ವೇಷ ತೊಟ್ಟು ಫೋಟೋಗೆ ಪೋಸ್ ನೀಡಿದ ಕಿಟ್ಟುಮರಿಗಳು!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 25 : ಇಂದು ಇಡೀ ಭಾರತ ಬಾಲಕೃಷ್ಣನ ಆಡುಂಬೋಲವಾಗಿದೆ. ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷದ ಅಷ್ಟಮಿಯಂದು ಮುದ್ದುಮುದ್ದು ಬಾಲಕೃಷ್ಣರ ರೂಪದಲ್ಲಿ ಶ್ರೀಕೃಷ್ಣನೇ ಅವತರಿಸಿದ್ದಾನೆ, ಎಲ್ಲೆಲ್ಲೂ ಸಂತಸದ ಹೊಳೆ ಹರಿಸಿದ್ದಾನೆ, ಜಾತಿಮತವನ್ನು ಮೀರಿ ನಿಂತಿದ್ದಾನೆ.

ಇನ್ನೂ ಹೆಜ್ಜೆ ಇಡಲೂ ಬಾರದ ಪುಟಾಣಿ ಮಕ್ಕಳಿಗೆ ರೇಷ್ಮೆ ಶಲ್ಯ ಉಡಿಸಿ, ಕಾಲಿಗೆ ಗೆಜ್ಜೆ ತೊಡೆಸಿ, ಕೊರಳಿಗೆ ಮುತ್ತಿನ ಹಾರ ಹಾಕಿ, ಬಾಯಿಗೊಂದಿಷ್ಟು ಬೆಣ್ಣೆ ಸವರಿ, ತಲೆಗೆ ಕಟ್ಟಿದ ಕಿರೀಟಕ್ಕೊಂದು ನವಿಲುಗರಿಯನ್ನು ಸಿಕ್ಕಿಸುವುದೆಂದರೆ ಅಮ್ಮಅಪ್ಪಂದಿರಿಗೆ ಅದೇನೋ ಖುಷಿ. ಇದು ಪದಗಳಲ್ಲಿ ವರ್ಣಿಸಲು ಬಾರದಂಥದ್ದು. [ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ...]

ಕೃಷ್ಣನ ವೇಷ ತೊಟ್ಟು, ಫೋಟೋಗೆ ಪೋಸ್ ಕೊಟ್ಟ ಮುದ್ದುಮರಿ ಗಲ್ಲಕ್ಕೆ ಒಂದು ಮುತ್ತು ಕೊಟ್ಟಾಗಲೇ ಅಮ್ಮನಿಗೆ ತೃಪ್ತಿ. ಕೃಷ್ಣ ಜನ್ಮಾಷ್ಟಮಿಯಂದು ಸೋಷಿಯಲ್ ಮೀಡಿಯಾದಲ್ಲಂತೂ ರೆಡಿಮೇಡ್ ಧೋತಿ ಉಟ್ಟು, ಕೈಯಲ್ಲೊಂದು ಪಿಳ್ಳಂಗೋವಿ ಹಿಡಿದ ಪುಟಾಣಿ ಕೃಷ್ಣಂದಿರಿದ್ದೇ ಹಾವಳಿ. ಜೊತೆಗೆ ಲಂಗ ದಾವಣಿ ತೊಟ್ಟ ರಾಧೆ ಮತ್ತಷ್ಟು ಮೆರುಗು ತಂದಿದ್ದಾಳೆ. [ಶ್ರೀ ಕೃಷ್ಣ ಜಯಂತಿಯಂದು ಪೂಜೆ ಮಾಡುವುದು ಹೇಗೆ?]

ಆಭರಣ ಭೂಷಿತನಾಗಿ ಅಲಂಕೃತಗೊಂಡ ಪುಟಾಣಿ ಕಿಟ್ಟುಮರಿಗಳ ಫೋಟೋಗಳನ್ನು ನಮಗೆ ಕಳಿಸಿ ಅಂತ ನೀಡಿದ ಕರೆಗೆ ಕರ್ನಾಟಕದ ಅನೇಕ ಕಡೆಗಳಿಂದ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಒಬ್ಬ ಮಾತೆಯಂತೂ ಹಲವಾರು ಭಂಗಿಗಳಲ್ಲಿರುವ ಅನೇಕ ಫೋಟೋಗಳನ್ನು ಕಳಿಸಿದ್ದಾರೆ. ಅವಲ್ಲಿ ಕೆಲವೊಂದು ಮಾತ್ರ ಆಯ್ದು ಇಲ್ಲಿ ನೀಡಿದ್ದೇವೆ. [ಚಿತ್ರಗಳು : ಕೃಷ್ಣ ಜನ್ಮಾಷ್ಟಮಿ ವಿಶೇಷ]

ಎಲ್ಲಿ ಬಚ್ಚಿಟ್ಟಿದ್ದಿಯಮ್ಮಾ ಬೆಣ್ಣೆನಾ?

ಎಲ್ಲಿ ಬಚ್ಚಿಟ್ಟಿದ್ದಿಯಮ್ಮಾ ಬೆಣ್ಣೆನಾ?

ಹೀಗೆಂದು ಕೇಳುತ್ತಿದ್ದಾನೆ ಪಿಯೂಷ್. ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡಿಗ ಪ್ರವೀಣ್ ಕುಲಕರ್ಣಿ ಅವರು ಕಳಿಸಿದ್ದಾರೆ. ಪಿಯೂಷ್ ಪ್ರವೀಣ್ ಅವರ ತಂಗಿ ಪಲ್ಲವಿ ಅವರ ಮಗ.

ಗೊಂಬೆ ಅಲ್ಲ ನಾನು ರಾಧೆ

ಗೊಂಬೆ ಅಲ್ಲ ನಾನು ರಾಧೆ

ಹೈದರಾಬಾದಿನ ಪ್ರವೀಣ್ ಕುಲಕರ್ಣಿ ಅವರ ಮಗಳು ಪ್ರಕೃತಿಗೆ ರಾಧೆಯ ವೇಷ ತೊಡಿಸಿದರೆ ಅಪ್ಪಟ ಗೊಂಬೆಯೇ.

ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಅಮ್ಮ ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಅಂತ ತುಂಟತನದಿಂದ ಹೇಳುತ್ತಿದ್ದಾನೆ ಪ್ರೇಮ್. ಈ ಚಿತ್ರವನ್ನು ಕಳಿಸಿದ್ದು ಪ್ರವೀಣ್ ಅವರು.

ನಮಗೆ ಬಣ್ಣೆ ಬೇಡ, ಚಾಕ್ಲೇಟು ಬೇಕು!

ನಮಗೆ ಬಣ್ಣೆ ಬೇಡ, ಚಾಕ್ಲೇಟು ಬೇಕು!

ಈ ಪುಟಾಣಿಗಳಾದ ಪ್ರಥಮ್, ಅಥರ್ವ್ ಮತ್ತು ಸನ್ಮಿತ್ ಬೆಂಗಳೂರಿನ ಬ್ಲಾಸಮ್ ಇಂಟರ್ನ್ಯಾಷನಲ್ ಪ್ಲೇ ಸ್ಕೂಲ್ ನಲ್ಲಿ ಆಡವಾಡಿ ಮಜಾ ಮಾಡಿಕೊಂಡಿವೆ. ಚಿತ್ರ ಕಳಿಸಿದವರು ರೂಪಾ ಸತೀಶ್.

ಕೃಷ್ಣನ ವೇಷ ತೊಟ್ಟ ಸಂತಸದಲ್ಲಿ ಆತ್ಮಿಕಾ

ಕೃಷ್ಣನ ವೇಷ ತೊಟ್ಟ ಸಂತಸದಲ್ಲಿ ಆತ್ಮಿಕಾ

ತುಂಟ ಕಳೆ ಸುರಿಸುತ್ತಿರುವ 4 ವರ್ಷದ ಪೋರಿ ಆತ್ಮಿಕಾ ಭಟ್ ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಎಲ್ಕೆಜಿಯಲ್ಲಿ ಓದುತ್ತಿದ್ದಾಳೆ. ಫೋಟೋ ಕಳಿಸಿದವರು ಸಂಧ್ಯಾ.

ಕೃಷ್ಣನ ಅಕ್ಕಪಕ್ಕ ರುಕ್ಮಿಣಿ ಸತ್ಯಭಾಮ!

ಕೃಷ್ಣನ ಅಕ್ಕಪಕ್ಕ ರುಕ್ಮಿಣಿ ಸತ್ಯಭಾಮ!

ಈ ಪುಟಾಣಿ ಕೃಷ್ಣ ಬಲೇ ಕಿಲಾಡಿ. ಕೃಷ್ಣ ವೇಷಧಾರಿ ಪ್ರಥಮ್ ರಿಜಾ ಮತ್ತು ನಿಜಾ ಎಂಬು ಅವಳಿ ಜವಳಿಗಳನ್ನು ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಂಡು ಕೊಟ್ಟಿರುವ ಪೋಸ್ ನೋಡಿ.

ಅಳಬೇಡ ಕಣೋ ಇದೆಲ್ಲ ಸುಮ್ಮೆ ತಮಾಷೆಗೆ

ಅಳಬೇಡ ಕಣೋ ಇದೆಲ್ಲ ಸುಮ್ಮೆ ತಮಾಷೆಗೆ

ಸಾತ್ವಿಕನಿಗೆ ಯಾಕೋ ಕೋಪ ಬಂದಿದೆ. ಬೆಣ್ಣೆ ಕೊಟ್ಟಿಲ್ಲವಂತೋ, ಚಾಕ್ಲೇಟು ಸಿಗಲಿಲ್ಲವೆಂದೋ ಇನ್ನೇನು ಭೋರ್ಗರೆಯುವ ಸ್ಥಿತಿಯಲ್ಲಿದ್ದಾನೆ. ಬೇಜಾರು ಮಾಡ್ಕೋಬೇಡ ಕಣೋ ಅಂತ ಯುಕ್ತಾ ಸಮಾಧಾನ ಮಾಡುತ್ತಿದ್ದಾಳೆ.

ಬನ್ನಿರಿ ಪಾಮೆಂಗೊಳೆಲ್ಲ ರನ್ನತೋಟದೊಳಾಡುವಾ

ಬನ್ನಿರಿ ಪಾಮೆಂಗೊಳೆಲ್ಲ ರನ್ನತೋಟದೊಳಾಡುವಾ

ಆಟಕ್ಕೆ ಯಾರ್ಯಾರು ಬರ್ತೀರಿ ಅಂತ ಕರೀತಿದ್ದಾನೆ ಕಿಶನ್. ಮೂಲತಃ ಕೇರಳದವನಾದರೂ ಕನ್ನಡ ಅರುಳು ಹುರಿದಂತೆ ಮಾತನಾಡುತ್ತಾನೆ. ಜೆಪಿ ನಗರದಲ್ಲಿರುವ ಮಂಥನ ಮಾಂಟೆಸ್ಸೋರಿಯಲ್ಲಿ ಕಿಶನ್ ಈಗ ಯುಕೆಜಿ.

ನೋಡ್ಕೊಳ್ಳೋ, ಕೊಳಲು ಹಿಂಗೇ ಬಾರ್ಸೋದು

ನೋಡ್ಕೊಳ್ಳೋ, ಕೊಳಲು ಹಿಂಗೇ ಬಾರ್ಸೋದು

ಕೊಳಲು ಬಾರಿಸುವ ಪರಿಯನ್ನು ತೋರುತ್ತಿರುವ ಈ ಸ್ಮಾಯನ್ ಅರಸಿಕೆರೆಯಲ್ಲಿ ಎಲ್ಕೆಜಿ ಓದುತ್ತಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Krishna Janmashtami is being celebrated all over Karnataka and in India with religious fervor. Many mothers have sent the photos of their kids dressed as little Krishna. Happy Krishna Janmashtami to all the Kannadigas all over the world.
Please Wait while comments are loading...