ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಿಮೆಯಾಗುತ್ತಿರುವ ಶಿಕ್ಷಕರ ಗೌರವ

By * ವಿನಾಯಕ ಪಟಗಾರ, ಕುಮಟಾ
|
Google Oneindia Kannada News

Vinayak Patgar, Kumata, UK
ಉಳಿದ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಭಿನ್ನವಾಗಿದ್ದು. ಪೌರಾಣಿಕ ಕಥೆಗಳಲ್ಲಿ, ಇತಿಹಾಸಗಳನ್ನು ಓದಿದಾಗ ಗುರುವಿಗೆ ಇರುವ ಮಹತ್ತ್ವ ಸಮಾಜದಲ್ಲಿ ಅವರಿಗೆ ನೀಡುತ್ತಿರುವ ವಿಶೇಷ ಸ್ಥಾನಮಾನಗಳ ಬಗ್ಗೆ ಹೆಮ್ಮೆ ಮೂಡುತ್ತದೆ. ಗುರುವಿನ ಸ್ಥಾನಮಾನ ಸೇವಾಮನೋಭಾವನೆಯಿಂದ ಕೂಡಿರುತ್ತದೆಯೇ ಹೊರತು ವ್ಯವಹಾರಿಕವಾದದ್ದಲ್ಲ. ಇವತ್ತಿನ ಜಾಗತೀಕರಣದ ದಿನಮಾನಗಳಲ್ಲಿ ಮಠ ಮಾನ್ಯಗಳೇ ವ್ಯವಹಾರಿಕ ಕೇಂದ್ರಗಳಾಗಿ ಮಾರ್ಪಟ್ಟಿರುವಾಗ ಶಿಕ್ಷಕ ವೃತ್ತಿ ಪಕ್ಕಾ ವ್ಯವಹಾರಿಕವಾಗಿ ಮಾರ್ಪಟ್ಟಿರುವದರಲ್ಲಿ ಆಶ್ಚರ್ಯವೇನಿಲ್ಲಾ ಬಿಡಿ.

ಇಂದು ಶಿಕ್ಷಕ ವೃತ್ತಿ ಹಿಂದಿನ ಗೌರವ ಸ್ಥಾನಮಾನಗಳನ್ನು ಉಳಿಸಿಕೊಂಡಿಲ್ಲ. ಇದರಲ್ಲಿ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ ಎನ್ನುವುದು ಗಮನಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ರೋಲ್ ಮಾಡೆಲ್ ಗಳಾಗಿ ಇರಬೇಕು. ವಿದ್ಯಾರ್ಥಿಗಳ ವ್ಯಕಿತ್ವದ ಬೆಳವಣಿಗೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಯುವ ಶಿಕ್ಷಕರು ನಿಜವಾಗಿಯೂ ತಮ್ಮ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಗಳಾಗಿ ನಡೆಕೊಳ್ಳುತ್ತಿದ್ದಾರೆಯೇ? ಉತ್ತರಿಸುವುದು ಕಷ್ಟ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಶಿಕ್ಷಕರಿಂದ ಲೈಂಗಿಕ ಕಿರುಕುಳಕ್ಕೊಳಗಾಗುತ್ತಿರುವ ವರದಿಗಳನ್ನು ಓದುವಾಗ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ನಡೆ ನುಡಿಗಳು ಹೆಚ್ಚು ಪ್ರಭಾವ ಬೀರುವದರಿಂದ ಈ ಶಾಲೆಗಳಲ್ಲಿ ಕಲಿಸುವ ಶಿಕ್ಷಕರು ಉತ್ತಮ ವ್ಯಕ್ತಿತ್ವ ಹೊಂದಿರಬೇಕಾಗುತ್ತದೆ. ತಮ್ಮ ನಕರಾತ್ಮಕ ನಡವಳಿಕೆಗಳನ್ನು ಮಕ್ಕಳಿಗೆ ಗೊತ್ತಾಗದಂತೆ ಎಚ್ಚರವಹಿಸಬೇಕಾದ ಅವಶ್ಯಕತೆ ಇದೆ. ಇದು ಅನಿವಾರ್‍ಯವೂ ಹೌದು.

ಇಂದು ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು. ಈ ಶಾಲೆಗಳ ಸುಧಾರಣೆಗೆ ಸರಕಾರ ವರ್ಷಕ್ಕೆ ಕೋಟ್ಯಂತರ ರೂಪಾಯಿಗಳನ್ನು ಖರ್ಚ್ಚು ಮಾಡುತ್ತಿದೆ. ಲಕ್ಷಾಂತರ ಮಂದಿ ಶಿಕ್ಷಕರು ನೇಮಕಗೊಂಡಿದ್ದಾರೆ. ಅವರಿಗೆ ಸರಕಾರ ಸಾಕಷ್ಟು ಸಂಬಳ, ಸೌಲಭ್ಯ ಎಲ್ಲಾ ಸಿಗುತ್ತಿದೆ. ಇಲ್ಲೊಂದು ತಮಾಷೆ ನೋಡಿ. ಕಲಿಸುವುದು ಸರಕಾರಿ ಶಾಲೆಯಲ್ಲಿ, ತಿಂಗಳಿಗೆ ಸರಿಯಾಗಿ ವೇತನ ಸರಕಾರದ್ದು, ಬಡ್ತಿ ಸೌಲತ್ತು ಸರಕಾರದ್ದು, ಆದರೆ ತಮ್ಮ ಮಕ್ಕಳನ್ನು ಕಳುಹಿಸುವುದು ಮಾತ್ರ ಖಾಸಿಗೆ ಕಾನ್ವೆಂಟ್ ಶಾಲೆಗಳಿಗೆ. ಅಂದರೆ ನಮ್ಮ ಸರಕಾರಿ ಶಾಲಾ ಶಿಕ್ಷಕರಿಗೆ ತಮ್ಮ ಕಲಿಸುವಿಕೆ ಬಗ್ಗೆ ತಮಗೆ ನಂಬಿಕೆ ಇಲ್ಲವೆಂದಾಯಿತು. ಇತ್ತೀಚಿಗೆ ಉತ್ತರ ಕನ್ನಡದ ದಿನಪತ್ರಿಕೆಯೊಂದರಲ್ಲಿ ವರದಿ ಬಂದಿತ್ತು. ಆ ವರದಿ ಪ್ರಕಾರ ನಮ್ಮ ಜಿಲ್ಲೆಯ ಚಿಕ್ಕ ತಾಲೂಕಾದ ಕುಮಟಾ ತಾಲೂಕೊಂದರಲ್ಲೇ ಸರಕಾರಿ ಶಾಲಾ ಶಿಕ್ಷಕರ 174 ಗಂಡು 155 ಹೆಣ್ಣು ಮಕ್ಕಳು ಖಾಸಗಿ ಪ್ರಾಥಮಿಕ ಶಾಲೆ(ಕಾನ್ವೆಂಟ್)ಗೆ ಹೋಗುತ್ತಿದ್ದಾರೆ. ಸರಕಾರಿ ಶಾಲೆಗಳಿಗಿಂತ ಹೆಚ್ಚು ಖಾಸಗಿ ಶಾಲೆಗಳಲ್ಲಿ ಸರಕಾರಿ ಶಾಲಾ ಶಿಕ್ಷಕರ ಮಕ್ಕಳು ಕಲಿಯುತ್ತಿದ್ದಾರೆ.

ಸರಕಾರಿ ಶಿಕ್ಷಕರೇ ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳಿಸುತ್ತಿರುವುದು ದ್ರೋಹವಲ್ಲವೆ?
ಪ್ರತಿ ವರ್ಷ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿ ಎಂದು ಅಭಿಯಾನ ಹೊರಡಿಸುವ ನೈತಿಕತೆ ಸರಕಾರಿ ಶಾಲಾ ಶಿಕ್ಷಕರಲ್ಲಿ ಇದೆಯೇ? ಸರಕಾರಿ ಶಾಲೆಗಳ ಗುಣಮಟ್ಟ ಉತ್ತಮವಾಗಿದೆ. ನಾವೂ ಚೆನ್ನಾಗಿ ಕಲಿಸುತ್ತೇವೆ ಎಂದು ಇವರು ಯಾವ ನೆಲಗಟ್ಟಿನ ಮೇಲೆ ಹೇಳಲು ಸಾಧ್ಯ? ಇಂದು ಶಿಕ್ಷಕರು ಹಳ್ಳಿಗಳಲ್ಲಿ ವಾಸ್ತವ್ಯ ಮಾಡದಿರಲೂ ಕಾರಣ ಸ್ಪಷ್ಟ. ತಮ್ಮ ಮಕ್ಕಳನ್ನು ಕಾನ್ವೆಂಟ್ ಸೇರಿಸುವ ಕಾರಣದಿಂದ ತಾವೂ ನಗರಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇದರ ಪರಿಣಾಮ ಹಳ್ಳಿಗಳ ಶಾಲೆಗಳ ಶಿಕ್ಷಣದ ಗುಣಮಟ್ಟದ ಮೇಲಾಗುತ್ತಿದೆ. ಸರಕಾರಿ ಶಾಲೆಯ ಮಕ್ಕಳು ಕಲಿತರೆಷ್ಟು ಬಿಟ್ಟರೆಷ್ಟು ಎಂಬ ಧೋರಣೆ ಮನೆಮಾಡುತ್ತಿದೆ. ಇದೆಲ್ಲದರ ಪರಿಣಾಮ ಇವತ್ತು ಸಾಕಷ್ಟು ಸರಕಾರಿ ಶಾಲೆಗಳು ಮಕ್ಕಳ ಹಾಜರಿ ಇಲ್ಲದೇ ಮುಚ್ಚಿಹೋಗುವ ಹಂತ ತಲುಪಿವೆ. ಇದು ಅನ್ನ ಹಾಕಿದ ತಾಯಿಗೆ ದ್ರೋಹ ಬಗೆದಂತಲ್ಲವೇ?

ರಾಜಕೀಯವಾಗಿ ಏನೇ ಇರಲ್ಲಿ. ಶಿಕ್ಷಣದ ವಿಚಾರದಲ್ಲಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಒಬ್ಬ ರೋಲ್ ಮಡೆಲ್ ಮಂತ್ರಿಗಳು ಎನ್ನಬಹುದು. ಅವರ ಇಬ್ಬರು ಮಕ್ಕಳು ಶಿರಸಿಯ ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಅದೇ ರೀತಿ ಕಾರವಾರದ ಡಿಡಿಪಿಐರವರು ತಮ್ಮ ಮಗುವನ್ನು ಸರಕಾರಿ ಶಾಲೆಗೆ ಸೇರಿಸಿದ್ದಾರೆ.

ಉಳಿದ ಯಾವುದೇ ವೃತ್ತಿಗಳಿಗಿಲ್ಲದ ಆದರ್ಶ, ಉತ್ತಮ ನಡವಳಿಕೆಗಳನ್ನು ಕೇವಲ ಶಿಕ್ಷಕರ ವೃತ್ತಿಯಲ್ಲಿ ಯಾಕೆ ನಿರೀಕ್ಷಿಸುತ್ತಿರಿ ಎನ್ನುವದು ಹಲವು ಶಿಕ್ಷಕರ ಪ್ರಶ್ನೆ. ಯಾವುದೋ ಕಂಪನಿಯಲ್ಲಿ, ಐಟಿ ಬಿಟಿಯಲ್ಲಿ, ಕೆಲಸ ಮಾಡುತ್ತಿದ್ದರೆ ಅವರಿಂದ ಆದರ್ಶವಾದ ನಡವಳಿಕೆಗಳನ್ನು ಯಾರೂ ನಿರೀಕ್ಷಿಸುವುದಿಲ್ಲ. ಶಿಕ್ಷಕ ವೃತ್ತಿ ಆಯ್ದುಕೊಳ್ಳುವಾಗ ಹತ್ತು ಬಾರಿ ಯೋಚಿಸುವಂಥ ಪರಿಸ್ಥಿತಿ ಬಂದಿದೆ. ಅಲ್ಲದೆ, ಹೆಚ್ಚುತ್ತಿರುವ ಚಿಕ್ಕ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಕಿರುಕುಳ, ಜಾತಿ ಭೇದಭಾವ, ತಾರತಮ್ಯ ನೀತಿ, ಅಸಡ್ಡೆ ಮನೋಭಾವನೆ ಇವುಗಳನ್ನು ಗಮನಿಸುತ್ತಿದ್ದರೆ, ಸೇರ್ಪಡೆಗೊಳ್ಳುತ್ತಿರುವ ಯುವ ಶಿಕ್ಷಕರು ತಮ್ಮ ವೃತ್ತಿಯನ್ನು ಯಾವ ರೀತಿಯಾಗಿ ನೋಡುತ್ತಿದ್ದಾರೆ ಎಂಬ ಬಗ್ಗೆ ಅನುಮಾನೂ ಬರುತ್ತದೆ.

ಸರಕಾರ ಸಹ ಶಿಕ್ಷಕರಿಗೆ ಅವರ ವೃತ್ತಿಗೆ ಸಂಬಂಧವಲ್ಲದೇ ಇತರೇ ಕೆಲಸಗಳಿಗೆ ಅವರನ್ನು ಬಳಸಿಕೊಳ್ಳಕೂಡದು. ಅದಕ್ಕೆ ಪರ್‍ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಮಕ್ಕಳ ಮತ್ತು ಶಿಕ್ಷಕರ ದೃಷ್ಟಿಯಿಂದ ಒಳ್ಳೆಯದು. ಸರ್ವಶಿಕ್ಷಾ ಅಭಿಯಾನದ ಅಡಿ ಬರುವ ಹಲವಾರು ಕೆಲಸ ಕಾರ್ಯಗಳಿಗೆ ಶಿಕ್ಷಕರನ್ನೇ ಹೊಣೆಯನ್ನಾಗಿ ಮಾಡಿರುವದರಿಂದ ಎಷ್ಟೋ ಕಡೆ ಶಿಕ್ಷಕರದು ಗುಮಾಸ್ತ ಇಲ್ಲವೆ ಕಟ್ಟಡ ಕಟ್ಟುವ ಮೇಸ್ತ್ರಿ ಕೆಲಸವಾಗಿದೆ. ಇತರೆ ಕೆಲಸಗಳ ಹಲವಾರು ಒತ್ತಡಗಳಿಂದ ಶಿಕ್ಷಕರು ಕಲಿಸುವಿಕೆಯನ್ನು ಪರಿಣಾಮಕಾರಿಯಾಗಿ ಮಾಡಲಾಗುವದಿಲ್ಲ. ಇದರ ಪರಿಣಾಮ ನೇರ ಮಕ್ಕಳ ಮೇಲಾಗುತ್ತದೆ. ಶಿಕ್ಷಕರಿಗೆ ಕಲಿಸುವಿಕೆ ಬಗ್ಗೆ ಹೊಸತನಗಳನ್ನು ಜಾರಿಗೆ ತರುವಲ್ಲಿ, ಹೊಸಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳುವಲ್ಲಿ ಉತ್ತಮ ವಾತಾವರಣವನ್ನು ಒದಗಿಸಿಕೊಡುವುದು ಸರಕಾರದ ಆದ್ಯ ಕರ್ತವ್ಯವಾಗಿದೆ.

ಶಿಕ್ಷಣ ಎನ್ನುವುದು ಕೇವಲ ದುಡ್ಡಿನಿಂದ ಸಿಗುವದಲ್ಲ. ಒಂದು ಉತ್ತಮ ಶಿಕ್ಷಣಕ್ಕೆ ನಮ್ಮ ಅವಶ್ಯಕತೆ ಖಂಡಿತ ಬೇಕು ಎನ್ನುವಂತಹ ವಾತಾವರಣವನ್ನು ಶಿಕ್ಷಕರು ನಿರೂಪಿಸಬೇಕಾಗಿದೆ. ಇಲ್ಲವಾದಲ್ಲಿ ಶಿಕ್ಷಕರಿಗೂ ಬೆಲೆ ಕಟ್ಟಿ ಶಿಕ್ಷಣವನ್ನು ಕೊಳ್ಳುವಂತಹ ಪರಿಸ್ಥತಿ ಬಂದಿತ್ತು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಬಸವಣ್ಣನವರ ಮಾತನ್ನು ವಾಸ್ತವಾಗಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಯತ್ನಿಸಬೇಕಾಗಿದೆ. ಅದು ಬಿಟ್ಟು ಗುರುವಿನ ಕಾಟ ತಪ್ಪಿದರೆ ದೊರೆಯುವುದು ಮುಕ್ತಿ ಎನ್ನುವಂತಾಗಬಾರದು ಅಲ್ಲವೇ?

ಪ್ರತಿ ವರ್ಷದಂತೆ ಸೆಪ್ಟೆಂಬರ್ 5 ಬಂದಿದೆ. ರಾಜಕೀಯ ಲಾಬಿಗಳ ಮಧ್ಯೆಯೂ ಪ್ರಾಮಾಣಿಕವಾಗಿ ಜೀವನದಲ್ಲಿ ಮತ್ತು ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸುವಂತಾಗಲಿ. ಆ ಮೂಲಕ ಇತರ ಶಿಕ್ಷಕರಿಗೆ ಉತ್ತಮ ಸೇವೆ ಸಲ್ಲಿಸಲು ಸ್ಪೂರ್ತಿಯಾಗಲಿ. ಅದನ್ನು ಬಿಟ್ಟು ರಾಜಕೀಯ ಪುಡಾರಿಗಳ ಜೊತೆ ಓಡಾಡುತ್ತ, ಕೇವಲ ಆಫೀಸ್, ಅಧಿಕಾರಿಗಳ ಕಛೇರಿ ಎಂದು ನಗರ ಪ್ರದೇಶಗಳಲ್ಲಿ ಬಿಟ್ಟಿ ಓಡಾಡುತ್ತಿರುವ ಶಿಕ್ಷಕರನ್ನು ಆದರ್ಶ ಶಿಕ್ಷಕ ಪ್ರಸಸ್ತಿಗೆ ಆಯ್ಕೆ ಮಾಡುವದರ ಮೂಲಕ ಆ ಪ್ರಶಸ್ತಿಯ ಮತ್ತು ಶಿಕ್ಷಕರ ಗೌರವವನ್ನು ಸರಕಾರ ಹಾಳುಮಾಡದಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X