Navaratri 2023: ಧಾರವಾಡ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ಕಂಡುಬಂದ ಭಕ್ತರ ದಂಡು
ಹುಬ್ಬಳ್ಳಿ, ಅಕ್ಟೋಬರ್, 16: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ವೈಭವ ಕಳೆಗಟ್ಟಿದೆ. ಭಾನುವಾರದಿಂದ ಆರಂಭವಾದ ಉತ್ಸವದಲ್ಲಿ ಜನರು ಭಕ್ತಿ ಭಾವದಿಂದ ಪಾಲ್ಗೊಂಡು ದೇವಿ ಆರಾಧನೆ ಮಾಡಿದರು.
9 ದಿನ ದೇವಿ ಪೂಜೆ, ಆರಾಧನೆ ಮಾಡಲು ಅನೇಕ ಭಕ್ತರು ತಮ್ಮ ಮನೆಗಳಲ್ಲಿ ಘಟಸ್ಥಾಪನೆ ಮಾಡಿದರು. ಹಲವು ದೇವಸ್ಥಾನಗಳಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಸಾರ್ವಜನಿಕವಾಗಿ ಉತ್ಸವ ನಡೆಸುತ್ತಿದ್ದಾರೆ. ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಶರನ್ನವರಾತ್ರಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ದೇವಿ ಮೂತಿರ್ಯನ್ನು ಶೋಭಾಯಾತ್ರೆಯಲ್ಲಿ ತಂದು ಪ್ರತಿಷ್ಠಾಪನೆ ಮಾಡಲಾಯಿತು.

ರುದ್ರಾಭಿಷೇಕ, ಶ್ರೀದುರ್ಗಾ ಪ್ರತಿಷ್ಠಾಪನೆ, ಗಣಹೋಮ, ನವಗ್ರಹ ಹೋಮ, ಶ್ರೀ ದುರ್ಗಾ ಹೋಮ, ಶ್ರೀ ದುರ್ಗಾ ಸಪ್ತಶತಿ ಪಾರಾಯಣ ನಡೆಯಿತು. ಇನ್ನು ಇಲ್ಲಿಯ ದಾಜಿಬಾನಪೇಟ ಎಸ್.ಎಸ್.ಕೆ. ಪಂಚ ಟ್ರಸ್ಟ್ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಪುರಾತನ ಮಂದಿರ ಹಾಗೂ ಗ್ರಾಮದೇವತೆಯಂದು ಪ್ರಸಿದ್ಧಿ ಪಡೆದಿರುವ ಶ್ರೀ ದ್ಯಾಮವ್ವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಟಸ್ಥಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾತೆಯರಿಗೆ ಬೆಳ್ಳಿ ಆಭರಣ, ರೇಷ್ಮೆ ಸೀರೆಗಳ ಶೃಂಗಾರದೊಂದಿಗೆ ಹಣ್ಣು ಹಂಪಲುಗಳ ನೈವೇದ್ಯ ಅಪಿರ್ಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಎಸ್ ಸಮಾಜ ಅಧ್ಯಕ್ಷ ಹಾಗೂ ದೇವಸ್ಥಾನ ಟ್ರಸ್ಟಿ ಅಧ್ಯಕ್ಷ ಸತೀಶ್ ಮೆಹರವಾಡೆ ಮಾತನಾಡಿ, ತುಳಜಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಆಚರಣೆ ಚಾಲನೆ ಹಾಗೂ ಮಹತ್ವದ ಕುರಿತು ವಿವರಿಸಿದರು. ಹಾಗೆಯೇ ಇಲ್ಲಿಯ ದೇಶಪಾಂಡೆ ನಗರ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ನವರಾತ್ರಿಯ ಮೊದಲ ದಿನ ಶ್ರೀ ಕಾಮಾಕ್ಷಿ ದೇವಿ ಅಲಂಕಾರ ಮಾಡಲಾಗಿತ್ತು.
ದಾಜಿಬಾನಪೇಟ ಸೀತಾಬಾಯಿ ಕಲ್ಯಾಣ ಮಂಟಪದಲ್ಲಿ ದಸರಾ ಮಹೋತ್ಸವ ಸಮಿತಿ ವತಿಯಿಂದ ಟಸ್ಥಾಪನೆ ಮಾಡಿ, ಮಹಿಳೆಯರು ವಿಶೇಷ ಪೂಜೆ ನೆರವೇರಿಸಿದರು. ತುಳಜಾಭವಾನಿ ದೇವಸ್ಥಾನದಲ್ಲಿ ಟಸ್ಥಾಪನೆ ಮಾಡಿ ಸಡಗರದಿಂದ ದೇವಿ ಆರಾಧನೆ ಮಾಡಲಾಯಿತು. ದೇವಸ್ಥಾನದ ಟ್ರಸ್ಟಿ ಭಾಸ್ಕರ್ ಜಿತೂರಿ ಮಾತನಾಡಿ, ನವರಾತ್ರಿ ಹಬ್ಬದ ಆಚರಣೆ, ತಯಾರಿ ಬಗ್ಗೆ ಮಾಹಿತಿ ನೀಡಿದರು.
ಐತಿಹಾಸಿಕ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ನಿಮಿತ್ತ ಭಾನುವಾರ ತಡರಾತ್ರಿ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ದೇವಿಯ ಅಭಿಷೇಕ, ಘಟಸ್ಥಾಪನೆ, ವಿಶೇಷ ಪೂಜೆ ನೆರವೇರಿಸಿ, ಒಂಬತ್ತು ದಿನಗಳ ಉತ್ಸವಕ್ಕೆ ಚಾಲನೆ ನೀಡಲಾಯಿತು. ದುರ್ಗಾದೇವಿ ದೇವಸ್ಥಾನದಲ್ಲಿ ಸೇವಾ ಸಮಿತಿ ಸದಸ್ಯರು ನವರಾತ್ರಿ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವಿ ದರ್ಶನ ಪಡೆದರು.
ಒಂಬತ್ತು ದಿನಗಳ ಬೆಳಗ್ಗೆ ಮತ್ತು ಸಂಜೆ ಪೂಜೆ, ಆರತಿ, ಹವನ ನೆರವೇರಲಿದೆ. ಸೋಮವಾರ ದೇವಿ ಪೂಜೆ ಹಾಗೂ ಭಜನೆ, ಮಂಗಳವಾರ ಹಾಗೂ ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ ಮತ್ತು ಅರಿಶಿನ ಕುಂಕುಮ ಕಾರ್ಯಕ್ರಮ ಜರುಗಲಿದೆ.
ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ
ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಶ್ರೀ ಮಾತೆಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಈ ಮೂಲಕ ಜಗಜ್ಜನನೀ ದುರ್ಗಾದೇವಿಯ ಮೊದಲನೇ ಸ್ವರೂಪ ಹಂಸರೂಢ ಸರಸ್ವತಿಯ ರೂಪದಲ್ಲಿ ಮಾತೆ ಅನ್ನಪೂರ್ಣೆಶ್ವರಿ ಕಂಗೊಳಿಸಿದಳು.
ಬೆಳಗ್ಗೆ 6.30ರ ಸಮಯಕ್ಕೆ ಸರಿಯಾಗಿ ನವರಾತ್ರಿಯ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡವು. ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಪೂಜೆಗಳು ನೆರವೇರಿದವು. ಬೆಳಗ್ಗೆ 8.30ಕ್ಕೆ ಶ್ರೀ ಪಂಚದುರ್ಗಾ ಹೋಮ ನಡೆಯಿತು. ಹೋಮದ ಪೂರ್ಣಾಹುತಿಯನ್ನು ದೇವಸ್ಥಾನದ ದರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು.
ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ರಾಜ್ಯ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾತೆ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.












Click it and Unblock the Notifications