿಲ್ಲ. ಹೀಗಾಗಿ ರಾತ್ರಿಯ ದಿವಸ ನಾವೂ ಸಹಿತ ಏನನ್ನೂ ತೆಗೆದುಕೊಳ್ಳಬಾರದು. ಕೃಷ್ಣಾಷ್ಟಮಿಯಲ್ಲಿ ಅಷ್ಟಮೀ ತಿಥಿ ಮುಗಿದ ಬಳಿಕ ಪಾರಣೆ. ಕೃಷ್ಣಜಯಂತಿಯಲ್ಲಿ ಅಷ್ಟಮೀತಿಥಿ ಮತ್ತು ರೋಹಿಣೀನಕ್ಷತ್ರ ಎರಡೂ ಮುಗಿದ ಬಳಿಕ ಪಾರಣೆ.

ಈ ಬಾರಿ ಭಾನುವಾರ ಬೆಳಿಗ್ಗೆ 7 40 ಕ್ಕೆ ಅಷ್ಟಮೀ ಮತ್ತು ರೋಹಿಣೀ ಎರಡೂ ಮುಗಿದಿರುತ್ತದೆ. ಹೀಗಾಗಿ ಆ ನಂತರದಲ್ಲಿ ನೈವೇದ್ಯವನ್ನು ಮಾಡಿ ಪಾರಣೆ ಮಾಡಬೇಕು. ಕೃಷ್ಣಾಷ್ಟಮೀವ್ರತದ ಸಂಪೂರ್ತಿಗಾಗಿ ಮಾರನೆಯ ದಿವಸ ಪೂಜೆ ಮುಗಿದ ನಂತರ ನಮಗೆ ಶಕ್ತಿಯಿದ್ದಷ್ಟು ವಿಷ್ಣುಭಕ್ತರಾದ ಸಜ್ಜನರಿಗೆ ದಾನವನ್ನು ನೀಡಬೇಕು ಎಂದು ಶ್ರೀಮದಾಚಾರ್ಯರು ಹೇಳುತ್ತಾರೆ - ಶಕ್ತಿತೋ ದೀಯತಾಂ ಧನಮ್

ಆ ನಂತರ
ಸರ್ವಾಯ ಸರ್ವಪತಯೇ ಸರ್ವೇಶ್ವರಾಯ ಸರ್ವಸಂಭವಾಯ ಶ್ರೀಗೋವಿಂದಾಯ ನಮೋನಮಃ
ಎಂಬ ಮಂತ್ರವನ್ನು ಪಠಿಸಿ ಪರಮಾತ್ಮನಿಗೆ ಸರ್ವಸ್ವವನ್ನೂ ಒಪ್ಪಿಸಿಕೊಂಡು ಪಾರಣಕ್ಕೆ ಕೂಡಬೇಕು.

ಸರ್ವಾಯ ಸರ್ವ ಪದಾರ್ಥಗಳಲ್ಲಿಯೂ ವ್ಯಾಪಿಸಿ ಇರುವದರಿಂದ ಸರ್ವ ಎಂದು ಕರೆಸಿಕೊಳ್ಳುವ, ಸರ್ವಪತಯೇ ಸರ್ವಪದಾರ್ಥಗಳ ಒಡೆಯನಾದ, ಸರ್ವೇಶ್ವರಾಯ ಸರ್ವಜೀವರಾಶಿಗಳ ಅಂತರ್ಯಾಮಿಯಾದ, ಸರ್ವಸಂಭವಾಯ ಸಕಲ ಪದಾರ್ಥಗಳ ಸೃಷ್ಟಿಗೆ ಕಾರಣನಾದ ಶ್ರೀಗೋವಿಂದಾಯ ರುಗ್ಮಿಣೀಪತಿಯಾದ ಶ್ರೀಕೃಷ್ಣನಿಗೆ

ನಮೋನಮಃ ಅನಂತ ನಮಸ್ಕಾರಗಳು ಎಂದು ತುತ್ತುತುತ್ತಿಗೆ ದೇವರನ್ನು ಸ್ಮರಿಸುತ್ತ, ಹಿಂದಿನ ದಿವಸದ ಹಸಿವು ನೀರಡಿಕೆಗಳನ್ನು, ಇಂದಿನ ದಿವಸದ ಭೋಜನದ ತೃಪ್ತಿಯನ್ನು ಪರಮಾತ್ಮನಿಗೆ ಸಮರ್ಪಿಸುತ್ತ ಊಟಮಾಡಬೇಕು. ಬಳಿಕ ಆಚಮನವನ್ನು ಮಾಡಿ ಧರ್ಮಾಯ ದರ್ಮಪತಯೇ ದರ್ಮೇಶ್ವರಾಯ ಧರ್ಮಸಂಭವಾಯ ಶ್ರೀಗೋವಿಂದಾಯ ನಮೋನಮಃ[ಶ್ರೀಕೃಷ್ಣನ ಜನ್ಮನಾಡಿನಲ್ಲಿ ಮುಸ್ಲಿಮರಿಗೆ ಓವರ್ ಟೈಂ]

ಧರ್ಮಾಯ ಎಲ್ಲರನ್ನೂ ಧಾರಣೆ ಮಾಡಿರುವದರಿಂದ ಧರ್ಮ ಎಂದು ಕರೆಸಿಕೊಳ್ಳುವ ಧರ್ಮಪತಯೇ ಧರ್ಮದ ಆಚರಣೆಯನ್ನು ಮಾಡುವ ಜನರ ಒಡೆಯನಾದ ಧರ್ಮೇಶ್ವರಾಯ ಯಾವುದು ಧರ್ಮ ಯಾವುದು ಅಧರ್ಮ ಎಂದು ನಿರ್ಣಯಿಸುವ ಸ್ವಾಮಿಯಾದ ಧರ್ಮಸಂಭವಾಯ ನಾವು ಮಾಡುವ ಸತ್ಕರ್ಮಗಳಿಂದ ನಮಗೆ ಒಲಿದು ನಮ್ಮ ಹೃದಯಕಮಲದಲ್ಲಿ ಗೋಚರನಾಗುವ ಶ್ರೀಗೋವಿಂದಾಯ ಶ್ರೀ ಭೂಸಮೇತನಾದ ಶ್ರೀಹರಿಗೆ ನಮೋನಮಃ ಅನಂತಾನಂತ ನಮಸ್ಕಾರಗಳು ಎಂದು ಈ ಕೃಷ್ಣಾಷ್ಟಮೀವ್ರತವನ್ನು ನನ್ನೊಳಗೆ ನಿಂತ ಶ್ರೀಹರಿ ಮತ್ತು ತತ್ವಾಭಿಮಾನಿ ದೇವತೆಗಳು ಮಾಡಿಸಿದ್ದಾರೆ ಎಂದು ತಿಳಿದು ದೇವರಿಂದ ಆರಂಭಿಸಿ ನಮ್ಮ ಗುರುಗಳ ವರೆಗಿನ ಸಮಗ್ರ ಗುರುಪರಂಪರೆಯನ್ನು ಭಕ್ತಿಯಿಂದ ನೆನೆದು ಅವರಿಗೆ ಸಮಗ್ರ ಕೃಷ್ಣಾಷ್ಟಮಿಯ ವ್ರತದ ಪುಣ್ಯವನ್ನು ಸಮರ್ಪಿಸಬೇಕು.

ಸ್ಕಂದಪುರಾಣದಲ್ಲಿ ಕೃಷ್ಣಾಷ್ಟಮಿಯ ಕುರಿತ ಮಾತು ಹೀಗಿದೆ -

ಜನ್ಮಾಷ್ಟಮೀವ್ರತಂ ಯೇ ವೈ ಪ್ರಕುರ್ವಂತಿ ನರೋತ್ತಮಾಃ
ಕಾರಯಂತಿ ಚ ವಿಪ್ರೇಂದ್ರ ಲಕ್ಷ್ಮೀಸ್ತೇಷಾಂ ಸದಾ ಸ್ಥಿರಾ

ಸ್ಮರಣಂ ವಾಸುದೇವಸ್ಯ ಮೃತ್ಯುಕಾಲೇ ಭವೇನ್ಮುನೇ
ಸಿದ್ಧ್ಯಂತಿ ಸರ್ವಕಾರ್ಯಾಣಿ ಕೃತೇ ಕೃಷ್ಣಾಷ್ಟಮೀವ್ರತೇ

ಮನುಷ್ಯಜನ್ಮವನ್ನು ಪಡೆದು ಸದ್ಗುಣಗಳಿಂದ ಉತ್ತಮರಾದ ಸಜ್ಜನರು, ತಾವೂ ಕೃಷ್ಣಾಷ್ಟಮೀ ವ್ರತವನ್ನು ಮಾಡಿ, ತಮ್ಮವರಿಂದಲೂ ಮಾಡಿಸುತ್ತಾರೆಯೋ ಅವರ ಮನೆಯಲ್ಲಿ ಸತ್ಸಂಪತ್ತು ಸ್ಥಿರವಾಗಿರುತ್ತದೆ, ಲಕ್ಷ್ಮೀದೇವಿ ಶಾಶ್ವತವಾಗಿ ನೆಲೆಸುತ್ತಾಳೆ. ಕೃಷ್ಣಾಷ್ಟಮೀ ವ್ರತವನ್ನು ಮಾಡಿದ ಮನುಷ್ಯನ ಎಲ್ಲ ಕಾರ್ಯಗಳೂ ನಿರ್ವಿಘ್ನವಾಗಿ ಸಿದ್ಧವಾಗುತ್ತವೆ. ಅಂತ್ಯಕಾಲದಲ್ಲಿ ಶ್ರೀಹರಿಯ ಸ್ಮರಣೆ ಒದಗಿಬರುತ್ತದೆ. ಇದಕ್ಕಿಂತ ಹೆಚ್ಚಿನ ಸೌಭಾಗ್ಯ ಬೇಕೆ.

ಶ್ರೀ ಕೃಷ್ಣಾಷ್ಟಮಿಯಂದು ಶ್ರದ್ಧೆಯಿಂದ ಉಪವಾಸ ಮಾಡಿ, ಭಕ್ತಿಯಿಂದ ಅರ್ಚನೆಯನ್ನು ಮಾಡಿ, ಅರ್ಘ್ಯವನ್ನು ನೀಡಿ, ಆದರದಿಂದ ಪಾರಣೆಯನ್ನು ಮಾಡಿ ಶ್ರೀಕೃಷ್ಣನಿಗೆ ಸಮರ್ಪಿಸಿ. ನಿಮ್ಮ ಮನೆಯಲ್ಲಿ ಶ್ರೀಲಕ್ಷ್ಮೀನಾರಾಯಣರು ನೆಲೆಗೊಳ್ಳಲಿ, ನಿಮ್ಮ ಮನಸ್ಸಿನ ಅಭೀಷ್ಟಗಳು ಪೂರ್ಣವಾಗಲಿ, ಸದಾ ಭಗವಂತನ ಸ್ಮರಣೆ ನಿಮಗೊದಗಿ ಬರಲಿ ಎಂಬ ಹಾರೈಕೆಯೊಂದಿಗೆ

English summary
This article is give some information about Night Worship of Sri Krishna Janmashtami. This Article is written by Vishnudasa Nagendracharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X