• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟಾರ್ ಬಕರಾ ಮಾಲಿಕರ ಖುಲಾಯಿಸಿದ ಅದೃಷ್ಟ

By Super
|

ತ್ಯಾಗ ಮತ್ತು ಭ್ರಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬ ಮುಸ್ಲಿಂ ಬಾಂಧವರಿಗೆ ರಂಜಾನ್ ನಂತರ ಬರುವ ಪ್ರಮುಖವಾದ ಹಬ್ಬ. ಸ್ನಾನಾದಿಗಳ ನಂತರ ಹೊಚ್ಚ ಹೊಸ ಬಟ್ಟೆ ತೊಟ್ಟು ಸಾರ್ವಜನಿಕ ಪ್ರಾರ್ಥನೆಯ ನಂತರ ಗಲ್ಲಿಗಲ್ಲಿಗಳಲ್ಲಿ, ಮನೆಮನೆಗಳಲ್ಲಿ ಬಂಧು ಬಾಂಧವರು, ಸ್ನೇಹಿತರು, ಪರಿಚಯವಿರುವವರು, ಪರಿಚಯವಿಲ್ಲದವರು ಸ್ವಂತ ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು ದೇಶದ ಎಲ್ಲೆಡೆ ಕಾಣಬಹುದು.

ಇಂದಿನ ದಿನ ಬಂಧುಗಳ ಮನೆಗಳಿಗೆ, ಅಕ್ಕಪಕ್ಕದವರ ಮನೆಗಳಿಗೆ ಕೂಡ ಹೋಗಿ ಶುಭಾಶಯ ಕೋರುವುದು ವಾಡಿಕೆಯಾಗಿ ಬೆಳೆದುಬಂದಿದೆ. ಪ್ರಾರ್ಥನೆಯ ನಂತರ, ಇಮಾಮರ ಪವಿತ್ರ ಉಪದೇಶದ ನಂತರ ಮನೆಜನರೆಲ್ಲ ಸೇರಿ ಪಟ್ಟಾಗಿ ಕುಳಿತು ಮೃಷ್ಟಾನ್ನ ಸೇವಿಸುತ್ತಾರೆ.

ಇದಕ್ಕಾಗಿಯೇ ಹಬ್ಬಕ್ಕೆ ತಿಂಗಳಿನಿಂದಲೂ ಬಕರಾ ಅಂದರೆ ಕುರಿ, ಮೇಕೆಗಳಿಗೆ ಇನ್ನೆಲ್ಲಿಲ್ಲದ ಬೇಡಿಕೆ. ಚೆನ್ನಾಗಿ ಮೇವು ತಿನ್ನಿಸಿ ಕೊಬ್ಬಿಸಿದ ಆಡುಗಳಿಗೆ ಭಾರೀ ಬೇಡಿಕೆ. ಅದರಲ್ಲೂ, ಕುರಿಗಳಿಗೆ ಹಿಂದಿ ಚಿತ್ರತಾರೆಯರ ಹೆಸರಿಟ್ಟು ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಹಿಂದಿ ಚಿತ್ರರಂಗದ ಬಾದ್ ಷಾ ಶಾರೂಖ್ ಖಾನ್, ಸಲ್ಲೂ ಮಿಂಯಾ, ಸೈಫ್ ಅಲಿಖಾನ್ ಹೆಸರಿನ ಆಡುಗಳನ್ನು ಮಾರಾಟ ಮಾಡುವುದು ಶೋಕಿ. ಈ ಬಾರಿ ಪಟ್ನಾದಲ್ಲಿ ಸಲ್ಲೂ ಮಿಂಯಾ ಹೆಸರಿನ ಮೇಕೆ 75 ಸಾವಿರ ರು.ಗಳಿಗೆ ಮಾರಾಟವಾದರೆ, ಶಾರೂಖ್ ಬೆಲೆ ಯಾಕೋ ಸ್ವಲ್ಪ ತಗ್ಗಿದೆ. ಕಳೆದ ಬಾರಿಗೆ ಹೋಲಿಸಿದರೆ 'ಸ್ಟಾರ್' ಮೇಕೆಗಳ ಬೆಲೆ ತಗ್ಗಿದೆ ಅಂತಾರೆ ಮಾರಾಟಗಾರರು. ಬಕರಾಗಳಿಗು ಕೂಡ ರಿಸೆಷನ್ ಎಫೆಕ್ಟ್! ಆದರೆ, ಬೆಲೆ ಎಷ್ಟೇ ಇದ್ದರೂ ಮುಸ್ಲಿಂ ಬಾಂಧವರ ಹೊಟ್ಟೆಗಿಳಿಯುವುದು ಅವಕ್ಕೆ ತಪ್ಪಿದ್ದಲ್ಲ.

ನವದೆಹಲಿಯಲ್ಲಿ 'ಖುಷಿ' ಹೆಸರಿನ ಮೇಕೆಯೊಂದು ಭಾರೀ ಆಕರ್ಷಣೆಯ ಕೇಂದ್ರಬಿಂದುವಾಗಿದೆ. 786 ಎಂಬುದು ಮುಸ್ಲಿಂರಿಗೆ ಅತ್ಯಂತ ಪವಿತ್ರವಾದ ಮತ್ತು ಅದೃಷ್ಟದ ಸಂಖ್ಯೆ. ಕಾಕತಾಳೀಯವೋ, ಅಲ್ಲಾಹುವಿನ ಚಮತ್ಕಾರವೋ ಕಪ್ಪುಬಣ್ಣದ ಪೊಗದಸ್ತಾದ ಮೇಕೆಯ ಮೈಮೇಲೆ ಬಿಳಿ ಬಣ್ಣದ ಕಲೆ 786 ಸಂಖ್ಯೆಯನ್ನು ಹೋಲುತ್ತಿರುವುದು ಅದರ ಮಾಲಿಕನ ಅದೃಷ್ಟ ಖುಲಾಯಿಸುವಂತಾಗಿದೆ. ಜೊತೆಗೆ ಅದರ ಬೆನ್ನಿನ ಮೇಲೆ ಅಮವಾಸೆ ನಾಲ್ಕು ದಿನ ಕಳೆದ ಚಂದ್ರನ ಗುರುತಿರುವುದು ಮತ್ತೊಂದು ಆಕರ್ಷಣೆಯಾಗಿದೆ.

ಸಿಂಗ್ ಎಂಬ ಅದರ ಮಾಲಿಕ ಅದನ್ನು ಆರು ತಿಂಗಳಾಗಿದ್ದಾಗ ಕಸಾಯಿಗೆ ಮಾರಾಟ ಮಾಡಲು ನೀಡಿದ್ದನಂತೆ. ಕಸಾಯಿ ಅದೃಷ್ಟದ ಸಂಖ್ಯೆ ನೋಡಿದ್ದೇ ಕೊಲ್ಲುವುದಿಲ್ಲ ಎಂದು ಹೇಳಿದನಂತೆ. ಅದರ ಅದೃಷ್ಟ ಗಟ್ಟಿಯಿತ್ತು. ಈಗ ಬಿಡ್ಡಿಂಗಿನಲ್ಲಿ ಅದರ ಬೆಲೆ 21 ಲಕ್ಷ ರು. ದಾಟಿದೆ. ಅದನ್ನು 51 ಲಕ್ಷ ರು.ಗೆ ಮಾರಾಟ ಮಾಡಿಯೇ ತೀರುತ್ತೇನೆ ಎಂದು ಮಾಲಿಕ ಸರಿಯಾದ 'ಬಕರಾ'ನಿಗಾಗಿ ಕಾಯುತ್ತಿದ್ದಾನೆ.

ಈ ಮೇಕೆಗಳ ಅದೃಷ್ಟವೆಂದರೆ, ಅವುಗಳ ಬೆಲೆ ಏರಿದಷ್ಟೂ ಆಯಸ್ಸು ಜಾಸ್ತಿಯಾಗುತ್ತಿದೆ!

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X