• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರುವ ಭಾನುವಾರ ಸುಬ್ರಮಣ್ಯ ಷಷ್ಠಿ

By Staff
|
ನವೆಂಬರ್ 22, ಶ್ರೀ ಸುಬ್ರಮಣ್ಯ ಷಷ್ಠಿ ಅಥವಾ ಚಂಪಾಷಷ್ಠಿ ಅಥವಾ ಸುಬ್ರಾಯನ ಷಷ್ಠಿ. ನಾಗನಿಗೆ ಪಂಚಮಿಯಾದರೆ ಸುಬ್ರಮಣ್ಯನಿಗೆ ಷಷ್ಠಿ. ಈ ಹಬ್ಬದ ಪೌರಾಣಿಕ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸುವ ಲೇಖನ. ಸುಬ್ರಾಯನಲ್ಲಿ ನೀವು ಹೊತ್ತ ಹರಕೆಗಳು ಸಾಕಾರಗೊಳ್ಳಲಿ.

* ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ), ಬೆಂಗಳೂರು

ಚಾಂದ್ರಮಾನ ಸಂವತ್ಸರದ ತಿಂಗಳುಗಳ ಎಣಿಕೆಯಲ್ಲಿ ಒಂಭತ್ತನೆಯದಾಗಿ, ಮಾರ್ಗಶೀರ್ಷ ಮಾಸವು ತನ್ನ ಹಿಂದಿನ ಎಲ್ಲ ತಿಂಗಳುಗಳಿಗಿಂತ ವಿಶಿಷ್ಟ ಗುಣಸೌಂದರ್ಯಗಳಿಂದ ತುಂಬಿದುದಾಗಿರುವುದು. ಬೇಸಿಗೆ ಕಾಲದ ಬಿರುಬಿಸಿಲಿನ ಬೇಗೆಯಿಲ್ಲ, ಬರಿ ಮಣ್ಣಿನ ಹೊಲ ನೆಲಗಳಿಲ್ಲ. ಅದರಂತೆಯೇ ಮಳೆಗಾಲದ ಮೋಡ ಮುಸುಕಿದ ವಾತಾವರಣವಿಲ್ಲ. ಕೆಸರು ಕದಡು ನೀರುಗಳ ಸಂಪರ್ಕವಿಲ್ಲ. ಮುಂಗಾರು ಬೆಳೆಗಳು ತನ್ನ ಜೀವನದ ಪೂರ್ಣತೆಯಿಂದ ಅನ್ನದ ಉಗ್ರಾಣವನ್ನು ತುಂಬುತ್ತಿರುವುದು, ಹಸುಗೂಸಿನಂತೆ ದಿನಕ್ಕೊಂದು ಚೆಂದದಲ್ಲಿ ಬೆಳೆಯುತ್ತಿರುವ ಹಿಂಗಾರು ಧಾನ್ಯಗಳ ಬೆಳೆಯು ಲೋಕಕ್ಕೆ ಶುಭ ಭವಿಷ್ಯದ ಸೂಚನೆಯನ್ನು ಕೊಡುತ್ತಿರುವುದು ಎಂತಲೇ ಈ ತಿಂಗಳು, ಪರಮಾತ್ಮನ ವಿಭೂತಿರೂಪದ ಸ್ಥಾನಕ್ಕೇರಿರುವುದು.

ಸಮೃದ್ಧಿ, ಸಂತೃಪ್ತಿ, ಸೌಂದರ್ಯ, ಸುಭಗತೆಗಳೇ ಪರಮಾತ್ಮಶಕ್ತಿಯ ವಿಶಿಷ್ಟ ಲಕ್ಷಣಗಳಲ್ಲವೆ? ಋತ-ಸತ್ಯಗಳ ಸಾಕಾರರೂಪಿಯಾದ ಶ್ರೀಕೃಷ್ಣ, ಮಾರ್ಗಶಿರ ಮಾಸವೆಂದರೆ ತಾನು ಎಂದು ಸಾರಿ ಹೇಳಿದ್ದಾನೆ. ಗೀತೆಯಲ್ಲಿ ಈ ಮಾಸದ ಮೇಲ್ಮೆಗೆ ಇದಕ್ಕಿಂತಲೂ ಹೆಚ್ಚಿನ ಆಪ್ತವಾಕ್ಯ ಪ್ರಮಾಣ ಇನ್ನೇನು ಬೇಕು?

ಚಾತುರ್ಮಾಸದಲ್ಲಿ ಹಬ್ಬ ಹರಿದಿನಗಳು ಒಂದರ ಹಿಂದೊಂದು ಬಂದೇ ಬರುತ್ತಿದ್ದವು; ಆದರೆ ಮಾರ್ಗಶಿರ ಮಾಸದಲ್ಲಿ ಅವುಗಳ ಬಾಹುಳ್ಯ ಕಡಿಮೆ. ಅದರಲ್ಲಿ ಶುಕ್ಲ ಪಕ್ಷದ ಷಷ್ಠಿಯನ್ನು 'ಸುಬ್ರಮಣ್ಯ ಷಷ್ಠಿ' 'ಚಂಪಾಷಷ್ಠಿ' ಎಂಬ ಹೆಸರಿನಿಂದ ನಾಡಿಗರೆಲ್ಲರಿಗೆ ಚಿರಪರಿಚಿತವಾಗಿದೆ.

ಸುಬ್ರಮಣ್ಯ ದಕ್ಷಿಣ ಭಾರತದ ಬಹುಜನಪ್ರಿಯ ದೇವ, ಶರಣವಭವ. ಕುಮಾರಸ್ವಾಮಿಯ ಆರಾಧನೆ ತಮಿಳುನಾಡಿನಲ್ಲಿ, ಇದರ ಪ್ರಭಾವದಿಂದ ನೆರೆಯ ಕನ್ನಡ ನಾಡಿನಲ್ಲೂ, ವಿಶೇಷವಾಗಿ ತುಳುನಾಡಿನಲ್ಲೂ ನಡೆಯುತ್ತಿದೆ. ಹಲವಾರು ರೀತಿ ರಿವಾಜುಗಳಲ್ಲಿ ನೇಮನಿಷ್ಠೆಗಳಲ್ಲಿ ವೈವಿಧ್ಯಮಯವಾಗಿ ನಡೆಯುವ ಸ್ಕಂದನ ಉಪಾಸನೆಯು ದಿನೇದಿನೇ ಹೆಚ್ಚುತ್ತಿದೆ. ನಾಗಾರಾಧನೆಯ ಹಂದರದಲ್ಲಿ 'ಸುಬ್ರಾಯ'ನೂ ಸೇರಿಕೊಳ್ಳುತ್ತಾನೆ. ಸುಬ್ರಮಣ್ಯ ಇಷ್ಟು ಜನಪ್ರಿಯನಾಗಲು ಕಾರಣ ಅವನ ಜಾನಪದ ನೆಲೆ. ಮುರುಗ ಶಾಸ್ತ್ರಗಳಲ್ಲಿ ಅಥವಾ ಆಗಮಗಳಲ್ಲಿ ಮೊದಲು ತೋರಿಕೊಂಡು ಅನಂತರ ಜನರ ನಡುವೆ ಬಳಕೆಗೆ ಬಂದವನಲ್ಲ. ಜನರ ನಡುವೆಯೂ ಮೊದಲು ತೋರಿಕೊಂಡು ಅನಂತರ ಆಗಮದ ಅಟ್ಟಕ್ಕೆ ಏರಿದವನು.

ನಾಗನಿಗೆ ಪಂಚಮಿಯಾದರೆ, ಸುಬ್ರಮಣ್ಯನಿಗೆ ಷಷ್ಠಿ. ಬ್ರಹ್ಮಮಾನಸಪುತ್ರಿಯರಲ್ಲಿ ಷಷ್ಠಿ ಒಬ್ಬಳು. ಬ್ರಹ್ಮವೈವರ್ತಪುರಾಣದ ಪ್ರಕೃತಿ ಖಂಡದಲ್ಲಿ ಈ ದೇವತೆಯನ್ನು ಸೂತಿಕಾಗೃಹದಲ್ಲಿ ಮಗುಹುಟ್ಟಿದ ಆರನೆಯ ದಿನದಂದು ಪೂಜಿಸಬೇಕೆಂಬ ವಿಧಿಯಿದೆ. ಆರನೆಯ ದಿನ ತಾಯಿಗೂ ಮಗುವಿಗೂ ಪೀಡೆ ಕಳೆಯಿತೆಂದು ಕೃತಜ್ಞತೆಯಿಂದ ಪೂಜಿಸಬೇಕು.

ಆ ಕಾರಣ ಮಾರ್ಗಶಿರ ಮಾಸದ ಷಷ್ಠಿಯಂದು ಸ್ಕಂದನ ಪ್ರತಿನಿಧಿಯಂತಿರುವ ಸಣ್ಣ ವಯಸ್ಸಿನ ಬ್ರಹ್ಮಚಾರಿಗಳನ್ನು ಮನೆಗೆ ಕರೆದು ಊಟ ಹಾಕಿ ಉಡುಗೊರೆಗಳನ್ನು ಕೊಡುವುದು ವಾಡಿಕೆ. ಇದರಿಂದ ಷಷ್ಠಿ ದೇವತೆಗೆ ಪ್ರೀತಿಯುಂಟಾಗಿ ಮನೆಯ ಮಕ್ಕಳನ್ನು ಕಾಪಾಡುವಳು ಎಂದು ನಂಬುಗೆ. ಸ್ಕಂದನು ದೇವಸೇನೆಯನ್ನು ವಿವಾಹ ಮಾಡಿಕೊಂಡು ಶ್ರೀಯೋಗವನ್ನು ಪಡೆದ ದಿನ ಶ್ರೀಪಂಚಮಿ. ಅವನು ತಾರಕಾಸುರ ಸಂಹಾರ ಮಾಡಿ ಕೃತಕೃತ್ಯನಾದ ದಿನ 'ಷಷ್ಠಿ' ಆದುದರಿಂದ ಇವೆರಡೂ ದಿನ ಅವನಿಗೆ ಪ್ರಿಯ.

ಕುಮಾರಸ್ವಾಮಿಯಲ್ಲಿ 17 ಪ್ರಬೇಧಗಳಿವೆ ಎಂದು ಶ್ರೀತತ್ವನಿಧಿ ತಿಳಿಸುತ್ತದೆ. ಅವನ ಧ್ಯಾನಸ್ಥಾನ ಅನಾಹುತ ಚಕ್ರ ಹೃದಯ ಪ್ರದೇಶ. ಇಂದ್ರ ಸಮಕಕ್ಷೆಯ ಮನ್ಮಥ, ಶಿವನ ರೇತೋರೂಪದಿಂದ ಅದ್ಭುತಾಗ್ನಿಯಾಗಿ ಸ್ಕಂದಿತನಾದ್ದರಿಂದ ಈತ ಸ್ಕಂದನೆನಿಸಿದ, ಕೃತ್ತಿಕೆಯಿಂದ ಪ್ರವರ್ಧಿತನಾದ್ದರಿಂದ ಕಾರ್ತಿಕೇಯನಾದ ಷಣ್ಮುಖಿಯಾಗಿ ಆರು ತಾಯಂದಿರನ್ನು ಪಡೆದಿದ್ದರಿಂದ ಷಾಣ್ಮುತುರನಾದ. ಮಂಡಲ ಮಂಡಿತನಾದ ಸರ್ಪದ ರೂಪದಲ್ಲೂ ಕೆಲವೆಡೆ ಸುಬ್ರಮಣ್ಯನ ಆರಾಧನೆ ನಡೆಯುವುದುಂಟು.

ಬಾಲಸ್ವರೂಪಿಯಾಗಿ ನಿಂತಿರುವ ಆ ಭಂಗಿ ಸಾಧಕನು ಸಾಧನೆಗೆ ತುದಿಗಾಲಿನಲ್ಲಿ ನಿಂತಿರಬೇಕು. ಆಂತರಿಕ ಬ್ರಹ್ಮಚರ್ಯದಲ್ಲಿರಬೇಕು. ಮೋಡದ ಗುಡುಗಿಗೆ ತಾಳಲಾರದೇ ಕುಣಿದಾಡುವ ನವಿಲು ಸುಖತಾಳಲಾರದೆ ಕುಣಿದಾಡುವ ಅದಕ್ಕೆ ಸಂಯಮ ಇಲ್ಲ. ಅದನ್ನು ವಾಹನ ಮಾಡಿಕೊಂಡು ಷಣ್ಮುಖ ಪ್ರದರ್ಶನ ಚಾಪಲ್ಯವನ್ನು ಮೆಟ್ಟಿನಿಲ್ಲಬೇಕೆಂದು ತಿಳಿಸುವನು.

ಇವನು ಕರ್ಪೂರಕ್ಕೆ ಅಭಿಮಾನಿ. ಉರಿಯುವಾಗ ಬಿಸಿಯಾಗಿ ಆಮೇಲೆ ಮಸಿಯಾಗಿ ನಿಂತುಬಿಡುವ ಈ ದ್ರವ್ಯ ಕಾಮವನ್ನು ಬೇಕಾಬಿಟ್ಟಿ ಬಳಸಬಾರದೆಂಬ ಎಚ್ಚರಿಕೆ ನೀಡುತ್ತದೆ. ಸ್ಕಂದ ಎಂದೂ ಮುಗಿಯದ ಹರೆಯದವನು, ಹುಡುಗನೆಂದೇ ಎಣಿಕೆ. ಅವನ ನಿರಂತರ ತಾರುಣ್ಯವನ್ನು ಸೂರ್ಯನ ಹಿನ್ನೆಲೆಯಲ್ಲಿ ಪಂಡಿತರು ಕಂಡಿರುವುದುಂಟು. ಹಾಗೆಯೇ ಆವನದು ಕುಕ್ಕುಟಧ್ವಜ/ಕೋಳಿಗೂ ಸೂರ್ಯನಿಗೂ ಹಳೆಯ ನಂಟಷ್ಟೇ. ಕೋಳಿಯನ್ನು ಸೂರ್ಯಪಕ್ಷಿ ಎಂದೂ ಕರೆಯುವುದುಂಟು. ಆರು ಮುಖಗಳೆಂದರೆ ಆರು ಋತುಗಳು, ಹನ್ನೆರಡು ಕೈಗಳೆಂದರೆ 12 ತಿಂಗಳು.

(ವಿವಿಧ ಮೂಲಗಳಿಂದ)

ಲೇಖಕರ ವಿಳಾಸ : ನಂ. 786/32, , 6ನೇ ಕ್ರಾಸ್, ಬನಶಂಕರಿ 1ನೇ ಹಂತ,ಬೆಂಗಳೂರು -560 050 ದೂ: 97393 69621 padmapranava@yahoo.com

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more