ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಟಿ ಶರ್ಟಿನ ಎರಡು ಮುಖ

By Staff
|
Google Oneindia Kannada News

Rajyotsava celebration in a different fashionಭಾರತಕ್ಕೆ ಹೊರಗುತ್ತಿಗೆ ನೀಡುವ ಶ್ವೇತಭವನದ ನೀತಿ ವಿರೋಧಿಸುವ ಅಮೆರಿಕನ್ನರು ನಿತ್ಯ ಥರಹೇವಾರಿ ಘೋಷಣೆಗಳನ್ನು ಬರೆಯುತ್ತಾರೆ. ಬಂಪರುಗಳ ಮೇಲೆ, ಟಿ ಶರ್ಟುಗಳ ಮೇಲೆ ಸ್ಲೋಗಾನ್ ಅಂಟಿಸಿಕೊಂಡು ಅಡ್ಡಾಡುತ್ತಾರೆ. ದೇಶದಲ್ಲೆಲ್ಲ ಗುಲ್ಲೆಬ್ಬಿಸುತ್ತಾರೆ. ಇಲ್ಲಿ, ತಮ್ಮ ಕಂಪನಿ ಪಡೆದ ಹೊರಗುತ್ತಿಗೆ ಕೆಲಸಗಳನ್ನು ನಮ್ಮ ಹುಡುಗರು ತಣ್ಣಗೆ ಮಾಡಿ ಮುಗಿಸಿ ಬೇಂದ್ರೆ ಪದ್ಯ ಓದಿಕೊಂಡು ಮನೆಗೆ ಹೋಗುತ್ತಾರೆ.

* ಬಸವರಾಜು, ಬೆಂಗಳೂರು

ಆದ್ಧೂರಿ ಆಚರಣೆ, ಭಾರಿ ಪೂರ್ವಸಿದ್ದತೆ, ನಿಧಿ ಸಂಗ್ರಹಣೆ, ಪ್ರಚಾರ ಗಿಚಾರಗಳನ್ನು ನಾವು ಮಾಡಲಿಲ್ಲ. ನಮಗದು ಬೇಕೂ ಇರಲಿಲ್ಲ. ಆದರೆ ಕನ್ನಡದೆಡೆಗಿನ ನಿಜವಾದ ಕಳಕಳಿ ಮೈತುಂಬ ಮನದ ತುಂಬ ತುಂಬಿಕೊಂಡಿತ್ತು. ನಮ್ಮ ಕನ್ನಡ ಪ್ರೀತಿಯನ್ನು ಮೆರೆಸುವ ಕನ್ನಡ ರಾಜ್ಯೋತ್ಸವವನ್ನು ನಾವಂದುಕೊಂಡಂತೆ ಅರ್ಥಪೂರ್ಣವಾಗಿ ಆಚರಿಸಲು ನಮ್ಮಲ್ಲೇ ಇರುವ ಬೆರೆಳೆಣಿಕೆಯ ಕನ್ನಡ ಮನಗಳು ನಿರ್ಧರಿಸಿದೆವು. ಯಾರು, ಎಲ್ಲಿ, ಯಾವಾಗ ಎನ್ನುವುದು ಮುಖ್ಯವಲ್ಲ!

ಕನ್ನಡವನ್ನು ಜನಾನುರಾಗಿಸಲು ಹಲವು ವಿಧಾನಗಳಿವೆ. ಅದರಲ್ಲಿ ಟಿ ಶರ್ಟ್ ಕೂಡ ಒಂದು. ಈ ಮಾರ್ಗವನ್ನು ಕೆಲವು ಕನ್ನಡ ಮಿತ್ರರು ಈಗಾಗಲೆ ಉತ್ಸಾಹದಿಂದ ಮಾಡುತ್ತಿದ್ದಾರೆ. ನಾವೂ ಯಾಕೆ ಹಾಗೆ ಮಾಡಬಾರದು ಎಂಬ ಆಲೋಚನೆ ನಮ್ಮ ತಲೆಯಲ್ಲಿ ಸುಳಿಯಿತು. ಅದರಂತೆ ಕನ್ನಡದಲ್ಲಿ ಟಿ ಶರ್ಟ್ ಮಾಡಿಸುವ ಬಗ್ಗೆ ಯೋಚಿಸಿ ಅದನ್ನು ಗೆಳೆಯೆರ ಬಳಗದ ಮುಂದಿಟ್ಟೆವು.

ಆಗ ಕನ್ನಡ ಮತ್ತು ಕನ್ನಡೇತರ ಗೆಳೆಯರು ತೋರಿದ ಪ್ರೋತ್ಸಾಹ ನಮ್ಮಲ್ಲಿ ಸಂತೋಷದ ಜತೆ ಜವಾಬ್ದಾರಿಯನ್ನು ಹೆಚ್ಚಿಸಿತು. 'ಒಲ್ಲದ ಗಂಡನಿಗೆ ಮೊಸರು' ಎಂಬಂತೆ ಕೆಲವರು ರಾಗ ಎಳೆದರು. ಆದರೆ ಇಂತಹ ಒಲ್ಲದ ಗಂಡಂದಿರನ್ನು ತಿರಸ್ಕರಿಸಿ ಮುಂದೆ ಸಾಗಬೇಕು. ನಾವು ಹಾಗೇ ಮಾಡಿದೆವು.

ಟಿ ಶರ್ಟ್ ಮೇಲೆ ಮುದ್ರಿಸಿಕೊಡುವವರನ್ನು ಸುಲಭವಾಗಿ ಹುಡುಕಿದೆವು. ಆದರೆ ಅವರ ಧಿಮಾಕು ಮತ್ತು ಅನುಚಿತ ವರ್ತನೆಗಳು ಬೇಸರ ತರಿಸಿತು. ಯಾವುದೇ ಕಾರಣಕ್ಕೂ ಅವರ ಬಳಿ ಇನ್ನು ಮುಂದೆ ಕನ್ನಡದ ಟಿ ಶರ್ಟ್ ಮಾಡಿಸಬಾರದೆಂದು ತೀರ್ಮಾನಿಸಿದೆವು. ಆದರೆ ಗೆಳೆಯರ ಮುಂದೆ ಇಂತಹ ಕಾರಣಗಳನ್ನು ಹೇಳಿ ಕೊಟ್ಟಮಾತು ತಪ್ಪಿಸಿಕೊಳ್ಳಲು ಸ್ವಾಭಿಮಾನ ಅಡ್ಡಬಂತು. ಅಷ್ಟೊತ್ತಿಗಾಗಲೆ ಎಲ್ಲರ ಟಿ ಶರ್ಟ್ ಅಳತೆಗಳನ್ನು ಕಲೆ ಹಾಕಿಕೊಂಡಿದ್ದೆವು. ಛಲ ಬಿಡದ ತ್ರಿವಿಕ್ರಮರಂತೆ ಟಿಶರ್ಟ್ ಮೇಲೆ ಮುದ್ರಿಸಿಕೊಡುವವರನ್ನು ಊರೆಲ್ಲ ಹುಡುಕಿದೆವು. ಇದರಲ್ಲಿರುವ ನಮ್ಮ ಹೆಚ್ಚುಗಾರಿಕೆಯೆಂದರೆ ನಾವು ಹುಡುಕಿಕೊಂಡ, ಮುದ್ರಿಸಿಕೊಡುವವರು ಕೂಡ ಕನ್ನಡದವರೆ!

ಇನ್ನೂ ನಮಗೆ ಮತ್ತೊಂದು ತಲೆ ನೋವು ಶುರುವಾಯಿತು. ಅದೇನೆಂದರೆ ಟಿ ಶರ್ಟ್ ಮೇಲೆ ಮುದ್ರಿಸುವ ಸಾಲುಗಳ ಬಗ್ಗೆ. ಡಿವಿಜಿಯವರ 'ಮಂಕುತಿಮ್ಮನ ಕಗ್ಗ' ಅಥವಾ ಜಿ.ಪಿ.ರಾಜರತ್ನಮ್ ರ 'ರತ್ನಂ ಪದಗೊಳ್' ಈಗಾಗಲೇ ನೋಡಿದ್ದ ನಾವು ಅದಕ್ಕಿಂತ ಭಿನ್ನವಾಗಿ ಬೇರೆ ಸಾಹಿತಿಗಳ ಸಾಲುಗಳನ್ನು ಆರಿಸಿಕೊಳ್ಳಲು ತೀರ್ಮಾನಿಸೆದೆವು. ಗ್ರಹಚಾರಕ್ಕೆ ಆ ವಾರದಲ್ಲಿ ಕಚೇರಿಯಲ್ಲಿ ಅನಿರೀಕ್ಷಿತವಾಗಿ ಬಂದ ಕೆಲಸದ ಒತ್ತಡದಿಂದ ನಾವು ಏನಾದರೂ ಓದುವುದಿರಲಿ ಯೋಚಿಸಲು ಆಗುತ್ತಿರಲಿಲ್ಲ.

ಆಗ ನಮ್ಮ ಸಮಯಕ್ಕೆ ಬಂದದ್ದು ನಾವು ಯಾವಾಗಲೂ ಬೈದುಕೊಳ್ಳುವ 'ಬೆಂಗಳೂರಿನ ಟ್ರಾಫಿಕ್ಕು'. ಕಚೇರಿಗೆ ಹೋಗುತ್ತಾ ಬರುತ್ತ ಪ್ರಯಾಣದ ಸಮಯದಲ್ಲಿ ಹಲವಾರು ಪುಸ್ತಕಗಳನ್ನು ತಿರುವಿಹಾಕಿದ್ದಾಯಿತು. ಕೊನೆಗೆ ಬೇಂದ್ರೆಯವರ ಪದ್ಯದಲ್ಲಿನ ಈ ಸಾಲುಗಳಲ್ಲಿನ ಸರಳತೆ ಮತ್ತು ಸಂದೇಶ ಇಷ್ಟವಾಯಿತು. ಈ ಕೆಳಗಿನ ಸಾಲುಗಳನ್ನೇ ಟೀ ಶರ್ಟ್ ಮೇಲೆ ಮುದ್ರಿಸಿದವು.

ನಗಿಯಲ್ಲಿ ಹೊಗಿ ಬ್ಯಾಡಾ
ಹೊಗಿ ಹಿಂದ ಧಗಿ ಬ್ಯಾಡಾ
ಬಾಳಿಗೆ ಎರಡು ಬಗಿ ಬ್ಯಾಡಾ
ನನ್ನ ಗೆಣೆಯಾ
ಬ್ಯಾಸರಿಕೆ ಬ್ಯಾಡೊ ನಗುವಾಗ

-ದ.ರಾ. ಬೇಂದ್ರೆ

ಎಲ್ಲರಿಗೂ ಟಿ ಶರ್ಟ್ ಜೊತೆ ಕೈನಿಂದ ತಯಾರಿಸಿದ ಕಾಗದದ ಮೇಲೆ ಕರ್ನಾಟಕದ ಹೆಮ್ಮೆಯ ಕಲೆ "ಹಸಮಣೆ" ಚಿತ್ರಗಳಿರುವ ಗ್ರೀಟಿಂಗ್ ಕಾರ್ಡುಗಳನ್ನು ಕೊಡಲಾಯಿತು. ಎಲ್ಲ ಕಾರ್ಡುಗಳಲ್ಲಿ ಕನ್ನಡದಲ್ಲೆ ಅವರವರ ಹೆಸರು ಮತ್ತು ರಾಜ್ಯೋತ್ಸವದ ಶುಭಾಶಯಗಳನ್ನು ಬರೆಯಲಾಗಿತ್ತು. ಈ ಮೂಲಕ ಕನ್ನಡೇತರಿಗೆ ಕನ್ನಡ ಕಲಿಸುವ ಮೂಲಕ ರಾಜ್ಯೋತ್ಸವವನ್ನು ಆಚರಿಸಿದೆವು ಮತ್ತು ಆಚರಿಸುತ್ತಲೇ ಇರುತ್ತೇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X