ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಾವಣ ಮಾಸದ ಸಂಭ್ರಮ ಎಂದರೆ ನೀವು ಏನೆಂದುಕೊಂಡಿದ್ದೀರಿ?

By Staff
|
Google Oneindia Kannada News

*ಎಸ್ಕೆ. ಶಾಮಸುಂದರ

ಆಷಾಢ ಮಾಸ ಇನ್ನೂ ಮುಗಿದೇ ಇಲ್ಲ , ಆಗಲೇ ಅಜ್ಜಿ ಸೊಸೆಯಂದಿರಿಗೆ ಹಬ್ಬದ ತಯಾರಿ ಬಗ್ಗೆ ಸೂಚನೆ ಕೊಡಲು ಆರಂಭಿಸಿದ್ದಾಳೆ. ಯಾವಯಾವ ಹಬ್ಬಕ್ಕೆ ಹೇಗೆ ತಯಾರಿ ಮಾಡಿಟ್ಟುಕೊಳ್ಳಬೇಕು, ಸೀರೆ ಬಟ್ಟೆ ಜೋಡಿಸಿಕೊಂಡಿದ್ದೀರಾ? ಬೆಳ್ಳಿ ಪಾತ್ರೆ ಪಡಗ, ಪಂಚಪಾತ್ರೆ, ಕಲಶ ಎಲ್ಲ ತೊಳೆದು ರೆಡಿ ಮಾಡಿಕೊಳ್ಳಿ , ಹೆಣ್ಣು ಮಕ್ಕಳಿಗೆ ಒಂದು ಕಾರ್ಡು ಬರೆದು ಬೇಗನೇ ಊರಿಗೆ ಬರಕ್ಕೆ ಹೇಳಿ.....ಒಂದಾದರೊಂದ ಮೇಲೆ ಸೂಚನೆಗಳನ್ನು ಕೊಡುತ್ತಲೇ ಇದ್ದಾಳೆ. ಇದಾವುದರ ಪರಿವೆ ಇಲ್ಲದವನಂತೆ ಅಜ್ಜ ತಾನಾಯಿತು ತನ್ನ ನೆಶ್ಯ ಆಯಿತು ಅಂತ ಇನ್ನೂ ಪೇಪರ್‌ ಓದುತ್ತಾ ಕೂತಿದ್ದಾನೆ. ಉಪಾಕರ್ಮಕ್ಕೆ ಜನಿವಾರ ತಾನೆ ? ತಂದರಾಯಿತು ಎನ್ನುವುದಷ್ಟೆ ಅವನ ಚಿಂತೆ.
ಸೊಸೆಗೆ ಶ್ರಾವಣ ಮಾಸ ತುಂಬಿಬಂದ ಸಂಭ್ರಮವಷ್ಟೇ ಅಲ್ಲ, ಹಬ್ಬಗಳ ಸಾಲನ್ನು ಅಚ್ಚಕಟ್ಟಾಗಿ ನಿರ್ವಹಿಸಬೇಕಿರುವುದು ಒಂದು ಸವಾಲು. ಮನೆಯಲ್ಲಿ ಯಾವುದಕ್ಕೆ ಕಡಿಮೆ ಆದರೂ ಪರವಾಗಿಲ್ಲ, ಸಂಪ್ರದಾಯಕ್ಕೆ, ನೇಮ ನಿಷ್ಠೆಗೆ ಒಂದಿನಿತೂ ಚ್ಯುತಿ ಬರಬಾರದು. ಅತಿಥಿ ಅಭ್ಯಾಗತರಿಗೆ ಆದರಾತಿಥ್ಯದಲ್ಲಿ ಲೋಪ ಉಂಟಾಗಬಾರದು. ಅತ್ತಕಡೆಯೇ ಅವಳ ಗಮನ.

ಮನೆಯ ಯಜಮಾನನಿಗೆ ಇವೆಲ್ಲ ಗೊತ್ತು . ಆದರೆ ಗೊತ್ತಿಲ್ಲದವನ ಥರ ಶೇವು ಮಾಡಿಕೊಂಡು ಕೆಲಸಕ್ಕೆ ಹೊರಡಲು ಅಣಿಯಾಗುತ್ತಿದ್ದಾನೆ. ಬರೋವಾಗ ಹಣ್ಣು ಹೂವು ತರೋದು ಮರೀಬೇಡ್ರೀ ಎನ್ನುವ ಮನೆಯಾಡತಿಯ ಮಾತುಗಳು ಶೂಗೆ ಲೇಸು ಕಟ್ಟುವಾಗ ಅವನ ಕಿವಿಗೆ ಬೀಳುತ್ತಿದೆ.

ಇನ್ನು ಮಕ್ಕಳು? ಯಾವತ್ತೂ ಮಕ್ಕಳೇ. ಮಾವನ ಮಕ್ಕಳು ಊರಿಂದ ಎಷ್ಟು ಹೊತ್ತಿಗೆ ಬರುತ್ತಾರೆ? ಯಾವಯಾವ ಆಟ ಆಡೋಣ? ಎನ್ನುವುದರ ಕಡೆಗೇ ಗಂಡು ಹುಡುಗರ ಗಮನ. ಆದರೆ ಹೆಣ್ಮಕ್ಕಳು ಹಾಗಲ್ಲ. ಅಮ್ಮನಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾ , ಸಣ್ಣಗೆ ಹಾಡು ಹೇಳಿಕೊಳ್ಳುತ್ತಾ ಲವಲವಿಕೆಯಿಂದ ಅತ್ತಿಂದಿತ್ತ ಓಡಾಡುವುದರಲ್ಲೇ ಅವರಿಗೆ ಸಂತೋಷ.

ಜರಿಯ ಕೆಂಪು ಲಂಗ, ಹಸುರು ರವಿಕೆ ತೊಟ್ಟು ಮನೆತುಂಬ ಸಂಭ್ರಮಿಸುವ ಇಂಥ ಹುಡುಗಿಯರನ್ನು ಬಾರಮ್ಮಾ ಇಲ್ಲಿ ಅಂತ ಕರೆದು ನೋಡಿ. ಏನೋ ಬಹಳ ಕೆಲಸವಿರುವವಳ ಹಾಗೆ ಅವಳು ಓಡಿಹೋಗುತ್ತಾಳೆ. ಅವಳ ಹಿಂದೆ ನೀವೂ ಓಡಿ ಅವಳ ಗಲ್ಲವನ್ನು ಚಿವುಟಿದರೆ ನಿಮಗೆ ಶ್ರಾವಣ ಸಿಕ್ಕಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X