ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಾಂಶ ಸಂಭೂತ ರಾಘವೇಂದ್ರ ಸ್ವಾಮೀಜಿ

By Staff
|
Google Oneindia Kannada News

ಗುರುರಾಯರ ಆರಾಧನೆಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

sri raghavendra swamyಗುರು ರಾಘವೇಂದ್ರರನ್ನು ದೇವರು ಎನ್ನುವವರಿದ್ದಾರೆ. ದೇವದೂತ ಎನ್ನುವವರಿದ್ದಾರೆ. ದೇವಾಂಶ ಸಂಭೂತ ಎನ್ನುವವರೂ ಇದ್ದಾರೆ. ರಾಘವೇಂದ್ರರು ಸ್ವಾಮೀಜಿ ಎಂದು ಪ್ರತಿಪಾದಿಸುವವರೂ ಇದ್ದಾರೆ.

ಯಾರು ಏನೇ ಅನ್ನಲಿ ದೇಶಾದ್ಯಂತ ಹಾಗೂ ವಿಶ್ವಾದ್ಯಂತ ಪೂಜಿತರಾಗುತ್ತಿರುವ ರಾಯರು ಸಂಗೀತ - ಸಾಹಿತ್ಯ ಸರಸ್ವತಿಯ ವರಪುತ್ರ ಎನ್ನುವುದಂತು ಸುಸ್ಪಷ್ಟ. ಸಂಸ್ಕೃತದಲ್ಲಿ 'ಪರಿಮಳ "ವೇ ಮುಂತಾದ ಅಮೂಲ್ಯ ಕೃತಿಗಳನ್ನು ನೀಡಿರುವ ಗುರು ರಾಘವೇಂದ್ರ ತೀರ್ಥರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಆದರೆ, ನಮಗೆ ಲಭ್ಯವಿರುವುದು ಬಹು ಜನಪ್ರಿಯವಾದ ಇಂದು ಎನಗೆ ಗೋವಿಂದ..... ಎಂಬ ಅಮೂಲ್ಯ ಕೃತಿ ರತ್ನ ಮಾತ್ರ.

ಗುರು ರಾಘವೇಂದ್ರರಾಯರು, ವೀಣೆಯನ್ನು ಹಿಡಿದು ಕುಳಿತರಂತೂ ಶ್ರೀಕೃಷ್ಣನೇ ಎದುರು ನಿಂತು ನೃತ್ಯ ಮಾಡುತ್ತಿದ್ದನಂತೆ. ರಾಯರು ಸಂಗೀತ ಹಾಡಿದರೆ, ಜಗವೇ ಮೈಮರೆಯುತ್ತಿತ್ತಂತೆ. ಮಧ್ವ ಮತವನ್ನು ದೇಶಾದ್ಯಂತ ಪ್ರಚಾರ ಮಾಡಿದ ರಾಯರು ಜನರಿಗೆ ಮುಕ್ತಿ ಮಾರ್ಗ ತೋರಲು ಭುವಿಯಲ್ಲಿ ಅವತಾರ ಎತ್ತಿದ ಯತಿ.

ಪೂರ್ವದಲ್ಲಿ ಸೃಷ್ಟಿಕರ್ತ ಬ್ರಹ್ಮದೇವನ ದೇವಗಣಗಳಲ್ಲಿ ಶಂಕುಕರ್ಣರಾಗಿ ಬ್ರಹ್ಮದೇವನ ಶಾಪದಿಂದ ಹಿರಣ್ಯಕಶಿಪುವಿನ ಮಗನಾಗಿ ಹುಟ್ಟಿ ಅನವರತ ನಾರಾಯಣ ನಾಮ ಸಂಕೀರ್ತನೆ ಮಾಡುತ್ತಾ, ದುಷ್ಟ ಸಂಹಾರಕ್ಕೆ ಸಹಕಾರಿಯಾಗಿ ನಿಂತ ಪ್ರಹ್ಲಾದ ತನ್ನ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಹುಟ್ಟಿದರಂತೆ, ವ್ಯಾಸರ ಅವತಾರಾ ನಂತರ ರಾಘವೇಂದ್ರ ತೀರ್ಥ ಯತಿರಾಜರಾಗಿ ಹುಟ್ಟಿದರಂತೆ. ಅದಕ್ಕೆ ಪ್ರಹ್ಲಾದ - ವ್ಯಾಸಮುನಿಯೇ - ರಾಘವೇಂದ್ರ ಯತಿಯೇ ಎಂದು ಭಕ್ತರು ಅವರನ್ನು ಆರಾಧಿಸುವುದು.

16ನೇ ಶತಮಾನದಲ್ಲಿ ಈ ಭೂಮಿಯಲ್ಲಿ ತಿಮ್ಮಣ್ಣ ಭಟ್ಟರು ಹಾಗೂ ಗೋಪಮ್ಮ ಎಂಬ ಸಾಧ್ವೀ ದಂಪತಿಗಳಿಗೆ ತಿರುಪತಿ ಗಿರಿವಾಸನ ಅನುಗ್ರಹದಿಂದ ಜನಿಸಿದ ಗುರು ರಾಘವೇಂದ್ರ ತೀರ್ಥರು ಜನರ ಕಷ್ಟದ ಕಣ್ಣೀರನ್ನು ಒರೆಸಿ, ಸರ್ವರಿಗೂ ಮುಕ್ತಿಯ ಮಾರ್ಗ ತೋರಿದವರು. ಹಲವು ಕೃತಿಗಳನ್ನೂ, ಭಾಷ್ಯಗಳನ್ನೂ ಬರೆದ ಅವರು, ಮಹಾಭಾರತವೇ ಮೊದಲಾದ ಕೃತಿಗಳಿಗೆ ಅರ್ಥವಿವರಣೆಗಳನ್ನೂ ಬರೆದಿದ್ದಾರೆ. ಇವರ ಪೂರ್ವಾಶ್ರಮದ ಹೆಸರು ವೆಂಕಟನಾಥ ಅಥವಾ ವೆಂಕಣ್ಣ. ಕುಂಭಕೋಣದ ಶ್ರೀ ಸುಧೀಂದ್ರ ತೀರ್ಥರಲ್ಲಿ ವಿದ್ಯಾಭ್ಯಾಸ ಮುಗಿಸಿದ ವೆಂಕಟನಾಥರು, ಸನ್ಯಾಸ ದೀಕ್ಷೆಯ ನಂತರ ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರರಾದರು.

ಆರಾಧನೆ: ಗುರು ರಾಘವೇಂದ್ರ ರಾಯರು ಸಶರೀರದೊಂದಿಗೆ ಬೃಂದಾವನಸ್ಥರಾದ ದಿನವನ್ನು ಭಕ್ತರು ಗುರುರಾಯರ ಆರಾಧನೆಯಾಗಿ ಆಚರಿಸುತ್ತಾರೆ. ಆರಾಧನೆಯನ್ನು ಎಲ್ಲರೂ ಮೂರು ದಿನ ಆಚರಿಸುತ್ತಾರೆ. ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಕರೆಯಲಾಗುವ ಈ ಮೂರೂ ದಿನಗಳಂದು, ರಾಯರ ಮಠದಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಗುರುರಾಘವೇಂದ್ರರ ವೈಭವ, ರಾಯರ ಚರಿತ್ರೆಯ ಪಠಣ, ರಾಯರ ಪವಾಡಗಳ ಸ್ಮರಣೆ ನಡೆಯುತ್ತದೆ. ಮೂರೂ ದಿನವೂ ಅನ್ನ ಸಂತರ್ಪಣೆ ನಡೆಯುತ್ತದೆ.

ನಂಬಿಕೆ : ರಾಯರು ಮಂತ್ರಾಲಯದಲ್ಲಿ ಬೃಂದಾವನಸ್ಥರಾಗಿ 329 ವರ್ಷಗಳು ಉರುಳಿವೆ. ಆದರೆ, ರಾಯರು ಈ ಬೃಂದಾವನದಲ್ಲಿಯೇ ಇನ್ನೂ 371 ವರ್ಷಗಳ ಕಾಲ ಸಶರೀರಿಗಳಾಗಿದ್ದು, ತಮ್ಮ ಎಲ್ಲ ಭಕ್ತರನ್ನು ಕಾಯುತ್ತಾರೆ ಎಂಬ ನಂಬಿಕೆ ಇದೆ. ಒಟ್ಟು 700 ವರ್ಷಗಳ ಕಾಲ ತಾವು ಬೃಂದಾವನದಲ್ಲಿದ್ದು, ಈ ಭರತವರ್ಷದ ಎಲ್ಲ ಜನರ ಸಂಕಷ್ಟವನ್ನು ಪರಿಹರಿಸುವುದಾಗಿ ರಾಯರು ಹೇಳಿದ್ದಾರಂತೆ.

ರಾಯರು ಬೃಂದಾವನಸ್ಥರಾದ ಮೇಲೂ ಕೆಲವರಿಗೆ ದರ್ಶನ ಕೊಟ್ಟಿದ್ದುಂಟು ಎನ್ನುತ್ತದೆ ಇತಿಹಾಸ. 150 ವರ್ಷಗಳ ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ಕಲೆಕ್ಟರಾಗಿದ್ದ, ಸರ್‌ ಥಾಮಸ್‌ ಮನ್ರೋ ಅವರಿಗೆ ದರ್ಶನ ನೀಡಿದ್ದರಂತೆ. ರಾಯರು ಇನ್ನೂ ಬೃಂದಾವನದಲ್ಲಿ ಜೀವಂತವಾಗಿದ್ದಾರೆ ಎಂಬ ನಂಬಿಕೆಗೆ ಇದು ಪುಷ್ಟಿ ನೀಡುತ್ತದೆ.

ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಅಂತೆಯೇ ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಹೆಚ್ಚು ಹೆಚ್ಚು ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ತೀರ್ಥ ಕ್ಷೇತ್ರ ಮಂತ್ರಾಲಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X