• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಗ್ಯದಾ ಲಕ್ಷ್ಮಿ ಬಾರಮ್ಮಾ ..

By Staff
|

'ಸುಕೋಮಲೆ" ಅನ್ನುವ ವಿಶೇಷಣ ಕಮಲಪ್ರಿಯೆ ಶ್ರೀಲಕ್ಷ್ಮಿಯನ್ನು ನೋಡಿಯೇ ಹುಟ್ಟಿಕೊಂಡಿರಬೇಕು. ಸ್ಥಿತಿಕರ್ತ ವಿಷ್ಣುವಿನರಸಿಯನ್ನು ಹೊತ್ತಿದ್ದರೂ ಕಮಲದ ಎಳೆಯೂ ಕೊಂಕುವುದಿಲ್ಲವೆಂದರೆ ಆಕೆ ಸುಕೋಮಲೆ ಅಲ್ಲದೆ ಮತ್ತೇನು? ಲಕ್ಷ್ಮಿಗೆ ಮಿಗಿಲಾದವರಿರಲಿ ಸಮರಾಗುವ 'ಕೋ(ಕ)ಮಲೆ"ಯರನ್ನು ಹುಡುಕಿದರೂ ಸಿಕ್ಕರು.

ಕಮಲಮುಖಿ, ಕಮಲ ನಯನೆ, ಕಮಲವನ್ನೇ ಪೀಠವಾಗಿಸಿಕೊಂಡವಳು ಈ ತಾಯಿ. ಕೈಯಲ್ಲೂ ಕಮಲ ಹಿಡಿದಿರುವ ಲಕುಮಿ ನಿಲ್ಲುವುದೂ ಕಮಲದ ಮೇಲೆಯೇ. ಕೊರಳಲ್ಲಿ ಕಮಲ ಮಾಲೆ. ಅಕ್ಕಪಕ್ಕದಲ್ಲಿ ನಿಂತ ಆನೆಗಳ ಸೊಂಡಿಲಲ್ಲೂ ಕಮಲಗಳು. ಕಮಲವನ್ನು ಮುಡಿದಿಲ್ಲ ಅನ್ನುವ ಕೊರೆಯಾಂದನ್ನು ಬಿಟ್ಟರೆ ಲಕ್ಷ್ಮಿ 'ಕಮಲ ಪ್ರಿಯೆ! ".

ನಾಜೂಕು ಕಮಲಕ್ಕಿಂತಲೂ ನಾಜೂಕಾದ ನಮ್ಮ ಲಕ್ಷ್ಮಿಯ ಎರಡೂ ಕೈಗಳು ಮಾತ್ರ ಕಮಲವನ್ನು ಸುರಿಸುವುದಿಲ್ಲ . ಆಕೆ ಕಮಲ ವರ್ಷಿಣಿಯಾಗಿದ್ದರೆ ಈ ಜಗದ ಮಂದಿ 'ಭಾಗ್ಯದಾ ಲಕ್ಷ್ಮೀ ಬಾರಮ್ಮ " ಎಂದು ಸದಾಕಾಲ ಸರ್ವಾವಸ್ಥೆಯಲ್ಲೂ ಜಪಿಸುತ್ತಿರಲಿಲ್ಲ . ಆಕೆ ಕಾಂಚನ ವರ್ಷಿಣಿ. ಕಮಲ ನಯನೆಯಾದರೂ, ಕಾಂಚನಕಟಾಕ್ಷ ದ ದೇವತೆ.

ಝಣಝಣ ಎಂದು ಸದ್ದನು ಮಾಡು...

ಲೋಕಮಾತೆಯರೆಂದು ಮಾನ್ಯರಾದ ತ್ರಿಮೂರ್ತಿಗಳ ಸತಿಯರಲ್ಲಿ ಲಕ್ಷ್ಮಿಗೇ ಹೆಚ್ಚು ಮನ್ನಣೆ, ಮೊದಲ ಮಣೆ. ಲಕ್ಷ್ಮಮ್ಮನ ಝಣಝಣ ಸದ್ದಿನಡಿ ಸರಿದು ನಿಲ್ಲುತ್ತಾರೆ ವಿದ್ಯಾಧಿದೇವತೆ ಸರಸ್ವತಿ, ಶಕ್ತಿದೇವತೆ ಪಾರ್ವತಿ. ಸರಸ್ವತಿ- ಪಾರ್ವತಿಯರ ಆರಾಧಕರಿಗೂ ಲಕ್ಷ್ಮಿಯೆಂದರೆ ಅಚ್ಚುಮೆಚ್ಚು . ಆದರೆ, ಲಕ್ಷ್ಮೀಪುತ್ರರಿಗೆ ಈ ಮಾತನ್ನು ಹೇಳುವುದು ಕಷ್ಟ . ಸಂತಾನ, ಧಾನ್ಯ, ಕೀರ್ತಿ, ದಾರಿದ್ರ್ಯ ಮುಂತಾಗಿ ಅಷ್ಟರೂಪವತಿಯಾದರೂ ಧನಲಕ್ಷ್ಮಿ ಅನ್ನುವುದೇ ಆಕೆಗೆ ಒಪ್ಪು .

'ಶ್ರೀ" ಅಂದರೆ ಸಿರಿ ಅರ್ಥಾತ್‌ ಸಮೃದ್ಧತೆ. ಸಿರಿಯನ್ನು ಕರುಣಿಸುವ ದೇವತೆಯಾದ್ದರಿಂದ ಶ್ರೀಲಕ್ಷ್ಮಿ . ವೈದಿಕ ಪೂರ್ವ ಕಾಲದಲ್ಲಿ ಸಂತಾನ, ನೀರು, ಕೃಷಿ ಮುಂತಾದವುಗಳಿಗೆ ಸಂವಾದಿಯಾಗಿ 'ಶ್ರೀ" ಶಬ್ದ ಬಳಕೆಯಲ್ಲಿತ್ತು . ಆ ಹೊತ್ತು ಹಣ್ಣಿನಿಂದ ತೂಗುವ ಮರ, ಭೂಮಾತೆ, ಮಗುವಿನ ತಾಯಿ ಎಲ್ಲವೂ ಲಕ್ಷ್ಮಿಯ ಅವತಾರವೇ. ವೈದಿಕ ಕಾಲದಲ್ಲಿ ಶುರುವಾದದ್ದು ಲಕ್ಷ್ಮಿಯ ಕಲ್ಪನೆ. ಲಕ್ಷ್ಮಿಯೆಂದರೆ ಸೌಂದರ್ಯ ಅನ್ನುವ ಪರಿಕಲ್ಪನೆ. ನಂತರ ಸಂಪತ್ತಿನ ಸೂಚಕವಾಗಿ ಶ್ರೀಲಕ್ಷ್ಮಿಯ ಉದಯ. ಇದು ನಮ್ಮ ನಡುವೆ ಲಕ್ಷ್ಮಿ ಬೆಳೆದುಬಂದ ಬಗೆ. ಆದರೆ, ಪುರಾಣಗಳು ಹೇಳುವುದೇ ಬೇರೆ..

ಅಮೃತಕ್ಕಾಗಿ ದೇವ- ದಾನವರು ವಾಸುಕಿಯನ್ನು ಕಡೆಗೋಲಾಗಿಸಿ ಸಮುದ್ರವನ್ನು ಮಥಿಸುವಾಗ ಕ್ಷೀರಸಾಗರದಿಂದ ಉದಿಸಿದವಳು ಶ್ರೀಲಕ್ಷ್ಮಿ. ಸಮುದ್ರರಾಜ ತನಯೆಯ ಬೆಡಗಿಗೆ ಸೋತ ವಿಷ್ಣು ಆಕೆಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡ. ಎದೆಯಲ್ಲಿ ಬಚ್ಚಿಟ್ಟುಕೊಂಡ. ದಶಾವತಾರಗಳಲ್ಲೂ ಹಿಂಬಾಲಿಸಿದ ಲಕ್ಷ್ಮಿ - ವಿಷ್ಣು ರಾಮನಾದಾಗ ಸೀತೆಯಾದಳು, ಕೃಷ್ಣನಾದಾಗ ರುಕ್ಮಿಣಿಯಾದಳು.

ಅಂಥ ಲಕ್ಷ್ಮಿಯ ಹಬ್ಬವೆಂದರೆ..

ವರ ಮಹಾಲಕ್ಷ್ಮಿ ಹಬ್ಬವೆನ್ನುವುದು ಲಕ್ಷ್ಮಿಪುತ್ರರೆಂದೇ ಹೆಸರಾದ ವೈಶ್ಯರಿಗೆ ಮಾತ್ರ ಮೀಸಲಾದ ಕಾಲ ಇದಲ್ಲ . ಜಾತಿಯೆನ್ನುವುದು ಹುಟ್ಟಿಗೆ ಮಾತ್ರ ಸೀಮಿತಗೊಂಡು ವಾಣಿಜ್ಯವೆನ್ನುವುದು ಬುದ್ಧಿವಂತರಿಗೆ ಬದುಕಾದ ಜಾಗತೀಕರಣದ ದಿನಗಳಲ್ಲಿ ಲಕ್ಷ್ಮಿಯ ಹಬ್ಬದ ವ್ಯಾಪ್ತಿಯೂ ಹೆಚ್ಚಿದೆ. ಹೊಸಬಟ್ಟೆಯಾಂದಿಗೆ ಕಳಸಹೂಡಿ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ವಿವಿಧ ರೂಪಗಳಲ್ಲಿ ಲಕ್ಷ್ಮಿ ಸರ್ವ ಧರ್ಮೀಯರಿಗೂ ಪ್ರಿಯಳಾಗಿದ್ದಾಳೆ.

ಶ್ರಾವಣದ ಮೊದಲ ಶುಕ್ರವಾರವೇ 'ವರ ಮಹಾಲಕ್ಷ್ಮಿ ಹಬ್ಬ". ಹೆಜ್ಜೆಯ ಮೇಲೆ ಹೆಜ್ಜೆಯ ಇಟ್ಟು ಬಾರಮ್ಮ ಎಂದು ದಕ್ಷಿಣಭಾರತದವರು ಕೂಗಿ ಕರೆಯುವುದು ಆಗಲೇ. ಆದರೆ ಉತ್ತರಭಾರತದ ಮಂದಿ ದೀವಳಿಗೆಯ ಸಂದರ್ಭದಲ್ಲಿ ಲಕ್ಷ್ಮಿಪೂಜೆಯ ಆಚರಿಸುತ್ತಾರೆ. ಕಾಲ ಬೇರೆಯಾದರೂ ಉದ್ದೇಶ ಮಾತ್ರ ಒಂದೇ- 'ಲಕ್ಷ್ಮಿ ನಮ್ಮ ಮನೆಯಲ್ಲೇ ಕೂರಬೇಕು!".

ಅಷ್ಟರೂಪಗಳಂತೆಯೇ ಲಕ್ಷ್ಮಿಗೆ ಬಣ್ಣಗಳೂ ಹಲವು. ವಿಷ್ಣುವಿನೊಂದಿಗೆ ಶೇಷ ಶಯನವನ್ನು ಹಂಚಿಕೊಳ್ಳುವಾಗ ಆಕೆ ಕಪ್ಪು ಸುಂದರಿ. ಸಮೃದ್ಧತೆ- ಸಂಪತ್ತಿನ ಮೂರ್ತಿಯಾದಾಗ ಆಕೇ ಹೊನ್ನ ಹಳದಿಯ ದೇವತೆ. ಅದೇ ಮಾತೆ ಹಾಲ ಬಿಳುಪಿನವಳಾಗಿ ಪ್ರಕೃತಿಯೇ ತಾನೆನ್ನುತ್ತಾಳೆ, ಗುಲಾಬಿ ವರ್ಣದವಳಾಗಿ ಸೃಷ್ಟಿ- ಸೃಜನಶೀಲತೆಗೆ ಪ್ರೇರಕಳಾಗುತ್ತಾಳೆ.

ಅಂದಹಾಗೆ, ಲಕ್ಷ್ಮಿಪೂಜೆಯ ಸಂದರ್ಭದಲ್ಲಿ ಏನನ್ನು ಬೇಡುತ್ತೀರಿ. 'ಕನಕವೃಷ್ಟಿಯ ಕರೆಯುತ ಬಾರೆ" ಎಂದಾದರೆ ನೀವು ಅಲ್ಪತೃಪ್ತರು. ಆಕೆ ಧನದೇವತೆ ಮಾತ್ರವಲ್ಲ - ಸಂತಾನ, ಶ್ರೇಯಸ್ಸು , ಕೀರ್ತಿ ಮುಂತಾದವುಗಳ ಸಂಕೇತವೂ ಹೌದು. ಲಕ್ಷ್ಮಿಯನ್ನು ಸೆರೆ ಹಾಕುವುದೇನು ಚೆನ್ನ ! ನಿಮಗೆ ಲಕ್ಷ್ಮಿ ಕಟಾಕ್ಷವಾಗಲಿ!

ಕೊನೆಯದಾಗಿ-

ಲೋಕಮಾನ್ಯಳಾದರೂ, ಪ್ರತ್ಯೇಕ ಲಕ್ಷ್ಮಿ ದೇಗುಲಗಳು ಬಲು ಅಪರೂಪ. ಕೊಲ್ಹಾಪುರ, ಗೊರವನಹಳ್ಳಿ ಅಂಥಹ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ- ಲಕ್ಷ್ಮಿ ಒಬ್ಬಂಟಿಯಾಗಿ ಸಿಗುವುದು ಕಷ್ಟ . ಪತಿಯಾಂದಿಗೇ ಆಕೆಯನ್ನು ದರ್ಶಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more