ಶ್ರೀರಾಮನ ಹುಟ್ಟುಹಬ್ಬಕ್ಕೆ 100% ಸೆಕ್ಯುಲರ್ ಪಾನ-ಗಾನ!
ಶ್ರೀಜಯನಾಮ ಸಂವತ್ಸರ, ವಸಂತ ಋತು, ಚೈತ್ರಮಾಸ, ಉತ್ತರಾಯಣ, ಶುಕ್ಲ ಪಕ್ಷ, ನವಮಿ ತಿಥಿ, ಪುನರ್ವಸು ನಕ್ಷತ್ರವಿರುವ ಮಂಗಳವಾರ (ಏ.8) ಶ್ರೀರಾಮನವಮಿ ಎಲ್ಲೆಡೆ ಆಚರಿಸಲಾಗುತ್ತಿದೆ. ವಾಲ್ಮೀಕಿ ವಿರಚಿತ ರಾಮಾಯಣದ ಕಥಾನಾಯಕ ಶ್ರೀರಾಮ ಕಡು ಬೇಸಿಗೆಯಲ್ಲಿ ಜನಿಸಿ ಜನರಿಗೆ ಬದುಕಿನ ಸಿಹಿ ಹಂಚಿದಾತ.
ರಾಮನವಮಿಗೆ ನಾನಾ ಬಗೆಯ ಪೇಯಗಳು. ಕಲ್ಲಂಗಡಿ, ಕರಬೂಜಾ, ನಿಂಬೆ ಹಣ್ಣಿನ ರಸ ಸೇವನೆಗೆ ಸಕಾಲ. ಹೆಸರುಬೇಳೆ ಕೋಸಂಬರಿಗೂ ರಾಮನವಮಿಗೂ ಬಿಡಿಸಲಾರದ ನಂಟು. ದೇಶದೆಲ್ಲೆಡೆ ರಾಮಭಜನೆ, ರಾಮ ನಾಮದೊಂದಿಗೆ ಪಾನಕ ಕೋಸಂಬರಿ ವಿತರಣೆ ಸಾಂಗವಾಗಿ ಸಾಗಿದೆ. [ಇಂದಿನ ದಿನಶುದ್ಧಿ ಏನಿದೆ?]

ಈ ಸಂದರ್ಭದಲ್ಲಿ ನಮ್ಮ ಓದುಗರಾದ ಶ್ರೀವತ್ಸ ಜೋಶಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ 'ರಾಮನವಮಿಗೆ 100% ಸೆಕ್ಯುಲರ್ ಪಾನಕದ ಪಾನ-ಗಾನ' ಹೆಸರಿನಡಿಯಲ್ಲಿ ರಾಮಮಯವಾಗಿರುವ ರಾಮಾಯಣದ ಕಥೆ ಹೇಳುವ ವಿಡಿಯೋ ಹಾಕಿಕೊಂಡಿದ್ದಾರೆ. ಏನಿದರ ಕಥೆ, ವಿಡಿಯೋದಲ್ಲಿ ಏನಿದೆ ಮುಂದೆ ಓದಿ...
ಇದು ಕೇರಳದ ಒಬ್ಬ ಮುಸ್ಲಿಂ ಕವಿ (ಯೂಸುಫ್ ಅಲಿ ಕೆಚೇರಿ) ಬರೆದಿರುವ ಗೀತೆ. ಸಂಗೀತ ನಿರ್ದೇಶನ ಮಾಡಿದ ಕಲಾವಿದನೂ ಮುಸ್ಲಿಂ (ನೌಷಾದ್). ಹಾಡುಗಾರ ಕ್ರಿಶ್ಚಿಯನ್ (ಕೆ.ಜೆ.ಯೇಸುದಾಸ್). ಸಂಸ್ಕೃತ ಭಾಷೆಯಲ್ಲಿ ಇರುವ ಈ ಭಕ್ತಿಗೀತೆ ಹಿಂದೂ ದೇವರಾದ ಶ್ರೀರಾಮನ ಕಥೆಯನ್ನು ಹೇಳುತ್ತಿದೆ. ನಿಜಕ್ಕೂ ಮೈನವಿರೇಳಿಸುವಂಥ ಸಂಗತಿ!
ನಾವೆಲ್ಲ ಯಾಕಾದರೂ ಕುಲ-ಜಾತಿ-ಮತ-ಧರ್ಮ ಅಂತ ಗೋಡೆಗಳನ್ನು ಕಟ್ಟಿಕೊಳ್ಳುತ್ತೇವೊ. ಸಂಗೀತದ ಮಾಧುರ್ಯಕ್ಕೆ ಎಲ್ಲಿಯ ಗೋಡೆಗಳು? ಮನುಜರೆಲ್ಲ ಒಂದೇ ಕುಲ ಎನ್ನುವುದನ್ನು ಈ ಗೀತೆಯನ್ನು ಕೇಳಿಯಾದರೂ ನಾವು ಅರ್ಥ ಮಾಡಿಕೊಳ್ಳಬೇಕು. ರಾಮನವಮಿಯ ಈ ಶುಭದಿನದಂದು ಇದೇ ಆಗಲಿ ನಮಗೆಲ್ಲ ಪಾನ(ಗಾನ)ಪ್ರಸಾದ. ಕಲ್ಯಾಣಿ ರಾಗದಲ್ಲಿ ಸುಮಧುರವಾಗಿ ಮೂಡಿಬಂದಿರುವ ಈ ಸಂಸ್ಕೃತ ಭಕ್ತಿಗೀತೆ "ಜಾನಕೀ ಜಾನೇ ರಾಮಾ...". ಹಾಡಿನ ಜೊತೆಯಲ್ಲಿ ವಿಡಿಯೋದಲ್ಲಿ ಮೂಡಿಬರುವ ರಾಮಾಯಣ ಮಹಾಕಾವ್ಯದ ವರ್ಣಚಿತ್ರಗಳು. ಎಲ್ಲರಿಗೂ ಶ್ರೀರಾಮನವಮಿ ಶುಭಾಶಯಗಳು.












Click it and Unblock the Notifications