ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾರ್ಥಿಸಲು ಇಂಥ ದಿನವೊಂದು ಬೇಕೆ?

By * ಪ್ರಸಾದ ನಾಯಿಕ
|
Google Oneindia Kannada News

ವಿಶ್ವ ಪ್ರಾರ್ಥನಾ ದಿನ ಅಂತಾನೂ ದಿನಾ ಇದೆನಾ ಅಂತ ಆಶ್ಚರ್ಯಪಡಬೇಡಿ. ಅಮ್ಮನ ದಿನ, ಅಪ್ಪನ ದಿನ, ಕೈತೊಳೆಯುವ ದಿನ, ಕಾಲ್ತೊಳೆಯುವ ದಿನ, ಪ್ರೇಮಿಗಳ ದಿನ, ಆದಿನ, ಈದಿನ ಅಂತ ಪ್ರತಿಯೊಂದಕ್ಕೂ ಒಂದೊಂದು ಆಚರಣೆಯನ್ನು ಆಚರಿಸಿಕೊಂಡು ಬರುತ್ತಿರುವ ದಿನಗಳಲ್ಲಿ ವಿಶ್ವ ಪ್ರಾರ್ಥನಾ ದಿನ ಅಂತಾನೂ ಇದ್ದರೆ ಖಂಡಿತ ಆಶ್ಚರ್ಯ ಪಡಬೇಕಾಗಿಲ್ಲ ಅಲ್ಲವಾ?

ಇಂಥದೊಂದು ದಿನವಾದರೂ ಬೇಕಾ ಎಂಬುದು ಪ್ರಶ್ನೆ? ನಮ್ಮ ದೇಶದಲ್ಲಿ ಬೆಳಗಾನೆದ್ದು ಕರಾಗ್ರೇ ವರಸೇ ಲಕ್ಷ್ಮಿ ಅನ್ನುತ್ತಲೇ ದೇವಿಯ ಪ್ರಾರ್ಥನೆಯಿಂದ ದಿನ ಆರಂಭಿಸುತ್ತೇವೆ. ರಾತ್ರಿ ಹಾಸಿಗೆಗೆ ಮೈಚಾಚುವ ಮೊದಲು ಎಷ್ಟೊಂದು ಸಂದರ್ಭದಲ್ಲಿ ಎಷ್ಟೊಂದು ಬಾರಿ ಪ್ರಾರ್ಥನೆಗಳನ್ನು ಮಾಡಿರುತ್ತೇವೆ ಎಂಬುದನ್ನು ಲೆಕ್ಕವಿಡಲೇ ಸಾಧ್ಯವಿಲ್ಲ. ಬೀದಿಗೊಂದಿರುವ ದೇವಸ್ಥಾನ ಕಂಡಕೂಡಲೆ ಕಣ್ಮುಚ್ಚಿ ಮನದಲ್ಲೇ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವ ನಾವು, ಇನ್ನು ನಮ್ಮವರಿಗಾಗಿ, ಎಲ್ಲರಿಗಾಗಿ ಪ್ರಾರ್ಥಿಸುವ ಲೆಕ್ಕ ರಾತ್ರಿ ಶುಭ್ರ ಬಾನಂಗಳದಲ್ಲಿ ಚುಕ್ಕಿಗಳ ಲೆಕ್ಕವಿಟ್ಟಂತೆ.

ಮಳೆ ಬಾರದಿದ್ದರೆ ವರುಣ ದೇವನನ್ನು ಹೋಲ್ಸೇಲಾಗಿ ಪ್ರಾರ್ಥಿಸುವುದು ಹೋಗಲಿ ಕತ್ತೆಗಳನ್ನು ಎಳೆತಂದು, ಗಂಡು ಹೆಣ್ಣು ಕಪ್ಪೆಗಳನ್ನು ಅಕ್ಕಪಕ್ಕದಲ್ಲಿಟ್ಟು, ನಾಯಿ ನರಿಗಳನ್ನು ಒಟ್ಟುಗೂಡಿಸಿ ಮದುವೆ ಮಾತ್ರವಲ್ಲ ಹೋಮ ಹವನ ಯಾಗಾದಿಗಳನ್ನೇ ಮಾಡಿಬಿಡುತ್ತೇವೆ. ಅತಿವೃಷ್ಟಿಯಾದಾಗ ಮಳೆಯನ್ನು ನಿಲ್ಲಿಸಲು ಕೂಡ ಪ್ರಾರ್ಥನೆ, ಹೋಮಗಳನ್ನು ಮಾಡುವಂಥವರು ನಾವುಗಳು.

ದಿನದಿನಕ್ಕೆ ಪ್ರಸ್ತುತತೆ, ಮಹತ್ವ ಕಳೆದುಕೊಳ್ಳುತ್ತಿರುವ ದಿನಾಚರಣೆಗಳು!
ಆತ್ಮೀಯರು ಹುಷಾರಾಗಿಲ್ಲದಾಗ ಪ್ರಾರ್ಥನೆ, ಫಸ್ಟ್ ಕ್ಲಾಸಲ್ಲಿ ಪಾಸಾದಾಗೊಮ್ಮೆ ತೆಂಗಿನಕಾಯಿ ಒಡೆದು ಪ್ರಾರ್ಥನೆ, ಸುಂದರ ಹೆಂಡತಿ ಸಿಗಲೆಂದು ಪ್ರಾರ್ಥನೆ, ಸಚಿನ್ ಸೆಂಚುರಿ ತಪ್ಪಿಸಿಕೊಳ್ಳಬಾರದೆಂದು 99 ರನ್ ಇದ್ದಾಗ ಪ್ರಾರ್ಥನೆ, ಎದುರಾಳಿ ನೆಕ್ಸ್ಟ್ ಬಾಲಲ್ಲಿ ಔಟಾಗಲೆಂದು ಪ್ರಾರ್ಥನೆ. ಅಷ್ಟೇ ಏಕೆ, ಎಡವಿದಾಗ ಕೂಡ ಮನದಲ್ಲೇ ತನಗೆ ಏನೂ ಕೆಡಕಾಗದಿರಲಿ ಅಂತ ದೇವರನ್ನು ಸ್ತುತಿಸಿ ಪ್ರಾರ್ಥನೆ ಮಾಡುವವರೂ ಇದ್ದಾರೆ. ಇನ್ನು ಹಬ್ಬ-ಹರಿದಿನ, ಶಾಲೆಯಲ್ಲಿ ಬೆಳಗ್ಗೆ, ವೈವಿಧ್ಯಮಯ ಜಯಂತಿಗಳಂದು ಪ್ರಾರ್ಥನೆ ತಪ್ಪಿಸುವುದಿಲ್ಲ.

ಇಷ್ಟೆಲ್ಲಾ ಇದ್ದಾಗ ವಿಶ್ವ ಪ್ರಾರ್ಥನಾ ದಿನಾಚರಣೆಯಾದರೂ ಏಕೆ ಬೇಕು? ಅಷ್ಟಕ್ಕೂ ಇಂದಿನ ಕಾಲದಲ್ಲಿ, ಅದೂ ಭಾರತದಲ್ಲಿ ಪ್ರಸ್ತುತವೆ? ಇಂಥ ದಿನಗಳನ್ನಾದರೂ ಯಾಕೆ ಆಚರಿಸುತ್ತೇವೆ? ಇವುಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಬ್ಬೊಬ್ಬರ ಭಾವ ಒಂದೊಂದು ರೀತಿ. ಹೊಸ ಜೆನರೇಶನ್ ಪೀಳಿಗೆಗೆ ಪ್ರತಿ ಆಚರಣೆಯೂ ಹೊಸದರಂತೆ ಕಾಣುತ್ತದೆ.

ಮುಂಬೈ ದಾಳಿಯಲ್ಲಿ ಮಡಿದವರಿಗಾಗಿ ಮೊಂಬತ್ತಿ ಹತ್ತಿಸಿ ಪ್ರಾರ್ಥಿಸುವುದು, ಮಂಗಳೂರು ವಿಮಾನ ಅಪಘಾತದಲ್ಲಿ ಸತ್ತವರ ಆತ್ಮಕ್ಕೆ ಶಾಂತಿ ಕೋರುವುದು, ಗಾಯಗೊಂಡವರು ಆಸ್ಪತ್ರೆಯಿಂದ ಪಾರಾಗಿ ಬಂದರೆ ಸಾಕು ಎಂದು ಪ್ರಾರ್ಥಿಸುವುದು ಒಪ್ಪತಕ್ಕ ಮಾತು. ಆದರೆ ಇಂದಿನ ದಿನಗಳಲ್ಲಿ, ತಿಂಗಳಿಗೆರಡು ದಿನಾಚರಣೆಗಳು ಇರುತ್ತಿರುವಾಗ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಶಿಕ್ಷಕರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಮಕ್ಕಳ ದಿನಾಚರಣೆಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಆಚರಣೆಗಿಂತ ಆಡಂಬರವೇ ಜಾಸ್ತಿಯಾಗುತ್ತಿದೆ.

ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಈ ಆಚರಣೆಗಳು ಎಷ್ಟು ಪ್ರಸ್ತುತ? ವಿಶ್ವ ಪ್ರಾರ್ಥನಾ ದಿನಾಚರಣೆ ಮಾತ್ರವಲ್ಲ, ಶಾಂತಿಗಾಗಿ ವಿಶ್ವ ಪ್ರಾರ್ಥನಾ ದಿನಾಚರಣೆ, ಜಾಗತಿಕ ಪ್ರಾರ್ಥನಾ ದಿನಾಚರಣೆ, ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ (ಒಂದೊಂದು ರಾಷ್ಟ್ರದಲ್ಲಿ ಒಂದೊಂದು ದಿನ), ಜೇರುಸಲೇಂನ ವಿಶ್ವ ಪ್ರಾರ್ಥನಾ ದಿನಾಚರಣೆಗಳಂಥ ದಿನಾಚರಣೆಗಳೂ ಬೇಕಾದಷ್ಟಿವೆ. ಆಯಾ ಧರ್ಮದವರು ತಮ್ಮ ಪದ್ಧತಿಗಳಿಗೆ ತಕ್ಕಂತೆ ಬೇರೆಬೇರೆಯ ದಿನಾಚರಣೆಗಳನ್ನು ಆಚರಿಸುತ್ತಾರೆ.

ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ, ಇಂದು ಎಫ್ಎಂ ರೇಡಿಯೋ ಚಾನಲ್ಲಿನಲ್ಲಿ ಇಂದು ವಿಶ್ವ ಪ್ರಾರ್ಥನಾ ದಿನಾಚರಣೆ ಅಂತ ತರ್ಲೆ ಮತ್ತು ಪಟಾಕಿಗಳಿಬ್ಬರು ಮಾತಾಡುತ್ತಿದ್ದರು. ನೀನು ಯಾರಿಗಾಗಿ ಪ್ರಾರ್ಥಿಸ್ತಿಯಾ ಅಂತ ಆತ ಆಕೆಗೆ, ನೀನು ಏನಂತ ಪ್ರಾರ್ಥಿಸ್ತಿಯಾ ಅಂತ ಆಕೆ ಆತನಿಗೆ ಕೇಳುತ್ತ ಬಡಬಡ ಅಂತ ಬಡಬಡಿಸುತ್ತಿದ್ದರು. ಗೂಗಲ್ ಸರ್ಚ್ ಇಂಜಿನ್ನಿನಲ್ಲಿ ಸರ್ಚಿಸಲಾಗಿ ಇಂದು ವಿಶ್ವ ಪ್ರಾರ್ಥನಾ ದಿನಾಚರಣೆ ಇರಲಿಲ್ಲ! ಅಷ್ಟಕ್ಕೂ ಪ್ರಾರ್ಥಿಸಲು ಒಂದು ದಿನವಾದರೂ ಏಕೆ ಬೇಕು? ತಗೊಳ್ಳಿ ಈಗಲೇ ಪ್ರಾರ್ಥಿಸುತ್ತೇನೆ, "ಆ ಎಫ್ಎಂ ರೇಡಿಯೋ ಚಾನಲ್ಲಿಗೆ ಮತ್ತು ಚಂದದ ಮಾತುಗಾರರಿಗೆ ದೇವರು ಒಳ್ಳೆಯದು ಮಾಡಲಿ!"

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X