ಮಕರ ಸಂಕ್ರಾಂತಿ ಪರ್ವಕಾಲ: ಆಚರಣೆ ಏಕೆ? ಹೇಗೆ?

Posted By:
Subscribe to Oneindia Kannada

ಸಂಕ್ರಾಂತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಜಗದ ಅಧಿನಾಯಕ ಸೂರ್ಯ ತನ್ನ ಪಥ ಬದಲಿಸುವ ಪರ್ವಕಾಲವನ್ನೇ ನಾವು ಸಂಕ್ರಾಂತಿ ಎಂದು ಕರೆಯುತ್ತೇವೆ.

12 ಸೌರಮಾನ ಮಾಸಗಳಾದ ಮೇಷ ದಿಂದ ಹಿಡಿದು, ಮೀನದವರೆಗೂ ಸೂರ್ಯ ತನ್ನ ಪಥ ಬದಲಿಸುತ್ತಾನಾದರೂ ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ ಬದಲಿಸುವ ಪರ್ವಕಾಲವನ್ನು ಮಕರಸಂಕ್ರಾಂತಿಯೆಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಮಕರ ಸಂಕ್ರಾಂತಿಯಿಂದ ಉತ್ತರಾಯಣದ ಪುಣ್ಯಕಾಲ ಆರಂಭವಾಗುತ್ತದೆ. ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಇಚ್ಛಾಮರಣಿ ಭೀಷ್ಮ ಬಾಣದ ಹಾಸಿಗೆಯ ಮೇಲೆ ಮಲಗಿ, ಇದೇ ಉತ್ತರಾಯಣ ಪರ್ವಕಾಲಕ್ಕಾಗಿ ಕಾಯುತ್ತಿದ್ದ ಎಂಬುದನ್ನು ನಾವೆಲ್ಲ ತಿಳಿದಿದ್ದೇವೆ. ಉತ್ತರಾಯಣದಲ್ಲಿ ಮರಣಿಸಿದರೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.

ನಮ್ ಸಂಕ್ರಾಂತಿ ಸಕತ್, ಆಚರಣೆ ಸೂಪರ್, ನಿಮ್ಮೂರಿನಲ್ಲಿ ಹೇಗಿತ್ತು?

ಅಷ್ಟೇ ಅಲ್ಲ, ಮಕರ ಸಂಕ್ರಾಂತಿ ಎಂದರೆ ಸುಗ್ಗಿಕಾಲವೂ ಹೌದು. ವರ್ಷವೆಲ್ಲ ಬೆವರು ಸುರಿಸಿ ಬೆಳೆದ ಫಸಲು ರೈತನ ಕೈಗೆಟಕುವ ಸಮಯ ಇದು. ಆದ್ದರಿಂದಲ್ಲೇ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಪ್ರತಿ ವರ್ಷ ಜನವರಿ 14 ಅಥವಾ 15 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.

ಈ ವರ್ಷ ಸಂಕ್ರಾಂತಿ ಹಬ್ಬವನ್ನು ಜನವರಿ 15 ರಂದು ಆಚರಿಸಲಾಗುತ್ತಿದೆ. ತನ್ನಿಮಿತ್ತ ಈ ಹಬ್ಬದ ಆಚರಣೆ ಏಕೆ ಮತ್ತು ಹೇಗೆ ಎಂಬ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪರಿವರ್ತನೆಯ ಸಂಕ್ರಾಂತಿ!

ಪರಿವರ್ತನೆಯ ಸಂಕ್ರಾಂತಿ!

ಸಂಕ್ರಾಂತಿ ಎಂದರೆ, ಹೆಸರೇ ಸೂಚಿಸುವುಂತೆ ಒಳಿತನ್ನುಂಟುಮಾಡುವಂಥ ಹೊಸ ಬದಲಾವಣೆ. ಧನಾತ್ಮಕ ಪರಿವರ್ತನೆಗೆ ನಾಂದಿಹಾಡುವ ಈ ಹಬ್ಬದಲ್ಲಿ ಸೂರ್ಯನನ್ನು ಆರಾಧಿಸಲಾಗುತ್ತದೆ. ಮೈಕೊರೆವ ಚಳಿಯಿಂದ ತತ್ತರಿಸಿ, ಹೊಲ-ಗದ್ದೆಗಳ ಕೆಲಸಗಳತ್ತ ಮುಖಮಾಡಲೂ ಹಿಂಜರಿಯುತ್ತಿರುವವರಿಗೆ ಸೂರ್ಯನ ಪ್ರಖರ ಕಿರಣಗಳು ಮೈಗೆ ಸೋಂಕಿ ಹೊಸ ಹುರುಪು ನೀಡುತ್ತವೆ. ಸಂಕ್ರಾಂತಿಯ ನಂತರ ಚಳಿಗಾಲ ಕೊಂಚ ಕೊಂಚವೇ ಕಡಿಮೆಯಾಗುತ್ತದೆ.

ಶುಭಕಾರ್ಯಗಳಿಗೆ ನಾಂದಿ

ಶುಭಕಾರ್ಯಗಳಿಗೆ ನಾಂದಿ

ಧನುರ್ಮಾಸದ ಸಮಯದಲ್ಲಿ ಹಿಂದು ಸಂಸ್ಕೃತಿಯಲ್ಲಿ ಯಾವ ಶುಭಕಾರ್ಯವನ್ನೂ ಮಾಡುವಂತಿಲ್ಲ. ಆದರೆ ಮಕರ ಮಾಸ ಆರಂಭವಾಗುತ್ತಿದ್ದಂತೆಯೇ ಮತ್ತೆ ಮದುವೆ, ಮುಂಜಿಗಳ ಆಚರಣೆ ಆರಂಭವಾಗುತ್ತದೆ.

ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾಂತಿಯ ಸಂಭ್ರಮ !

ಆಚರಣೆ ಹೇಗೆ?

ಆಚರಣೆ ಹೇಗೆ?

ಕರ್ನಾಟಕದಾದ್ಯಂತ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೊಸ ಬಟ್ಟೆ ತೊಟ್ಟು, ಎಳ್ಳು ಬೆಲ್ಲ ಸವಿಯುತ್ತ ಆಚರಿಸಲ್ಪಡುವ ಈ ಹಬ್ಬ ಹೆಂಗೆಳೆಯರಿಗೆ ಅಚ್ಚುಮೆಚ್ಚು. ಈ ಸಮಯದಲ್ಲಿ ಚಳಿ ಹೆಚ್ಚಿರುವುದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸುವ ಎಳ್ಳು ಮತ್ತು ಬೆಲ್ಲವನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದಲೇ ಎಳ್ಳುಬೀರುವ ಶಾಸ್ತ್ರ ಮಾಡಲಾಗುತ್ತದೆ. ಇದರೊಟ್ಟಿಗೆ ಹುರಿಗಡಲೆ, ಕೊಬ್ಬರಿ, ಸಕ್ಕರೆ ಅಚ್ಚುಗಳನ್ನೂ ಸೇರಿಸಿ ತಿನ್ನುವ ರೂಢಿ ಇದೆ. ಸುಗ್ಗಿಯ ಸಂಕೇತವಾಗಿ ಕಬ್ಬನ್ನೂ ಹಂಚಲಾಗುತ್ತದೆ.

ಪವಿತ್ರ ತರಂಗಿಣಿಯಲ್ಲಿ ಪುಣ್ಯಸ್ನಾನ

ಪವಿತ್ರ ತರಂಗಿಣಿಯಲ್ಲಿ ಪುಣ್ಯಸ್ನಾನ

ಈ ಹಬ್ಬದಂದು ದೇಹ ಮತ್ತು ಮನಸ್ಸಿನ ಕಲ್ಮಶಗಳನ್ನು ಕಳೆದುಕೊಳ್ಳುವ ಪಣತೊಟ್ಟು ಪವಿತ್ರ ನದಿಗಳಲ್ಲಿ ಸ್ನಾನ ಮಅಡುವ ಪ್ರತೀತಿಯೂ ಇದೆ. ಈ ಸಮಯದಲ್ಲಿ ಪುಣ್ಯ ನಧಿಗಳಲ್ಲಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇದೆ.

ಚಿತ್ತಾರದ ರಂಗವಲ್ಲಿ, ರುಚಿ ರುಚಿ ಪೊಂಗಲ್!

ಚಿತ್ತಾರದ ರಂಗವಲ್ಲಿ, ರುಚಿ ರುಚಿ ಪೊಂಗಲ್!

ಈ ಹಬ್ಬದಂದು ಹೆಂಗೆಳೆಯರೆಲ್ಲ ಮನೆಯ ಮುಂದೆ ಚಿತ್ತಾರದ ರಂಗೋಲಿ ಬರೆದು ಹಬ್ಬಕ್ಕೆ ವಿಶೇಷ ಮೆರಗು ನೀಡುತ್ತಾರೆ. ಈ ರಂಗೋಲಿಯ ಚಿತ್ತಾರದೊಂದಿಗೆ ಅಕ್ಕಿಯಿಂದ ತಯಾರಿಸಿದ ಸಿಹಿ ಮತ್ತು ಖಾರದ ಪೊಂಗಲ್ ಬಾಯಲ್ಲಿ ನೀರೂರಿಸಿ, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮತ್ತೆಲ್ಲಿ ಸಂಕ್ರಾಂತಿ?

ಮತ್ತೆಲ್ಲಿ ಸಂಕ್ರಾಂತಿ?

ಕರ್ನಾಟಕ ಬಿಟ್ಟರೆ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಗಳಲ್ಲೂ ಈ ಹಬ್ಬ ಆಚರಿಸಲಾಗುತ್ತದೆ. ಪೊಂಗಲ್ ಎಂದೂ ಈ ಹಬ್ಬಕ್ಕೆ ಕರೆಯಲಾಗುತ್ತದೆ. ಇದೇ ದಿನ ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಯಂತೂ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಗಾಳಿಪಟ ಹಾರಿಬಿಡುವ ಮೂಲಕ ಈ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಲೋಹರಿ ಎಂಬ ಹೆಸರಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.

ಗೋವುಗಳಿಗೂ ಸಂಭ್ರಮ

ಗೋವುಗಳಿಗೂ ಸಂಭ್ರಮ

ಗೋವುಗಳನ್ನು ಸಿಂಗರಿಸಿ, ಕಿಚ್ಚು ಹಾಯಿಸುವ ಸಂಪ್ರದಾಯವೂ ಕೆಲವೆಡೆ ಈಗಲೂ ಇದು. ಕಾಮಧೇನು ಎಂದೇ ಕರೆಯಲ್ಪಡುವ ರಾಸುಗಳಿಗೆ ಸಂಕ್ರಾಂತಿಯಂದು ವಿಶೇಷ ಗೌರವ. ಅವಿರತ ಕೆಲಸ ಮಾಡಿ ದಣಿದಿದ್ದ ರೈತರಿಗೂ, ಊಳಿ ಸುಸ್ತಾದ ರಾಸುಗಳಿಗೂ ಕೆಲಹೊತ್ತು ಮನಸ್ಸನ್ನು ಸಂಭ್ರಮದಲ್ಲಿ ಕಳೆಯುವುದಕ್ಕಾಗಿ ವಿವಿಧ ಸ್ಪರ್ಧೆಗಳು, ಮನರಂಜನೀಯ ಕಾರ್ಯಕ್ರಮಗಳೂ ನಡೆಯುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Makar Sankranti refers to a specific solar day in the Hindu calendar and a Hindu festival in reference to deity Sun. The festival is observed in January 14th or 15th every year. It marks the first day of sun's transit into the Makara (Capricorn), marking the end of the month with the winter solstice and the start of longer days. Here are some facts about why and how to celebrate Sankranti.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ